ಓದಿ ಓಡಿದವರು!

Tuesday 3 July 2012

ಕುರ್ಚಿಗಳು!
          ಸೂರ್ಯ ಎಂದಿನಂತೆ ಬೆಳಕನ್ನು ಕಕ್ಕುತ್ತಲಿದ್ದ ಆದರೆ ಇಂದಿನ ಬೆಳಗ್ಗೆ ಎಂದಿನಂತಿರಲಿಲ್ಲ. ಅಪ್ಪ ಅಮ್ಮ, ಅವರ ಎಂಟು ವರ್ಷದ ಮಗ ಎಂದಿನಂತೆಯೇ ಸ್ನಾನಾದಿ ತಿಂಡಿ ತೀರ್ಥಗಳನ್ನು ಗಡಬಡನೇ ಮುಗಿಸಿ ಟಿಫಿನ್ ಬಾಕ್ಸುಗಳನ್ನು ಸಿದ್ಧಗಳೊಸಿಕೊಂಡು, ಮಗ ಶಾಲೆಯ ಸಮವಸ್ತ್ರ, ಅಪ್ಪ ಅಮ್ಮ ಆಫೀಸಿನ ಐಡೆಂಟಿಟಿ ಕಾರ್ಡು, ಊಟದ ಬುತ್ತಿಯನ್ನು ಹೊತ್ತುಕೊಂಡು ಮನೆಯಿಂದ ಹೊರಡುತ್ತಾ ಮೂವರೂ ಒಂದೊಂದು ಕುರ್ಚಿಗಳನ್ನು ಹೊತ್ತುಕೊಂಡು ಮನೆ ಬೀಗ ಹಾಕಿ ಹೊರಡುವರು. ಅಕ್ಕ ಪಕ್ಕದ ಮನೆಯವರೂ ಸಹ ಅದೇ ರೀತಿ ಸಂಸಾರ ಸಮೇತ ಕುರ್ಚಿಗಳನ್ನು ಹೊತ್ತುಕೊಂಡು ಸೈಕಲ್ ಗಳಿದ್ದ ಮಕ್ಕಳು ಸೈಕಲ್ಲಿನಲ್ಲಿ, ದ್ವಿಚಕ್ರವಾಹನಗಳಿದ್ದವರು, ಕಾರಿದ್ದವರು, ಬಸ್ಸಿನಲ್ಲಿ ಹೊರಡುವವರು ಎಲ್ಲರ ಕೈಗಳಲ್ಲೂ ಹೆಗಲ ಮೇಲೂ ಒಂದೊಂದು ಕುರ್ಚಿಗಳು. ಇಡೀ ಊರಿಗೆ ಊರೇ ಒಬ್ಬರನ್ನೊಬ್ಬರು ನೋಡುತ್ತಾ ಮುಗುಳ್ನಗುತ್ತಾ ಗೊತ್ತಿದ್ದವರೊಂದಿಗೆ ಮಾತನಾಡುತ್ತಾ ಬಣ್ಣ ಬಣ್ಣದ ಕುರ್ಚಿಗಳನ್ನು ಹಿಡಿದುಕೊಂಡು ಒಂದೇ ದಾರಿಯಲ್ಲಿ ಸಾಗುತ್ತಿರುವುದು. ದೊಡ್ಡ ಲಾರಿಯೊಂದು ಅದರ ಭರ್ತಿ ಕುರ್ಚಿಗಳನ್ನು ಹೊತ್ತುಕೊಂಡು ಜನರ ನಡುವಿನಲ್ಲಿ ಜಾಗ ಮಾಡಿಕೊಂಡು ಮುಂದುವರೆಯಿತು.

ಸೈಕಲ್ಲುಗಳು, ದ್ವಿಚಕ್ರ ಗಾಡಿಗಳು, ಕಾರು, ಆಟೋ, ಬಸ್ಸುಗಳು, ಲಾರಿಗಳು, ಟೆಂಪೋಗಳು, ಎಲ್ಲವೂ ಕ್ರಮಬದ್ಧವಾಗಿ ಸಾಲಾಗಿ ಒಂದೊಂದು ಕಡೆ ನಿಂತಿರಲು ಇನ್ನೂ ವಾಹನಗಳು ಬಂದು ಸೇರಿಕೊಳ್ಳುತ್ತಿರಲು ಜನರೆಲ್ಲಾ ಕುರ್ಚಿಗಳನ್ನು ವಿಧಾನಸೌಧದ ಸುತ್ತಾ ಹಾಕಿಕೊಂಡು ಒಬ್ಬರ ನಂತರ ಒಬ್ಬರು ಕೂರುತ್ತಿರುವರು. ನೋಡ ನೋಡುತ್ತಿದ್ದಂತೆಯೇ ಒಂದು ಜನಸಾಗರವೇ ಸೇರಿಹೋಗುತ್ತಿಹುದು. ಪೊಲೀಸರೂ ಎಷ್ಟೆಂದು ತಾನೆ ತಡೆದಾರು, ಆದಷ್ಟೂ ಜನರನ್ನು ಪ್ರಶ್ನಿಸಿ, ವಿಧಾನಸೌಧದೊಳಗಡೆ ನುಗ್ಗದಿರಲೆಂದು ಅಡ್ಡಗೋಡೆಗಳನ್ನು ನಿರ್ಮಿಸಿ ಎಲ್ಲೆಲ್ಲಿಂದ ಕರೆಸಲು ಸಾಧ್ಯವೋ ಅಷ್ಟೂ ಜನ ಸಿಬ್ಬಂಧಿಗಳನ್ನು ಸೇರಿಸಿ ಮುಂದೆ ನಿಲ್ಲುವರು. ಯಾಕೆ ಜನ ಸೇರುತ್ತಿದ್ದಾರೆಂದು ಯಾರನ್ನು ಹೇಗೆ ಯಾವ ರೀತಿಯಲ್ಲಿ ವಿಚಾರಿಸಿದರೂ ಯಾರೂ ಬಾಯಿ ಬಿಡದ ಕಾರಣ ತಲೆಕೆಟ್ಟು ಉನ್ನತಾಧಿಕಾರಿಗಳಿಗೆ ಫೋನು, ವೈರ್ ಲೆಸ್ ಮೆಸೇಜುಗಳನ್ನ ಕಳುಹಿಸುತ್ತಾ ಯಾವ ಕ್ರಮ ತೆಗೆದುಕೊಳ್ಳುವುದೆಂದು ತೀರ್ಮಾನಿಸುವುದರಲ್ಲೇ ನಿರತರಾಗಿರುವರು. ಅಷ್ಟರಲ್ಲಿ ಇತ್ತ ನೆರೆದಿದ್ದ ಜನರಿಗೆ ಪ್ರತೀ ಸಾಲಿಗೊಂದೊಂದು ಎರಡೆರಡು ಮೈಕುಗಳನ್ನು ಯಾರು ಯಾರೋ ಸ್ವಯಂಸೇವಕರುಗಳು ಹಂಚಲು ಶುರುಮಾಡುವರು. ದೊಡ್ಡ ದೊಡ್ಡ ಕಪ್ಪು ಸ್ಪೀಕರುಗಳನ್ನು ವಿಧಾನಸೌಧದ ಕಡೆಗೆ ತಿರುಗಿಸಿ ಸುತ್ತಲೂ ನಿಲ್ಲಿಸಲಾಗುವುದು. ಎಲ್ಲಿ ಸಮಸ್ಯೆ ಇದ್ದರೆ ಅಲ್ಲಿ ನಾವಿದ್ದೇವೆ ಎಂದು ಪಣ ತೊಟ್ಟಿರುವಂತಹ ಹಲವು ಬಗೆಯ ಮೀಡೀಯಾ ಪಾರ್ಟ್ನರ್ ಗಳು ಪೆನ್ನು ಪೇಪರು, ಕ್ಯಾಮೆರಾ ಮೈಕುಗಳನ್ನು ಹಿಡಿದು ವಾಸ್ತು ಲೆಕ್ಕ ಹಾಕಿ ವಾಸ್ತವ್ಯ ಹೂಡುವರು. ವಿಧಾನಸೌಧದ ಆವರಣ ಕಾಣಲೂ ಸಹ ಸಾಧ್ಯವಾಗದಷ್ಟು ಹಿಂದೆ ಕುಳಿತಿರುವ ಜನರಿಗೆ ದೊಡ್ಡ ದೊಡ್ಡ ಪರದೆಗಳ ಟಿವಿ ಸಿದ್ಧಗೊಳಿಸಿ ಅದರ ಮೇಲೆ ತಮ್ಮ ತಮ್ಮ ಚಾನಲ್ ಗಳ ಲೋಗೋ ಹಾಕಿ ಜಾಹಿರಾತು ಮಾಡುತ್ತಾ ಮುಂದೆ ವಿಧಾನ ಸೌಧದ ಬಳಿ ಏನು ನಡೆಯುತ್ತಿದೆಯೆಂಬ ಚಿತ್ರಣವನ್ನು ನೇರವಾಗಿ ಬಿತ್ತರಿಸುವರು. ಸಧ್ಯಕ್ಕೆ ಸುಮ್ಮನೆ ಕುಳಿತಿರುವ ಜನ, ಬಾಲ ಸುಟ್ಟ ಬೆಕ್ಕಿನಂತೆ ಓಡಾಡುತ್ತಿರುವ ಪೊಲೀಸರು, ಅಲ್ಲಿ ಇಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ವಿಧಾನಸೌಧದ ಕಾವಲು ಸಿಬ್ಬಂಧಿಗಳು ಇಷ್ಟನ್ನೇ ಪರದೆಯ ಮೇಲೆ ನೋಡುತ್ತಾ ಹಿಂದಿರುವ ಜನರೂ ಸಹ ಶಾಂತವಾಗಿಯೇ ಕುಳಿತಿರುವರು.

ಸಾರ್ವಜನಿಕರು ವಿಧಾನಸೌಧಕ್ಕೆ ಲಗ್ಗೆ ಇಡ್ತಿದ್ದಾರೆ! ಸಾಮಾನ್ಯ ಜನರು ತಮ್ಮ ಕುರ್ಚಿಗಳನ್ನ ತಾವೇ ಹೊತ್ತುಕೊಂಡು ಬಂದು ವಿಧಾನಸೌಧಕ್ಕೆ ಘೇರಾವ್ ಮಾಡ್ತಿದ್ದಾರಂತೆ! ವಿಧಾನಸೌಧವನ್ನ ದೂರದಲ್ಲಿ ನಿಂತು ನೋಡಿದ್ರೆ ಬರೀ ಕುರ್ಚಿಗಳೇ ಕಾಣ್ತಿದ್ದಾವಂತೆ. ಜನ ವಿಧಾನಸೌಧವನ್ನ ಕುರ್ಚಿಗಳಿಂದ ದಾಳಿ ಮಾಡ್ತಿದ್ದಾರಂತೆ! ಹೀಗೆ ಎಲ್ಲಾ ಎಮ್ ಎಲ್ ಏ, ಎಮ್ ಪಿ, ಪುಡಿ ರಾಜಕಾರಣಿಗಳಿಗೂ ಸಹ ಕರೆಗಳು ಹೋಗುತ್ತಿರಲು, ಏನು, ಯಾಕೆ ಜನ ಸೇರುತ್ತಿದ್ದಾರೆ ಎಂದು ತಿಳಿಯುವ ಮೊದಲೇ ಈ ತುರ್ತು ಪರಿಸ್ಥಿತಿಯಲ್ಲಿ ಯಾವುದಾದರೂ ರೆಸಾರ್ಟು, ವಿದೇಶೀ ಟೂರು ಹೊರಟುಬಿಟ್ಟರೆ ಹೇಗೆಂದು ತಯಾರಿ ನಡೆಸಲೂ ಸಹ ಕೆಲವರು ಶುರುಮಾಡಿಬಿಡುವರು. ಅಷ್ಟರಲ್ಲಿ ವಿರೋಧ ಪಕ್ಷದವರು ವಿಧಾನಸೌಧಕ್ಕೆ ಜನರ ಮುಂದೆ ನಿಲ್ಲಲು ಹೋಗುತ್ತಿರುವರೆಂದು ಆಡಳಿತ ಪಕ್ಷಕ್ಕೆ, ಮತ್ತು ಆಡಳಿತ ಪಕ್ಷದವರು ಜನರನ್ನು ಎದುರಿಸಲು ಹೋಗುತ್ತಿರುವರೆಂದು ವಿರೋಧ ಪಕ್ಷದ ಅಧ್ಯಕ್ಷರಿಗೆ ಕರೆ ಹೋದದ್ದರಿಂದ, ಇವರಿಬ್ಬರೇ ಹೋಗುತ್ತಿದ್ದ ಮೇಲೆ ನಾವೂ ಹೋಗಿ ನಮ್ಮ ಬೇಳೆಯೂ ಏನಾದರೂ ಬೇಯುವುದೋ ನೋಡೋಣವೆಂದು ಎಡ ಬಲ ಪಕ್ಷದವರೂ ಹೊರಟು ಅಂತೂ ಮಧ್ಯಾಹ್ನದೊಳಗೇ ಎಲ್ಲ ಬಿಳಿ ಟೊಪ್ಪಿಗಳು, ಗರಿ ಗರಿ ಗಂಜಿ ಬಟ್ಟೆಗಳೂ ಪಾನ್ ಪರಾಗು, ಗುಟ್ಖಾ ನಮಲುತ್ತಿದ್ದ ಗಲೀಜು ಹಲ್ಲುಗಳನ್ನು ತೆರೆದುಕೊಂಡು ದಪ್ಪ ದಪ್ಪ ಉಂಗುರಗಳ ಬೆರಳುಗಳನ್ನು ಜೋಡಿಸಿ ನಿಂತು ಮುಂದೇನು ಎಂಬಂತೆ ನೋಡುವರು. ತಣ್ಣಗೆ ಮಲಗಿದ್ದ ಈ ನಮ್ಮ ಬೆಂಗಾಡಿನ ಜನ ಧಿಡೀರನೆ ಇಂದು ಎದ್ದು ಈ ವಿಧಾನಸೌಧವೆಂಬ ವಿಧಾನಸೌಧದ ಮುಂದೆ ಎಲ್ಲ ರಾಜಕಾರಿಣಿಗಳನ್ನ ಗುಡ್ಡೆ ಹಾಕಿಕೊಂಡು ಕರೀ ಸ್ಪೀಕರ್ ಗಳನ್ನು ಮೊಟ್ಟ ಮೊದಲ ಬಾರಿಗೆ ರಾಜಕಾರಿಣಿಗಳೆಡೆಗೆ ತಿರುಗಿಸಿ ಮೈಕುಗಳನ್ನು ತಮ್ಮ ಬಳಿ ಹಿಡಿದಿಟ್ಟುಕೊಂಡು, ತಮ್ಮ ಕುರ್ಚಿಗಳನ್ನು ತಾವೇ ತಂದು ಕುಳಿತಿರುವುದಾದರೂ ಯಾಕೆ? ನೀವೇ ನೋಡಿ ಸಣ್ಣ ಬ್ರೇಕ್ ನ ನಂತರ ಎಂದು ಅವನಾರೋ ಕ್ಯಾಮೆರಾ ಮುಂದೆ ಅರಚುತ್ತಿದ್ದಂತೆಯೇ ಮುಖ್ಯಮಂತ್ರಿಗಳು ಮುಂದೆ ಬಂದು ಹಿ ಹಿ ಹಿ ಎಂದು ಹಲ್ಲು ಕಿರಿದೇ ಬಿಡುವರು.

ಮುಖ್ಯಮಂತ್ರಿಗಳು ಮಾತಿಗೆ ಮೊದಲಾಗುವ ಮುನ್ನ ತುಂಬಾ ಹಿಂದೆ, ಮುಖ್ಯಮಂತ್ರಿಗಳ ಎತ್ತರಕ್ಕೆ ಕಾಣದಷ್ಟೂ ದೂರದಲ್ಲಿ ಕುಳಿತಿರುವವನೊಬ್ಬ ಮೈಕು ಹಿಡಿದು ಮಾನ್ಯ ಜನಪ್ರತಿನಿಧಿಗಳೇ ನಮ್ಮ ಮನೆಯಲ್ಲಿ ಬೆಳಗ್ಗಿನ ಹೊತ್ತು ಚಿತ್ರಾನ್ನ, ವಾಂಗಿಬಾತ್, ಪುಳಿಯೋಗರೆಗಳನ್ನ ಮಾಡುವುದು ಬಿಟ್ಟು ತುಂಬಾ ದಿನಗಳು ಕಳೆದಿವೆ, ಬ್ರೆಡ್ಡು ಜಾಮ್ ಈಗೀಗ ಓಟ್ಸ್ ತಿನ್ನುವ ಹಾಗೆ ಮಾಡಿದ್ದೀರಿ, ಇನ್ನು ರಾತ್ರಿಯ ಹೊತ್ತು ಮಧ್ಯಾಹ್ನದ ಊಟವನ್ನೇ ಬಿಸಿ ಕೂಡ ಮಾಡದೇ ತಿನ್ನುವ ಗತಿ ಕೂಡ ಪದೇ ಪದೇ ಸ್ಟೋವು ಹಚ್ಚಿದರೆ ಇಂಧನ ಬೇಗ ಖಾಲಿಯಾದರೆ ಬ್ಲ್ಯಾಕಿನಲ್ಲಿ ತರಲು ನಮ್ಮಲ್ಲಿ ಶಕ್ತಿಯಿಲ್ಲ, ಅಕ್ಕ ಪಕ್ಕದ ರಾಜ್ಯಗಳಲ್ಲಿ, ಇಲ್ಲಿ ಸಿಗರೇಟು ಸಿಗುವ ದರದಲ್ಲಿ ಅಕ್ಕಿ ಕೊಡಲಾಗುತ್ತಿದೆ, ನಾವೂ ಅವರಂತೆ ಎಲ್ಲೆಲ್ಲಿಂದಲೋ ಇಲ್ಲಿಗೆ ವಲಸೆ ಬಂದವರಲ್ಲ, ಇಲ್ಲೇ ಹುಟ್ಟಿ ಬೆಳೆದಿರುವುದರಿಂದ ಬೇರೆ ಕಡೆ ಹೋಗುವ ಮನಸ್ಸೂ ಬರುತ್ತಿಲ್ಲ ನಮ್ಮಂತಹವರ ಊಟದ ಗತಿ ಏನು ನೀವು ಏನಾದರೂ ಪರಿಹಾರವನ್ನ ಹೇಳ್ತೀರಾ? ಎಂದು ಕೇಳಿದ್ದು ಮುಂದಿನ ಕರಿಪೆಟ್ಟಿಗೆಗಳಲ್ಲಿ ಮುಂದೆ ನಿಂತಿದ್ದ ಮುಖ್ಯಮಂತ್ರಿಗಳ ಕಿವಿ ತೂತು ಬೇಳುವಂತೆ ಕೇಳಿಸುತ್ತಿದ್ದುದರಿಂದ ಹಿಂದೆ ಸರಿದು ತನ್ನ ಸಹಪಾಠಿಗಳನ್ನು ಸೇರುವರು. ಇದಕ್ಕೆ ಯಾರು ಏನು ಉತ್ತರಿಸಬಹುದೆಂದು ಸಮಾಲೋಚನೆ ಶುರುವಾಗುವುದು. ಮುಂದೆ ಗುಸು ಗುಸು ಪಿಸ ಪಿಸ ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದ ಬುದ್ಧಿವಂತರುಗಳನ್ನು ಮತ್ತೊಬ್ಬ ಸಾರ್ವಜನಿಕನ ಪ್ರಶ್ನೆ ಸ್ತಬ್ಧಗೊಳಿಸುವುದು. ಒಬ್ಬ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ ಬೆಗ್ಗೆ ಪ್ರಸ್ನಿಸಿದರೆ, ಮತ್ತೊಬ್ಬ ಸರ್ಕಾರಿ ಶಾಲೆಯ ಬಗ್ಗೆ ಪ್ರಶ್ನಿಸುವನು, ಸರ್ಕಾರಿ ಕಛೇರಿಗಳಲ್ಲಿನ ಲಂಚದ ಬಗ್ಗೆ, ರಸ್ತೆ, ಡಿನೋಟಿಫಿಕೇಶನ್, ಗಣಿಗಾರಿಕೆ ಹೀಗೆ ಒಬ್ಬರ ನಂತರ ಒಬ್ಬರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಸುರಿಯುತ್ತಿರಲು ರಾಜಕಾರಣಿಗಳ ಗುಂಪಿನಿಂದ ಒಬ್ಬ ಮುಂದೆ ಬಂದು ಒಂದು ಮೈಕನ್ನು ಕೇಳಿ ಪಡೆದು, ನೋಡಿ ಮತ ಬಾಂಧವರೇ, ನಿಮ್ಮ ಕಷ್ಟ ನಮಗೆ ಅರ್ಥವಾಗುತ್ತೆ. ನಾವು ನಿಮ್ಮ ಸೇವೆಗಾಗಿಯೇ ಶ್ರಮಿಸುತ್ತಿದ್ದೇವೆ ಎಂದು ಸಾಧ್ಯವಾದಷ್ಟೂ ಜೋರಾಗಿಯೇ ಹೇಳುವನು ಆ ಧ್ವನಿ ಮತ್ತೆ ತಮ್ಮ ಕಡೆಗೇ ಪ್ರತಿಧ್ವನಿಸಿತ್ತಿದ್ದರೂ ಕಷ್ಟ ಪಟ್ಟು ಸಹಿಸಿಕೊಂಡು ಮಾತುಮುಂದುವರೆಸುವಷ್ಟರಲ್ಲಿ ಒಬ್ಬ ಮಾತಿಗೆ ಅನುವಾಗುವನು. ಏನ್ರೀ ಮಾಡ್ತಿದ್ದೀರಿ? ನಾವುಗಳೂ ನೋಡ್ತಾನೇ ಇದ್ದೀವಿ. ನಿಮ್ಮ ನಿಮ್ಮ ಪಕ್ಷಗಳೊಳಗೆ ಕಿತ್ತಾಡುವುದರಲ್ಲಿ, ಆ ಪಕ್ಷದವರು ನಿಮ್ಮ ಮೇಲೆ ಗೂಬೆ ಕೂರಿಸುವುದರಲ್ಲಿ, ನೀವು ಇನ್ನೊಂದು ಪಕ್ಷದವರನ್ನ ಜೈಲಿಗೆ ಹಾಕಿಸುವುದರಲ್ಲಿ ಇಷ್ಟೇ ಆಗೋಯ್ತಲ್ಲಾ. ಯಾವಾಗ ನಿಮಗೆ ನಮ್ಮ ಕಡೆ ಗಮನ ಕೊಡೋಕೆ ಸಮಯ ಸಿಗುತ್ತೆ ಎಂದು ನೇರವಾಗಿ ಪ್ರಶ್ನಿಸುವನು. ಆ ಮುಂದೆ ನಿಂತಿದ್ದ ರಾಜಕಾರಣಿಗೆ ಬೆಂಬಲ ನೀಡಲೆಂಬಂತೆ ಇನ್ನೊಬ್ಬ ಬಂದು ಮೈಕಿನಲ್ಲಿ, ನೋಡಿ ಒಂದು ಪಕ್ಷ ನಡೆಸುವುದು ನೀವಂದುಕೊಂಡಷ್ಟು ಸುಲಭವಲ್ಲ, ರಾಜಕೀಯ ತುಂಬಾ ಕ್ಲಿಷ್ಟವಿರ್ತದೆ, ನೀವು ಒಮ್ಮೆ ಬಂದು ನಮ್ಮ ಕುರ್ಚಿಯಲ್ಲಿ ಕೂತು ನೋಡಿ, ನಮ್ಮ ಕಷ್ಟ ನಿಮಗೆ ಗೊತ್ತಾಗುತ್ತೆ ಎನ್ನುವ ಧೈರ್ಯ ಮಾಡಿ ಬೆವರೊರೆಸಿಕೊಳ್ಳುವನು. ಅದಕ್ಕೆ ಜನಸಾಗದರದಲ್ಲೆಲ್ಲೋ ಇನ್ನೊಬ್ಬ ಉತ್ತರಿಸುತ್ತಾ ಸರಿ ಹಾಗಿದ್ರೆ ನೀವುಗಳು ನಿಮ್ಮ ಕಷ್ಟ ಸುಖ ನೋಡ್ಕೊಂಡು ಹೊರಡಿ ಹಾಗಾದ್ರೆ, ನಿಮ್ಮ ನಿಮ್ಮಲ್ಲಿನ ಜಗಳ, ಕಿತ್ತಾಟಗಳು ತೀರ್ಮಾನಕ್ಕೆ ಬಂದಮೇಲೆ ವಾಪಾಸು ಬನ್ನಿ, ಅಲ್ಲಿಯವರೆಗೂ ನಾವೇ ಆಡಳಿತ ನಡೆಸಿಕೊಳ್ತೀವಿ ಎನ್ನಲು ವಿರೋಧ ಪಕ್ಷದ ನಾಯಕರು ಮುಂದೆ ಬಂದು ಮೈಕು ಕಿತ್ತುಕೊಂಡು ನೋಡಿ ನಾವು ಮುಂಚಿನಿಂದಲೇ ಹೇಳ್ತಾ ಬಂದಿದ್ದೀವಿ ಈ ಪಕ್ಷ ದಕ್ಷ ಆಡಳಿತ ನಡೆಸೋದಕ್ಕೆ ಸಮರ್ಥವಾಗಿಲ್ಲ ಅಂತ ಎಂದು ಏನೋ ಹೇಳಲು ಅನುವಾದವನನ್ನು ಒಬ್ಬ ಒಂದಷ್ಟು ಜನ ಒಟ್ಟಿಗೆ ತಡೆದು ಸುಮ್ಮನಿರಿ ಸಾರ್ ಅವರು ಆಡಳಿತ ಪಕ್ಷಕ್ಕೆ ಅರ್ಹರಲ್ಲ ಅಂದ್ರೆ, ನೀವು ಸಹ ವಿರೋಧ ಪಕ್ಷಕ್ಕೂ ಸಹ ಅರ್ಹರಲ್ಲ. ನಾವು ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿ ಮಾತನಾಡಲು ಬಂದಿಲ್ಲ. ನಮಗೆ ನೀವೆಲ್ಲಾ ಒಂದೇ ತಕ್ಕಡಿಯಲ್ಲಿನ ಕಪ್ಪೆಗಳ ತರಹ ಕಾಣೋಕೆ ಶುರುವಾಗಿದ್ದೀರಿ. ಜನ ರಾಜಕಾರಣಿಗಳೆಂದರೆ ಹಾಸ್ಯ ಮಾಡಿ ನಗುವ ಮಟ್ಟಿಗೆ ಆಗಿದೆ. ನೀವು ಒಂದು ಸಂಘಟನೆಯನ್ನ, ಒಂದು ಊರನ್ನ, ಒಂದು ರಾಜ್ಯವನ್ನ, ಒಂದು ಪಕ್ಷವನ್ನ ಪ್ರತಿನಿಧಿಸುತ್ತಿದ್ದೀರ ಅಂತ ನೀವು ಮರೆತಿದ್ದೀರೋ ಏನೋ ಗೊತ್ತಿಲ್ಲ ಒಟ್ಟಿನಲ್ಲಿ ನೀವುಗಳು ಅಕಸ್ಮಾತ್ತಾಗಿ ಟಿವಿ ಪೇಪರ್ ಗಳಲ್ಲಿ ಕಾಣಿಸಿಕೊಂಡರೂ ನಮಗೆ ಇನ್ನಾವ ಸ್ಕ್ಯಾಮ್ ಹೊರಗೆ ಬಂತೋ ಇನ್ನಾವ ಹಣ ಲೂಟಿ ಮಾಡಿದ್ದರ ವಿಷಯ ಹೊರಗೆ ಬಂತೋ, ಇನ್ನಾವುದರ ಬೆಲೆ ಹೆಚ್ಚಳವಾಯ್ತೋ ಎಂದು ಹೆದರಿಕೊಂಡೇ ನೋಡಬೇಕಾಗುತ್ತೆ ಎಂದು ಸಾರ್ಮಜನಿಕರು ತಮ್ಮ ಅಳಲನ್ನು, ಕ್ರೋಧವನ್ನು ತೋಡಿಕೊಳ್ಳುತ್ತಿರುವಂತೆಯೇ, ರಾಜಕಾರಣಿಗಳು ಬೆವರೊರೆಸಿಕೊಳ್ಳಿತ್ತಿದ್ದಂತೆಯೇ ಸೂರ್ಯ ಬೆಳಕನ್ನ ಸ್ಟ್ರಾ ಹಾಕಿ ಹೀರಿಕೊಂಡು ಬಿಡುವನು. ಕುರ್ಚಿಗಳು, ಕ್ಯಾಮರಾಗಳು, ಸ್ಪೀಕರ್ ಗಳು, ಗಾಡಿಗಳು, ಬಾಡಿಗಳು ಎಲ್ಲವೂ ನೋಡನೋಡುತ್ತಿದ್ದಂತೆ ಮಾಯವಾಗಿಬಿಡುವವು. ಸಾರ್ವಜನಿಕರು ಮನೆ ಸೇರಿಕೊಳ್ಳುವರು, ರಾಜಕಾರಣಿಗಳು ಮತ್ತೊಂದು ಸ್ಕ್ಯಾಮಿನಲ್ಲಿ ಕಾಣಿಸಿಕೊಳ್ಳುವರು. 

                                                                   +ನೀ.ಮ. ಹೇಮಂತ್1 comment: