ಮನೆಗೆ ಹೋಗುವಷ್ಟರಲ್ಲಿ ಪಿಟಿ ಸರ್ ವಿಷಯ ಮನೆಗೆ ಮುಟ್ಟಿಸಿದ್ದರು. ಅಪ್ಪ ತರಾಟೆಗೆ ತೆಗೆದುಕೊಂಡರು, ನಿನಗೆ ಓಡೋದಕ್ಕೆ ಇಷ್ಟವಿಲ್ಲ ಅಂದ್ರೆ ಮತ್ತೆ ಬೆಳಗ್ಗೇನೆ ಎದ್ದು ಯಾಕ್ ಹಾಗೆ ಪ್ರಾಕ್ಟೀಸ್ ಮಾಡ್ತಿಯ. ಏನ್ ಬಂದಿದೆ ನಿನಗೆ, ಯಾಕ್ ಹಿಂಗ್ ಆಡ್ತೀಯ, ಏನಾಗ್ತಿತ್ತು ಓಡಿದ್ರೆ ನಿನಗೆ ಎಲ್ಲರೂ ಗೆಲ್ಲೋಕೆ ಏನೇನೋ ಮಾಡ್ತಾರೆ, ನಿನ್ನಲ್ಲಿ ಗೆಲ್ಲೋ ತಾಕತ್ತಿದೆ, ಯಾಕ್ ಸ್ಪರ್ಧಿಸೊಲ್ಲ, ನಿನ್ನ ಪ್ರಾಬ್ಲಮ್ಮಾದ್ರು ಏನೋ ಎಂದು ಮಾತನಾಡುತ್ತಲೇ ಇದ್ರು. ನಾನು ನಗುತ್ತಲೇ ಅಪ್ಪ ನನಿಗೆ ಅವರುಗಳೊಂದಿಗೆ ಸ್ಪರ್ಧಿಸೋಕೆ ಇಷ್ಟವಿಲ್ಲ ಮುಂಚೆನೇ ಹೇಳಿದ್ದೆ ತಾನೆ ಎಂದೆ. ಇನ್ಯಾರ್ ಜೊತೆ ಸ್ಪರ್ಧಿಸ್ತೀಯಪ್ಪ ನೀನು ಎಂದರು ಕೆಂಡವಾಗಿ. ನನ್ನ ಜೊತೆ ಎಂದೆ, ಮಣ್ಣು ಮುಕ್ಕು ಹೋಗಿ, ಸ್ವಲ್ಪನಾದ್ರು ತಲೆಲಿ ಬುದ್ದಿ ಇರ್ಬೇಕು, ಇಲ್ಲ ಅಂದ್ರೆ ಇನ್ನೊಬ್ರು ಹೇಳಿದ್ದನ್ನ ಕೇಳೋಕಾದ್ರು ಗೊತ್ತಿರಬೇಕು. ನೋಡು ಗೆಲ್ಲಬೇಕು ಅಂದ್ರೆ ನಮ್ಮ ಜೊತೆ ಅಲ್ಲ ಇನ್ನೊಬ್ಬರ ಜೊತೆ ಸ್ಪರ್ಧಿಸಬೇಕಾಗುತ್ತೆ. ಸ್ಕೂಲ್ ನಲ್ಲಿ ನೋಡಿದ್ರೆ ಎಲ್ಲಾ ಸಬ್ಜೆಕ್ಟ್ ನಲ್ಲೂ ಸೊನ್ನೆ, ಒಂದು ಉತ್ತರ ಬರೆಯೋ ಪ್ರಯತ್ನ ಕೂಡ ಮಾಡಿರಲ್ಲ, ಎಲ್ಲಾ ಉತ್ತರಗಳೂ ಗೊತ್ತು ಇವನಿಗೆ ಬರೆಯೋದಿಲ್ಲ ಅಂತಾರೆ ಟೀಚರ್ಸ್ ನೋಡಿದ್ರೆ. ಇದೇನೋ ಸ್ಕೂಲ್ ಎಕ್ಸಾಮ್ಸ್, ಹತ್ತನೇ ಕ್ಲಾಸಲ್ಲೂ ಹಿಂಗೇ ಆದ್ರೆ ಯಾವನ್ ತಳ್ತಾನೆ ಅವಾಗ ನಿನ್ನ. ಹುಚ್ಚನ ತರಹ ಆಡ್ಬೇಡ ನೀನು. ಸಾಕಾಯ್ತು ನಿನ್ ಎಡವಟ್ಟು ಕೆಲಸಗಳನ್ನ ನೋಡಿ ನೋಡಿ ಎಂದು ಮಾತು ಇನ್ನೂ ಅಸ್ಪಷ್ಟವಾಗಿ ಕೇಳುತ್ತಲೇ ಇತ್ತು ನನಿಗೆ ನಿದ್ರೆ ಬರುತ್ತಲಿತ್ತು. ಬಟ್ಟೆ ಕೂಡ ಬದಲಿಸದೆ ರೂಮ್ ನಲ್ಲಿ ಹಾಗೇ ಮಲಗಿದೆ.
ಶಾಲೆಯಲ್ಲಿ, ಮನೆಯ ಸುತ್ತ ಒಳ್ಳೆಯ ಗೆಳೆಯರ ಬಳಗವಿತ್ತು ಸುಸ್ತಾಗುವವರೆಗೂ ಆಟಗಳನ್ನು ಆಡುತ್ತಿದ್ದೆವು. ಎಲ್ಲರಿಗೂ ನಾನೊಂದು ರೀತಿ ಇಷ್ಟ, ಸ್ವಚ್ಛಂದವಾಗಿ ಊರೂರು ಸುತ್ತುತ್ತಿದ್ದೆವು. ಶಾಲೆಯಲ್ಲೂ ಎಲ್ಲಾ ಅಧ್ಯಾಪರಿಗೂ ವಿಶೇಷ ಪ್ರೀತಿ ನನ್ನ ಮೇಲೆ. ನಾನು ಮಾರ್ಕ್ಸ್ ತೆಗೆಯದಿದ್ದರೂ ನನಗೆ ಅಷ್ಟು ಗೌರವ ಸಿಗುತ್ತಿದ್ದುದನ್ನು ನೋಡಿ ಕೆಲ ಹುಡುಗರು ಅಸೂಯೆ ಪಡುತಿದ್ದರು. ನನಗೂ ಸಹ ಆ ಗೌರವ ಬೇಕಿರಲಿಲ್ಲ. ಅದನ್ನು ಅರ್ಥಮಾಡಿಸಲು ಪ್ರಯತ್ನವನ್ನೂ ಪಡಲಿಲ್ಲ ಕೂಡ. ಹೀಗೇ ಒಮ್ಮೆ ಶಾಲೆಯಲ್ಲಿ ಎಕ್ಸಿಬಿಷನ್ ಇತ್ತು ಒಂದು ವಿಚಿತ್ರವಾದ ಪ್ರಯೋಗ ಮಾಡಬೇಕೆಂದು ಆಸೆ ಇತ್ತು. ಮಾಡಿದೆ ಕೂಡ. 'ಬ್ಲಾಕ್ ಹೋಲ್'ಅನ್ನು ಕೃತಕವಾಗಿ ಸೃಷ್ಟಿಸುವ ಮಾಡೆಲ್ ಮಾಡಿದ್ದೆ. ಅದು ಎಲ್ಲರ ಮೆಚ್ಚುಗೆ ಗಿಟ್ಟಿಸಿ ಪ್ರಥಮ ಬಹುಮಾನವನ್ನು ಕೊಡುತ್ತಿರುವುದಾಗಿ ಘೋಷಿಸಿದರು. ನಾನು ಪ್ರಶಸ್ತಿ ಪ್ರಧಾನ ಸಮಾರಂಭಕ್ಕೂ ಹೋಗಲಿಲ್ಲ.
ನನ್ನ ಹತ್ತನೇ ತರಗತಿ, ಪಿಯುಸಿ ಕೂಡ 'ಪಾಸ್' ಆಗುವ ಸಂಖ್ಯೆಗಳನ್ನು ಪಡೆದಿದ್ದೆನಂತೆ. ಇದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆ ಕಾರಣವೋ ಇಲ್ಲ ಇನ್ನೇನಾದರೂ ಕೈವಾಡ ನಡೆಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಪಾಸ್ ಅಗಿದ್ದೀಯೆ ಪದವಿ ಕಾಲೇಜ್ ಸೇರು ಎಂದರು ಎಲ್ಲಾ. ಒಂದು ವರ್ಷದಲ್ಲೇ ಮೂರೂ ವರ್ಷದ ಪುಸ್ತಕಗಳನ್ನು ಓದಿ ಪರೀಕ್ಷೆಗೆ ಕೂರದೆ ಓದಿಗೆ ತಿಲಾಂಜಲಿ ಇಟ್ಟೆ. ಮನೆಗೇ ಇನ್ನೊಂದಷ್ಟು ಪುಸ್ತಕಗಳನ್ನು ತರಿಸಿ ಓದಲು ಶುರುಮಾಡಿದೆ. ಹೊಸ ಹೊಸ ಗೆಳೆಯರೊಂದಿಗೆ ಕಾಲೇಜಿನ ಸುತ್ತಲೇ ಸುತ್ತುತ್ತಿದ್ದೆ. ಸರಿ ಎನಿಸಿದ್ದನ್ನೇಲ್ಲಾ ಗೆಳೆಯರೊಡಗೂಡಿ ಮಾಡಿದೆ. ಮನೆಯಲ್ಲೇ ಇದ್ದಷ್ಟೂ ಮನೆಯವರ ಪ್ರಶ್ನೆಗಳು, ಬಯ್ಗುಳಗಳೂ ಹೆಚ್ಚಾಗುತ್ತಾ ಹೋಗುತ್ತವೆಂದು ಗೊತ್ತಾಯ್ತು. ಬಹುಪಾಲು ಸಮಯ ಮನೆಯ ಹೊರಗಡೆಯೇ ಇರಲು ಶುರುಮಾಡಿದೆ. ವಿವಿಧ ರೀತಿಯ ಜನಗಳನ್ನು ಭೇಟಿಯಾಗುತ್ತಿದ್ದೆ. ಜೀವನ ವರ್ಣಮಯವಾಗಿದೆ ಎಂದು ಖುಷಿಯಾಗುತ್ತಿತ್ತು. ಆದರೆ ಮನೆಯವರಿಗೆ ಇರುವ ಆತಂಕ, ಭಯ ಏನೆಂಬುದು ಅರಿವಾಯ್ತು. ನಾನು ಏನು ಮಾಡಲು ಹೊರಟಿದ್ದೀನಿ, ಏನಾಗುತ್ತೀನಿ ಅದೇ ಅವರ ಮುಂದಿರುವ ಪ್ರಶ್ನೆ, ಚಿಂತೆ. ನನಗೂ ಗೊತ್ತಿರಲಿಲ್ಲ ಏನಾಗಲು ಹೊರಟಿದ್ದೇನೆಂದು. ಹೀಗಿರುವಾಗಲೇ ಮನೆಯ ಬಳಿ ಇದ್ದ ಒಂದು ಪ್ರಿಂಟಿಂಗ್ ಪ್ರೆಸ್ ಮುಚ್ಚುತ್ತಿದ್ದರು. ಅವರನ್ನೂ ತುಂಬಾ ಸಲ ಮಾತನಾಡಿಸಿದ್ದೆ. ಅಲ್ಲಿನ ಕ್ರಿಯಾಶೀಲ ಕೆಲಸ ಒಂದು ರೀತಿ ಮನಸಿಗೆ ಖುಷಿ ತರುತ್ತಿತ್ತು. ಅವರೊಂದಿಗೆ ಹಲವು ಬಾರಿ ಸುಮ್ಮನೆ ತೆವಲಿಗೆ ಕೆಲಸ ಮಾಡಿದ್ದೆ. ವ್ಯಾಪಾರದಲ್ಲಿ ಲಾಸ್ ಆಗಿ ಮುಚ್ಚಲಾಗುತ್ತಿದೆ ಎಂದು ವಿಷಯ ಗೊತ್ತಾಯ್ತು. ಅದ್ಯಾಕ್ ಹಾಗೆನ್ನಿಸಿತೋ ಗೊತ್ತಿಲ್ಲ. ಅಪ್ಪನ ಹತ್ತಿರ ಅವರ ವಿರೋಧ ಕಟ್ಟಿಕೊಂಡು ಎಲ್ಲರೂ ಎಷ್ಟು ಬೇಡವೆಂದರೂ ಆ ಪ್ರೆಸನ್ನು ಕೊಂಡುಕೊಂಡೆ. ಮನಸಿಟ್ಟು ಕೆಲಸ ಮಾಡಲು ಶುರುಮಾಡಿದೆ. ಮೊದಲೆರಡು ತಿಂಗಳು ಬಹಳ ಕಷ್ಟವಾಯ್ತು. ನಿಧಾನವಾಗಿ ಇಬ್ಬರು ಕೆಲಸಗಾರರು ಸಿಕ್ಕರು. ಒಂದೆರಡು ಪೀಸ್ ವರ್ಕ್ ಗಳು ಬಂದವು ಉಸಿರಾಡುವಂತಾಯ್ತು. ಸಾಲದಲ್ಲೇ ವ್ಯಾಪಾರ ನಡೆಯುತ್ತಿತ್ತೇ ವಿನಹ ಬರುತ್ತಿದ್ದ ಆದಾಯ ಏನೇನಕ್ಕೂ ಸಾಕಾಗಲಿಲ್ಲ. ಆದರೂ ಬಂದ ಪುಡಿ ಕೆಲಸಗಳನ್ನೇ ಇರುವ ತಲೆಯನ್ನೆಲ್ಲಾ ಖರ್ಚು ಮಾಡಿ ಆಸಕ್ತಿ ವಹಿಸಿ ಕೆಲಸ ಮಾಡಿದೆವು. ನಿಧಾನವಾಗಿ ಪ್ರೆಸ್ ಗೆ ಹೆಸರು ಬಂತು ಕೆಲಸಗಳು ಬಂತು, ಆದಾಯವೂ ಆಯ್ತು, ಲಾಭವೂ ಸಹ. ಇನ್ನೊಂದಷ್ತು ಕೆಲಸಗಾರರು ಸೇರ್ಪಡೆಯಾದರು, ಬಿಡುವು ಸಿಗದ ಹಾಗೆ ಕೆಲಸ ಬರತೊಡಗಿತು. ಅಪ್ಪ ಅಮ್ಮ ಎಲ್ಲಾ ನಿರಾಳವಾಗಿ ಉಸಿರುಬಿಟ್ಟರು. ಎಲ್ಲಾ ಆದಾಯವನ್ನೂ ಅಪ್ಪನ ಕೈಗೆ ಇತ್ತೆ. ಆಗಲಾದರೂ ನನ್ನ ಮೇಲೆ ಕೊಂಚ ಧೈರ್ಯ ಬಂತೇನೋ.
ಒಂದು ದಿನ ಬೆಳಗ್ಗೆ ನಮ್ಮ ಪ್ರೆಸ್ ಬೀದಿಯ ಕೊನೆಯಲ್ಲೇ ಇನ್ನೊಂದು ಪುಟ್ಟ ಪ್ರೆಸ್ ಶುರುವಾಗಿರುವುದು ಗಮನಕ್ಕೆ ಬಂತು. ನಮಗಿಂತ ಅರ್ಧದ ಬೆಲೆಗೆ ಕೆಲಸಗಳನ್ನು ಒಪ್ಪಿಕೊಂಡು ಮಾಡಿಕೊಡಲು ಶುರುಮಾಡಿದರು. ನಮ್ಮ ಗ್ರಾಹಕರನ್ನು ಅವರತ್ತ ಎಳೆಯುವ ಪ್ರಯತ್ನ ನಡೆಯತೊಡಗಿತು. ಅಂದಿನಿಂದ ಪ್ರೆಸ್ ಬಿಟ್ಟೆ. ಅಪ್ಪ ಮುಂದುವರೆಸುತ್ತಾ ಪ್ರೆಸ್ ಚಾಲ್ತಿಯಲ್ಲಿಟ್ಟರು. ಅಷ್ಟು ದಿನ ಸಮಯ ಸಿಕ್ಕಾಗ ಸುಮ್ಮನೆ ಹವ್ಯಾಸಕ್ಕೆಂದು ಇಟ್ಟುಕೊಂಡಿದ್ದ ಚಿತ್ರಕಲೆಯನ್ನು ದಿನಪೂರ್ತಿ ಅಭ್ಯಾಸ ಮಾಡಲು ಶುರುಮಾಡಿದೆ. ಏನಾದರೂ ಬಿಡಿಸುತ್ತಿರುವಾಗ ಮನೆಯ ಹೊರಗೇ ಬರದೆ ದಿನಗಳನ್ನು ಕಳೆಯುತ್ತಿದ್ದೆ. ಎಲ್ಲಾದರೂ ಹೋಗಿದ್ದಾಗ ಅಲ್ಲೇ ಹಲವಾರು ದಿನಗಳನ್ನು ಕಳೆಯುತ್ತಿದ್ದೆ. ಹೋದ ಬಂದಲ್ಲೆಲ್ಲ, ಕಣ್ಣಿಗೆ ಕಂಡದ್ದನ್ನೆಲ್ಲ, ಕೈಗೆ ಸಿಕ್ಕದ್ದನ್ನೆಲ್ಲ ಚಿತ್ರ ಬಿಡಿಸುವುದೇ ಕೆಲಸವಾಗೋಯ್ತು. ಇದರಲ್ಲೇ ನನ್ನ ಖರ್ಚಿಗಾಗುವಷ್ಟು ದುಡ್ಡು ಹುಟ್ಟುವ ದಾರಿಯನ್ನು ಕಂಡುಕೊಂಡೆ. ಜೀವನ ಆರಾಮವಾಗೇ ಇತ್ತು.
ಬಲವಂತ ಮಾಡಿ ಹುಡುಗಿ ನೋಡಲು ಕರೆದುಕೊಂಡು ಹೋದರು. ಯಾರೋ ಏನೋ ಗೊತಿಲ್ಲದೆ ಜೊತೆಯಲ್ಲಿ ಹೋಗಿ ಕುಳಿತೆ. ಮನೆಯಲ್ಲಿ ಇನ್ನೊಂದು ನಮ್ಮ ತರಹದ ಸಂಸಾರ ಹುಡುಗನನ್ನು ಕರೆದುಕೊಂಡು ಬಂದು ಕುಳಿತಿತ್ತು. ಬೆಳಗ್ಗೇಯೇ ಒಬ್ಬ ಹುಡುಗ ಬಂದು ಹೋಗಿರುವುದಾಗಿ ಅವನು ಹುಡುಗಿಗೆ ಇಷ್ಟವಾಗದಿರುವುದಾಗಿ ವಿಷಯ ತಿಳಿಯಿತು. ಅಲ್ಲಿ ಒಂದು ಕ್ಷಣವೂ ಕುಳಿತಿರಲು ಸಾಧ್ಯವಾಗಲಿಲ್ಲ. ಎದುರುಗಿದ್ದ ಹುಡುಗನನ್ನು ಹುಡುಗಿಯ ತಂದೆ ಆತನ ಇತ್ಯೋಪರಿಯನ್ನು ವಿಚಾರಿಸುತ್ತಿದ್ದರು. ಅವನೂ ಕುರಿಯಂತೆ ಎಲ್ಲಾ ಒಪ್ಪಿಸುತ್ತಿದ್ದ. ಇದೊಳ್ಳೆ ಸ್ವಯಂವರದ ಸೀನ್ ಇದ್ದಂಗೆ ಕಾಣುತ್ತಿತ್ತು. ನನ್ನನ್ನು ಏನಪ್ಪ ಏನ್ ಮಾಡ್ಕೊಂಡಿದ್ದೀರಾ ನೀವು ಎಂದರು ಮೊದಲ ಪ್ರಶ್ನೆ. ನನಿಗೆ ಈ ರೀತಿ, ನೀತಿಗಳು ಯಾಕೋ ಸರಿ ಬರುತ್ತಿಲ್ಲ, ನಾನು ಹೊರಡ್ತೇನೆ. ದಯವಿಟ್ಟು ಕ್ಷಮಿಸಿ ಎಂದು ಅಲ್ಲಿಂದಲೇ ಹೊರಟು ಬಂದೆ. ನಾನು ಬಂದಮೇಲೆ ಅದೇನು ಮಾತುಕತೆಗಳಾಯಿತೋ ಗೊತ್ತಿಲ್ಲ. ನನ್ನ ಮೊಬೈಲ್ ಗೆ ಒಂದು ಕರೆ ಬಂತು. ಹುಡುತಿಯ ಧ್ವನಿ, ಯಾಕ್ ಹಾಗೆ ಹೋದ್ರಿ. ನೀವು ನನ್ನ ಫೋಟೋ ನೋಡಿದ್ದೀರಾ? ಇಲ್ಲ ಅಂದ್ರೆ ನಿಮ್ಮಪ್ಪ ಅಮ್ಮನ ಕೈಲಿ ಒಂದು ಫೋಟೋ ಕೊಟ್ಟು ಕಳುಹಿಸಿದ್ದೀನಿ. ನಿಮಗೆ ಒಪ್ಪಿಗೆ ಆದ್ರೆ ಹೇಳಿ ನನಿಗೆ ನೀವು ತುಂಬಾ ಇಷ್ಟಾ ಆದ್ರಿ ಅಂದ್ಲು. ಯಾಕೆ ಅಂತ ಕೇಳ್ಬೇಡಿ ಅಂದಳು. ನಾನೂ ಕೇಳಲಿಲ್ಲ, ಅವಳು ಹೇಳಲಿಲ್ಲ, ಮಧುವೆಯಂತೂ ಅಯ್ತು.
ಜೀವನೋಪಾಯಕ್ಕೆ ಆಗುವಷ್ಟು ದುಡ್ಡಿತ್ತು, ಅಪ್ಪ ಕೆಲಸದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು, ಅಮ್ಮ ಮನೆಯ ಎಲ್ಲಾ ಕೆಲಸ, ಕೆಲಸದವರ ಕೈಲಿ ಮಾಡಿಸುತ್ತಿದ್ದರು. ಇವಳು ಓದಿದ್ದಳು, ಕೆಲಸ ಮಾಡುವ ಅವಶ್ಯಕತೆ ಇರಲಿಲ್ಲ, ನನ್ನ ಚಿತ್ರಕಲೆಯ ಕಡೆಯೇ ಆಸಕ್ತಿ ತೋರಿ, ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ಸಾಂಸಾರಿಕ ಜೀವನದ ಸವಿಯನ್ನೂ ಸವಿಯುತ್ತಾ, ಚಿತ್ರಗಳು ಬಣ್ಣಗಳಂತೆ ಬೆರೆಯುತ್ತಾ ಜೀವನ ಸಾಗಿಸಿದೆವು. ಮನೆಯ ತುಂಬಾ ಎಲ್ಲಿ ನೋಡಿದರೂ ಚಿತ್ರಗಳೇ ಇರುತ್ತಿದ್ದವು. ಜಾಗ ಸಾಲದೆ ಇನ್ನೊಂದು ಮಹಡಿಯ ತುಂಬಾ ನನ್ನ ಚಿತ್ರಗಳನ್ನೇ ತುಂಬಿಸಿದೆ. ಮನೆಗೆ ಯಾರಾದರೂ ಬಂದರೆ ಎಲ್ಲ ಚಿತ್ರಗಳನ್ನು ನೋಡಿ ಹೋಗುತ್ತಿದ್ದರು. ಬರಬರುತ್ತಾ ಚಿತ್ರಗಳನ್ನು ನೋಡಲೆಂದೇ ಜನ ಬರಲು ಶುರುವಾದರು. ಇದರಿಂದಲೇ ಕಿರಿಕಿರಿಯಾಗಲು ಶುರುವಾಯ್ತು. ಬರುವವರನ್ನು ತಡೆಯಲಾಗಲಿಲ್ಲ. ಎಲ್ಲಾ ಉತ್ತಮ ಚಿತ್ರಗಳನ್ನೂ ಸ್ಥಳಾಂತರಿಸಿ ಇನ್ನೊಂದು ಕಟ್ಟಡದ ಪೂರಾ ಪ್ರದರ್ಶನಕ್ಕಿಟ್ಟೆ. ಕೆಲವನ್ನು ಉತ್ತಮ ಬೆಲೆಗೆ ಖರೀದಿಸುತ್ತಿದ್ದರು. ನಾನು ಮಾರುವುದಿಲ್ಲವೆಂದರೂ ಇವಳು ಕೇಳುತ್ತಿರಲಿಲ್ಲ. ಕ್ರಮೇಣ ವ್ಯಾಪಾರದ ಉಸ್ತುವಾರಿಯನ್ನು ಅವಳೇ ನಿರ್ವಹಿಸಲು ಶುರುಮಾಡಿದಳು. ನನ್ನ ಚಿತ್ರಗಳಿಂದಲೇ ಹಲವಾರು ವಿಶಿಷ್ಟ ಚಿತ್ರಕಾರರನ್ನು ಭೇಟಿಯಾಗುವ ಸಂದರ್ಭಗಳು ಒದಗಿಬಂತು. ಎಲ್ಲರೂ ಎದುರಿಗೆ ಚೆನ್ನಾಗೇ ಮಾತನಾಡುತ್ತಿದ್ದರು. ಹಿಂದೆ ಮೀಡಿಯಾದವರ ಮುಂದೆ ನನ್ನ ಚಿತ್ರಗಳು ಹೀಗಿವೆ, ಹಾಗಿವೆ ಎಂಬ ಮಾತು ನೋವುಂಟುಮಾಡುತ್ತಿದ್ದವು.
ಉತ್ತಮ ಚಿತ್ರಕಾರರ ಸ್ಪರ್ಧೆಯೊಂದಕ್ಕೆ ನನ್ನ ಚಿತ್ರವನ್ನೂ ಕಳುಹಿಸಿದ್ದಳು. ೫ ಲಕ್ಷ ಬಹುಮಾನವಿತ್ತಂತೆ ಗೆದ್ದವರಿಗೆ. ಪ್ರಶಸ್ತಿ ಬಂತೋ ಇಲ್ಲವೋ ತಿಳಿದುಕೊಳ್ಳಲೂ ಹೋಗಲಿಲ್ಲ. ಬಣ್ಣ ಅಲ್ಲಿಗೆ ಬಿಟ್ಟೆ. ಮತ್ತೆ ಓಡಲು ಶುರುಮಾಡಿದೆ. ನನಗೇ ಸುಸ್ತಾಗುವವರೆಗೂ.
ಹಿನ್ನುಡಿ: ಗೆಲುವು ಯಾಕೆ? ಸ್ಪರ್ಧೆ ಯಾಕೆ? ಹೆಸರು ಯಾಕೆ? ಅಥವಾ ಜೀವನ ಸಾಕೇ?
ಚೆನ್ನಾಗಿದೆ. ಸ್ಪರ್ಧೆಯು ಕೆಲವು ಸಲ ಕೆಲಸಕ್ಕೆ ಅನಿವಾರ್ಯಯೂ ಹೌದು ಇನ್ನಿತರ ಅಂಶಗಳಂತೆಯೇ.
ReplyDeleteGeluvu yake andre u ll get one identity adke.. :) competition yake andre to learn how to survive.. :) amele hesaru yake andre for getting opportunity adke.. jeevna salalla ree thumbane ide achieve madoke.. :)
ReplyDelete@ yashaswini, Avaru Jeevan saku anta heltilla.... Matte matte odbeku, sotu matte gelbeku.... story ful agi arta madkoli... bari last line alla ... OK...
ReplyDeleteThanks for the Good Story..... Keep it up .. All the best.. I wil be waiting for ur next posts.