ಓದಿ ಓಡಿದವರು!

Monday 25 June 2012

ಪ್ರಾಣಿಗಳ ಆಟ!




      ವಾರಾಂತ್ಯ ಬಂತೆಂದರೆ ಬೆಂಗಾಡಿನಲ್ಲಿ ಈ ಆಟಗಳಿಗೆ ಬೇಡಿಕೆಯೋ ಬೇಡಿಕೆ. ವಾರ ಪೂರ್ತಿ ಕತ್ತೆ, ನಾಯಿ, ಹಂದಿಗಳಂತೆ ದುಡಿಯುವ ಆಟವಾಡಿದ ವಯಸ್ಕ ಮನುಷ್ಯ ಪ್ರಾಣಿಗಳಿಗೆ, ಮತ್ತು ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ಶಿಕ್ಷೆ ಪಡೆದ ಮರಿ ಪ್ರಾಣಿಗಳಿಗೆ ವಾರಂತ್ಯದಲ್ಲಿ ಮನೋರಂಜನೆಗಾಗಿ ಕೂಡ ಚಿತ್ರ ವಿಚಿತ್ರ ಆಟಗಳು ಬೇಕೇ ಬೇಕು. ಹಾಗಾಗಿ ತೆರೆದುಕೊಂಡಿತು ಈ ಪ್ರಾಣಿಗಳ ಆಟದ ಮೈದಾನ. ಮೊದಮೊದಲು ಇದಕ್ಕೆ ವಿರೋಧ ವ್ಯಕ್ತವಾಯ್ತೇ ಆದರೂ, ಅತಿಶೀಘ್ರದಲ್ಲಿ ಜನರ ಬೆಂಬಲ ದೊರೆತದ್ದರಿಂದ ಚಾಲ್ತಿಯಲ್ಲಿದೆಯಂತೆ. ಈ ಮೈದಾನದಿಂದ ಎತೇಚ್ಛವಾಗಿ ದುಡ್ಡು ಹುಟ್ಟುತ್ತಿದೆ ಎಂದು ಗೊತ್ತಾದ ಮೇಲೆ ಯಾವ ಸರ್ಕಾರ, ಸಂಘ ಬಂದರೂ, ಸ್ವತಹ ಭಗವಂತನೆಂಬ ಭೂತಕಾಲದ ಪ್ರಾಣಿ ಎದ್ದು ಬಂದರೂ ಸಹ ತಡೆಯಲು ಸಾಧ್ಯವಿಲ್ಲ! ಈಗ್ಗೆ ಕೆಲವು ದಿನಗಳ ಹಿಂದೆ ಇಲ್ಲಿ ಹುಲಿ, ಚಿರತೆ, ಕಾಡು ಕೋಣ, ಆನೆ, ಸಿಂಹ ಈ ರೀತಿಯ ವಿಚಿತ್ರ ಪ್ರಾಣಿಗಳೂ ಸಹ ಇದ್ದವಂತೆ. ಅವುಗಳ ಕಿವಿ ಹಿಂಡಿ, ಮೂತಿ ತಿವಿದು, ತಲೆ ಮೇಲೆ ಹೊಡೆದು, ಕಾಲುಗಳನ್ನು ಎಳೆದು, ಇನ್ನೊಂದು ಮತ್ತೊಂದು ಕೀಟಲೆ ಮಾಡಿ ತೊಂದರೆ ಕೊಟ್ಟು ಮನೋರಂಜನೆ ತೆಗೆದುಕೊಳ್ಳಬಹುದಿತ್ತಂತೆ. ಅವುಗಳು ಅಯ್ಯೋ ನೋವಾಗುತ್ತೆ ಕಣೋ ಬೋಳಿ ಮಗನೆ ಎಂಬಂತೆ ಗುರ್‍ರ್‍ರ್‍ರ್‍, ಟುರ್‍ರ್‍ರ್‍ರ್‍, ಬುರ್‍ರ್‍ರ್‍ರ್‍ ಎಂದು ಆರ್ತನಾದಗಯ್ಯುತಿರೆ ಇನ್ನೂ ಹುರುಪುಗೊಂಡು ಕೀಟಲೆ ಮಾಡುತ್ತಿದ್ದರಂತೆ. ಒಳಗಿದ್ದ ಪ್ರಾಣಿಗಳ ವಿರುದ್ಧ ಹೊರಗಿದ್ದ ಪ್ರಾಣಿಗಳ ಸೆಣಸಾಟದಲ್ಲಿ ಹೊರಗಿನವರು ಗೆದ್ದರೆ ಆನೆಯ ಬಾಲವನ್ನೋ, ಹುಲಿಯ ಮೀಸೆಯನ್ನೋ ಬಹುಮಾನವಾಗಿ ಕೊಡಲಾಗುತ್ತಿತ್ತಂತೆ. ಹೀಗೆ ಹೇಗೋ ನಡೆದುಕೊಂಡು ಹೋಗುತ್ತಿದ್ದ ಮೈದಾನದಲ್ಲಿ ಕ್ರಮೇಣ ಮನುಷ್ಯ ಪ್ರಾಣಿಗಳು ಬರುವುದು ಕುಂಟಿತವಾಗುತ್ತಾ ಬಂತಂತೆ. ಆ ಅಪರೂಪದ ಪ್ರಾಣಿಗಳು ದಿನೇ ದಿನೇ ಕಡಿಮೆಯಾಗಿದ್ದಕ್ಕೆ ಜನ ಬರಲಿಲ್ಲವೋ ಅಥವಾ ತನಗೆ ಕಾಟ ಕೊಡುವವರಿಲ್ಲದೇ ಆ ವಿಚಿತ್ರ ಪ್ರಾಣಿಗಳು ಅಸುನೀಗಿದವೋ ಗೊತ್ತಿಲ್ಲ ಒಟ್ಟಿನಲ್ಲಿ ಆಟದ ಮೈದಾನ ಮುಚ್ಚುವ ಪರಿಸ್ಥಿತಿಯಲ್ಲಿ ಬಂದಿತ್ತಂತೆ. ಹಯ್ಯೋ ಒಂದು ದಿನ ಸಂಪೂರ್ಣ ಮಜಾ ಉಡಾಯಿಸಬೇಕೆಂದು ಬಂದವರಿಗೆ ಈ ಸೆಕ್ಯುರಿಟಿ ತಾತ ಇತಿಹಾಸ ಕುಯ್ಯಲು ಶುರುಮಾಡಿ ಸುಮ್ಮನೆ ಕಾಲಹರಣ ಮಾಡ್ತಿದ್ದ. ತೊಗೋ ತಲೆ ತಿನ್ನಬೇಡ ಇದನ್ನು ತಿನ್ನು ಎಂದು ಒಂದು ಗಾಂಧಿಯ ಗರಿ ಗರಿ ನೋಟೊಂದನ್ನ ಬಾಯಿಗೆ ತುರುಕಿದ್ದೇ ಸುಮ್ಮನೆ ತಿನ್ನಲು ಶುರುಮಾಡಿದ. ನಾವು ಒಳಗೆ ಹೊರಟೆವು. ಎಲ್ಲಾ ಆಟಗಳಿಗೂ ರಶೀದಿ ಪಡೆದಿದ್ದರಿಂದ ತಾತನ ಹರಿಕತೆಯನ್ನೆಲ್ಲಾ ತಲೆಯಿಂದ ಕಿತ್ತು ಬಾಗಿಲಲ್ಲೇ ಇದ್ದ ಕಸದ ಬುಟ್ಟಿಗೆ ಎಸೆದು ಸುಯ್ಯನೆ ಒಳಗೆ ಲಗ್ಗೆಯಿಟ್ಟೆವು.

ಅಬ್ಬಾ ಎಷ್ಟೋಂದು ಮನುಷ್ಯ ಪ್ರಾಣಿಗಳೆಂದರೆ ಪಾಪ ಮಧ್ಯದಲ್ಲಿರಬಹುದಾದ ಮಾತು ಅರ್ಥವಾಗದ ಪ್ರಾಣಿಗಳು ನೋಡಿಯೇ ಹೆದರಿ ಸತ್ತಿರುತ್ತವೆ ಅನ್ನಿಸುತ್ತೆ ಎಂದುಕೊಳ್ಳುತ್ತಲೇ ಪ್ಲಾನ್ ಪ್ರಕಾರವೇ ನಾವು ನಾಲ್ವರು ಗೆಳೆಯರೂ ಒಂದೊಂದು ಆಟಕ್ಕೆ ಹೋಗುವುದೆಂದು ಮೆನು ಕಾರ್ಡ್ ಗಳನ್ನು ಕೈಯಲ್ಲಿ ಹಿಡಿದು ವಿಭಜನೆಯಾದೆವು. ನಾನೂ ಹೊರಟೆ. ಅರೆರೆ ಇಷ್ಟೊಂದು ಆಟಗಳಿವೆ ಯಾವುದಪ್ಪಾ ಆಯ್ಕೆ ಮಾಡಿಕೊಳ್ಳಲಿ ಎಂದು ತೀರ್ಮಾನಿಸುವಷ್ಟರಲ್ಲಿ ಸಾಕು ಸಾಕಾಯ್ತು. ಸರಿ ಸುಲಭದ ಆಟದೊಂದಿಗೆ ಶುರುಮಾಡೋಣವೆಂದು ಬೆಕ್ಕು ಸೊಕ್ಕು ಎಂಬ ಆಟವನ್ನ ಆಯ್ಕೆ ಮಾಡಿಕೊಂಡು ಮೂರನೇ ಕ್ರಾಸ್, ಎರಡನೆಯ ಅಡ್ಡೆ ಎಂದು ಬರೆದಿತ್ತು ಸೀದಾ ಅಲ್ಲಿಗೆ ಹೋದೆ. ಹೋಗಿ ನೋಡಿದರೆ ಎಲ್ಲಾ ಚಿಕ್ಕ ಚಿಕ್ಕ ಮಕ್ಕಳು. ಅಯ್ಯಯ್ಯೋ ಇದು ಏಳು ವರ್ಷದ ಒಳಗಿನ ಮಕ್ಕಳಿಗೆ ಮಾತ್ರ! ಸರಿ ಬಂದಾಗಿದೆ ಯಾವ ರೀತಿಯ ಆಟವೆಂದಾದರೂ ನೋಡಿ ಹೋಗೋಣವೆಂದು ನಿಂತೆ. ಒಂದು ವೃತ್ತ ಅದರ ಒಳಗೆ ಒಂದು ಸಣಕಲು ಬೆಕ್ಕನ್ನ ಬಿಟ್ಟಿರುತ್ತಾರೆ ಆದನ್ನ ಮಗು ಹಿಡಿದು ಮೂಲೆಯಲ್ಲಿರುವ ನೀರಿನ ಕೊಳಕ್ಕೆ ಅದನ್ನ ಹಾಕಬೇಕು. ಬೆಕ್ಕು ತಪ್ಪಿಸಿಕೊಳ್ಳುತ್ತಿರುತ್ತದೆ, ಮಗು ಅದನ್ನ ಅಟ್ಟಿಸಿಕೊಂಡು ಹಿಡಿಯುತ್ತಿರುತ್ತದೆ, ಕೊಟ್ಟ ಸಮಯಾವಕಾಶದಲ್ಲಿ ಮಗು ಗೆದ್ದರೆ ಬಹುಮಾನ. ಒಂದು ಮಗು ಬೆಕ್ಕನ್ನ ಹೆದರೆದರುತ್ತಾ ಹಿಡಿಯಲು ಪ್ರಯತ್ನಿಸುತ್ತಿತ್ತು, ಬೆಕ್ಕು ಮೂಲೆಮೂಲೆಗೆ ತೆವಳಿಕೊಂಡು ತಪ್ಪಿಸಿಕೊಳ್ಳುತ್ತಿತ್ತು, ಅದರ ಅಪ್ಪ ಅಮ್ಮ ಹುರಿದುಂಬಿಸುತ್ತಿದ್ದರು. ಈ ಆಟದ ಪಕ್ಕದಲ್ಲೇ ಇಲಿಗೆ ಕೋಲಿನಲ್ಲಿ ಹೊಡೆಯುವ, ಜಿರಲೆಗಳನ್ನು ಬೆಂಕಿಗೆ ಎಸೆಯುವ ಆಟಗಳೂ ಮಕ್ಕಳಿಗಾಗಿ ಇತ್ತು. ನೋಡುತ್ತಿದ್ದರೆ ಕೆಲಸವಾಗೋಲ್ಲವೆಂದು ಅಲ್ಲಿಂದ ಕಾಲ್ಕಿತ್ತೆ. ಸರಿಯಾಗಿ ಮೆನು ಕಾರ್ಡನ್ನು ಓದಿ, ಮಕ್ಕಳ ಆಟಗಳನ್ನು ಹೊರತುಪಡಿಸಿ ವಯಸ್ಕರಿಗಾಗಿ ಇದ್ದ ಆಟಗಳೆಡೆಗೆ ಹೊರಟೆ.

ಕೈಯಲ್ಲಿ ಇನ್ನು ಮೂರು ಕಲ್ಲುಗಳು ಉಳಿದಿದ್ದವು. ಹೇಗಾದರೂ ಮಾಡಿ ಆ ನಾಯಿಯ ತಲೆಗೆ ಗುರಿ ಇಟ್ಟು ಹೊಡೆಯಲೇ ಬೇಕು. ಸುತ್ತ ಕೋರ್ಟಿನ ಹೊರಗಡೆ ನೆರೆದಿದ್ದ ಜನರ ಪ್ರೋತ್ಸಾಹಕ್ಕೆ, ಕೇಕೆಗಳಿಗೆ, ಹೊಡಿ ಹೊಡಿ ಎಂಬ ಕೂಗುವಿಕೆಯ ಕಡೆಗೆ ಲಕ್ಷ್ಯ ಕೊಡದೆ ಎದುರಿಗಿದ್ದ ನಾಯಿಯನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆ, ಧರಿದ್ರದ್ದು ಆ ನಾಯಿಯೂ ಕೂಡ ನನ್ನಷ್ಟೇ ಏಕಾಗ್ರತೆವಹಿಸಿತ್ತು. ಸ್ಕೋರ್ ಬೋರ್ಡಿನ ಕಡೆ ಒಮ್ಮೆ ನೋಡಿದೆ. ಇನ್ನೂ ನಾಲಕ್ಕು ಪಾಯಿಂಟುಗಳು ಬೇಕಾಗಿತ್ತು, ಮತ್ತು ನನ್ನ ಬಳಿ ಉಳಿದಿದ್ದು ಮೂರು ಕಲ್ಲುಗಳು ಮಾತ್ರ, ತಲೆಗೆ ಹೊಡೆದರೆ ಮಾತ್ರ ನಾಲಕ್ಕು ಪಾಯಿಂಟುಗಳು ಬರುವುದರಲ್ಲಿದ್ದವು. ಮೊದಲನೆಯ ಕಲ್ಲನ್ನ ಎಸೆದೆ ನಾಯಿ ಗುರ್‍ರ್‍ ರೌ ಬೌ ಎಂದು ಒಮ್ಮೆ ಚೂರು ಮುಂದೆ ಬಂದು ಅದರ ಮುಂಗಾಲಿಗೆ ಏಟು ಬಿದ್ದದ್ದಕ್ಕೆ ತಪ್ಪಿಸಿಕೊಂಡು ಹಿಂದೆ ಓಡಿತು. ಅಯ್ಯೋ ಸ್ವಲ್ಪದರಲ್ಲಿ ತಪ್ಪಿತು. ಅದು ಅಲ್ಲಾಡದ ಹಾಗಿದ್ದಿದ್ದರೆ ತಲೆಗೆ ಹೊಡೆಯಲು ಅಷ್ಟು ಕಷ್ಟವಾಗುತ್ತಿರಲಿಲ್ಲ. ಸರಿ ಇನ್ನೊಂದು ಕಲ್ಲು ಗುರಿಯಿಟ್ಟೆ. ಕಲ್ಲನ್ನು ಅದರೆಡೆಗೆ ಗುರಿಯಿಡುತ್ತಿದ್ದಂತೆಯೇ ಎದುರಿನ ನಾಯಿ ಹುಶಾರಾಗಿಬಿಡುತ್ತಿತ್ತು, ನನ್ನ ಕೈಯಲ್ಲಿದ್ದ ಕಲ್ಲಿಗೇ ತನ್ನ ಎರಡು ಕಣ್ಣುಗಳನ್ನು ನೆಟ್ಟು ತಪ್ಪಿಸಿಕೊಳ್ಳುವ ಶತಪ್ರಯತ್ನಗಳನ್ನೂ ಮಾಡುತ್ತಿತ್ತು, ಅದರ ಗಮನ ಮತ್ತೊಂದು ಕಡೆ ಸೆಳೆಯಲು ಎಡಗೈಯನ್ನು ಸುಮ್ಮನೆ ಹೊಡೆಯುವ ಹಾಗೆ ಮಾಡಿ, ನಾಯಿ ಕೊಂಚವೇ ಅತ್ತ ತಿರುಗಿದ್ದೇ ತೆಗೆದು ಬೀಸಿದೆ, ಕಲ್ಲು ನೇರ ಅದರ ತಲೆಯ ಮಧ್ಯಭಾಗಕ್ಕೇ ಗಾಳಿಯನ್ನು ಸೀಳಿಕೊಂಡು ಸಾಗುತ್ತಿತ್ತು, ನನ್ನ ಎದೆ ಬಡಿತ ನಾಯಿಗೂ ಸಹ ಕೇಳಿಸಿರಬಹುದೇನೋ, ಸುತ್ತ ನೆರೆದು ನೋಡುತ್ತಿದ್ದ ಜನ ಒಮ್ಮೆ ಸ್ತಬ್ಧವಾಗಿ ನೋಡುತ್ತಿದ್ದರು, ಈ ಬಾರಿ ನಾಯಿ ಸೋತಿತು ಈ ಬಾರಿ ಎಂದು ವಿಜಯೋತ್ಸವ ಆಚರಿಸುವವನಿದ್ದೆ. ಕೊಂಚವೇ ಅತ್ತ ತಿರುಗಿದ್ದು ಕಲ್ಲು ಇನ್ನೇನು ತೆಲೆಗೆ ಬಡಿಯಬೇಕು ನಾಯಿ ಕದಲಿಯೇಬಿಟ್ಟಿತು ಕುತ್ತಿಗೆಗೆ ಹೊಡೆದು ಕಲ್ಲು ಕೆಳಗೆ ಬಿತ್ತು, ನಾಯಿ ಕೋಪಕ್ಕೆ ಆ ಕಲ್ಲನ್ನೇ ಕಟಕಟನೆ ಕಡಿದು ಹಾಕಿತು. ಥೂ, ಈ ಬಾರಿಯೂ ಆಗಲಿಲ್ಲ ಇನ್ನು ನನ್ನ ಬಳಿ ಉಳಿದಿರುವುದು ಒಂದೇ ಕಲ್ಲು. ಇದರಲ್ಲಿ ತಲೆಗೇ ಹೊಡೆಯಬೇಕಿತ್ತು. ಈ ಬಾರಿ ಆ ನಾಯಿಯ ಮೇಲೆ ಎದ್ದಿದ್ದ ರೊಚ್ಚಿಗೆ ಕೈಯಲ್ಲಿರುವ ಶಕ್ತಿಯನ್ನೆಲ್ಲಾ ಬೀಸಿ ಆ ನಾಯಿ ಹಿಂದಿನ ದಾಳಿಯಿಂದ ಎಚ್ಚೆತ್ತುಕೊಳ್ಳುವ ಮುನ್ನವೇ ಗುರಿಯಿಟ್ಟು ಅದಕ್ಕೆ ತಯಾರಾಗುವ ಅವಕಾಶವನ್ನೂ ಕೊಡದೇ ಕಲ್ಲನ್ನು ಬೀಸಿದೆ. ನೇರ ಹೋಗಿ ತಲೆಯ ಮಧ್ಯಭಾಗದಲ್ಲಿ ಬಿತ್ತು. ನಾಯಿ ಕುಯ್ ಕುಯ್ ಎಂದು ಚೀರುತ್ತಾ ಕೆಳಗುರುಳಿತು. ಸುತ್ತ ಇದ್ದ ವೀಕ್ಷಕರು ಹೋ ಎಂದರು. ನನಗೆ ಎರಡನೆಯ ಸುತ್ತಿಗೆ ಅರ್ಹತೆ ಸಿಕ್ಕಿತ್ತು ಮೂರು ಪಾಯಿಂಟ್ ಬೋನಸ್ಸಿನೊಂದಿಗೆ. ಎದುರುಗಡೆ ಎರಡು ಹುಚ್ಚು ನಾಯಿಗಳು ಗುರ್‍ರ್‍ ಎಂದು ನನ್ನನ್ನು ತರಿದು ತಿನ್ನುವ ಹಾಗೆ ಬಾಯಿ ತೆರೆದಿದ್ದವು. ಜೊಲ್ಲು ಹೊರಸೋರುತ್ತಿತ್ತು. ನನ್ನ ಕೈಯಲ್ಲಿ ಎರಡು ಉದ್ದನೆಯ ಕೋಲುಗಳಿದ್ದವು ಈಗ ಅದರ ಬಾಲ ಕತ್ತರಿಸಬೇಕಿತ್ತು. ಒಂದೊಂದು ಕೈಯಿಗೆ ಮೂರು ಮೂರು ಹೊಡೆತಗಳ ಅವಕಾಶ ನನ್ನದು. ಅಂತೂ ಹಾಗೂ ಹೀಗೂ ನಾಲಕ್ಕು ಸುತ್ತುಗಳನ್ನು ಗೆದ್ದು ಹೊರಬಂದೆ. ಒಳಗೆ ಆಡುವಾಗ ಗೊತ್ತಾಗಲಿಲ್ಲ ಮೈಪೂರ್ತಿ ಬೆವರು ಸುರಿದುಹೋಗಿರುವುದು. ಬಟ್ಟೆಯೆಲ್ಲಾ ತೊಯ್ದುಹೋಗಿದ್ದವು.

ಬೆವರೊರೆಸಿಕೊಳ್ಳುತ್ತಾ ಸ್ನೇಹಿತರೆಲ್ಲಿದ್ದಾರೆಂದು ಹುಡುಕಾಡಿದೆ. ಒಬ್ಬ ಹಂದಿಯನ್ನು ಹಿಡಿಯುವ ಆಟದಲ್ಲಿದ್ದ. ಅದು ಎಲ್ಲಂದರೆ ಅಲ್ಲಿ ನುಗ್ಗುತ್ತಿರುತ್ತದೆ ಸ್ಪರ್ಧಿಗಳು ಅದರ ಕಿವಿ ಹಿಡಿದು ನಿಲ್ಲಿಸಬೇಕು. ಅದೂ ಒಂದು ರೀತಿ ಚೆನ್ನಾಗಿತ್ತು. ಇನ್ನೊಬ್ಬ ಓಡಿಬಂದವನೇ ಲೋ ಏಕ್ ಮಾರ್ ದೋ ತುಕಡಾ ಆಟ ಆಡಿದ್ದೀಯ ಬಾ ನೋಡು ಎಂದು ಕರೆದು ಹೋದ. ಒಂದು ಡುಪ್ಲಿಕೇಟ್ ಕುರಿ ಇರುತ್ತದೆ ಒಂದೇ ಏಟಿಗೆ ಅದರ ರುಂಡ ಮುಂಡ ಬೇರ್ಪಡಿಸಬೇಕು. ಮೊದಲು ಕುರಿ, ಮುಂದಿನ ಸುತ್ತು ಹಂದಿ, ಅದರ ಮುಂದಿನ ಸುತ್ತು ಹಸು ಅದರ ಮುಂದಿನ ಸುತ್ತು ಹೋರಿಯನ್ನು ಬಿಡುವರಂತೆ. ಸ್ನೇಹಿತ ಎಲ್ಲಾ ಒರಿಜಿನಲ್ ಪ್ರಾಣಿಗಳನ್ನೇ ಇಟ್ಟಿದ್ದಾರೆ ಇದೊಂದು ಮಾತ್ರ ಮೋಸ ಅಲ್ವಾ ಮಗಾ, ಎಂದ ಒಮ್ಮೆ ಲೋ ಪ್ರತೀ ಬಾರಿ ಹೋದವರು ಹೊಡೆದುರುಳಿಸುತ್ತಿದ್ದರೆ ಲಾಸ್ ಅಲ್ವಾ ಅವರಿಗೆ ಅದಕ್ಕೇ ಹೀಗೆ ಮಾಡಿರಬಹುದು ಆದರೂ ಒಂದೇ ಏಟಿಗೆ ಕತ್ತು ಕತ್ತರಿಸೋದಕ್ಕೆ ಸಾಧ್ಯಾನೇನೋ ಅಷ್ಟು ದೊಡ್ಡ ಪ್ರಾಣಿಗಳ ಕುತ್ತಿಗೆಯನ್ನ ಅಂತ ಕುತೂಹಲದಿಂದ ಯಾರೋ ಸಿದ್ಧನಾಗುತ್ತಿದ್ದವನ ಕಡೆ ನೋಡಹತ್ತಿದೆವು. ಸ್ಪರ್ಧಿಯ ಕೈಯಲ್ಲಿದ್ದ ಮಚ್ಚನ್ನೇ ನೋಡುತ್ತಲೇ ಲೋ ನಮ್ಮೂರ್ ಜಾತ್ರೆನಲ್ಲಿ ಒಬ್ಬನೇ ಇಪ್ಪತ್ತರಿಂದ ಇಪ್ಪತ್ತೈದು ಕುರಿಗಳ ಕತ್ತು ಒಂದೇ ಏಟಿಗೆ ಕಡಿದು ರೆಕಾರ್ಡ್ ಮಾಡಿದ್ದಾನೆ ಗೊತ್ತಾ ಅಂದ. ಇರಬಹುದೇನೋ ಎಂದುಕೊಂಡು ಇನ್ನೇನು ಮಚ್ಚು ಬೀಸಲು ಸನ್ನದ್ಧನಾದವನನ್ನು ಕಣ್ಣು ಪಿಳುಕಿಸದೇ ನೋಡಿದೆವು. ಮೂರು ಬಾರಿ ಗಾಳಿಯಲ್ಲಿ ಬೀಸಿ ಬೀಸಿ ಉಸಿರು ಕಟ್ಟಿ ಹುಂ ಎಂದು ಸ್ವರ ಹೊರಡಿಸಿ ಧೊಪ್ಪನೆ ಕುರಿಯ ಕುತ್ತಿಗೆಯ ಭಾಗಕ್ಕೆ ಹೊಡೆದ ನೈಜ ಅನುಭವ ಕೊಡಲೆಂದು ಅದರ ಕುತ್ತಿಗೆಯ ಭಾಗಕ್ಕೆ ಕೆಂಪು ಬಣ್ಣವನ್ನೂ ತುಂಬಿದ್ದರು ಚಿಲುಮೆಯೋಪಾದಿಯಲ್ಲಿ ಚಿಲ್ಲನೆ ಹೊರಚೆಲ್ಲಿತು ಕುತ್ತಿಗೆ ಕೊಂಚವೇ ತಗುಲಿಕೊಂಡು ನೇತಾಡುತ್ತಿತ್ತು. ಹೊರಗಿದ್ದ ಜನ ಹೋssssssss ಎಂದುದ್ಗಾರ ತೆಗೆದರು. ಆ ಕುರಿಯ ಜಾಗದಲ್ಲಿ ಮತ್ತೊಂದನ್ನ ತಂದಿರಿಸಲಾಯ್ತು.

ಬುಲ್ ಫೈಟ್ ಆಟಕ್ಕೆ ಮೂವರು ಗೆಳೆಯರೂ ಒಟ್ಟಿಗೆ ಹೋಗೋಣವೆಂದು ತೀರ್ಮಾನಿಸಿ ಹೊರಟವರಿಗೆ ಎದುರುಗಡೆ ಒಳಗಡೆಯಿಂದ ಪಟಪಟನೆ ಮುಖ ಮುಚ್ಚಿಕೊಂಡು ಹೊರಗೆ ಓಡಿಬಂದು ಜನಜಂಗುಳಿಯಲ್ಲಿ ಕಳೆದುಹೋಗುತ್ತಿದ್ದ ಜನರನ್ನು ಕಂಡು ಆಶ್ಚರ್ಯವಾಯ್ತು. ಅರೆರೆ! ಇದ್ಯಾಕೆ ಈ ರೀತಿ ಹೊರಗೆ ಮುಖ ಮರೆಸಿಕೊಂಡು ಹೋಗುತ್ತಿದ್ದಾರೆಂದು ಅದರ ವಿವರ ಮೆನು ಕಾರ್ಡಿನಲ್ಲಿ ನೋಡಿದರೆ ವಯಸ್ಕರಿಗೆ ಮಾತ್ರ ಇರುವ ಆಟವೆಂದು ತಿಳಿಯಿತು. ಮತ್ತು ಇದಕ್ಕೆ ಕನಿಷ್ಟ ನಾಲ್ಕು ಸದಸ್ಯರು ಬೇಕಿತ್ತು. ಸರಿ ನಾಲ್ವರೂ ಒಟ್ಟು ಸೇರಿ ಹೊರಟೆವು. ಕತ್ತಲೆ ಗುಹೆಯಂತಿದ್ದ ಇದ್ದ ಕಟ್ಟಡ ಒಳ ಹೊಕ್ಕರೆ ಒಂದೊಂದು ಬ್ಯಾಚ್ ಮಾಡಿ ಒಳ ಬಿಡುತ್ತಿದ್ದರು. ನಾವು ನಾಲ್ವರಿದ್ದದ್ದರಿಂದ ತೊಂದರೆಯಾಗಲಿಲ್ಲ. ಒಂದು ಹೆಣ್ಣು ನಾಯಿಯಿರುತ್ತದೆ ಅದರ ಹಿಂದೆ ನಾಲಕ್ಕು ನಾಯಿಗಳನ್ನು ಬಿಡುತ್ತಾರೆ ಆ ನಾಲಕ್ಕು ನಾಯಿಗಳ ಕೊರಳಿಗೆ ಕಟ್ಟಿರುವ ದಾರದ ಇನ್ನೊಂದು ತುದಿಯನ್ನ ಕಬ್ಬಿಣದ ಬೇಲಿಯ ಹೊರಗಡೆ ನಿಲ್ಲುವ ನಾಲ್ವರಿಗೆ ಕೊಡಲಾಗುತ್ತದೆ. ಮೂರು ನಾಯಿಗಳನ್ನು ತಪ್ಪಿಸಿ ಆ ನಾಯಿ ಗೆಲ್ಲಬೇಕು. ಗುದ್ದಾಡಿ, ಬಡಿದಾಡಿ, ಯಾರೂ ಗೆಲ್ಲದೇ ಸಮಯಾವಕಾಶ ಮೀರಿ ಹೊರಗೆ ಒಬ್ಬರನ್ನೊಬ್ಬರು ಛೇಡಿಸುತ್ತಾ, ಆಡುವಾಗ ಒಬ್ಬೊಬ್ಬರೂ ನೀಡುತ್ತಿದ್ದ ಮುಖಭಾವವನ್ನು ಅನುಕರಿಸುತ್ತಾ, ನಗುತ್ತಾ ಹೊರಬಂದೆವು. ಹೊಟ್ಟೆ ಹುಣ್ಣಾಗುವಷ್ಟು ನಕ್ಕೆವು. ಕಣ್ಣುಗಳು ಮಂಜು ಮಂಜಾಗಿಹೋಯ್ತು ಒಬ್ಬೊಬ್ಬರ ಮುಖಭಾವ, ಪ್ರಯತ್ನಗಳನ್ನೂ ನೆನೆನೆನೆಸಿಕೊಂಡು. ಸುಸ್ತಾಗಿ, ಅಲ್ಲೇ ಸ್ವಲ್ಪ ದೂರ ಬಂದು ಕಟ್ಟೆಯ ಮೇಲೆ ಕುಳಿತೆವು. ಎದುರುಗಡೆ ಒಂದು ಆಟದ ಕೋರ್ಟನ್ನು ಕಟ್ಟಲಾಗುತ್ತಿತ್ತು. ಇದೇನಿರಬಹುದೆಂದು ಮೆನು ಕಾರ್ಡನ್ನು ನೋಡಿದೆ. ಕಣ್ಣು ತುಂಬಿದ್ದ ನೀರು ಒರೆಸಿಕೊಂಡು ನೋಡಿದರೆ ಅತಿಶೀಘ್ರದಲ್ಲಿ ಅಲ್ಲಿ ಮನುಷ್ಯ ಪ್ರಾಣಿಯನ್ನು ಇಡಲಾಗುವುದೆಂದು ಬರೆದಿತ್ತು.

ದೊಡ್ಡ ಜಾರೋ ಬಂಡೆ, ಅದರಲ್ಲಿ ನೀರು ಸುರಿಸುರಿದು ಜಾರುತ್ತಲಿತ್ತು ಹಾಕಲು ಬಟ್ಟೆಯೂ ಕೊಟ್ಟಿಲ್ಲ ಏರಿಯನ್ನು ಏರಿ ಮೇಲೆ ತಲುಪುವುದು ನನ್ನ ಕೆಲಸ, ನನ್ನನ್ನು ತಡೆದು ಕೆಳಗೆ ಹಳ್ಳಕ್ಕೆ ಬೀಳಿಸಲು ಸುತ್ತೆಲ್ಲ ಕಡೆ ನಿಂತಿರುವ ಜನರಿಗೆ ಹಗ್ಗ ಕೊಡಲಾಗಿತ್ತು ನನ್ನ ಕೈಯಿಗೋ ಕಾಲಿಗೋ ಸೊಂಟಕ್ಕೋ ಎಸೆದು ಸಿಕ್ಕಿಸಿ ಕೆಳಗೆಳೆಯುತ್ತಿದ್ದರು. ನಾನು ಜೀವಕ್ಕಾಗಿ ಹೋರಾಡುತ್ತಿದ್ದೆ ಅವರು ಮನೋರಂಜನೆಗಾಗಿ ಹೋರಾಡುತ್ತಿದ್ದರು. ಎಷ್ಟು ಬಾರಿ ಬಿಡಿಸಿಕೊಂಡು ಮೇಲೆ ಏರುತ್ತಿದ್ದರೂ ಇನ್ನೇನು ಮೇಲಿನ ಘಟ್ಟಕ್ಕೆ ತಲುಪಿಯೇ ಬಿಟ್ಟೆ ನಾನೇ ಗೆದ್ದೆ ಎಂದುಕೊಳ್ಳುವಷ್ಟರಲ್ಲಿ ಹಗ್ಗ ಹಾಕಿ ಎಳೆದುಬಿಡುತ್ತಿದ್ದರು ಕೆಳಗೆ ನೋಡಿದರೆ ಹಳ್ಳದಲ್ಲಿ ಹಂದಿ, ಹುಚ್ಚು ನಾಯಿ, ಕುರಿ, ಕೋಳಿ, ಇರುವೆ, ಜಿರಳೆ, ಇಲಿ, ಬೆಕ್ಕು, ಹಸು, ಎಲ್ಲಾ ಬಾಯಿ ತೆರೆದು ಅರಚುತ್ತಾ ನಾನು ಬೀಳುವುದನ್ನೇ ಕಾಯುತ್ತಿದ್ದವು. ಹಸುವಿನ ಬಾಯಲ್ಲಿ ನನ್ನ ವಸ್ತ್ರಗಳೆಲ್ಲಾ ಸೇರಿಹೋಗುತ್ತಿದ್ದವು. ಅಯ್ಯಯ್ಯೋ ನಾನು ಹಳ್ಳಕ್ಕೆ ಬಿದ್ದರೆ ಖಂಡಿತಾ ನನ್ನನ್ನು ಬಿಡುವುದಿಲ್ಲ, ತರಿದುತಿಂದುಬಿಡುತ್ತವೆ. ಯಾರಾದರೂ ನನ್ನ ಸಹಾಯಕ್ಕೆ ಇದ್ದಾರೋ ಎಂದು ಸುತ್ತ ನೋಡಿದೆ, ಹಗ್ಗ ಎಸೆಯುತ್ತಿದ್ದವರಲ್ಲಿ ನನ್ನ ಸ್ನೇಹಿತರೂ ಇದ್ದರು. ಕಣ್ಣು ತಿಂಬಿಹೋದವು, ಉಸಿರುಕಟ್ಟಿಬರುತ್ತಿತ್ತು. ಮೈಕೈಯಲ್ಲಿ ಇದ್ದ ಶಕ್ತಿಯೆಲ್ಲವನ್ನೂ ಉಪಯೋಗಿಸಿ ಮೇಲೆ ಗುರಿ ಮುಟ್ಟುವತನಕ ಯಾವ ಪಾಶದ ದಾಳಿಗೂ ಕುಗ್ಗದೇ ಏರುವುದೆಂದು ದೃಷ್ಟಿ ನೆಟ್ಟೆ ಏರಿದೆ, ಎಲ್ಲ ಬದಿಯಿಂದಲೂ ಜನರು ಹಗ್ಗಗಳನ್ನು ಎಸೆದು ಎಳೆಯಲು ಶುರುಮಾಡಿದರು. ಅಯ್ಯೋ ನನಗ್ಯಾಕೀಗತಿ ಬಂತೋ ಗೊತ್ತಿಲ್ಲ ಚೀರಿದೆ, ಇನ್ನೂ ಶಕ್ತಿಯುಪಯೋಗಿಸಿ ಮೇಲೆ ಹತ್ತಲು ಪ್ರಯತ್ನಿಸಿದೆ. ಇಲ್ಲಿಂದ ಮೊದಲು ಓಡಿಹೋಗಬೇಕೆನಿಸಿತು.

ಇನ್ನೂ ಹೊಟ್ಟೆ ಹಿಡಿದುಕೊಂಡು ನಗುತ್ತಲಿದ್ದ ಸ್ನೇಹಿತರನ್ನೊಮ್ಮೆ ನೋಡಿದೆ, ಮಂಜು ಮಂಜಾಗಿ ನಿರ್ಮಾಣವಾಗುತ್ತಿದ್ದ ಮೈದಾನವನ್ನು ನೋಡಿದೆ ಕೈಕಾಲು ಹೃದಯ ಥರಥರನೆ ನಡುಗುತ್ತಿತ್ತು. ನನ್ನಲ್ಲಿನ ನಗು ಯಾವುದೋ ಕಾಲದಲ್ಲಿ ಉಡುಗಿಹೋಗಿತ್ತು. ಆ ಎತ್ತರದ ಪ್ರದೇಶದಲ್ಲಿ ರಕ್ತಕಣ್ಣೀರಿನೊಂದಿಗೆ, ಹಗ್ಗಗಳ ಸರಳಿನೊಂದಿಗೆ ಇನ್ನೂ ನಿಂತಿರುವಂತೆ ಕಂಡಿತು. ಕೈಯಲ್ಲಿದ್ದ ಮೆನು ಕಾರ್ಡನ್ನು ಬಿಸುಟಿ ಮನುಷ್ಯ ಪ್ರಾಣಿಗಳನ್ನು ನೂಕಿ, ನುಸುಳಿ, ಜಾಗ ಮಾಡಿಕೊಂಡು ಓಡಿದೆ, ಓಡಿದೆ, ಓಡಿದೆ, ಓಡಿದೆ ಆಟದ ಮೈದಾನಗಳಿಂದಾಚೆಗೆ, ಮನುಷ್ಯ ಪ್ರಾಣಿಗಳಿಂದ ದೂರಕೆ, ಓಡುತ್ತಲೇ ಇದ್ದೆ. ಸೆಕ್ಯುರಿಟಿ ತಾತ ಗಾಂಧಿ ನೋಟನ್ನು ಥುಪುಕ್ಕನೆ ನನ್ನೆಡೆಗೆ ಉಗಿದು ಕೈ ತೋರಿಸುತ್ತಾ ಹೇssss ಹೆಹೆಹೆಹೆಹೆ ಎಂದು ನಗುತ್ತಲಿದ್ದಂತೆನಿಸಿತು, ಹಿಂದಿರುಗಿ ನೋಡಲೂ ಇಲ್ಲ ಶಬ್ಧಗಳು ಮರೆಯಾಗುವವರೆಗೂ, ಕತ್ತಲೆ ಕವಿಯುವವರೆಗೂ, ಓಡುತ್ತಲೇ ಇದ್ದೆ.








+ನೀ.ಮ. ಹೇಮಂತ್

1 comment:

  1. ಚೆನ್ನಾಗಿದೆ...ಮೊದಲ ಸಾಲಿನ 'ಆಟ'ದಿಂದ ಕೊನೆಯ ಸಾಲಿನ 'ಓಟ'ದವರೆಗೂ ಎಲ್ಲವೂ ಇಷ್ಟವಾಯಿತು :)

    ReplyDelete