ಮುನ್ನುಡಿ: ಅರ್ಥವಾಗದಿದ್ದಲ್ಲಿ ಮತ್ತೊಮ್ಮೆ ಓದಿ ಪ್ಲೇಸ್ :-)
ನ್ಯಾಯ 4 Sale:
“ನೋಡಿ ಸಾರ್ ಮನಸು ಮಾಡಿ ಚೂರು”, ಕಣ್ಣೆತ್ತಿ ನೋಡಿದೆ. ಆ ಮುಖವನ್ನೊಮ್ಮೆ ನೋಡಿದರೆ ಮತ್ತೆ ನಾನು
ಮುಖ ತಿರುಗಿಸಿದರೂ ಕಣ್ಣುಗಳು ಮಾತ್ರ ಆ ಕಣ್ಣುಗಳಲ್ಲೇ ನೆಟ್ಟಿತ್ತು. ಅಂತಹ ಆಕರ್ಷಣೆ ಆ ಕಣ್ಣುಗಳಲ್ಲಿ,
ಮುಖದಲ್ಲಿ. ಹಾಗೇ ಕಲ್ಪನಾ ಲೋಕಕ್ಕೆ ಹೊರಟೋಗಿದ್ನೇನೋ. ಅಷ್ಟರಲ್ಲಿ ಮತ್ತೊಮ್ಮೆ “ಸಾರ್ ಏನ್ ಯೋಚನೆ
ಮಾಡಿದ್ರಿ” ಅಂತ ಅವಳ ಪಕ್ಕದಲ್ಲಿದ್ದ ವ್ಯಕ್ತಿ ಎಚ್ಚರಿಸಿದ. ಅಸಡ್ಡೆಯಿಂದ ಆ ವ್ಯಕ್ತಿಯ ಕಡೆಗೆ ನೋಡಿದೆ.
ಅವನ ಮೋರೆ, ಅವನು ನೋಡುತ್ತಿದ್ದ ರೀತಿ ಎರಡೂ ಒಳ್ಳೆ ಪ್ರಸಾದ ತಿಂದ ನಂತರ ತೀರ್ಥ ಕುಡಿದ ಹಾಗಿತ್ತು.
ಈತನದ್ದು ಒಳ್ಳೆ ಪೀಕಲಾಟಕ್ಕೆ ಬಂದಿತ್ತು ಅದೆಲ್ಲಿಂದ ಬಂದು ಗಂಟು ಬಿದ್ದಿದ್ದನೋ ನಕ್ಷತ್ರಿಕನ ತರಹ.
ಅರ್ಧ ಘಂಟೆಯಿಂದ ತಲೆ ತಿಂತಿದ್ದ. ಬೆಳಗ್ಗಿನಿಂದ ಕೆಲಸಗಳೂ ಆಗಿರಲಿಲ್ಲ ಆಫೀಸಿನಲ್ಲಿ ಇವತ್ತು. ಒಂದು
ಮಣ ಫೈಲ್ ಗಳನ್ನ ಬೇರೆ ತಂದು ಜಡಿದಿದ್ರು ಇವತ್ತು ನಂಗೆ. ಬಂದಿದ್ದು ಬೇರೆ ಲೇಟ್, ಹೊರಗೆ ಮೈ ಸುಡುವ
ಬಿಸಿಲು. ಈ ವ್ಯಕ್ತಿ ಬಂದು ಎಲ್ಲರನ್ನೂ ಬಿಟ್ಟು ನನ್ನ ಟೇಬಲ್ ಬಳಿಯೇ ಬಂದು ಜಾಂಡಾ ಊರಬೇಕಾ. ಇವತ್ತು
ನನ್ನ ದಿನಾನೇ ಸರಿಯಾಗಿಲ್ವೇನೋ. ಆದ್ರೆ ಇರೋ ಎಲ್ಲಾ ಹಳಬ್ರನ್ನ ಬಿಟ್ಟು ನನ್ನಂತ ಹೊಸಬನ ಟೇಬಲ್ ಅತ್ರಾನೇ
ಬರೋಕೆ ಏನಾದ್ರೂ ಕಾರಣ ಇರಬಹುದಾ. ಬರೋದ್ ಬಂದ ಎಲ್ಲರ ಮುಂದೆ ಹೀಗೆ ಇವಳು ಮಾರಾಟಕ್ಕೆ ಇದಾಳೆ ನಿಮ್ಮ
ರೇಟ್ ಏನು ಅಂತ ಇವನು ಕೇಳಿದ್ ರೀತಿಗೇ ನಾನೇ ಹೇಳಿ ಕಳಿಸಿದೆನೇನೋ ಅಂತ ನನಗೇ ಸಂದೇಹ ಶುರುವಾಗೋಯ್ತು
ಒಂದು ಕ್ಷಣ. ಎದೆ ಢವ ಢವ ಹೊಡ್ಕೊತಿತ್ತು ಕೊಂಚ ಸುಧಾರಿಸಿಕೊಂಡು ಸುತ್ತ ನೋಡಿದ್ರೆ ಎಲ್ಲಾ ನನ್ನ ಕಡೇನೇ
ನೋಡ್ತಿದಾರೆ. ಎಲ್ಲಾ ನನ್ನ ನೋಡ್ತಿದ್ರೋ ಅಥವಾ ಆ ಹೆಣ್ಣನ್ನ ನೋಡ್ತಿದ್ರೋ ಗೊತ್ತಾಗ್ಲಿಲ್ಲ. ರೀ ಸ್ವಲ್ಪ
ಮೆಲ್ಲಗೆ ಮಾತನಾಡ್ರೀ ಏನ್ ನಿಮ್ಮ ಸಮಸ್ಯೆ. Government officeನಲ್ಲಿ ಹೀಗಾ ಮಾತನಾಡೋದು ಅಂತ ಕೇಳೋಷ್ಟರಲ್ಲೇ
ಬಾಯಿ ಒಣಗೋಯ್ತು. ನನ್ನ ಅನುಮತಿಯಿಲ್ಲದೆ ಇಬ್ಬರೂ ನನ್ನೆದುರು ಕುಳಿತುಕೊಂಡ್ರು. ಯಾಕೋ ‘ಹೋಗಿ’ ಅನ್ನೋಕೂ
ಅಗ್ಲಿಲ್ಲ, ಏನು ಹೇಳೋಕು ಮಾತು ಹೊರಬರ್ತಿರಲಿಲ್ಲ. ಒಂದು ಹೊಸ ಅಚಾನಕ್ ಸಮಸ್ಯೆಗೆ ತಕ್ಷಣ ಪ್ರತಿಕ್ರಿಯಿಸೋದು
ಸ್ವಲ್ಪ ಕಷ್ಟಾನೇ ಅನ್ಸುತ್ತೆ. ಆತ ಮಾತು ಮುಂದುವರೆಸಿದ. ನೋಡಿ ಸಾರ್ ಬೇಗ ಇವಳನ್ನ ತೊಗೊಂಡ್ ಬಿಡಿ
ರೇಟ್ ಸ್ವಲ್ಪ ಬೇಗ ಫಿಕ್ಸ್ ಮಾಡಿದ್ರೆ ಒಳ್ಳೇದಿತ್ತು ನಾನು ಕೆಲಸ ಮಾಡುವವನ ರೀತಿ ಫೈಲ್ ನಿಂದ ತಲೆ
ಮೇಲೆ ಎತ್ತಲೇ ಇಲ್ಲ.
ಆತ ನನ್ನ ಮುಜುಗರವನ್ನು ಅರ್ಥಮಾಡಿಕೊಂಡವನಂತೆ ನಿಮ್ಮ ಮನೆಗೆ ಕರ್ಕೊಂಡೋಗೋಕಾಗಲ್ಲ
ಗೊತ್ತು ಇನ್ನೊಂದು ಮನೆ ಮಾಡಬಹುದು ಸ್ವಲ್ಪ ಉರ್ಜೆಂಟ್ ಇದೆ ಎಂದು ಇನ್ನೂ ಏನೇನೋ ಒದರಲು ಶುರುಮಾಡಿದ.
ಆತ ಮಾತು ಮುಂದುವರೆಸಿದ್ದ ಆದರೆ ನನ್ನ ತಲೆಯಲ್ಲಿ ಅವನ ಪಕ್ಕದಲ್ಲಿದ್ದವಳ ಬಗ್ಗೆಯೇ ವಿಚಾರಗಳು ಸುರುಳಿ
ಸುತ್ತುತ್ತಿದ್ದವು. ಅವಳು ಅಷ್ಟು ಸುಂದರವಾಗಿದ್ದರೂ ಏನೋ ಒಂದು ರೀತಿಯ ಗೌರವ ಹುಟ್ಟಿಸುವ ಮುಗ್ಧತೆ
ಕಾಣುತಿತ್ತು. ಮೈ ಕಾಣುವಂತೆ ಬಟ್ಟೆ ತೊಟ್ಟಿದ್ದರೂ ಕೂಡ ಯಾವುದೇ ಕೆಟ್ಟ ಭಾವನೆಗಳು ಮೂಡುತ್ತಿರಲಿಲ್ಲ.
ಅವಳಷ್ಟು ಕಷ್ಟದಲ್ಲಿದ್ದರೂ ಆ ಮುಖದಲ್ಲಿನ ಉಲ್ಲಾಸ ಕಾಂತಿ ಹೇಗೆ ಮೂಡಿದ್ದವೋ ಗೊತ್ತಿಲ್ಲ. ಇವಳನ್ನು
ಒಲ್ಲೆನೆನ್ನುವ ಮನಸ್ಸು ಯಾರಿಗೂ ಬಾರದು ಆದರೆ ನಾನು ಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಇವಳನ್ನು ಪಡೆದರೆ
ನನ್ನ ಸಂಸಾರ ನನ್ನ ಕೆಲಸಕ್ಕೆ ಒಂದಲ್ಲ ಒಂದು ದಿನ ಒಂದಲ್ಲ ಒಂದು ರೀತಿ ತೊಂದರೆ ಸಂಭವಿಸುವುದಂತು ನಿಶ್ಚಿತ.
ಆದರೆ ನಾನು ಇವಳನ್ನು ಬಿಟ್ಟರೆ ಇಲ್ಲಿರುವ ನರಭಕ್ಷಕರಂತೆ ಕಾಣುವ ಇವರು ಯಾರಾದರೋ ಪಡೆದೇ ತೀರುತ್ತಾರೆ.
ಏನ್ ಮಾಡಲಿ ಈ ಗೊಂದಲದಿಂದ ಹೇಗೆ ಹೊರಗೆ ಬರಲಿ. ತಲೆಯಲ್ಲಿ ಅವಳನ್ನು ಪಡೆಯುವುದಕ್ಕೂ ಮತ್ತು ನಿರಾಕರಿಸುವುದಕ್ಕೂ
ನೂರಾರು ಕಾರಣಗಳು ಹುಟ್ಟುತ್ತಿದ್ದವು. ಅವಳ ಕಡೆಗೊಮ್ಮೆ ಕಳ್ಳ ನೋಟ ಬೀರಿದೆ. ಆ ಹಸನ್ಮುಖಿಯ ಕಣ್ಣುಗಳು
ತುಂಬಿದ್ದವೋ ಎಂಬಂತೆ ಭಾಸವಾಯಿತು. ಸರಿಯಾಗೊಮ್ಮೆ ನೋಡಿದೆ ಇಲ್ಲ ಅವಳ ಕಣ್ಣುಗಳು ತುಂಬಿದ್ದವು. ಆ
ವ್ಯಕ್ತಿ ಮತ್ತೆ ಬೇಡಿಕೊಂಡ. ಅವನ ಮೇಲೆ ಅಸಹ್ಯ ಹುಟ್ಟಿತು. ಅದೆಲ್ಲಿತ್ತೋ ಬೆಂಕಿ, ಒಳಗಿದ್ದಷ್ಟೂ
ಬೆಂಕಿಯನ್ನು ಅವನ ಮೇಲೆ ಕಾರಿದೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ೨ ನಿಮಿಷ ಯಾವುದೇ ಕೆಲಸ ನಡೆಯಲಿಲ್ಲ.
ಬಾಯಿಗೆ ಬಂದ ಅವಾಚ್ಯ ಶಬ್ಧಗಳನ್ನೂ ಉಪಯೋಗಿಸಿ ನಿನ್ನಂಥವರಿಂದಲೇ ಇಲ್ಲಿ ಎಲ್ಲ ಹೀಗಾಗಿರೋದು, ಮೊದಲು
ಇಲ್ಲಿಂದ ಹೊರಡು ಕಣ್ಣಿಗೂ ಕಾಣಕೂಡದು ಎಂದು ಅವನನ್ನು ಮಾತನಾಡಲೂ ಬಿಡದೆ ಅವನು ಅವಳನ್ನು ಕರೆದುಕೊಂಡು
ತೊಲಗುವವರೆಗೂ ಒಂದೇ ಉಸಿರಿನಲ್ಲಿ ಅರಚಿದೆ. ಮನದಲ್ಲೆದ್ದ ಬಿರುಗಾಳಿ ನಿಂತು ಎಲ್ಲಾ ಶಾಂತವಾದಂತೆನಿಸಿತು.
ಯಾರ ಕಡೆಯೂ ಗಮನ ಕೊಡದೆ ಫೈಲ್ ಗಳಲ್ಲಿ ಮುಖ ತೂರಿಸಿದೆ. ಮನಸ್ಸೆಲ್ಲ ಆ ಕಣ್ತುಂಬಿದ್ದ ಅವಳನ್ನೇ ನೆನೆಯುತ್ತಿತ್ತು.
ಅವನು ಹೋಗುವಾಗ ಅವಳ ರಟ್ಟೆ ಬಲವಾಗಿ ಹಿಡಿದೆಳೆಯುತ್ತಾ ಹೋಗಿದ್ದು ಕಣ್ಮುಂದೆ ಬಂದಂತಾಯ್ತು. ಅವಳನ್ನು
ಕನಿಷ್ಟ ಅವನಿಂದ ಉಳಿಸಬಹುದಿತ್ತೇನೋ ಅವಳಿಗೆ ಅವನೇನು ತೊಂದರೆ ಕೊಡುತ್ತಿದ್ದಾನೋ ಎಂದು ಸಂಕಟವಾಯಿತು.
ಕುಳಿತುಕೊಳ್ಳಲಾಗದೆ, ಅವಳನ್ನು ಹುಡುಕಿಕೊಂಡು ಹೊರಟೆ.
ರಸ್ತೆ ತುಂಬೆಲ್ಲ ವಿಕಾರಾಕೃತಿಯ ಜನರು ಎಲ್ಲರ
ಭಯಾನಕ ಕಣ್ಣುಗಳು ನನ್ನನ್ನೇ ನುಂಗಿ ಹಾಕುವ ಹಾಗೆ ನೋಡುತ್ತಿದ್ದಂತೆನಿಸಿತು. ಎಲ್ಲರನ್ನು ದಾಟಿ ಓಡಿದೆ,
ಬೇಕಂತಲೇ ಜನ ಅಡ್ಡಿ ಬಂದಂತೆನಿಸುತಿತ್ತು, ಎಲ್ಲರನ್ನೂ ತಳ್ಳಿಕೊಂಡು ನುಗ್ಗಿದೆ. ರಣ ಬಿಸಿಲು ರಕ್ತ
ಹೀರುತ್ತಿತ್ತು. ದಣಿವಾಗುವವರೆಗೂ ಅಲೆದೆ. ಹೊರ ಹೋದವರು ಯಾವ ದಾರಿ ಹಿಡಿದರೊ ಕೊನೆಗೂ ಸಿಗಲೇ ಇಲ್ಲ.
ಹಿಂತಿರುಗಿ ಆಫೀಸ್ ಕಡೆ ಸೋತ ಹೆಣವನ್ನು ಹೊತ್ತು ನಡೆದೆ. ಕಣ್ಣೆತ್ತಿ ಜನರ ಸಂತೆಯನ್ನು ನೋಡಲಾಗಲಿಲ್ಲ.
ರಸ್ತೆಯಲ್ಲಿದ್ದ ನಾಯಿಗಳು ಕೂಡ ಹುಲಿಯಂತೆ ಹಸುಗಳು ಕೂಡ ಆನೆಗಳಂತೆ ಕಾಣುತಿದ್ದವು. ಕಾಡಲ್ಲೇ ಇದ್ದೆನೇನೋ!!!
ತಲೆಯಲ್ಲಿ ವಿಚಿತ್ರವಾದ ವಿಕೃತವಾದ ಆಲೋಚನೆಗಳನ್ನು ತುಂಬಿಕೊಂಡು ಆಫೀಸ್ ಸಮೀಪಿಸಿದೆ. ಬಾಗಿಲ ಬಳಿಯೇ
ಆ ವ್ಯಕ್ತಿ ಅಸಹ್ಯವಾಗಿ ಹಲ್ಲು ಕಿರಿಯುತ್ತಾ ಹಂಗಿಸುವಂತೆ ನನ್ನತ್ತಲೇ ನೋಡುತ್ತಾ ಹೊರಟುಹೋದ. ಅವನ
ಜೊತೆ ಅವಳು ಇರಲಿಲ್ಲ. ಈ ವ್ಯಕ್ತಿ ಒಳಗಿಂದ ಬಂದದ್ದನ್ನು ನೋಡಿ ಆತಂಕದಿಂದ ಒಳಗೆ ಹೋದೆ. ಕಣ್ಣು ಕತ್ತಲೆ
ಬಂದಂತಾಯಿತು. ಉಸಿರು ಕಟ್ಟಿದಂತಾಯಿತು. ನನ್ನ ಸೀನಿಯರ್ ಸಹಪಾಟಿಗಳ ಮೈ ಕೈ ಎಲ್ಲಾ ರಕ್ತ ಸವರಿತ್ತು.
ನನ್ನ ಕಡೆಗೆ ಬೇಕೆಂತಲೇ ಗಮನ ಕೊಡದೆ ಕೆಲಸ ಮುಂದುವರೆಸಿದ್ದರು. ನನ್ನ ಮೇಲಧಿಕಾರಿಯ ಕಡೆ ನೋಡಿದೆ.
ಎಲ್ಲರೂ ಅದೇ ಸ್ಥಿತಿಯಲ್ಲಿದ್ದರು. ಒಮ್ಮೆ ವಾಕರಿಕೆ ಬಂದಂತಾಯಿತು. ಮುಳ್ಳಿನ ಆಸನದ ಮೇಲೆ ಕುಳಿತೆ.
ನಾನೇ ಖರೀದಿಸಿದ್ದರೆ ಅವಳ ಜೀವವಾದರೂ ಉಳಿಯುತ್ತಿತ್ತೇನೋ. ಒಂದು ವರ್ಷದ ನಂತರ ನನ್ನ ಮೈ ಕೈ ಕೂಡ ರಕ್ತಮಯವಾಗಿದೆ!!!
ಇದು ಉಣಿಸುವವರ ತಪ್ಪೋ,
ಭಕ್ಷಿಸುವವರ ತಪ್ಪೋ ಗೊತ್ತಿಲ್ಲ, ಒಟ್ಟಿನಲ್ಲಿ ಪ್ರತಿ ದಿನ ಪ್ರಲೋಭನೆ ಹುಟ್ಟಿಸುತ್ತಿದ್ದ ದುಡ್ಡು
ಜೇಬಿಗಿಳಿಯುವ ಮುನ್ನ ಒಬ್ಬ ನ್ಯಾಯ‘ದೇವತೆ’ ಸಾಯುತ್ತಾ ಹೋದಳು. ಗೊತ್ತಿದ್ದೋ ಗೊತ್ತಿಲ್ಲದೆಯೋ, ಬೇಕೆಂದೋ
ಬೇಡವೆಂದೋ, ಯಾವ ಕಾರಣದಿಂದಲೋ ಒಟ್ಟಿನಲ್ಲಿ ಅದೇ ಸಾಗರದಲ್ಲಿ ಸವಾರನಾಗಿ ಪಯಣ ಮುಂದುವರೆಸಿದೆ.
ಹಿನ್ನುಡಿ: ತುಂಬಾ
ಸೀರಿಯಸ್ ಆಗಿದ್ದಲ್ಲಿ ಕ್ಷಮಿಸಿ :-)
ಒಂದೇ ಓದಿಗೆ ಅರ್ಥವಾಯ್ತು :-) ಸಕತ್ ಡೀಪ್ ಇನ್ ಸೈಟ್ಸ್ ಇದಾವೆ ಇನ್ನಷ್ಟು ಬೆಳೆಸಿ ಸ್ಪಷ್ಟಗೊಳಿಸಬಹುದಿತ್ತೇನೋ, ಇದೂ ಸ್ಪಷ್ಟವಾಗೆ ಇದೆ. ಶಾರ್ಟ್ ಮೂವಿ ಮಾಡೋಕಾಗತ್ತ ನೋಡಿ ಕಾನ್ಸೆಪ್ಟ್ ಒಳ್ಳೇದಿದೆ. ತಮಾಷೆಗೆ ಒಂದು ಮಾತು ನೀವು ಲೋಕಾಯುಕ್ತರಾಗೋಕೆ ಲಾಯಕ್ಕಿದ್ದೀರಿ :-)
ReplyDeletehaaaaaaaaa ondu kai node bidona sumniri :-)
Delete