ಓದಿ ಓಡಿದವರು!

Monday, 13 February 2012

ನಮ್ಮೂರ ರಸ್ತೆಯಲಿ!!!!!!!!!!!!!!!!!!!!!!!


ಮುನ್ನುಡಿ: ಏನೂ ಹೇಳುವುದಿಲ್ಲ! ಓದಿ!

ಪ್ರಪಂಚ ಸುತ್ತುತ್ತಿದೆ. ಇದೇನಿದು ಇಷ್ಟು ವೇಗವಾಗಿ ಸುತ್ತುತ್ತಿದೆ ಇವತ್ತು. ಹೋ!!… ಹೋ!!!…….. ಹೋ!!!!…………..
ಯಾರೋ ಕಿರಾತಕರು ಭೂಮಿನಾ ತೊಗೊಂಡು ಗಿರಗಿಟ್ಟಲೆ ಮೇಲೆ ಇಟ್ಬಿಟ್ಟಿದಾರೆ ಅನ್ಸುತ್ತೆ. 
ಕಣ್ಣು ಬಿಡಕ್ಕಾಗ್ತಿಲ್ಲ, ಪಿನ್ ನಿಂದ ಕಣ್ಣಿಗೆ ಚುಚ್ಚಿದಂಗೆ ಇದೆ, ಯಾರೋ ಬಾಳೆ ಹಣ್ಣಿನ ಸಿಪ್ಪೆ ಬಿಸಾಕಿದ್ರೇನೋ ತುಳಿದೆ ಜಾರಿದೆ. 
ಗಾಡಿಗಳ ಡರ್‍ರ್‍ರ್‍ರ್‍ರ್‍ರ್‍ರ್‍ ಪೀಈಈಈಈ ಸದ್ದು ಮಾತ್ರ ಕೇಳಿ ಬರುತ್ತಿದೆ. ಹೋ….!! ಎಲ್ಲೀ ಹಾರುತ್ತಿದ್ದೀನಿ ಕಾಲುಗಳು ನಿಲ್ಲುತ್ತಿಲ್ಲ ಹಯ್ಯೋ ಯಾರಾದರೂ ಹಿಡಿಯಿರಿ ಹ..ಹ..ಹ.. ಆಕಾಶದಲ್ಲಿ ತೇಲ್ತಾ ಇದ್ದೀನಿ, ಚೆನ್ನಾಗಿದೆ. ಹೆಗಲಮೇಲೆ ಇದ್ದ ಭಾರದ ಜೊತೆಗೆ ಮೈ ಭಾರ ಕೂಡ ಕಡಿಮೆ ಆದಹಾಗೆ ಅನ್ನಿಸ್ತಿದೆ. ಇನ್ನೂ ಮೇಲೆ ಮೇಲೆ ಹೋಗ್ತಾನೇ ಇದ್ದೀನಿ ಎಲ್ಲಿಗೆ ಹೋಗ್ತಿದ್ದೀನೋ ತಿಳೀತಿಲ್ವೇ. 
ಹೊ! ಏರೋಪ್ಲೇನ್ ಬಂತು ಹಯ್ಯಯ್ಯೋ ನನ್ನ ಕಡೆಗೆ ಬರ್ತಾಇದೆ. ಗುದ್ದುತ್ತೆ. ಹಯ್ಯೋ ಬಂತು… ಬಂತು…. ಸರಕ್!!.. ನನ್ ಪ್ಯಾಂಟ್ ಹಿಂಭಾಗ ಕಿತ್ಕೊಂಡೋಯ್ತು. ಉಫ್ ಬಚಾವಾದೆ. 

ಆಹಾ ನಿದ್ರೆ ಬರ್ತಾಯಿದೆ. ಈ ತಂಪು ಗಾಳಿಗೆ.

ಅದೇನೋ ಸುಗಂಧದ ವಾಸನೆ ಬರುತ್ತಿತ್ತು, ಮೆತ್ತನೆಯ ಹಾಸಿಗೆಯಲ್ಲಿ ಮಲಗಿದ್ದೆ, ಕಣ್ಬಿಟ್ಟೆ!!!!! ಆಹಾ! ಇದಾವುದಪ್ಪಾ ಜಾಗ ಎಂದು ಕಣ್ಣುಬಿಡುವಷ್ಟರಲ್ಲಿ, ನನ್ನ ಹೆಂಡತಿ, ಮೈತುಂಬಾ ಆಭರಣಗಳನ್ನೇ ಉಟ್ಟು ನಡೆದು ಬಳಿಗೆ ಬಂದು ಕುಡಿಯಲು ಅಮೃತ ಕೊಟ್ಟಳು. ಇವಳನ್ನೇ ನಾನು ಮದುವೆ ಆಗಿದ್ದಾ! ಇದೇನ್ ಬಂತು ಇವಳಿಗೆ ಕೇಡುಗಾಲ ಇಷ್ಟು ಸೂಪರ್ ಆಗೋಗಿದ್ದಾಳಲ್ಲಾ. ಸ್ನಾನ ಮಾಡ್ದೇನೇ? ಇದೇನೇ ಹಿಂಗೆ ಹೊಳಿತಿದ್ಯಾ? ಏನ್ ಬಂತು ನಿಂಗೆ ರೋಗ ಅಂದೆ. ಕುಡೀರ್ರೀ ಸುಮ್ಮನೆ ರೇಗ್ಸಿದ್ದು ಸಾಕು ಅಂದ್ಳು. ಇದಾವುದೋ ನರಕ ಇರಬೇಕು. ಏನೋ ಮಸಲತ್ತಿದೆ ನನ್ನನ್ನ ಇಲ್ಲಿ ತಂದು ಸಿಕ್ಕಿಹಾಕಿಸಿದ್ದಾರಲ್ಲ, ಇವಳು ಯಾರೋ ಮಾಯಾವಿ ಇರಬೇಕು ನನ್ನ ಹೆಂಡತಿ ನನಗೆ ಪ್ರೀತಿಯಿಂದ ಅಮೃತ ಕೊಡೋದು!!!! ಅದು ನನ್ನನ್ನ ನೋಡಿ ಹಲ್ಲು (ಪ್ರಧಮ ಬಾರಿಗೆ ಬಿಳೀಗಿದೆ) ಕಾಣುವ ಹಾಗೆ ಮುಗುಳುನಗ್ತಿದ್ದಾಳೆ ಓಹೋ! ನಾನು ಬದುಕೇ ಇಲ್ಲ ಹಾಗಾದ್ರೆ ಭೂಮಿ ಪ್ರಳಯ ಆಗೋಗಿದೆ ಅಂತ ಎದ್ದು ಮೊದಲು ಅಲ್ಲಿಂದ ಬೇಲಿ ಕಿತ್ತೆ. ಓಡಿ ಬರುವ ಮುನ್ನ ಹೆಂಡತಿಯ ಕೈಲಿದ್ದ ಅಮೃತ ಕಸಿದುಕೊಂಡು ಬರುವುದನ್ನ ಮರೆಯಲಿಲ್ಲ. ಎಷ್ಟು ದೂರ ಓಡಿ ಬಂದರೂ ಅದೇನೋ ವಿಚಿತ್ರವಾಗಿ ಮೃಧುವಾದ ಧ್ವನಿಯಲ್ಲಿ ಡಾಲಿಂಗ್ ಡಾಲಿಂಗ್ ಅಂತಾ ಬಡ್ಕೋತಿದ್ದಿದ್ದು ಕೇಳಿಸುತ್ತಿತ್ತು.

ರಸ್ತೆಯಲ್ಲಿ ನಡೆದುಬರುತ್ತಾ ನೋಡಿದರೆ ಊರೆಲ್ಲಾ ಹಾಗೇ ಇದೆ ಇನ್ನೂ ಪ್ರಳಯ ಆಗಿಲ್ಲ! ಆದ್ರೆ ಇದಾವುದೋ ನಮ್ಮ ಊರಿನ ತರಹಾನೇ ಕಾಣ್ತಿಲ್ಲ. ಏನೋ ವಿಚಿತ್ರವಾಗಿದೆ. ಯಾಕ್ ಹೀಗಿದೆ ಅಂತ ಸುತ್ತ ನೋಡಿದೆ. ರೋಡ್ ಮೇಲೇನೋ ಟಾರ್ ಬಿದ್ದಿತ್ತು ಆದರೆ ಟಾರ್ ಮೇಲೆ ಹೊಂಡಗಳೇ ಇಲ್ಲ. ಇದೇನ್ ಊರಪ್ಪಾ! ಹೆಂಗೆ ಬದುಕ್ತಾರೆ ನಮ್ ಜನ ಇಲ್ಲಿ. ಇದು ನಮ್ಮೂರಲ್ಲ ಇದಾವುದೋ ಬೇರೆ ಊರು ಸಂಶಯ ಶುರುವಾಯ್ತು. ಅಲ್ಲೇ ಸೈಕಲ್ ಮೇಲೆ ಜಾರುತ್ತಿದ್ದ ಯಾರೋ ಒಬ್ಬ ಯುವಕನ್ನ ಕೇಳ್ದೆ. ಸಾರ್ ಇದು ನಮ್ಮೂರ ಅಂದೆ. ಗೊತ್ತಿಲ್ಲ ಸಾರ್ ಅಂದ. ಥು ಇದು ಹಿಂಡಿಯಾನಾ ಅಂದೆ. ಹೌದ್ರೀ ಯಾಕ್ ತಲೆ ಕೆಟ್ಟಿದ್ಯಾ ಅಂದ. ಇಲ್ಲ ಕಣ್ಣು ಕಾಣ್ತಿಲ್ಲ ಅಂದೆ. ಹಾಸ್ಪಿಟಲಾ ಎಲ್ಲಿದೆ ಅಂದೆ ಆತ ಏನೂ ಹೇಳಲಿಲ್ಲ. ಹೋ ಇದು ನಮ್ಮೂರೆ ಏನೋ ವಿಚಿತ್ರವಾಗಿ ಕಾಣ್ತಿದೆ ಆದ್ರೆ ಜನ ಮಾತ್ರ ಹಂಗೇ ಇದ್ದಾರಲ್ಲ! ಕೈಲಿದ್ದ ಅಮೃತದ ಶೀಶೆ ಗಟಗಟನೆ ಎತ್ತಿದೆ. ಹಂಗೇ ನಡೆದುಬರುತ್ತಾ ಆಸ್ಪತ್ರೆ ಕಾಣ್ತು ಇದೇನೋ ನಾನು ಇವತ್ತಿನ ವರೆಗೂ ಕಾಣದ ದೃಶ್ಯ ಕಂಡೆ. ಖಾಕಿ ಬಟ್ಟೆ ಹಾಕೊಂಡು ಎಲ್ಲರ ಶುಶ್ರೂಷೆ ಮಾಡ್ತಿದಾರೆ! ಇದೇನ್ ಇದು ಖಾಕಿ ಬಟ್ಟೆಯವರಗೆ ಇಲ್ಲೇನ್ ಕೆಲಸ. ಕುತೂಹಲಕರವಾಗಿದ್ಯಲ್ಲ!! ಎಲ್ಲ ರೋಗಿಗಳನ್ನೂ ಖಾಕಿಯವರೇ ರಿಪೇರಿ ಮಾಡ್ತಿದ್ರು. ತಲೆಕೆಟ್ಟಂಗಾಯ್ತು. ಇನ್ನೊಂದಷ್ಟು ಅಮೃತ ಸುರುವಿಕೊಂಡೆ. ಹಾಗೆ ಅಲ್ಲಿಂದ ಬಂದೆ ಇನ್ನು ಸ್ವಲ್ಪ ಹೊತ್ತು ಅಲ್ಲಿದ್ರೆ ತಲೆ ಕೆಡೋದ್ ಗ್ಯಾರಂಟಿ ಇತ್ತು. ನನಗೆ ನೆನಪಿರೋದು ಖಾಕಿ ಹಾಕಿರೋರು ಹಾಸ್ಪಿಟಲ್ ಗೆ ಕಳಿಸೋದು ಮಾತ್ರ ಇದೇನೋ ಮಾಯೆನೇ ಅಗೋಗಿದೆ. ಒಟ್ಟಿನಲ್ಲಿ. ನಮಗ್ಯಾಕಪ್ಪ ಬೇರೆಯವರ ಉಸಾಬರಿ, ಅವರತ್ರ ಚಿಕಿತ್ಸೆ ಮಾಡಿಸಿಕೊಳ್ತಿರೋ ರೋಗಿಗಳ ಪಾಡು ಮಾತ್ರ ಭಯಾನಕವೆನ್ನಿಸಿತು. ಹೊರಬಂದೆ.

ಆದ್ರೆ ಖಾಕಿಯವರೆಲ್ಲಾ ಆಸ್ಪತ್ರೆ ಸಾರಿದಮೇಲೆ ಠಾಣೆಯಲ್ಲಿ ಯಾರಿದ್ದಾರಪ್ಪ ನೋಡೇ ಬಿಡೋಣ ಅಂತ ಹುಡುಕಿ ಹುಡುಕಿ ಹೋದೆ. ಹುಡುಕಿ ಹುಡುಕಿ ಹೋಗಿದ್ದೇ ಬಂತು ಮಣ್ಣು ಅಲ್ಲೇನಿತ್ತು ಖಾಲಿ ಠಾಣೆ. ಇದು ಗೊತ್ತಿರಬೇಕಿತ್ತು ನನಗೆ ಮತ್ತೆ ಇಲ್ಲ ನಾನು ಇನ್ನಾ ನಮ್ಮೂರಲ್ಲೇ ಇದ್ದೀನಿ ಅಂತ ಖಾತ್ರಿಯಾಯ್ತು. ಆದರೆ ಕಟ್ಟಡದ ಹಿಂದೆ ಇರೋ ಮೈದಾನದಲ್ಲಿ ಏನೋ ಶಬ್ಧ ಬರುತ್ತಿತ್ತು. ಏನು ಅಂತ್ ಇಣುಕಿನೋಡಿದ್ರೆ ಎಲ್ಲಾ ಮಿಲಿಟರಿ ಮನುಷ್ಯರು. ಅದೇನ್ ಕಟ್ಟು ಮಸ್ತಾದ ದೇಹ ಏನ್ ಕಥೆ ಇವರೆಲ್ಲಾ ಸ್ಟೇಷನ್ ಅತ್ರ ಏನ್ ಮಾಡ್ತಿದಾರಪ್ಪ. ಒಳಗೆ ಸೆಲ್ ಗಳು ನೋಡಿದ್ರೆ ಖಾಲಿ ಖಾಲಿ, ಇವರು ವ್ಯಾಯಾಮ, ಡ್ರಿಲ್ ಮಾಡ್ಕೊಂಡಿದ್ದಾರೆ ಮತ್ತೆ ಇದು ನಮ್ಮೂರಲ್ಲ ಅಂತ ಸಂಶಯ ಬಲವಾಯ್ತು. ನನ್ನ ಕಣ್ಣು ನಂಬೋಕೆ ಸಾಧ್ಯ ಇಲ್ಲ. ಹೊಟ್ಟೆಗಳು ಒಂದಾದ್ರು ಬೇಡ್ವಾ. ತಿಂದ ಲಂಚದ ಭಿಕ್ಷೆಯೆಲ್ಲಾ ಹೊಟ್ಟೆಗೆ ಹೋಗ್ದೆ ಎಲ್ಲಿ ಹೋಯ್ತು ಗುರುವೇ ಅಂತ ತಲೆಗೆ ಎಷ್ಟೋ ಹೊತ್ತು ಕೆಲಸ ಕೊಟ್ಟೆ. ಅಮೃತ ಇನ್ನೊಂದಷ್ಟು ಏರಿಸಿದೆ.

ತಲೆ ಗಿರ್‍ರ್‍ರ್‍ರ್‍ರ್‍ರ್‍ ಅಂತ ತಿರುಗುತ್ತಿತ್ತು. ನಿಂತಲ್ಲೇ ಇದ್ದಕಿದ್ದಹಾಗೆ ನಾಯಿ ಉಚ್ಚೆ ಮುಖದ ಮೇಲೆಲ್ಲಾ ಬಿತ್ತು ಎಲ್ಲಿಂದ ಬಿತ್ತು ಗೊತ್ತಾಗಲಿಲ್ಲ. ಮೇಲೆಲ್ಲಾ ನೋಡಿದೆ. ನಾಯಿಯೇನ್ ಮೇಲೆ ಹತ್ತಿತ್ತಾ. ಇದೇನಪ್ಪಾ ಒಂದೂ ಅರ್ಥವಾಗಲಿಲ್ಲ. ಹಂಗೇ ಮುಖ ಒರೆಸಿಕೊಂಡು ಥು ಅಸಹ್ಯ ಕೈಲಿದ್ದ ಅಮೃತವನ್ನೇ ಮುಖಕ್ಕೆಲ್ಲಾ ಸುರುವಿಕೊಂಡೆ. ನಂತರ ಸರಿ ಹೋಯ್ತು. ಆದ್ರೆ ನಾಯಿ ಮೂತ್ರ ಮುಖದ ಮೇಲೆ ಎಲ್ಲಿಂದ ಬಿತ್ತು ಗೊತ್ತೇ ಆಗಲಿಲ್ಲ. ತಲೆಗೆ ಜಾಸ್ತಿ ಕೆಲಸ ಕೊಡೋದ್ ಒಳ್ಳೇದಲ್ಲ ಅಂತ ವಿಷಯವನ್ನ ಅಲ್ಲೇ ಮರೆಯೋದೇ ಸೂಕ್ತ ಅಂತ ಅಲ್ಲೇ ಬಿಟ್ಟೆ. ಅಮೃತ ಏರಿಸಿಬಿಟ್ಟೆ. ಮುಂದೆ ಒಂದಷ್ಟು ಸೈಕಲ್ ಗಳು ಹೋಗುತ್ತಿದ್ವು. ಎಲ್ಲಾ ಒಂದೇ ತರಹದ ಬಿಳಿ ಕೋಟುಗಳನ್ನ ಧರಿಸಿದ್ರು. ಅರೆರೆ ಡಾಕ್ಟರ್ ಗಳು ಬಡ್ಡಿ ಮಕ್ಳು ಇಲ್ಲೆಲ್ಲಿಗೋ ಹೋಗ್ತಿದಾರೆ. ನಾನು ಅವರುಗಳು ಹೋಗುತ್ತಿದ್ದ ಕಡೆಗೆ ತೂರಿದೆ. ಯಾವುದೋ ದೊಡ್ಡು ಗೋಡೆ ದಾಟಿ ಒಳಗೆ ಹೋದ್ರೆ. ಡಾಕ್ಟರ್ ಗಳದ್ದೇ ಸಂತೆ. ದೊಡ್ಡ ಓಪನ್ ಸಭಾಂಗಣ. ಬಿಸಿಲಲ್ಲೇ ಕೂತು ಎಲ್ಲಾ ಏನೋ ಬರೆದುಕೊಳ್ತಿದ್ರು. ಮುಂದೆ ಮಧ್ಯದಲ್ಲಿ ಯಾರೋ ಇವರನ್ನೆಲ್ಲಾ 
ನಿಯಂತ್ರಿಸುತ್ತಿದ್ದವನಿರಬೇಕು. ಆ ವ್ಯಕ್ತಿ ಏನೋ ಮಾತನಾಡುತಿದ್ದ. ಇವರುಗಳೆಲ್ಲಾ ತಮ್ಮ ತಮ್ಮ ಟೇಬಲ್ ಗಳ ಮೇಲಿರುವ ದಪ್ಪ ಪುಸ್ತಕದಲ್ಲಿ ಏನೋ ಹುಡುಕಿ ಹುಡುಕಿ ಹೆಕ್ಕಿ ಉತ್ತರ ನೀಡುತ್ತಿದ್ದರು. ಮೊದಲೇ ಡಾಕ್ಟರ್ ಗಳಲ್ವಾ ಅವರು ಮಾತನಾಡುತ್ತಿದ್ದುದು ಏನೋ ವಿಚಿತ್ರವಾದ ಸಮಸ್ಯೆಯ ಬಗ್ಗೆ ಅಂತ ಗೊತ್ತಾಗುತ್ತಿತ್ತು. ಆದರೆ ಏನೂ ಅಂತ ಅರ್ಥವಾಗಲಿಲ್ಲ. ತುಂಬಾ ಓದಿರ್ತಾರಪ್ಪ. ಅದಕ್ಕೆ ಎಂಥ ರೋಗಗಳನ್ನೂ ಗುಣಪಡಿಸ್ತಾರೆ ಅಂತ ಮನಸಲ್ಲೇ ಅಂದುಕೊಂಡು ಬಾಯಿ ಕಳೆದುಕೊಂಡು ಅವರುಗಳನ್ನೇ ನೋಡಿದೆ. ಆದರೆ ಪಾಪ ಈ ಬಿಸಿಲಿನಲ್ಲಿ ಇವರುಗಳನ್ನ ಕೂರಿಸಿ ಯಾಕೆ ಇಷ್ಟು ಕಷ್ಟ ಕೊಡ್ತಿದ್ದಾರೋ ಇವರುಗಳಿಗೆ ಅಂತ ಅಲ್ಲೇ ಒಬ್ಬನನ್ನ, ಯಾಕ್ರಣ್ಣ AC ರೂಮ್ ಬರವೇ ನಿಮಗೆ ತಣ್ಣಗೆ ಕೂರೋದ್ ಬಿಟ್ಟು ಇಲ್ಲಿ ಈ ಕಷ್ಟ ಪಡೋದ್ ಬೇಕಿತ್ತೇ ಅಂದೆ. ಶ್… ದಯವಿಟ್ಟು ನಿಮ್ಮ ಮನೆಗೆ ಇವತ್ತು ಸಂಜೆ ಅಲ್ನೋಡಿ ಆ ಮೂರನೆ ಸಾಲಿನಲ್ಲಿ ಇದ್ದಾರಲ್ಲ ಆ ವ್ಯಕ್ತಿ ವಿಶ್ವಾಸ್ ಅವರು ಬಂದಾಗ ಏನ್ ಹೇಳ್ಬೇಕಿದ್ಯೋ ಹೇಳ್ಕೊಳ್ಳಿ ಅವರು ನಿಮ್ಮ ಸಮಸ್ಯೆಯನ್ನ ಸರಿಪಡಿಸ್ತಾರೆ ಅಂದ. ನಮ್ಮನೇಗಾ ನನ್ಗೇನಾಗಿದೆ. ಸಾರ್ ದಯವಿಟ್ಟು ಕ್ಷಮಿಸಿ ನಿಮ್ ಮಾತುಗಳು ಕೇಳೋ ಸಮಯ ಇಲ್ಲ ಅಂತ ಅಲ್ಲ ಆದ್ರೆ ಇಲ್ಲಿ ಸರಿಯಾಗಿ ತಿಳಿದುಕೊಳ್ಳದಿದ್ರೆ, ಒಂದು ಮೂರು ಜನಕ್ಕೆ ತೊಂದರೆ ಆಗುತ್ತೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಅಂದ, ಯಾಕೆ ಏನ್ ಸಮಸ್ಯೆ ಅಂದೆ. ಆ ವ್ಯಕ್ತಿ ಬರೆಯುತ್ತಿದ್ದುದನ್ನು ಬಿಟ್ಟು ಸಾರ್ ನನಿಗೆ ಮತ ನೀಡಿರೋ ಮೂರು ಜನರ ಮನೆಯಲ್ಲಿ ಒಂದು ಚಿಕ್ಕ ಸಮಸ್ಯೆ ಇದೆ. ಕ್ಷಮಿಸಿ ಏನ್ ಸಮಸ್ಯ್ ಅಂತ ಹೇಳೋಕಾಗೊಲ್ಲ. ೨೪ ಘಂಟೆಯಲ್ಲಿ ನಿವಾರಿಸಲೇ ಬೇಕು ಇಲ್ಲವಾದಲ್ಲಿ ನಾನು ರಾಜಿನಾಮೆ ಕೊಡುತ್ತೇನೆ ಅಂತ ನಿರ್ಧಾರ ಮಾಡಿದ್ದೇನೆ. ದಯವಿಟ್ಟು ಕ್ಷಮಿಸಿ. ಆಮೇಲೆ ಮಾತನಾಡೋಣ ಅಂದ. ಎದೆ ಹೊಡೆದುಕೊಳ್ಳುವುದೇ ಎರಡೇನು ಐದು ನಿಮಿಷ ನಿಂತು ಹೋಯ್ತು. ಸತ್ತೆ ಅಂದುಕೊಂಡೆ. ಏನ್ ಆಗೋಯ್ತು. ಇದು ಸಾಧ್ಯನೇ ಇಲ್ಲಾ. ನಮ್ಮ ಪ್ರತಿನಿಧಿಗಳು, ನಮ್ಮ ನಾಯಕರು ಹೀಗೆ, ಹೆಬ್ಬೆಟ್ಟು ಒತ್ತೋದೆಲ್ಲ ಬಿಟ್ಟು, ಒಳ, ಒಣ, ರಣ ಜಗಳ ಆಡೋದ್ ಬಿಟ್ಟು, ಆಸ್ತಿ, ದುಡ್ಡು ದೋಚೋದ್ ಬಿಟ್ಟು ಈ ಲೆವೆಲ್ ಗೆ ಹಾಳಾಗೊಗಿದ್ದಾರಲ್ಲಾ. ಈ ಊರಾ ನಮ್ಮದಾಗೋಕೆ ಸಾಧ್ಯನೇ ಇಲ್ಲ. ಇಲ್ಲಿ ಇನ್ನೊಂದು ನಿಮಿಷ ಇದ್ರೆ ನಾನು ಹುಚ್ಚಾಸ್ಪತ್ರೆಯಲ್ಲಿ ಸೇರೋದು ಖಂಡಿತ. ಕೈಲಿದ್ದ ಅಮೃತವನ್ನ ಕುಡಿದೆ, ಕುಡಿದೆ, ಉಸಿರು ಬಂತು, ಹೊಟ್ಟೆ ತುಂಬ ಕುಡಿದೆ. ಹಯ್ಯೋ ನನ್ನ ಮಗಂದು, ಈ ಕೈಲಿರೋ ಅಮೃತದ ಶೀಶೆ ಇರೋದು ಎರಡಿಂಚು ಆಗ್ಲಿಂದ ಲೀಟರ್ ಗಟ್ಟಲೆ ಕುಡಿಯುತ್ತಲೇ ಇದ್ದೀನಿ, ಬರ್ತಾನೆ ಇದ್ಯಲ್ಲ. ಹೆಂಗೆ ಸಾಧ್ಯ ಅಂತ ಎಲ್ಲಾ ಚೆಲ್ಲಿದೆ ಬರ್ತಾನೇ ಇತ್ತು. ಭಯವಾಯ್ತು. ಬಿಸಾಡೋಣವೆಂದರೆ ಮನಸು ಬರಲೊಲ್ಲದು. ಶೀಶೆ ಹಿಡಿದುಕೊಂಡೇ ಓಡಿದೆ. 

ಹೋ ಇದು ಊರೇ ಅಲ್ಲಾ. ಇದು ನರಕ, ಇಲ್ಲಿಂದ ತಪ್ಪಿಸ್ಕೊಂಡು ಮೊದಲು ಜೀವ ಉಳಿಸಿಕೊಳ್ಬೇಕು ಅಂತ ಜೀವ ಇರುವ ತನಕ ಓಡಿದೆ. ಓಡುತ್ತಾ ದಾರಿಯಲ್ಲಿ ನೋಡಬಾರದ ಘೋರ ದೃಶ್ಯಗಳನ್ನ ಈ ಕಣ್ಣುಗಳಲ್ಲಿ ನೋಡಿದ್ದಾಯ್ತು. ಮಣ್ಣಿನಲ್ಲಿ ಕೆಲಸ ಮಾಡುತ್ತಿದ್ದ ಸಾಮಾನ್ಯ ಜನರನ್ಸುತ್ತೆ ಅವರನ್ನೆಲ್ಲಾ ಕ್ಯಾಮೆರಾ ಹಿಡಿದು ಯಾರು ಯಾರೋ ಚಿತ್ರಿಸುತ್ತುದ್ದರು. ಅದರಲ್ಲಿ ಏನಿತ್ತೋ ಮಣ್ಣು ಗೊತ್ತಿಲ್ಲ. ಹೇಗೆ ಉತ್ತುವುದು, ಹೇಗೆ ಬಿತ್ತುವುದು ಅಂತಾನೂ ಚಿತ್ಸಿಸಿಕೊಂಡು ಜನಕ್ಕೆ ತೋರಿಸಿದರೆ ಯಾರ್ ನೋಡ್ತಾರೆ. ಇದನ್ನೆಲ್ಲಾ ಯಾಕೆ ತೆಗಿತಿದಾರೆ ಇವರು! ಹಯ್ಯೋ ನನಿಗ್ಯಾಕ್ ಬೇಕು ಓಡುತ್ತಲೇ ಇದ್ದೆ. ಓಡಿ ಓಡಿ ಓಡಿ ಇದಾವುದೋ ಗಡಿಗೆ ತಲುಪಿದೆ ಅನ್ಸುತ್ತೆ. ಒಂದಷ್ಟು ಜನ ಪಹರೆಗೆ ನಿಂತಂತೆ ಕಂಡರು ದೂರದಿಂದ. ಅವರು ನನ್ನನ್ನು ಸುಟ್ಟರೂ ಚಿಂತೆಯಿಲ್ಲ. ಮೊದಲು ನಾನು ಇಲ್ಲಿಂದ ಪಾರಾಗಬೇಕು ಅಂತ ಹತ್ತಿರ ಹೋದೆ. ಎಲ್ಲಾ ಕೈಲಿ ಗುಲಾಬಿ ಹಿಡಿದು ಖಾದಿ ತೊಟ್ಟು ಮಾತನಾಡುತ್ತಾ ಕುಳಿತಿದ್ದರು. ಹೃದಯ ನಿಂತು ಹೋಯಿತು. ಮತ್ತೆ ಕಣ್ಣುಗಳು ಚಲಿಸಲಿಲ್ಲ. ಕೈಕಾಲುಗಳು ಜೀವಕಳೆದುಕೊಂಡವು. ಇದ್ದಕಿದ್ದಂತೆ ಯಾರೋ ನನ್ನನ್ನ ಎಸೆದಂತಾಯಿತು. ಕೈಲಿದ್ದ ಅಮೃತ ಕೆಳಗೆ ಬಿದ್ದುಹೋಯಿತು.
ಥಟ್ಟನೆ ಎದ್ದು ಕುಳಿತೆ. ಜೋರಾಗಿ ಉಸಿರಾಡಿದೆ. ನನ್ನ ಅಮೃತದ ಶೀಶೆಗಾಗಿ ಹುಡುಕಿದೆ. ಇದಾವುದೋ ಬಾಟಲಿ ಖಾಲಿಯಾಗಿತ್ತು. ಚೂರು ಇದ್ದದ್ದಕ್ಕೆ ಬಾಯಿ ಹಾಕಿ ನೆಕ್ಕಿದೆ. ಕತ್ತಲಾಗಿತ್ತು. ಅದೇ ಡರ್‍ರ್‍ರ್‍ರ್‍ರ್‍ರ್‍ ಪೀಈಈಈಈಈಈ ಗಾಡಿ ಸುಂದರ ಗಾಡಿ ಶಬ್ದ. ಮುಖದ ಮೇಲೆ ಶ್ವಾನ ಮೂತ್ರದ ವಾಸನೆ. ಥು ಟೈಟಾಗಿ ಎಲ್ಲಂದ್ರಲ್ಲಿ ಬಿದ್ರೆ, ನಮ್ಮ ಕಾರ್ಪರೇಷನ್ ನಾಯಿಗಳು ಕೂಡ ಸುಮ್ಮನೆ ಬಿಡಲ್ಲಪ್ಪ. ನನ್ನ ಮಗಂದು ಎಲ್ಲೂ ಜಾಗ ಸಿಗಲಿಲ್ವ ಅದಕ್ಕೆ. ಮುಂಡೇದು ನಾಳೆ ಸಿಗಲಿ ಅದ್ಯಾವ್ ನಾಯಿನೋ ಪತ್ತೆ ಹಚ್ಚಿ ಕೇಸ್ ಹಾಕಬೇಕು. ಥು ಎಂದು ತೂರಾಡುತ್ತಾ ಎದ್ದು, ಗಲೀಜಾಗಿದ್ದ ಬಟ್ಟೆ ಒದರಿಕೊಂಡೆ. ಗಡ್ಡಾ ಕರೆದುಕೊಳ್ಳುತ್ತಾ ನಡೆದು ತೇಲುತ್ತಾ ಬಂದೆ ಯಾವನೋ ತಿಪ್ಪೆ ಹತ್ರ ಎತ್ತಿ ಹಾಕಿದ್ನೇನೋ ಪಾಪಿ ನನ್ ಮಗ ಈ ತರಹ ಸೋಷಿಯಲ್ ಸರ್ವೀಸ್ ತುಂಬಾ ಚೆನ್ನಾಗ್ ಮಾಡ್ತಾರೆ ನಮ್ ಜನ. ಎಂದು ಜೇಬಿಗೆ ಕೈ ಇಳಿ ಬಿಟ್ರೆ, ಬೆಳಿಗ್ಗೆ ೧೦ ರೂಪಾಯಿ ಇತ್ತು. ಅದೂ ಯಾರೋ ಎಗರಿಸಿದ್ರು. ಎಂದು ಅವರನ್ನೊಂದಷ್ಟು ಶಪಿಸಿಕೊಳ್ಳುತ್ತಾ ರಸ್ತೆಯಲ್ಲಿ ಕಾಲಿಟ್ಟೆ. ಹಳ್ಳದಲ್ಲಿರುವ ಕೊಚ್ಚೆ. ಪಚಕ್ ಎಂದು ಮೈಮೇಲೆ ಎರಚಿತು!

ಹಿನ್ನುಡಿ: ರಸ್ತೆಯಲ್ಲಿ ಇಂದು ನಡೆದು ಬರುತ್ತಾ, ಹಲವಾರು ಬಾರಿ ಕಂಡಂತೆ ಯಾರೋ ನನ್ನ ಈ ಕಥೆಯ ಕೇಂದ್ರ ಬಿಂದು ನೆಮ್ಮದಿಯಾಗಿ ಮಲಗಿತ್ತು. ಹಿಂದೆ ಹುಟ್ಟಿಸದ ಈ ಕಥೆಯನ್ನ ಇಂದು ಮೊಳಕೆಯೊಡಿಸಿತು. 
Hope You Enjoyed..  Your comment is my payment for your enjoymentJ Thank you…


4 comments: