ಓದಿ ಓಡಿದವರು!

Tuesday 7 February 2012

Chance-Choice (ಒಂದು ಸಕ್ಸಸ್ ಸೂತ್ರದ ಝಲಕ್)


Chance

“ಏನಪ್ಪ! ಏನಾಗಬೇಕಿತ್ತು! “
“ಸಾರ್ ಒಂದು ಚಾನ್ಸ್. ನಾನು ಏನು ಅಂತ ಪ್ರೂವ್ ಮಾಡಿತೋರಿಸ್ತೀನಿ ಸಾರ್”
“ಯೋ ಹೋಗಯ್ಯ ಸುಮ್ಮನೆ ತಲೆ ತಿನ್ನಬೇಡ, ನನ್ನ ಟೆನ್ಶನ್ ನಂಗೆ ನೀ….ನ್ ಬೇರೆ”
“ಸಾ….ರ್‍” ಎನ್ನುವಷ್ಟರಲ್ಲಿ ರಾಕಿ ಬಂದು ಮೈಮೇಲೆ ಎರಗೇಬಿಟ್ಟಿತು. ಒಮ್ಮೆ ದಿಗ್ಭ್ರಾಂತನಾದೆ. ರಾಕಿ.. ರಾಕಿ ಕಮ್ ಹಿಯರ್ ಎಂದು ಎಳೆದುಕೊಂಡು ಹೋದರು. ಅದು ಚಾನ್ಸ್ ಕೇಳಲೇ ಇಲ್ಲ ಅದೇನೆಂದು ನಿರೂಪಿಸಿತ್ತು. ನಾನು ನಿರೂಪಿಸಲು ಸಾಧ್ಯವಾಗಲೇ ಇಲ್ಲ. ಚಾನ್ಸ್ ಕೇಳುತ್ತಿದ್ದವನು ಸಹ ನಾನಾಗಿರಲಿಲ್ಲ. ಹೊರಬಂದೆ. ಇಲ್ಲ ಹೇಳಿಕಳುಹಿಸುತ್ತೇನೆ ಹೋಗಯ್ಯ ಎಂದು ಹೊರಗೆ ಕಳುಹಿಸಿದರು. ಅವರು ಹೇಳಿಕಳುಹಿಸುವುದಿಲ್ಲ ಎಂದು ನನಗೂ ಗೊತ್ತಿತ್ತು. ಅವರಿಗೂ ಗೊತ್ತಿತ್ತು ಅನ್ನಿಸುತ್ತದೆ. ಮನೆಯ ದಾರಿ ಹಿಡಿದೆ. ಸ್ನೇಹಿತರ ಬಳಿ ಕಥೆಗಳಿಗೆ ಕಲರ್ ಹಾಕಿ ಹೇಳುತ್ತಿದ್ದೆ ಅದೊಂದೇ ನನಗೆ ಸಿಕ್ಕ ಚಾನ್ಸ್ ಇಲ್ಲಿಯವರೆಗೂ. ಎಲ್ಲೋ ಶೂಟಿಂಗ್ ನಡೆಯುತ್ತಿದೆ ಎಂದಾಕ್ಷಣ ಹೋಗಿ ನಿಂತು ದಿನಪೂರ್ತಿ ನೋಡುತ್ತಾ, ಕಲಿಯುತ್ತಾ ನಿಂತಿರುತ್ತಿದ್ದೆ. ಸಿಕ್ಕ ಸಿಕ್ಕ ಡೈರೆಕ್ಟರ್ ಗಳ ಬಳಿ ಹೋಗಿ, ಕೆಲವು ಸಲ ಕಾಲಿಗೂ ಸಹ ಬಿದ್ದಿದ್ದೆ. ಹೆಡ್ಡನಂತೆ ಕಥೆಗಳನ್ನು ಕೊಟ್ಟುಬಂದಿದ್ದೆ. ಮೊನ್ನೆ ಒಬ್ಬರ ಮನೆಗೆ ಮೂರು ಕಥೆಗಳನ್ನು ಒಟ್ಟಿಗೆ ಕೊಟ್ಟು ಅದರಲ್ಲಿ ಪತ್ರ ಬರೆದು ನನ್ನ ಕಷ್ಟಗಳನ್ನು ತೋಡಿಕೊಂಡು ಅವರು ಚಾನ್ಸ್ ಕೊಟ್ಟರೆ ನನಗೆ ಆಗಬಹುದಾದ ಸಹಾಯದ ವಿವರಣೆ ಕೊಟ್ಟು ಪ್ಯಾಕೆಟ್ ಮಾಡಿ ಡೈರೆಕ್ಟರ್ ಗೆ ತಲುಪಿಸಲು ಹೇಳಿ ಮನೆಯವರಿಗೆ ಕೊಟ್ಟು ಬಂದಿದ್ದೆ. ಮಾರನೆ ದಿನ ಮತ್ತೆ ಮನೆಗೆ ಹೋಗಿ ಅಹವಾಲು ಹೇಳಿಕೊಳ್ಳೋಣವೆಂದು ಹೋದೆ. ಅದೇ ಸಮಯಕ್ಕೆ ಕೆಲಸದವಳು ಕಸದ ಬುಟ್ಟಿಯಲ್ಲಿ ಕಸದೊಂದಿಗೆ ನನ್ನ ಹಳದಿ ಪ್ಯಾಕೆಟ್ಟನ್ನೂ ಬಿಚ್ಚದೆಯೇ ತುಂಬಿಕೊಂಡು ಹೋಗಿ ಹಾಕಿ ಬಂದಳು. ಯಾಕೋ ಅದನ್ನು ಎತ್ತಿಕೊಳ್ಳುವ ಮನಸು ಬರಲಿಲ್ಲ, ಆ ಮನುಷ್ಯನನ್ನು ಭೇಟಿಯಾಗಲೂ ಮನಸು ಬರಲಿಲ್ಲ. ಅಲ್ಲಿಂದ ಹೊರಗೆ ಬಂದೆ. ಅತ್ತೆ. ನನ್ನ ಮುಂದೆ ನನ್ನ ಹೆಂಡತಿ ಬೆಂಕಿಯಲ್ಲಿ ಉರಿದಂತೆ ಕಣ್ಣಿಗೆ ಕಟ್ಟಿದಂತೆ ನನ್ನ ಶ್ರಮದ ಪ್ಯಾಕೆಟ್ ಕಸದ ತೊಟ್ಟಿಯಲ್ಲಿ ಬಿದ್ದಿದ್ದನ್ನು ಮತ್ತೆ ಮತ್ತೆ ನನೆಸಿಕೊಂಡು ಅತ್ತೆ. ಏನು ಮಾಡುವುದು ದಾರಿ ತೋರಲಿಲ್ಲ. ಬೇರೆ ಯಾವುದೇ ಕೆಲಸ ಮಾಡಹೋದರೂ ಸರಿಹೊಂದದೆ ಮೂರು ಮೂರು ತಿಂಗಳಿಗೂ ಕೆಲಸಗಳನ್ನು ಬಿಟ್ಟು ಈಗ ಯಾವ ಕೆಲಸಗಳೂ ದೊರಕದಂತಾಗಿತ್ತು. ಊಟಕ್ಕೂ ಕಷ್ಟ. ನಿದ್ದೆ ಒಂದು ಏನಿದ್ದರೂ ಇಲ್ಲದಿದ್ದರೂ ಮಾಡುತ್ತಿರುವೆ. ಕೆಲವು ಸಲ ಹಗಲು ರಾತ್ರಿ ಎನ್ನದೇ ನಿದ್ರೆ ಮಾಡುವೆ. ತಲೆಕೆಟ್ಟಾಗ ಯಾವುದಾದರೂ ಮೂಲದಿಂದ ಸಿಗರೇಟ್ ಹೊಂಚಿ ಧಮ್ಮೆಳೆದು ಹೊಗೆ ಬಿಟ್ಟರೆ, ನನ್ನ ಜೀವನ ಹೊಗೆಯಾಗುತ್ತಿರುವುದು ಕೊಂಚ ಸಮಯವಾದರೂ ಮರೆಯಬಹುದಿತ್ತು. ಧೃತಿಗೆಡಲಿಲ್ಲ ಸಿಕ್ಕ ಸಿಕ್ಕ ಡೈರೆಕ್ಟರ್ ಗಳ ಹತ್ತಿರ ಹೋಗುತ್ತಲೇ ಇದ್ದೆ. ಮೊದಮೊದಲು ಆಗುತ್ತಿದ್ದ ಮುಜುಗರ ಈಗ ಆಗುತ್ತಿರಲಿಲ್ಲ. ಅವರು ಏನು ಬಾಯಿಗೆ ಬಂದದ್ದು ಬೈದರೂ ಸುಮ್ಮನೆ ಇರುತ್ತಿದ್ದೆ. ಆತ ಒಂದು ಚಾನ್ಸ್ ಕೊಡುತ್ತಾನೆಂಬ ಒಂದು ಆಸೆ. ಆದರೆ ಮತ್ತೆ ನಿರಾಸೆಯಲ್ಲಿ ಮುಕ್ತಾಯವಾಗುತ್ತಿತ್ತು. ಎಷ್ಟೋ ಜನ ನನ್ನ ರೀತಿ ಚಾನ್ಸ್ ಕೇಳುತ್ತಾ ಹೋಗುತ್ತಿದ್ದುದೇ ಇದಕ್ಕೆ ಕಾರಣ. ಎಲ್ಲರನ್ನೂ ಬಾಯಿಗೆ ಬಂದಂತೆ ಶಪಿಸುತ್ತಿದ್ದೆ. ಪ್ರತಿಭೆಯಿಲ್ಲದವರೂ ಹೀಗೆ ಚಾನ್ಸ್ ಕೇಳಿ ಕೇಳಿ ನನ್ನಂತವರಿಗೂ ಚಾನ್ಸ್ ಸಿಗದಂತಾಗಿದೆ ಎಂಬುದು ನನ್ನ ಭಾವನೆಯಾಗಿತ್ತು. ಒಂದು ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿಬಿಟ್ಟಿದ್ದರೆ ಸಾಕಾಗಿತ್ತು. ಮುಂದೆ ಹೇಗೋ ಅದರ ಹೆಸರಿನಲ್ಲೇ ಮುಂದುವರೆದು ಇನ್ನೊಂದೆರಡು ಸಿನಿಮಾಗಳು ಅಸಿಸ್ಟೆಂಟ್ ಕೆಲಸ ನಿರ್ವಹಿಸಿ, ಅಷ್ಟರಲ್ಲಿ ಒಂದಷ್ಟು ಸಿನಿಮಾ ಮೇಕಿಂಗ್ ಕಲಿತು ಒಬ್ಬ ನಿರ್ಮಾಪಕನನ್ನ್ ಹಿಡಿದು ಕಷ್ಟಬಿದ್ದು ಒಂದು ಸಿನಿಮಾ ಮಾಡಿಬಿಡಬಹುದಿತ್ತು. ನನ್ನ ಕಥೆಗಳನ್ನು ಜನ ಒಪ್ಪುತ್ತಾರೆ ಎಂಬ ನಂಬಿಕೆ ನನ್ನಲ್ಲಿತ್ತು. ಹಾಗೂ ಹೀಗೂ ಒಂದು ಸಿನಿಮಾದಲ್ಲಿ ಅಸಿಸ್ಟೆಂಟ್ ಕೆಲಸ ಸಿಕ್ಕಿತ್ತು. ಒಂದು ಸ್ಕೆಡ್ಯೂಲ್ ಮುಗಿಯಿತು. ಅದೇನು ರಾಜಕೀಯ ನಡೆಯಿತೋ ಗೊತ್ತಾಗಲಿಲ್ಲ ಪ್ರೊಡಕ್ಷನ್ ಮ್ಯಾನೇಜರ್ ಗೆ ಫೋನ್ ಮಾಡಿದರೆ ಬೇರೆಯವರನ್ನು ಹಾಕಿಕೊಂಡಿರುವುದಾಗಿ ಹೇಳಿ ಮುಂದಿನ ಸಿನಿಮಾಗೆ ಹೇಳುವುದಾಗಿ ಫೋನ್ ಇಟ್ಟ. ನಾನು ಸಿನಿಮಾ ಮಾಡಲೇ ಬೇಕಿತ್ತು. ಬೇರೆ ಯಾವುದೇ ಕೆಲಸ ಮಾಡಲು ಮನಸು ಒಪ್ಪುತ್ತಿರಲಿಲ್ಲ. ಮೂರು ವರ್ಷದಿಂದ ಸಿನಿಮಾಗಳನ್ನು ನೋಡಿಕೊಂಡು, ಹಲವು ಜನರನ್ನು ಭೇಟಿ ಮಾಡಿಕೊಂಡು ಓಡಾಡಿಕೊಂಡೇ ಕಾಲ ತಳ್ಳಿದ್ದೆ. ನನ್ನಲ್ಲಿ ಟಾಲೆಂಟ್ ಇದೆ ಎಂದು ಸ್ನೇಹಿತರು, ಎಲ್ಲರೂ ಹೇಳುತ್ತಿದ್ದರು. ಆದರೆ ಒಂದೆರಡು ಚಿಕ್ಕ ಪುಟ್ಟ ಕೆಲಸಗಳನ್ನು ಬಿಟ್ಟರೆ ಒಳ್ಳೇ ಅವಕಾಶಗಳೇ ಯಾಕೆ ಸಿಗುತ್ತಿಲ್ಲವೋ ಗೊತ್ತಾಗಲಿಲ್ಲ. ಸಿಕ್ಕ ಸಿಕ್ಕಲ್ಲೆಲ್ಲ ಕೈಸಾಲ ಮಾಡಿಕೊಂಡು ಅದರದ್ದೊಂದು ರೋದನೆ. ಮನೆಯಲ್ಲಿ ಯಾವುದೇ ರೀತಿಯ ಸಹಾಯ ಕೇಳುವ ಹಾಗಿರಲಿಲ್ಲ. ಕೆಲಸ ಮಾಡು ಆಮೇಲೆ ಏನೇ ಕಷ್ಟ ಬಂದರೂ ಸಹಾಯ ಮಾಡುತ್ತೇವೆಂದು ಕಳೆದಬಾರಿಯೇ ಫೋನ್ ಮಾಡಿದ್ದಾಗ ಹೇಳಿದ್ದರು. ನನ್ನ ಕಷ್ಟ ಅವರಿಗೆ ಅರ್ಥವಾಗೊಲ್ಲ. ಕೆಲಸ ಮಾಡಿದರೆ ನಾನು ಡೈವರ್ಟ್ ಆಗ್ತೇನೆಂದು ನನಗೆ ಗೊತ್ತಿತ್ತು. ಮನಸಿಲ್ಲದ ಕೆಲಸ ಮಾಡವುದರ ಬದಲು ಸಾಯುವುದು ಮೇಲೆಂದೆನಿಸುತ್ತಿತ್ತು. ಏನೇ ಆಗಲಿ ಒಂದು ಚಾನ್ಸ್ ಗಿಟ್ಟಿಸುತ್ತೇನೆಂದು ನಂಬಿಕೆಯಿತ್ತು. ಉಪೇಂದ್ರ ಸರ್ ಬಂದ ದಾರಿಯಲ್ಲೇ ಯಾಕೆ ಪ್ರಯತ್ನ ಪಡಬಾರದೆಂದು ಕಾಶಿನಾಥರ ಮನೆಗೆ ಹೋಗಿ ಬಾಗಿಲು ತಟ್ಟಿದರೆ ಬರಿ ಕಿಟಕಿ ತೆರೆಯಿತು. ನಾನು ಸಿನಿಮಾ ಮಾಡುತ್ತಿಲ್ಲ ಶೇರ್ ಬಿಸಿನೆಸ್ ಶುರುಮಾಡಿದ್ದೇನೆ ಹೊರಡಿ ಎಂದು ಕಿಟಕಿ ಮುಚ್ಚಿಕೊಂಡರು. ಒಂದು ವಾರದಿಂದ ಕಾಶಿ ಸರ್ ಗೆ ಹೇಳಲೆಂದು ರೆಡಿ ಮಾಡಿದ ಕಥೆಯನ್ನು ಮುಚ್ಚಿದ ಕಿಟಕಿ ಬಾಗಿಲ ಮುಂದೆಯೇ ಹಿಡಿದು ಸ್ವಲ್ಪ ಹೊತ್ತು ನಿಂತಿದ್ದೆ. ನಂತರ ಸುನೀಲ್ ಕುಮಾರ್ ದೇಸಾಯಿ, ಇನ್ನೊಬ್ಬರು ಮತ್ತೊಬ್ಬರು ಹಾಗೇ ಹೋಯಿತು ಪಟ್ಟಿ. ಯಾರೂ ಕೈಗೂ ಸಿಗಲಿಲ್ಲ ಕಣ್ಣಿಗೂ ಬೀಳಲಿಲ್ಲ. ಸ್ವಲ್ಪ ದಿನ ಮತ್ತೆ ಬೇರೆ ಕೆಲಸ ಮಾಡಿದೆ. ದಿನ ರಾತ್ರಿ ಒಂದು ಸಿನಿಮಾ ಅಧ್ಯಯನ ಮಾಡುವುದು, ಒಂದು ಕಥೆಯ ಬಗ್ಗೆ ಯೋಚಿಸುವುದು ಬರೆಯುವುದು ನಡೆದೇ ಇತ್ತು. ಸುತ್ತ ಮುತ್ತ ತಿಳಿದಿದ್ದವರು ಎಲ್ಲರೂ ತೆವಳುತ್ತಲೇ ಇದ್ದರು. ಯಾರೂ ಯಾರಿಗೂ ಸಹಾಯ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಎಲ್ಲ ಸೋಲುತ್ತಿರುವ ಮನುಷ್ಯರ ನಡುವೆ ನಾನೊಬ್ಬ ಸೋತ ಮನುಷ್ಯ. ಹಾಗಾಗಿ ಜೊತೆಗಿದ್ದೆವು. ಒಬ್ಬರ ಸೋಲನ್ನು ನೋಡಿ ಮತ್ತೊಬ್ಬರಿಗೆ ಸ್ಥೈರ್ಯ. ಹಲವಾರು ಕಡೆ ಬಿಟ್ಟ ಬಾಣದಲ್ಲಿ ಯಾವುದೋ ಒಂದು ನಾಟಿಕೊಂಡು ಬರಹೇಳಿದರು. ಸ್ಕ್ರಿಪ್ಟ್ ಕೆಲಸಕ್ಕೆ ಜೊತೆಗೆ ಹಾಕಿಕೊಂಡರು, ಮನಸಿಟ್ಟು, ದಿನಪೂರ್ತಿ ಕೂತು ದುಡಿದೆ. ತಲೆಯಲ್ಲಿದ್ದ ಅಷ್ಟೂ ಕ್ರಿಯೇಟಿವಿಟಿ ಖರ್ಚು ಮಾಡಿ ಒಳ್ಳೊಳ್ಳೇ ಐಡಿಯಾಗಳನ್ನು ಕೊಟ್ಟೆ. ತೆಗೆದುಕೊಂಡರು. ಸ್ಕ್ರಿಪ್ಟ್ ಕೆಲಸ ಮೂರು ತಿಂಗಳ ಅವಿರತ ಪರಿಶ್ರಮದ ನಂತರ ಮುಗಿಯಿತು. ಶೂಟಿಂಗ್ ಇನ್ನೂ ನಿಧಾನವಾಗುತ್ತದೆಂದು ಹೇಳಿ ಕಳುಹಿಸುವುದಾಗಿ ಹೇಳಿದರು. ವಾರಕ್ಕೊಮ್ಮೆ ಫೋನ್ ಮಾಡಿ ಯಾವಾಗ, ಏನೆಂದು ವಿಚಾರಿಸುತ್ತಿದ್ದೆ. ಇನ್ನೊಂದು ತಿಂಗಳಾದ ಮೇಲೆಂದು ಸುದ್ದಿ ಬಂದಿತ್ತು. ಒಂದು ತಿಂಗಳ ನಂತರ ಫೋನ್ ಮಾಡಿದಾಗ ತಿಳಿಯಿತು ಯಾರೋ ಪ್ರೊಡ್ಯೂಸರ್ ಕಡೆಯ ಅಸಿಸ್ಟೆಂಟ್ ಗಳನ್ನೇ ಹಾಕಿಕೊಂಡು ಸಿನಿಮಾ ಆಗಲೇ ಶುರುವಾಗಿ ಆಗಿದೆ ಎಂದು. ಡೈರೆಕ್ಟರ್ ಗೆ ಫೋನ್ ಮಾಡಿ ಬಾಯಿಗೆ ಬಂದಿದ್ದು ಮಾತನಾಡಿದೆ. ಕುಡಿದಿದ್ದೆ. ಬಾಯಿ ನಿಲ್ಲಲಿಲ್ಲ. ತಲೆ ಕೆಟ್ಟಿತ್ತು ಮನೆಯಲ್ಲಿ ಕೊಟ್ಟಿದ್ದ ಐದು ವರ್ಷದ ಗಡುವು ಕೂಡ ಮುಗಿಯುತ್ತಾ ಬಂದಿತ್ತು. ಆದರೂ ನಾನು ಕಿಂಚಿತ್ ಏನೂ ಹೇಳಿಕೊಳ್ಳುವಂತಹದ್ದು ಸಾಧಿಸಿರಲಿಲ್ಲ. ಮನೆಯವರ, ಚಿತ್ರರಂಗದ ಪುಡಿ ಸಾಧಕರ, ಸ್ನೇಹಿತರ, ಗುರುತುಪರಿಚಯದವರ ಬಳಿ ಅನಿಸಿಕೊಂಡಿದ್ದು, ಅವಮಾನಗೊಂಡದ್ದು, ಎಲ್ಲಾ ತಲೆಯಲ್ಲಿ ಗಿರಗಿಟ್ಟಲೆ ಸುತ್ತಿದಹಾಗೆ ಸುತ್ತುತ್ತಿತ್ತು. ಮನಸು ವಿಕಾರಗೊಂಡಿತು. ನನ್ನ ಕನಸಿನ ಜೀವನದ ಅಂತ್ಯದ ದಾರಿಯನ್ನು ಆಯ್ಕೆಮಾಡಿಕೊಂಡೆ. ಆದರೆ ಇದು ನನ್ನ ಕಥೆಯ ಮುಕ್ತಾಯವಲ್ಲ. ಇದು ಮುನ್ನುಡಿಯಷ್ಟೇ.

Choice

ದೊಡ್ಡ ದೊಡ್ಡ ಕ್ರೇನ್ ಗಳ ಜಾಗಕ್ಕೆ ಜಿಮ್ಮಿಜಿಪ್ ಗಳು, ಹೆಲಿಕಾಪ್ಟರ್ ಗಳು ಬಂದಿವೆ, ಎರಿ ಕ್ಯಾಮೆರಾಗಳ, ದೊಡ್ಡ ದೊಡ್ಡ ರೀಲ್ ಗಳ ಜಾಗಕ್ಕೆ, ಡಿಜಿಟಲ್ ಕ್ಯಾಮೆರಾಗಳು, ಸ್ಯಾಟಿಲೈಟ್ ಟೆಲಿಕಾಸ್ಟ್ ಗಳು ಬಂದಿವೆ, ಮನೆ ಮನೆಗೆ ಸಿನಿಮಾ ತಲುಪುತ್ತಿವೆ. ಸಿನಿಮಾ ಶೈಲಿ ಬದಲಾಗಿದೆ. ಆದರೆ ನಾನು ಇನ್ನೂ ಅದೇ ಹಳೆಯ 90s ರೀತಿಯಲ್ಲಿ ಚಾನ್ಸ್ ಕೇಳಿಕೊಂಡು ಅಲೆದರೆ ಈಗಿರುವ competition ನಲ್ಲಿ ನಾನು ಹಿಂದುಳಿಯುವುದು ಖಂಡಿತ. ನನ್ನ ಆಸೆಗಳು, ಕನಸುಗಳು ಒಂದಲ್ಲಾ ಒಂದು ದಿನ ಕಮರಿಹೋಗುವುದು ಖಚಿತವೆಂದು ತಿಳಿದಿತ್ತು. ಸುತ್ತ ಮುತ್ತಲ ಎಲ್ಲರ ಮೇಲಿನ ರೀತಿಯ ಪ್ರಯತ್ನಗಳು ವಿಫಲವಾಗುವುದನ್ನು ಕಣ್ಣಾರೆ ನೋಡಿದ್ದೆ. ಓಡುವ ಕುದುರೆಗೆ ಮಾತ್ರ ಇಲ್ಲಿ ಬೆಲೆ ಎಂಬುದನ್ನು ಚಿತ್ರರಂಗಕ್ಕೆ ಕಾಲಿಡಬೇಕೆಂದು ನಿರ್ಧರಿಸುವ ಮುನ್ನವೇ ತಿಳಿದುಕೊಂಡಿದ್ದೆ. ಇಲ್ಲಿ ಉಳಿಯಬೇಕಾದಲ್ಲಿ upgrade ಆಗುತ್ತಿರಬೇಕು. Upgrade ಆಗಲು ಹೊಸ ಹೊಸದನ್ನು ಸದಾ ಕಲಿಯುತ್ತಾ ಮುಂದುವರೆಯಬೇಕು. ಗುರಿಯಿಲ್ಲದ ದಾರಿಯಲ್ಲಿ ಅಲೆಯುತ್ತಾ ಚಾನ್ಸ್ ಕೇಳುತ್ತಲೇ ಕಳೆದುಹೋಗುವುದಕ್ಕಿಂತ, ಗುರಿಯಿಟ್ಟು ಇದೇ ದಾರಿಯಲ್ಲಿ, ಇದೇ ಮಾಡಬೇಕೆಂದು ನಿರ್ಧರಿಸಿ ನನ್ನದೇ ಚಾಯ್ಸ್ ನಲ್ಲಿ ಮುಂದುವರೆಯಬೇಕೆಂದು ನಿರ್ಧರಿಸಿದ್ದೆ. ಮೊದಲು ಒಂದಷ್ಟು ಜನರನ್ನ ಕಲಿಯುವ ಮಾರ್ಗಗಳನ್ನು ತಿಳಿಯಲು ಸಂಪರ್ಕಿಸಿದೆ. ಎರಡು ಮಾರ್ಗಗಳು ಕಾಣಿಸಿಕೊಂಡವು. ಒಂದು ಶಾಸ್ತ್ರೀಯವಾಗಿ ಒಂದು ಇನ್ಸ್ಟಿಟ್ಯೂಟ್ ನಲ್ಲಿ ಕಲಿಯುವುದು ಮತ್ತೊಂದು ಚಿತ್ರರಂಗದಲ್ಲೇ ಇದ್ದು ಪ್ರಾಕ್ಟಿಕಲ್ ಆಗಿ ಕಲಿಯುವುದು. ಆದರೆ ಎರಡೂ ಸಹ ತೀರಾ ಮೂಲಭೂತವಾದ ಸಿನಿಮಾ ಭಾಷೆಯನ್ನು ಕಲಿಸುತ್ತವೆ. ಮುಂದಿನದು ನನ್ನ ಪರಿಶ್ರಮ ಅಷ್ಟೇ. ಚಿತ್ರಗಳಲ್ಲಿ ಚಿಕ್ಕ ಪುಟ್ಟ ಕೆಲಸಗಳಿಂದ ಶುರುಮಾಡಿ, ಕ್ರಮೇಣ ಬೆಳೆಯುತ್ತಾ ಹೋಗುವುದಕ್ಕೆ ಮನಸು ಒಪ್ಪಲಿಲ್ಲ, ಒಂದು ಚಿಕ್ಕ ಇನ್ಸ್ಟಿಟ್ಯೂಟ್ ಸೇರಿದೆ. ಕೆಲವು ವಿಷಯಗಳನ್ನು ಸಂಗ್ರಹಿಸಿದೆ. ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕೆಂಬುದು ಗೊತ್ತಾಯಿತು. ಕೆಲವು ಸಲಕರಣೆಗಳನ್ನು ಸಂಗ್ರಹಿಸುವುದು ಒಳಿತೆಂದು ತಿಳಿಯಿತು. ಎಲ್ಲದಕ್ಕೂ ದುಡ್ಡು ಬೇಕಿತ್ತು. ಸರಿ ಜೀವನೋಪಾಯಕ್ಕೆ ದಾರಿಯಾಗಬೇಕಿತ್ತು. ನನ್ನ ಖರ್ಚಿಗೂ ಕೈ ಒಡ್ಡುತ್ತಾ ಹೋದರೆ ಮುಂದೆ ಬರಬಹುದಾದ ವಿಪತ್ತಿನ ಅರಿವಿತ್ತು. ಒಂದು ಕೆಲಸ ಹಿಡಿದೆ. ಕೆಲಸ ಕಷ್ಟಕರವಾಗಿತ್ತು. ಕಷ್ಟಪಟ್ಟೇ ದುಡಿಯುತ್ತಿದ್ದೆ. ಪುಸ್ತಕಗಳನ್ನು ಸಂಪಾದಿಸಿದೆ. ಸಮಯ ಸಿಕ್ಕಾಗಲೆಲ್ಲ ಸಾಹಿತ್ಯ ಸವಿಯುವ ಮಾರ್ಗ ಹುಡುಕಿದೆ. ಓದುತ್ತಾ ಓದುತ್ತಾ ಓದುತ್ತಾ ಆತ್ಮವಿಶ್ವಾಸ ಯಾವ ಮಟ್ಟಿಗೆ ದೊರಕುತ್ತಾ ಹೋಯಿತೆಂದರೆ ನನ್ನನ್ನು ಹಿಡಿಯಲು ಯಾರಿಂದಲೂ ಸಾಧ್ಯವಿರುತ್ತಿರಲಿಲ್ಲ. ನಿದ್ರೆ ಇನ್ನಷ್ಟು ಕಡಿಮೆ ಮಾಡಿದೆ. ಪ್ರಪಂಚದ ಅತ್ಯುತ್ತಮ ಸಿನಿಮಾಗಳನ್ನು ಅಧ್ಯಯನ ಮಾಡಲು ಶುರುಮಾಡಿದೆ. ಏನಾದರೂ ಚಿಕ್ಕ ಪುಟ್ಟ ಸಿನಿಮಾ ಮಾಡಬೇಕೆಂದು ಕೆಲವು ಕಥೆಗಳು ಅವಾಗಿ ಅವೇ ಕಾಡುತ್ತಿದ್ದವು. ಒಂದಷ್ಟು like minded ಜನರನ್ನ ಒಟ್ಟು ಹಾಕಿದೆ. ಎಲ್ಲರಲ್ಲೂ ಅದೇ ತುಡಿತವಿತ್ತು. ಏನೋ ಸಾಧಿಸಬೇಕೆಂಬ ಆಕಾಂಕ್ಷೆಯಿತ್ತು. ಎಲ್ಲರೂ ಸೇರಿ ಒಂದು ಕಿರುಚಿತ್ರ ಮಾಡಿದೆವು. ದಟ್ಟ ದರಿದ್ರವಾಗಿತ್ತು. ಹೇಗೆ ಚಿತ್ರ ಮಾಡಬಾರದೆಂದು ಅರಿವಾಯ್ತು. ಮುಂದೆ ಆ ತಪ್ಪುಗಳನ್ನು ತಿದ್ದುಕೊಂಡು ಇನ್ನೊಂದು ಪ್ರಯತ್ನಕ್ಕಿಳಿದೆವು. ಅದೂ ಇನ್ನೊಂದು ನಮೂನೆಯಾಯ್ತು. ಆದರೆ ಕಲಿಯುವುದಕ್ಕೆ ಅದೊಂದು ಅವಕಾಶವಾಯ್ತು. ತಂಡದಲ್ಲಿದ್ದ ಹಲವರು ಸ್ವಲ್ಪ ಆಸಕ್ತಿ ತೋರುವುದನ್ನ ಕಡಿಮೆ ಮಾಡುತ್ತಾ ಬಂದರು. ಅವರ ಬದಲು ಇನ್ನೊಂದಷ್ಟು ಜನ ಸೇರ್ಪಡೆಯಾದರು. ಒಟ್ಟಿನಲ್ಲಿ ಕೆಲಸಗಳು ನಿಲ್ಲಲಿಲ್ಲ. ಸಿನಿಮಾ ಮಾಡುತ್ತೇವೋ ಇಲ್ಲವೋ ಗೊತ್ತಿಲ್ಲ. ಆ ಹಾದಿಯಲ್ಲಂತು ಏನು ಮಾಡಬೇಕೆಂಬುದನ್ನು ಅರಿತು ನಮ್ಮದೇ ಆದ ದಾರಿಯಲ್ಲಿ, ನಮ್ಮದೇ ಆದ styleನಲ್ಲಿ ಮುನ್ನಡೆಯುತ್ತಿದ್ದೇವೆ. ಸಿನಿಮಾರಂಗದಲ್ಲಿ ಬಿದ್ದಾಗಿದೆ ಸಿನಿಮಾ ಮಾಡಲೇಬೇಕು, ಗೆಲ್ಲಿಸಲೇಬೇಕೆಂಬ ಅನಿವಾರ್ಯತೆಯಿಂದ ಉಳಿದುಕೊಂಡಿಲ್ಲ. ಜೀವನಕ್ಕೊಂದು ದಾರಿಮಾಡಿಕೊಂಡು ಸಿನಿಮಾನೇ ಮಾಡಬೇಕೆಂಬ ಪಾಶನ್ ನಿಂದ ಸಿನಿಮಾ ಮಾಡಲು ಹೊರಟಿದ್ದೇವೆ. ಈಗ ಕ್ರಿಯಾಶೀಲ, ಮೌಲ್ಯಯುತ ಸಿನಿಮಾಗಳತ್ತ ಗಮನಕೊಡಬಹುದೆಂದೆನಿಸುತ್ತದೆ.

ಹಿನ್ನುಡಿ: ಇದು ಸ್ವಗತ ಶೈಲಿಯ ವಿವರಣೆಯಲ್ಲಿ ಇಬ್ಬರು ಸಾಧನೆಯ ಹಾದಿಯ ಭಿನ್ನತೆಯ ವಿವರಣೆಯನ್ನು ನೀಡಿದ್ದೇನೆ,  ಮೊದಲ ಭಾಗದ ವ್ಯಥೆ ಇಂದಿಗೂ ಪಡುತ್ತಿರುವ ಹಲವರ ಅನಿರ್ಧಿಶ್ಚಿತ ರೀತಿಯ ಒಂದು ಚಿಕ್ಕ ತುಣುಕಷ್ಟೇ. ಎರಡನೇ ಭಾಗದ ಸಕ್ಸಸ್ ಸೂತ್ರವೂ ಸಹ ಇಂತಹ ಹಲವು ಸೂತ್ರಗಳನ್ನು ಬಳಸಿ ಗೆದ್ದವರ, ಗೆಲುವಿನ ಮಾರ್ಗದಲ್ಲಿ ಹೊರಟವರ ಒಂದು ಚಿಕ್ಕ ಉದಾಹರಣೆಯಷ್ಟೇ. ಏನೇ ಮಾಡಿ, ಯಾವುದೇ ಮಾರ್ಗ ಹಿಡಿಯಿರಿ, ನಾಯಿಯಾಗದಿರಿ, ಹುಲಿಯಂತೆ ನುಗ್ಗಿ. ಅವಕಾಶಗಳು ಸದಾ ಇದೆ. ನೋಡುವ ಕಣ್ಣುಬೇಕಷ್ಟೇ. ಅವಕಾಶಗಳು ಮುಗಿದ ದಿನ. ಅವಕಾಶಗಳನ್ನು ಸೃಷ್ಟಿಸೋಣ. ಗೆಲುವಿನ ರುಚಿ ಶ್ರಮಕ್ಕೆ ಬೆಲೆತಂದುಕೊಡಲಿ. 

1 comment:

  1. Very nice Hemanth.. we can imagine the situations as well.. :)

    ReplyDelete