ಓದಿ ಓಡಿದವರು!

Tuesday, 21 February 2012

ಸಾಕ್ಷಾತ್ಕಾರ!




ಮುನ್ನುಡಿ: ಇದೊಂದು ಸ್ವಗತ ಲಹರಿ. ನಿಮ್ಮ ನಿಮ್ಮ ಚೌಕಟ್ಟಿನಿಂದ ಹೊರಗೆ ಚಿಂತಿಸಲಿಷ್ಟಪಡದವರು ದಯವಿಟ್ಟು ಮುಂದುವರೆಯಬೇಡಿ.

ಇವನ ಕೈಯಲ್ಲಿ ಒಂದು ಅಸ್ತ್ರವಿದೆ. ಇವನು ಮನಸಿಗೆ ಬಂದದ್ದು ಮಾಡುತ್ತಾನೆ. ಇವನಿಗೆ ಕೋಪ ಬರಿಸಿದರೆ ವಿನಾಶ ಖಂಡಿತ. ತಪ್ಪು ದಾರಿಯಲ್ಲಿದ್ದವರಿಗೆ ಇವನು ತನ್ನದೇ ಆದ ರೀತಿಯಲ್ಲಿ ಪಾಠ ಕಲಿಸುತ್ತಾನೆ. ಇವನಿಗೆ ಯಾರ ಪ್ರಾಣ ಬೇಕಾದರೂ ತೆಗೆದುಕೊಳ್ಳುವ ಸ್ವಯಂ ಘೋಷಿತ ಹಕ್ಕಿದೆ. ಇವನ ದಾರಿ ತುಳಿಯದವರನ್ನು, ಇವನಿಗೆ ನಿಷ್ಠನಾಗಿರದವರನ್ನು ಎಲ್ಲಿ ಹೇಗೆ ಬೇಕಾದರೂ ಮುಗಿಸುತ್ತಾನೆ. ಇವನಿಗೆ ಕೊಟ್ಟ ಮಾತಿನಂತೆಯೇ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ತಕ್ಕ ಶಾಸ್ತಿ ಖಂಡಿತ. ಇವನನ್ನು ಕಾಣಲು ಇವನಿರುವ ಸ್ಥಳಕ್ಕೇ ಹೋಗಬೇಕು. ಇವನಿಗೆ ತುಂಬಾ ಜನ ಪರಿಪಾಲಕರಿದ್ದಾರೆ. ಇವನಿಗೆ ದಕ್ಷಿಣೆ ಸದಾ ಸಲ್ಲಿಸಲೇ ಬೇಕು. ಇವನ ಬಗ್ಗೆ ಭಯವನ್ನಿಟ್ಟು ಎಲ್ಲರೂ ಬದುಕಬೇಕು. ಮರೆತರೆ ಮರಣದಲ್ಲೂ ಕೈ ಹಿಡಿಯುವುದಿಲ್ಲ. ಇವನು ಹೇಳುವುದು ಅಂತಿಮ. ಇವನು ಯಾರ ಮಾತಿಗೂ ಅಂಜುವುದಿಲ್ಲ. ಯಾರ ಮಾತನ್ನೂ ಪರಿಗಣಿಸುವುದಿಲ್ಲ. ಯಾರೂ ವಿರೋಧಿಸುವಹಾಗಿಲ್ಲ. ಯಾರಿಗೂ ಪ್ರಶ್ನಿಸುವ ಹಕ್ಕಿಲ್ಲ. ನನ್ನ ಎಡಗಡೆಗೆ ಇವನನ್ನು ಒಂದು ಕುರ್ಚಿ ಹಾಕಿ ಕುಳ್ಳಿರಿಸಿದ್ದೆ. ಬಲಗಡೆಗೆ ಇನ್ನೊಬ್ಬ ವಿಶಿಷ್ಟವಾದ ಇಂದು(ಶಿವರಾತ್ರಿಯ ದಿನ) ಭಯಾನಕ ಬಿಝಿಯಾಗಿರುವ ವ್ಯಕ್ತಿತ್ವವನ್ನು ಹಿಡಿದುತಂದು ಕೂರಿಸಿದ್ದೆ. ಈತ ತನ್ನದೇ ಆದ ವಿಚಿತ್ರ ಆಸನವನ್ನು ತಂದು ಅದರ ಮೇಲೆಯೇ ಕುಳಿತಿದ್ದ. ಈ ಮೇಲೆ ಹೇಳಿರುವ ಎಲ್ಲಾ ಗುಣಲಕ್ಷಣಗಳನ್ನು ಇವನಿಗೂ ಆರೋಪಿಸಬಹುದು.

ಇಬ್ಬರೂ ನೋಡಲು ಒಂದೇ ರೀತಿ ಕಂಡರೂ ಇಬ್ಬರ ವ್ಯಕ್ತಿತ್ವ ಅಜಗಜಾಂತರ ವ್ಯತ್ಯಾಸವನ್ನು ಹೊಂದಿತ್ತು. ಆದರೂ ಇಬ್ಬರನ್ನೂ ನಾವು ಒಂದೇ ತಕ್ಕಡಿಯಲ್ಲಿ ತೂಗಲು ಶುರುಮಾಡಿರುವುದರಿಂದ ಒಮ್ಮೆ ಇವರನ್ನು ಎದುರುಬದುರು ಕುಳ್ಳಿರಿಸಿ ನನಗೆ ಇವರಿಬ್ಬರ ನಡುವೆ ಇರುವ ಗೊಂದಲವನ್ನು ನಿವಾರಿಸಿಕೊಳ್ಳಲೋಸಗ ಇಂದಿನ ಶುಭಸಂದರ್ಭದಲ್ಲಿ ಕರೆಸಿದ್ದೆ. ಇಬ್ಬರೂ ಅನಾವಶ್ಯಕವಾಗಿ ಮಾತನಾಡದೇ ಒಂದೇ ರೀತಿಯ ಗಾಂಭೀರ್ಯತೆಯನ್ನು ಮೆರೆಯುತ್ತಿದ್ದರು. ಆದರೂ ಅದೇನೋ ಇಬ್ಬರ ಮುಖದಲ್ಲೂ ಒಂದೇ ರೀತಿಯ ಕಾಂತಿಯಿತ್ತು. ನನ್ನ ಮನಸಿನಲ್ಲಿ ಇಬ್ಬರನ್ನು ತಾಳೆನೋಡುತ್ತಿದ್ದಂತೆಯೂ ಇನ್ನೂ ಗೊಂದಲಗಳು ಹುಟ್ಟಿ, ವಿಚಾರಲಹರಿಯೇ ಹರಿಯುತ್ತಿತ್ತು.

ನನ್ನ ಬಲಗಡೆಯಿದ್ದವರಿಂದ ನಾನು ನನ್ನ ಪ್ರಶ್ನೆ ಶುರುಮಾಡಿದೆ. ಇಷ್ಟೆಲ್ಲಾ ಜನರಿಂದ ಇಷ್ಟು ಕೋರಿಕೆಗಳು, ಸಮಸ್ಯೆಗಳು, ಅಹವಾಲುಗಳು, ಬೇಡಿಕೆಗಳು, ಮುಂತಾದವು ನಿನ್ನ ಬಳಿ ಬಂದರೂ ಹೇಗೆ ನೀನು ಹೀಗೆ ಮಂದಹಾಸದೊಂದಿಗೆ ಕುಳಿತಿದ್ದೀಯ. ಏನಿದರ ರಹಸ್ಯ ಎಂದು ಕೇಳಿದ್ದಕ್ಕೆ, ಆತನಿಂದ ಬಂದ ಉತ್ತರ ಮಂದಹಾಸದ ನಿಶ್ಕಲ್ಮಶ ಮೋರೆಯಷ್ಟೇ. ಆದರೆ ಆತ ಉತ್ತರಿಸದಿದ್ದರೂ ಉತ್ತರಿಸಿದಹಾಗಿತ್ತು. ಉತ್ತರ ನನ್ನ ವಿವೇಚನೆಗೆ ತಲುಪಿತು. ಅವನ ‘ನಿರುತ್ತರ’ವೇ ನನ್ನ ಪ್ರಶ್ನೆಗೆ ಉತ್ತರವೆನಿಸುತ್ತದೆ.

ನನ್ನ ಎಡಗಡೆಯಿದ್ದ ಮನುಷ್ಯನನ್ನುದ್ದೇಶಿಸಿ ನೀನು ಮಾಡುತ್ತಿರುವ ಕೆಲಸ, ನಿನ್ನ ಮಾರ್ಗ ತಪ್ಪಲ್ಲವೇ? ಎಂದು ಕೇಳಿದರೆ, ನಾನು ಮಾಡುತ್ತಿರುವುದು ತಪ್ಪಾದರೆ, ಜನ ಸಾಮಾನ್ಯರು ಮಾಡುತ್ತಿರುವುದೂ ಕೂಡ ತಪ್ಪು. ನನಗೆ ನಾನು ಮಾಡುತ್ತಿರುವುದು ಸರಿ ಎಂದೆನಿಸಿದ್ದಕ್ಕೇ ಮಾಡುತ್ತಿರುವುದು. ಜನ ಅವರಿಗೆ ಸರಿ ಎನಿಸಿದ್ದು ಅವರು ಮಾಡುತ್ತಿದ್ದಾರೆ. ಇಲ್ಲಿ ತಪ್ಪೇನಿದೆ ಎಂದು ಮತ್ತೆ ನನ್ನನ್ನೇ ಮರುಪ್ರಶ್ನೆ ಮಾಡಿದ. ಉತ್ತರಿಸುವ ಶಕ್ತಿ ನನ್ನಲ್ಲಿರಲಿಲ್ಲ.

ಮತ್ತೆ ಬಲಗಡೆ ತಿರುಗಿ ನೀವು ಈ ಎಡಗಡೆ ಕುಳಿತಿರುವ ಮನುಷ್ಯನಿಗಿಂತ ಯಾವುದೇ ರೀತಿಯಲ್ಲಿ ಭಿನ್ನವಾಗಿ ಕಾಣುತ್ತಿಲ್ಲ ನನಗೆ ಅವನು ಮಾಡುತ್ತಿರುವ ಭಯೋತ್ಪಾದನೆ ನೀವೂ ಸಹ ಮಾಡುತ್ತಿದ್ದೀರಿ. ಮಕ್ಕಳನ್ನು ಪೋಷಕರು, ಹಿರಿಯರು, ಗುರುಗಳು ತಮಗೆ ಸರಿ ಎನಿಸಿದ ಮಾರ್ಗ ಅನುಸರಿಸುವಂತೆ ಮಾಡಲು ನಿಮ್ಮನ್ನು ಉಪಯೋಗಿಸಿ, ಭಯ ಹುಟ್ಟಿಸುತ್ತಾರೆ. ಕದಿಯಬಾರದು ‘ನೀನು’ ಕಣ್ಣು ಕಿತ್ಕೋತೀಯ, ಸುಳ್ಳು ಹೇಳಬಾರದು ‘ನೀನು’ ಬಾಯಿ ಕಸಿದುಕೊಳ್ತೀಯ, ನಿನಗೆ ಪ್ರತಿದಿನ ನಮಸ್ಕರಿಸಬೇಕು ಇಲ್ಲವಾದಲ್ಲಿ ಮುನಿಸಿಕೊಂಡು ಶಾಪ ಕೊಡುತ್ತೀಯೆ, ಇಂಥ ದಿನ ಇಂಥ ಆಹಾರ ತಿನ್ನಕೂಡದು ಇಲ್ಲವಾದಲ್ಲಿ ನಿನ್ನ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ನಿನ್ನನ್ನು ನಂಬದವರು, ಪೂಜಿಸದವರು ಹಾಳಾಗಿ ಹೋಗುತ್ತಾರೆ. ನಿನ್ನ ಪ್ರಸಾದವನ್ನು ಕಣ್ಣಿಗೊತ್ತಿಕೊಳ್ಳಬೇಕು, ನಿನ್ನನ್ನು ಸಂಪ್ರೀತಗೊಳಿಸಲು ಹಣವ್ಯಯ ಮಾಡಿ ಅರ್ಚನಾದಿಗಳನ್ನು ಮಾಡಿಸಬೇಕು, ನೀನು ಮನೆ ಮನೆಯಲ್ಲಿ ನೆಲೆಸಲು ನಿನ್ನನ್ನು ಮನೆಯಲ್ಲಿ ಪ್ರತಿಷ್ಠಾಪಿಸಬೇಕು. ನಿನ್ನನ್ನು ಬಯ್ಯಬಾರದು, ನಿನ್ನನ್ನು ಸದಾ ಹೊಗಳುತ್ತಲೇ ಇರಬೇಕು, ನಿನ್ನನ್ನು ಪ್ರಶ್ನಿಸಬಾರದು. ಇಲ್ಲಿಂದಾ ಹಿಡಿದು ನಿನ್ನ ಹೆಸರಿನಲ್ಲಿ ಮೊಬೈಲ್ ಗೆ ಅಥವಾ ಫ಼ೇಸ್ ಬುಕ್ ನಲ್ಲಿ ಮೆಸೇಜ್ ಬಂದರೆ ಅದನ್ನ ಮತ್ತೊಂದಷ್ಟು ಜನರಿಗೆ ಕಳುಹಿಸಿದರೆ ನಿನ್ನ ಪ್ರೀತಿಗೆ ಪಾತ್ರರಾಗಬಹುದು ಎಂಬುವ ತನಕ ಮತ್ತು ಇನ್ನೂ ಮುಂದುವರೆದು ಬೀದಿ ಬೀದಿಗಳಲ್ಲಿ ನಿನ್ನ ಹೆಸರನ್ನು ಉಪಯೋಗಿಸಿ ಜನ ಮೂತ್ರ ವಿಸರ್ಜನೆ ಮಾಡದ ಹಾಗೆ ತಡೆಗಟ್ಟುವಲ್ಲಿ ನಿನ್ನ ಭಯೋತ್ಪಾದಕ ಗುಣ ಸಹಾಯಕವಾಗುತ್ತಿದೆ. ಏನು ಹೇಳುವೆ ಇದರ ಬಗ್ಗೆ ಎಂದು ಕೇಳಿದ್ದಕ್ಕೆ. ಶಾಂತವಾಗೇ ಉತ್ತರಿಸಿದ. ನೀನು ಕೇಳಿದ ಅಷ್ಟೂ ಪ್ರಶ್ನೆಗಳಿಗೆ ನಾನು ಜವಾಬ್ದಾರನಲ್ಲ. ನಾನು ಅಲ್ಲೆಲ್ಲೂ ಇಲ್ಲವೇ ಇಲ್ಲ. ಭಕ್ತಿ ಇದ್ದಲ್ಲಿ ನಾನಿದ್ದೇನೆ ಎಂದು ಮಾತ್ರ ಹೇಳಿದ.

ನನ್ನ ಎಡಗಡೆ ಇದ್ದ ವ್ಯಕ್ತಿ ಮಧ್ಯೆ ಬಾಯಿ ಹಾಕಿ ಇವರು ದೇವಸ್ಥಾನದಲ್ಲಿ ಮತ್ರ ಇರೋದು ಎಂದು ಹೇಳಿದ. ಅದಕ್ಕೆ ಬಲಗಡೆ ಇದ್ದಾತ ಮನೆ ಮನೆಯಲ್ಲಿ, ಮನ ಮನದಲ್ಲೂ, ಕಣ ಕಣದಲ್ಲೂ ಇದ್ದೇನೆ ಎಂದ. ಎಡಗಡೆ ಇದ್ದಾತ, ಮತ್ತೆ ಜನ ದೇವಸ್ಥಾನಕ್ಕೆ ಯಾಕೆ ಬರುತ್ತಾರೆ ಎಂದು ಪ್ರಶ್ನೆ ಮುಂದುವರೆಸಿದ, ತಮ್ಮಲ್ಲಿರುವ ನನ್ನನ್ನು ಕಾಣಲಸಮರ್ಥರು ಹುಡುಕಿಹೊರಡುತ್ತಾರೆ ಎಂದು ತೀಕ್ಷ್ಣವಾಗಿ ಉತ್ತರ ಬಂತು. ಎಡ ವ್ಯಕ್ತಿ ಮಾತು ಮುಂದುವರೆಸುತ್ತಾ ನೀನು ಮೋಸಗಾರ ನಿನ್ನ ಕೈಯಲ್ಲಿ ಏನೂ ಆಗಲ್ಲ, ನಾನು ಇಷ್ಟೆಲ್ಲಾ ಜನರನ್ನ ಸಾಮೂಹಿಕವಾಗಿ ಮುಗಿಸಿದ್ದೇನೆ ನೀನು ನಿಜವಾಗಲೂ ಶಕ್ತಿಯುತನಾಗಿದ್ದಲ್ಲಿ ನನ್ನನ್ನು ಇಷ್ಟು ರಾಜಾರೋಷವಾಗಿ ಓಡಾಡಲು ಬಿಡುತ್ತಿದ್ದೆಯಾ ಎಂದು ಕೇಳಿದ. ಉತ್ತರ ಏನು ಬರಬಹುದೆಂಬ ಕುತೂಹಲ ನನಗೇ ಹೆಚ್ಚಿತ್ತು. ಉತ್ತರ ಶಾಂತವಾಗೇ ಬಂತು. ತಪ್ಪು ಮಾಡಿದವರನ್ನೆಲ್ಲಾ ಹಿಡಿದು ಶಿಕ್ಷಿಸುತ್ತಾ ಕೂರುವ ಕೆಲಸ ನನ್ನದಲ್ಲ. ನೀನು ಭಯೋತ್ಪಾದನೆಯಲ್ಲಿ ತೊಡಗಿದ್ದಲ್ಲಿ, ಭಯೋತ್ಪಾದನೆ ನಿನ್ನನ್ನು ಕರೆದೊಯ್ಯುತ್ತದೆ. ಎಲ್ಲಾ ಮನುಷ್ಯರು ಮಾಡಿಕೊಂಡಿರುವ ಆಯಾ ಕಾಲದ ವ್ಯವಸ್ಥ್ಯಾನುಸಾರವಾಗಿ ಜಗತ್ತು ನಡೆಯುತ್ತದಷ್ಟೇ. ಏನೇ ಆದರೂ ಕಾರಣಕರ್ತ ಮನುಷ್ಯನೇ ಅಂತಿಮವಾಗಿ.

ಮತ್ತೆ ನಿನ್ನ ಪಾತ್ರವೇನು ಎಂದು ಕುತೂಹಲ ತಡೆಯಲಾಗದೆ ನಾನೇ ಕೇಳಿದೆ. ಅದೇ ತಾಳ್ಮೆಯಿಂದಲೇ ಉತ್ತರಿಸಿದ ಆತ, ನಾನು ಏನೂ ಅಲ್ಲ. ನಾನು ಹೊರಗಿಲ್ಲ, ನಿಮ್ಮ ಒಳಗಿದ್ದೇನೆ, ನನ್ನನ್ನ ನೀವು ಕಂಡುಕೊಂಡಹಾಗಿ ಕಾಣಸಿಗುತ್ತೇನೆ. ಬಳಸಿದ ಹಾಗೆ ಬಳಕೆಯಾಗುತ್ತೇನೆ. ನಾನಿಲ್ಲ ಎಂದರೆ ನಾನಿಲ್ಲ, ನಾನಿದ್ದೇನೆಂದರೆ ನಿಮ್ಮ ಇಷ್ಟಾರ್ಥ ರೂಪದಲ್ಲಿ ಇದ್ದೇನೆ. ಇದ್ದೇನೆ ಎಂಬುದೇ ನಂಬಿಕೆ. ಆ ನಂಬಿಕೆಯಷ್ಟೇ ನಾನು. ಇನ್ನೇನೂ ಇಲ್ಲ.

ಇವರೊಂದಿಗೆ ಮಾತುಕತೆ ಮುಂದುವರೆಯುತ್ತಲೇ ಹೋಯಿತು. ದೇವರ ಹೆಸರಿನಲ್ಲಿ ನಾವು ಮಾಡುತ್ತಿದ್ದ ಭಯೋತ್ಪಾದನೆಯನ್ನು ನೆನೆಸಿಕೊಂಡಾಗ ಈಗ ನಗು ಬರುತ್ತಲಿತ್ತು. ಯಾವ ರೂಪದಲ್ಲಿ ಮಾಡಿದರೂ ಭಯೋತ್ಪಾದನೆಯು ಒಂದು ಕ್ರೌರ್ಯ ಪ್ರದರ್ಶನವಷ್ಟೇ. ಎಡಗಡೆ ಇದ್ದ ಭಯೋತ್ಪಾದಕ ನಮ್ಮೆಲ್ಲರ ಪ್ರತೀಕವಾಗೇ ಕುಳಿತು ವಾದಿಸುತ್ತಿದ್ದ. ಬಲಗಡೆ ಇದ್ದ ನಮ್ಮೊಳಗಿರುವ ದೇವರು ನಿಜ ಸ್ವರೂಪದ ಅರಿವು ಮೂಡಿಸಲು ಶ್ರಮ ಪಡದೆ ಹಲವು ಬಾರಿ ನಿರುತ್ತರನಾಗಿ ನೆಮ್ಮದಿಯಾಗಿ ಇದ್ದ. ಇವರಿಬ್ಬರ ನಡುವೆ ಇದ್ದ ನಾನು ಇನ್ನು ಮುಂದೆ ನನ್ನಲ್ಲಿರುವ ದೇವರನ್ನೇ ಪೂಜಿಸುವ, ಆರಾಧಿಸುವ, ದಾರಿಯಲ್ಲಿ ಮುನ್ನಡೆಯಬೇಕೆಂದು ತೀರ್ಮಾನಿಸಿದ್ದೆ. ಮತ್ತೇನೇ ಸಂಶಯ, ಪ್ರಶ್ನೆಗಳು ಹುಟ್ಟಿದಲ್ಲಿ ನನ್ನ ಒಳಗಿರುವ ದೇವರನ್ನೇ ಯಾವ ಭಯವಿಲ್ಲದೇ, ಯಾವಾಗ ಬೇಕೆಂದರೂ ಸಂಪರ್ಕಿಸಿ ಸಂದರ್ಶನ ಮಾಡುವ ಸ್ವಾತಂತ್ರ್ಯವಿತ್ತು. ನನ್ನ ಶಿವರಾತ್ರಿಯ ಜಾಗರಣೆ ಹೀಗೆ ಮುಕ್ತಾಯವಾಯ್ತು. ಇದು ನನ್ನ ಸಾಕ್ಷಾತ್ಕಾರವೆಂಬುದು ನನ್ನ “ನಂಬಿಕೆ”. ನನ್ನ ದೇವರನ್ನು ನಾನು ನನ್ನಲ್ಲೇ ಕಂಡುಕೊಂಡಿದ್ದೇನೆ. ನನ್ನ ದೇವರ ಹೆಸರು “ದೇವರು” ಅಷ್ಟೇ. ಈ ನನ್ನ ದೇವರು ಈ ಪ್ರಪಂಚದಲ್ಲಿರುವ ಕೋಟ್ಯಾನುಕೋಟಿ ದೇವರುಗಳ ದೇವರು. ಅವರೆಲ್ಲರ ಮೇಲೆ ಕೆಲಸವಿಲ್ಲದೆ ಕೇವಲ ನನಗಾಗಿ ಮಾತ್ರ ದುಡಿಯುತ್ತಾ, ನನಗೆ ಸಹಾಯ ಮಾಡುತ್ತಾ, ನನ್ನ ಕೆಲಸಗಳಿಗೆ ಹುರಿದುಂಬಿಸುತ್ತಾ, ನನ್ನ ಸ್ಫೂರ್ತಿಯಾಗುತ್ತಾ, ಸ್ನೇಹಿತನಾಗಿ ಸಲಹೆ ನೀಡುತ್ತಾ, ಗುರುವಾಗಿ ಹರಸುತ್ತಾ, ಎಲ್ಲ ದೇವರುಗಳ ವರಗಳನ್ನು, ಶಾಪಗಳನ್ನು ಮನ್ನ ಮಾಡುತ್ತಾ ನನ್ನನ್ನು ಕಾಪಾಡುತ್ತಾ, ನನ್ನ ವಿವೇಚನೆಯನ್ನು ಚುರುಕುಗೊಳಿಸುತ್ತಾ, ನನ್ನನ್ನು ಪ್ರತಿ ಹೆಜ್ಜೆಗೂ ಪ್ರಶ್ನಿಸುತ್ತಾ, ಲಾಲಿಸುತ್ತಾ, ಪಾಲಿಸುತ್ತಾ, ನಲಿಸುತ್ತಾ, ಉತ್ತೇಜಿಸುತ್ತಾ, ವಿನೋದ ಮಾಡುತ್ತಾ, ತಂಟೆ ಮಾಡುತ್ತಾ, ಪ್ರಯೋಗ ಮಾಡುತ್ತಾ, ಇತ್ಯಾದಿ ಇತ್ಯಾದಿ ಅನುಭವ ನೀಡುತ್ತಾ ಕೈ ಹಿಡಿದು ಸದಾ ಜೊತೆಯಲ್ಲಿ ಮುಂದುವರೆಯುತ್ತಿದ್ದಾನೆ.

ಹಿನ್ನುಡಿ: ಎಲ್ಲರೂ ಸರಿ! ಎಲ್ಲರೂ ತಪ್ಪು! ನಿಮ್ಮ ನಂಬಿಕೆಯೇ ನಿಮ್ಮ ಸಾಕ್ಷಾತ್ಕಾರಕ್ಕೆ ದಾರಿಮಾಡಿಕೊಡಲಿ. 

No comments:

Post a Comment