ನನ್ನ ಹುಡುಗಿ ಸುಂದರ ದೊಡ್ಡ ಕಲಾಕೃತಿಯಂತೆ ಕಾಣುತ್ತಿದ್ದಳು
ನನಗೆ. ಅವಳ ಅಂದ, ಚೆಂದ, ವ್ಯಕ್ತಿತ್ವ, ಕಣ್ಣುಗೊಂಬೆಗಳ ತೀಕ್ಷ್ಣತೆ, ಮಾದಕತೆ, ಮೈಮಾಟ, ವೈಯ್ಯಾರ,
ಅವಳ ಉಡುಗೆಗಳಿಂದ ಹೊರಗೆ ಇಣುಕಿ ನೋಡಿ ಕಣ್ಣು ಪಿಳುಕಿಸುತ್ತಿದ್ದ ಅವಳ ದೇಹ ಸಿರಿ, ಪ್ರತಿಬಾರಿ ನಕ್ಕಾಗಲೂ
ಸಣ್ಣದಾಗಿ ಕಂಡು ಒಳಗೆ ಸೇರಿಬಿಡುತ್ತಿದ್ದ ಬಿಳಿ ಬಿಳಿ ದಂತಪಂಕ್ತಿಗಳು, ಜೇನುತುಪ್ಪವನ್ನೇ ಸವರಿಕೊಂಡು
ಸದಾ ಸೆಳೆಯುತ್ತಿದ್ದ ಅವಳ ತುಟಿಗಳು, ಬಟ್ಟೆಗೆ ತಕ್ಕ ಬಣ್ಣವನ್ನಲಂಕರಿಸಿದ ಮೃದುವಾದ ಉಗುರುಗಳ ಪುಟ್ಟ
ಪುಟ್ಟ ಬೆರಳುಗಳನ್ನು ನೀಳ ಕಪ್ಪು ಕೂದಲನ್ನು ಕಿವಿಯ ಹಿಂದೆ ಸಿಕ್ಕಿಸಲು ಬಳಸಿದಾಗ ಕೊಂಚವೇ ಅಲುಗುತ್ತಿದ್ದ
ಓಲೆಗಳು ಎಲ್ಲ ನನ್ನನ್ನು ಸೆಳೆದು, ಅವಳ ಆ ದೈತ್ಯ ಸೌಂದರ್ಯದ ಮುಂದೆ ನನ್ನನ್ನು ತುಂಬಾ ಚಿಕ್ಕ ಸೊಳ್ಳೆಯಂತೆ
ಮಾಡಿ ಬಿಟ್ಟಿತು. ನಾನು ಸದಾ ಅವಳ ಬಳಿಯೇ ಹಾರಲು ಶುರುಮಾಡಿದೆ. ನನಗವಳ ಸಾನ್ನಿಧ್ಯ ಬೇಕಿತ್ತು. ಅವಳೂ
ತಿಂಡಿ ತಿನ್ನುವಾಗ ಸುಮ್ಮನೆ ದೂರದಲ್ಲಿ ಕುಳಿತು ಅವಳು ಚೂರು ಚೂರೇ ತಿನ್ನುವ ಪರಿಯನ್ನು ನೋಡಿದೆ.
ಈಗ ತಾನೆ ಶುರುಮಾಡಿದಳೇನೋ ಎಂದುಕೊಳ್ಳುವಷ್ಟರಲ್ಲೇ ತಿಂದು ಮುಗಿಸಿದ್ದಳು ಅವಳು. ಅರೆ ನಿನ್ನ! ಯಾಕೇ?
ತಿನ್ನೇ ಸರಿಯಾಗಿ! ಎಂದು ಕೂಗಿ ಹೇಳಬೇಕೆನಿಸಿತು. ಓಹೋ ಡೈಯೆಟಿಂಗ್ ಇರಬಹುದೇನೋ ಪಾಪ ಇಷ್ಟು ಆಕರ್ಷಕವಾಗಿ
ಕಾಣುವುದಕ್ಕೆ ಇವಳು ತಿನ್ನುವುದನ್ನೂ ತ್ಯಾಗ ಮಾಡಿರಬಹುದು ಎಂದುಕೊಂಡು ಸುಮ್ಮನಾದೆ. ಬ್ಯಾಗು ತೆಗೆದುಕೊಂಡು
ಹೊರನಡೆದಳು. ಓಹೋ ಇನ್ನು ಕೆಲಸದಲ್ಲಿ ಬಿಜಿಯಾಗಿಬಿಡುವಳೆಂದು ಗೊತ್ತಾಯ್ತು. ಅವಳ ಮಡಿಲನ್ನಲಂಕರಿಸಿದ್ದ
ಬ್ಯಾಗಿನ ಮೇಲೆ ಕುಳಿತು ಕಿವಿಗೆ ಹಾಡು ಸಿಕ್ಕಿಸಿಕೊಂಡು ಮೆಲ್ಲಗೆ ಗುನುಗುನಿಸುತ್ತಿದ್ದವಳನ್ನು ನೋಡುತ್ತಾ
ಅದ್ಯಾವಾಗ ಆಫೀಸು ಬಂದುಬಿಡ್ತೋ ಗೊತ್ತೇ ಆಗಲಿಲ್ಲ. ಬಸ್ಸಿನಿಂದ ಇಳಿಯುವಾಗ ಕಣ್ಮುಚ್ಚಿ ನಿದ್ರೆಯ ಮಂಪರಲ್ಲಿ
ಕಳೆದುಹೋಗಿದ್ದವಳು ಚಕಚಕನೆ ಎಚ್ಚೆತ್ತು ಮೊಬೈಲು ಬ್ಯಾಗಿನಲ್ಲಿ ತುರುಕುವಾಗ ನಾನು ಕೆಳಗೆ ಕಾಲು ಜಾರಿ
ಬಿದ್ದೋದೆ. ಅವಳನ್ನು ಕಣ್ಣುಗಳಲ್ಲೇ ಅನುಭವಿಸುತ್ತಿದ್ದ ನನ್ನ ಮಂದ ಬುದ್ಧಿಗೆ ರೆಕ್ಕೆಯೂ ಇವೆ ಅದನ್ನು
ಬಳಸಲೂಬಹುದೆಂದು ಗೊತ್ತಾಗುವಷ್ಟರಲ್ಲಿ ಬಸ್ಸಿನ ಸೀಟಿನ ಮೇಲೆ ಬಿದ್ದಿದ್ದೆ. ಮತ್ಯಾವುದೋ ದೊಡ್ಡ ಸೂಟ್ಕೇಸೊಂದು
ನನ್ನ ಮೇಲೆ ಬೀಳುತ್ತಿರುವುದನ್ನು ಕಂಡು ಭಯಕ್ಕೋ ಏನೋ ಮೆದುಳು ಚುರುಕಾಗಿ ಕೆಲಸ ಮಾಡಿ ಹಾರಿ ಬಸ್ಸಿನಿಂದ
ಹೊರಗೆ ಬಂದೆ. ಎತ್ತ ಹೊರೆಟುಹೋಗಿದ್ದಳೋ ಗೊತ್ತಾಗಲಿಲ್ಲ. ಆಫೀಸಿನ ಒಳಕ್ಕೆ ಹಾರಿ ಹೊರಟೆ. ಎತ್ತ ನೋಡಿದರೂ
ತಲೆಗಳು, ಛತ್ರಿಗಳೇ ಕಾಣುತ್ತಿದ್ದವು. ನನ್ನವಳೆಲ್ಲಿ ಅಂತ ಹುಡುಕಲಿ ಈಗ. ಪಟಪಟನೆ ರೆಕ್ಕೆ ಬಡಿಯುತ್ತಾ
ಹಾರಿ ಹಾರಿ ಮುಂದೆ ಹೋಗುವುದು ಅನುಮಾನ ಬಂದವರ ಕಡೆಗೆ ತಿರುಗಿ ನೋಡಿ ಅಲ್ಲವೆಂದು ಗೊತ್ತಾಗಿ ಮತ್ತೆ
ಮುಂದುವರೆಯುವುದು. ಛೆ ಎತ್ತ ಹೊರಟು ಹೋದಳೋ!
ಮಧ್ಯಾಹ್ನದವರೆಗೂ ಹುಡುಕಿದರೂ ಗೊತ್ತೇ ಆಗಲಿಲ್ಲ, ಹುಡುಕಿ
ಹುಡುಕಿ ಸಾಕಾದರೂ ಸಿಗಲೇ ಇಲ್ಲ, ಬೇಸರ, ಹಸಿವು, ಸಂಕಟ, ಸುಸ್ತು ಎಲ್ಲ ಒಟ್ಟೊಟ್ಟಿಗೇ ಬಾಧಿಸುತ್ತಿತ್ತು.
ಸುಮ್ಮನೆ ಕ್ಯಾಂಟೀನಿನ ನೀರು ಚೆಲ್ಲಿದ್ದ ಜಾಗದಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದೆ. ಸುತ್ತ ಓಡಾಡುತ್ತಿದ್ದವರ
ಕಡೆಗೆ ಯಾಂತ್ರಿಕವಾಗಿ ಕಣ್ಣಾಡಿಸುತ್ತಲಿದ್ದೆ. ಧಿಡೀರನೆ ನನ್ನ ಹುಡುಗಿ ಕಂಡಳು! ಜೀವದಲ್ಲಿ ಉಡುಗಿ
ಹೋಗಿದ್ದ ಶಕ್ತಿ ಎಲ್ಲಿತ್ತೋ ಬಂತು ಹೋಗಿದ್ದೇ ಅವಳ ಕೆನ್ನೆಗೆ ಒಂದು ಮುತ್ತು ಕೊಟ್ಟುಬಿಡೋಣವೆಂದು
ಸುಯ್ಯನೆ ಹೊರಟೆ. ಸುತ್ತ ಮುತ್ತ ಅವಳ ಜೊತೆ ನಗುತ್ತಿದ್ದರು ಹಲವರು. ಕೊಂಚ ದೂರದಲ್ಲೇ ಗಾಳಿಯಲ್ಲಿ
ನಿಂತೆ. ಅವನ್ಯಾರೋ ಬೇಕಂತಲೇ ಅವಳ ಮೈ ತಾಕುವ ಹಾಗೆ ಕುಳಿತಿದ್ದ. ಮೈ ಉರಿಹೊತ್ತಿಕೊಂಡು ಅವಳ ಕಡೆ ಹೊರಟಿದ್ದವನು
ದಿಕ್ಕು ಬದಲಿಸಿ ಅವನ ಕಡೆಗೆ ಸಾಧ್ಯವಾದಷ್ಟೂ ವೇಗದಲ್ಲಿ ಹೋಗಿ ಭುಜಕ್ಕೆ ಇರುವ ಅಷ್ಟೂ ಶಕ್ತಿಯನ್ನು
ಉಪಯೋಗಿಸಿ ಕಚ್ಚಿ ರಕ್ತ ಹೀರಿ ಅವನ ದಾಳಿಯನ್ನು ತಪ್ಪಿಸಿಕೊಂಡು ಬಚ್ಚಿಟ್ಟುಕೊಂಡೆ. ಸರಿದು ಕುಳಿತುಕೊಂಡ,
ಉಳಿದುಕೊಂಡ!
ಸಂಜೆ ಯಾವಾಗ ಆಗುವುದೋ ಇವಳ ಒಂದೇ ರೀತಿಯ ಕೆಲಸ ಯಾವಾಗ ಮುಗಿಯುವುದೋ
ಎಂದು ಕಾಯುತ್ತಾ, ಅವಳನ್ನು ನೋಡುತ್ತಾ ಕುಳಿತೆ. ನಿದ್ರೆ ಬರಹತ್ತಿತು. ಇವಳಿಗೆ ನನ್ನ ಇರವೇ ತಿಳಿಯುತ್ತಿಲ್ಲವಲ್ಲ
ಎಂದು ಕೊಂಚ ತರಲೆ ಮಾಡಲು ಮನಸ್ಸಾಯ್ತು. ಕಿವಿಯ ಬಳಿ ಜುಯ್ಯನೆ ಶಬ್ಧ ಮಾಡಿದ್ದೇ ಆಹ್! ಆಹ್! ಎಂದು
ಪುಟಿದು ಕುಳಿತುಕೊಳ್ಳುತ್ತಿದ್ದಳು. ನನಗೆ ಒಂದು ಕಡೆ ನಗು ಇನ್ನೊಂದು ಕಡೆ ಇನ್ನೂ ಆಟವಾಡಿಸಲು ಉತ್ಸಾಹ.
ಬಚ್ಚಿಟ್ಟುಕೊಳ್ಳುವುದು, ಮತ್ತೆ ಅವಳು ಕೆಲಸದ ಕಡೆ ಗಮನವಹಿಸಿದಂತೆಯೇ ಮೂಗಿನ ಮೇಲೆ ಹೋಗಿ ಕೂತು ವೆ
ವೆ ವೆ ವೆ ವೆ ಎಂದು ನಾಲಿಗೆ ಹೊರಗೆ ಹಾಕಿ ರೇಗಿಸುತ್ತಿದ್ದೆ. ಕಿರಿಕಿರಿಯಾಗಿ ಮತ್ತೆ ಹೊಡೆಯಲು ಯತ್ನಿಸುತ್ತಿದ್ದಳು.
ಕಣ್ಣಾಮುಚ್ಚಾಲೆ ಶುರು. ಆಟವಾಡುತ್ತಲೇ, ಕಿವಿಗೆ, ಕೆನ್ನೆಗಳಿಗೆ, ಗಲ್ಲಕ್ಕೆ, ಕುತ್ತಿಗೆಗೆ ಮೆತ್ತೆಗೆ
ಮುತ್ತು ಕೊಟ್ಟುಬಿಟ್ಟೆ. ಅಂತೂ ಹೇಗೋ ಅವಳೊಂದಿಗೆ ಆಟವಾಡುತ್ತಲೇ ಸಂಜೆಯಾಗಿ ಹೋಯ್ತು.
ಮನೆಗೆ ಬಂದದ್ದೇ ಬ್ಯಾಗನ್ನು ಬಿಸಾಡಿ ರೂಮಿನಲ್ಲಿ ಹಾಸಿಗೆಯ
ಮೇಲೆ ಉರುಳಿದಳು. ಪಾಪ ಎಷ್ಟು ಸುಸ್ತಾಗಿತ್ತೋ ಕೆಲಸ ಮಾಡಿ, ನಾನು ಬೇರೆ ತೊಂದರೆ ಕೊಡುತ್ತಲೇ ಇದ್ದೆನಲ್ಲ
ಎಂದು ಬೇಸರವಾಯ್ತು. ಅವಳ ಮುಖದ ಬಳಿಯೇ ಕೂತು ಅವಳ ಉಸಿರಿಗೆ ಪುಳಕಿತನಾಗುತ್ತಾ ಕುಳಿತೆ. ಕೊಂಚ ಸಮಯದ
ನಂತರ, ಎದ್ದು ಬಟ್ಟೆ ಹಿಡಿದುಕೊಂಡು ಬಚ್ಚಲಿಗೆ ಹೊರಟೇ ಹೋದಳು. ಹೇಯ್ ನಾನೂ ಬಂದೆ ಇರೇ ಎಂದು ಇನ್ನೇನು
ಬಾಗಿಲು ಮುಚ್ಚುವುದಕ್ಕೂ ಒಳಗೆ ನಾನು ಸೇರಿಕೊಳ್ಳುವುದಕ್ಕೂ ಸರಿ ಹೋಯ್ತು. ಅಯ್ಯಯ್ಯೋ ನನ್ನ ಹುಡುಗಿಯನ್ನು
ನಾನೇ ಕದ್ದು ಮುಚ್ಚಿ ನೋಡುವುದು ತಪ್ಪೆಂದು ಕಣ್ಣು ಮುಚ್ಚಿಕೊಳ್ಳಲು ಪ್ರಯತ್ನಿಸಿದಷ್ಟೂ ಕಣ್ಣು ತೆರೆದುಕೊಳ್ಳುತ್ತಿತ್ತು.
ನಾಚಿಕೊಳ್ಳುತ್ತಲೇ ನೋಡಿಯೇ ನೋಡಿದೆ, ನೀರಿನಲ್ಲಿ ನಿಂತು ಅವಳು ಶುಭ್ರವಾಗುತ್ತಿದ್ದಳೋ, ನೀರೇ ಅವಳ
ಮೇಲೆ ಹರಿದು ಶುಭ್ರವಾಗುತ್ತಿತ್ತೋ ಗೊತ್ತಾಗದೇ ಇಂಚು ಇಂಚೂ ನೋಡಿ ರೋಮಾಂಚಿತನಾದೆ. ಟವೆಲು ಸುತ್ತಿಕೊಂಡು
ಹೊರಬಂದವಳೇ ಕನ್ನಡಿಯ ಮುಂದೆ ನಿಂತು ಅದ್ಯಾಕೋ ಚಕ್ಕನೆ ಹೆದರಿದಳು. ಅಯ್ಯಯ್ಯೋ, ಎಲ್ಲೋ ಸ್ವರ್ಗದಲ್ಲಿ
ತೇಲುತ್ತಿದ್ದವನಿಗೆ ಒಮ್ಮೆಲೇ ಅವಳ ಮುಖವನ್ನು ಕಂಡು ಭಯವಾಗಿ ಕನ್ನಡಿಯ ಬಳಿ ಹಾರಿ ಹೋದೆ. ನೋಡಿದರೆ
ಅವಳ ಜಾರೋಬಂಡೆಯಂತ ಕೆನ್ನೆಯಲ್ಲಿ ಒಂದು ಕೆಂಪಾನೆ ಕೆಂಪು ಮೊಡವೆ! ಅದನ್ನು ಮರೆಮಾಚಲು ಏನೆಲ್ಲಾ ಮಾಡಬಹುದೋ
ಎಲ್ಲಾ ಮಾಡಿದಳು. ಆದರೂ ಯಾಕೋ ಸಮಾಧಾನವಾದ ಹಾಗೆ ಕಾಣಲಿಲ್ಲ. ಒಂದು ಕೈ ಮುಖದ ಮೇಲೆಯೇ ಓಡಾಡುತ್ತಾ
ಊಟದ ಶಾಸ್ತ್ರ ಮುಗಿಸಿ ಬಂದು ಪುಸ್ತಕ ಹಿಡಿದಿದ್ದವಳು ಹಂಗೇ ಕನಸಿನ ಪ್ರಪಂಚಕ್ಕೆ ಜಾರಿದಳು. ರಾತ್ರಿಯಿಡೀ
ಕಷ್ಟ ಪಟ್ಟು ಮೊಡವೆಯೊಳಗೆ ಕಟ್ಟಿದ್ದ ರಕ್ತವನ್ನು ಹೀರಿ ಹೀರಿ ಹೊರಗೆ ಹಾಕಿದೆ. ಶಕ್ತಿಯೆಲ್ಲಾ ಉಡುಗಿಹೋಗಿ
ಬೆಳಗಾಗುತ್ತಲೇ ಜ್ಞಾನತಪ್ಪಿ ಬಿದ್ದು ಹೋದೆ. ಎರಡು ದಿನದಿಂದ ನಿದ್ರೆಯಿರಲಿಲ್ಲ.
ಎಚ್ಚರವಾದಾಗ ಅವಳು ಆಗಲೇ ಹೊರಟು ಹೋಗಿದ್ದಳು. ಆಫೀಸಿನೆಡೆಗೆ
ಹಾರಿ ಹೊರಟೆ, ಏನಾಗಿರಬಹುದೋ ಗೊತ್ತಿರಲಿಲ್ಲ. ಕೆನ್ನೆ ನನ್ನಿಂದ ಊದಿಕೊಂಡಿದ್ದರೆ? ಇನ್ನೂ ಕೆಂಪಾಗಿದ್ದರೆ
? ಗಾಯವಾಗಿದ್ದರೆ? ಅಷ್ಟು ಚಿಕ್ಕ ಮೊಡವೆಗೇ ಅಷ್ಟು ಬೇಸರಿಸಿದ್ದಳು ಇನ್ನು ನನ್ನ ಹೆಡ್ಡತನದಿಂದ ಏನಾಗಿರುವುದೋ
ಆಫೀಸಿಗೇ ಹೋಗಿದ್ದರೆ ಸಾಕೆಂದು ಎಲ್ಲೂ ನಿಲ್ಲದೇ, ನೀರು ಕೂಡಾ ಕುಡಿಯದೇ ಹಾರಿದೆ. ಹೋಗಿ ನೋಡಿದರೆ
ಎಲ್ಲರೊಂದಿಗೆ ನಗುತ್ತಲಿದ್ದಳು. ಕೆನ್ನೆಯ ಮೇಲೆ ಚಿಕ್ಕದಾಗಿ ಕಲೆಯಿತ್ತು ಮೊಡವೆ ಮಾಯವಾಗಿತ್ತು. ನನ್ನ
ಶ್ರಮ ಫಲವಿಟ್ಟಿತೆಂದು ಖುಷಿ ತಾಳಲಾರದೇ ಮೊಡವೆಯಿದ್ದ ಜಾಗಕ್ಕೆ ಮುತ್ತು ಕೊಟ್ಟುಬಿಡಬೇಕೆಂದು ಹಾರಿದೆ
ಇನ್ನೇನು ಮುತ್ತು ಕೊಟ್ಟೇ ಬಿಡಬೇಕು ಪಕ್ಕದಲ್ಲಿದ್ದ ಅದೇ ಮೂರ್ಖ ದಾಳಿಮಾಡಿ ಹೊಡೆದುರುಳಿಸಿಯೇ ಬಿಟ್ಟ.
ಧಿಗ್ಗನೆ ಎಚ್ಚರವಾಯ್ತು. ಅವಳಿನ್ನೂ ಕಿಲಕಿಲನೆ ನಗುತ್ತಲೇ
ಕೈಯಾಡಿಸುತ್ತಲೇ ಇದ್ದಳು. ನಾನೂ ಅವಳಿಂದ ಮೂರನೆಯ ಸಾಲಿನಲ್ಲಿ ಒಬ್ಬನೆ ಕುಳಿತೇ ಇದ್ದೆ. ಎದ್ದು ಹೋಗುವಾಗ
ಒಮ್ಮೆ ನನ್ನೆಡೆ ನೋಡಿ ನಕ್ಕಳೇನೋ ಅನಿಸುತ್ತೆ. ಅಥವಾ ನನಗೆ ಮಾತ್ರ ಹಾಗೆನಿಸಿತೇನೋ ಗೊತ್ತಿಲ್ಲ. ಕಾಫಿ
ಕಪ್ಪಗಿ ಕೈ ಹಾಕುವಷ್ಟರಲ್ಲೇ ಒಂದು ಸೊಳ್ಳೆ ಕಚ್ಚಿತು. ಛಟ್ಟನೆ ಹೊಡೆದೆ, ಅಯ್ಯೋ ಎಂಬ ಆರ್ಥನಾದ ಕೇಳಿಬಂತು.
ಟೇಬಲ್ ನೋಡಿದರೆ ಕಾಫಿ ಕಪ್ಪಿನ ಪಕ್ಕದಲ್ಲಿ ಅರೆಜೀವವಾಗಿ ಸೊಳ್ಳೆ ಬಿದ್ದಿತ್ತು!
+ನೀ.ಮ. ಹೇಮಂತ್
:) nice
ReplyDeleteನಿಮ್ಮ ರಕ್ತ ಹೀರೋಣ ಅಂದ್ಕೊಂಡಿದ್ದೀನಿ ಹೇಮಂತ್ ನಿಮ್ ತರ ವಿಭಿನ್ನವಾಗಿ ಯೋಚಿಸಲು ಮತ್ತು ಬರೆಯಲು.
ReplyDeleteಮೊಡವೆ ಬಂದಿತ್ತು
ReplyDeleteಅದು ಗೊಡವೆ ಮಾಡಿತ್ತು
ಪ್ರಿಯಕರನಿಗೆ ತೋರಿಸಿದೆ
ತುಟಿಯಂಚಲಿ ಸವರಿಸಿದೆ
ಮೊಡವೆ ಹೋಗಿತ್ತು
ಪ್ರೀತಿ ಮುತ್ತು ಸಿಕ್ಕಿತ್ತು'
ಈ ಸಾಲ್ಗಳನ್ನ ನಿನ್ನುಡುಗಿ ಗುನುಗಿರ್ಬೇಕೂ...?
super solle
ReplyDelete