ಓದಿ ಓಡಿದವರು!

Tuesday 10 July 2012

ಸರ್ವಾಂತರ್ಯಾಮಿ!




(ಕಥೆಯಲ್ಲ- ಅಪೂರ್ಣ ಸನ್ನಿವೇಶಗಳ ಸರಮಾಲೆ)

ಆರಂಭ

     ಣ್ಣಾ ಅಣ್ಣಾ ಒಂದು ಫೇಸ್ಬುಕ್ ಅಕೌಂಟ್ ಓಪನ್ ಮಾಡ್ಕೊಡಣ್ಣಾ. ಅಣ್ಣ ಅಣ್ಣ ಪ್ಲೀಸ್ ಅಣ್ಣಾ! ಅರೆ ಇವನಾ ಇಷ್ಟಿದ್ದೀಯಾ ನಿನಗ್ಯಾಕೋ ಫೇಸ್ ಬುಕ್ ಅಕೌಂಟು ಎಂದರೆ ಇಷ್ಟಿದ್ರೆ ಫೇಸ್ ಬುಕ್ ಅಕೌಂಟ್ ಇರಬಾರದಾ ಅಣ್ಣಾ ಎಂದ ಪ್ರಶ್ನೆಗೆ ಉತ್ತರಿಸಲಾಗದೇ ಮುಚ್ಕೊಂಡೆ. ಅಣ್ಣಾ ಓಪನ್ ಮಾಡ್ಕೊಡಣ್ಣಾ ಎಂದು ಮತ್ತೇ ಶುರುಮಾಡಿದ. ಆದರೆ ಇವನಿಗ್ಯಾಕೆ ಬೇಕು, ಇನ್ನೂ ಆರನೇ ತರಗತಿಯಲ್ಲಿ ಕಲೀತಿರೋ ಹುಡುಗ ಈಗಲೇ ಫೇಸ್ ಬುಕ್ಕು ಅಕೌಂಟ್ ಓಪನ್ ಮಾಡಿಸೋದು ಸರಿಯೋ ತಪ್ಪೋ? ನಮ್ಮ ಗುರುಗಳೊಬ್ಬರ ಮನೆಯಲ್ಲಿ ಅವರದ್ದೊಂದು ಅಕೌಂಟು, ಅವರ ಶ್ರೀಮತಿಯವರದ್ದೊಂದು, ಆರು ವರ್ಷದ ಮಗಳದ್ದೊಂದು, ಎಂಟು ವರ್ಷದ ಮಗಳದ್ದೊಂದು ಅಕೌಂಟ್ ತೆರೆದಿದ್ದಾರೆ, ಅವೂ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ತಾವು ಬಿಡಿಸಿದ ಬಣ್ಣ ಬಣ್ಣದ ಚಿತ್ರಗಳನ್ನ, ಅಮ್ಮನ ರಂಗೋಲೆಯನ್ನ, ಈ ರೀತಿಯ ಫೋಟೋಗಳು, ಗುಡ್ ಮಾರ್ನಿಂಗ್, ಗುಡ್ ಈವನಿಂಗ್, ಹಾಯ್ ಫ್ರೆಂಡ್ಸ್ ಎಂಬ ಅಪ್ಡೇಟ್ಸ್ ಗಳನ್ನ ಹಾಕುತ್ತಿರುತ್ತಾರೆ. ತಪ್ಪೇನಿಲ್ಲ ಎಂದು ಒಮ್ಮೆ ಅನ್ನಿಸಿದರೆ. ಮತ್ತೊಮ್ಮೆ ಈಗಲೇ ಕಂಪ್ಯೂಟರ್ ಫ್ರೀ ಇದ್ದರೆ ಸಾಕು ಹೇಗೋ ಪೂಸಿ ಹೊಡೆದು ಪವರ್ ಪಾಯಿಂಟು, ಪೈಂಟು ತೆರೆದುಕೊಂಡು ಏನೋ ಚಿತ್ರವಿಚಿತ್ರ ಕೆಲಸಗಳನ್ನ ಮಾಡ್ಕೊಂಡು ಕೂತಿರ್ತಾನೆ ಇನ್ನ ಫೇಸ್ ಬುಕ್ಕು ಬೇರೆ ತೋರಿಸಿದರೆ ದಿನಂಪ್ರತಿ ಬಂದು ತಲೆ ತಿನ್ನಲು ಶುರುಮಾಡ್ತಾನೆ ಎಂಬ ಭಯದಿಂದ ನೋಡೋ ಅವೆಲ್ಲಾ ನಿನ್ನ ವಯಸ್ಸಲ್ಲಿ ಮಾಡಬಾರದು ಎಂದೆ ಕೆಟ್ಟದ್ದೇನಾದ್ರೂ ಇರುತ್ತಾ ಅಣ್ಣಾ, ಮತ್ತೆ ನೀನು ಯಾವಾಗಲೂ ಓಪನ್ ಮಾಡ್ಕೊಂಡಿರ್ತೀಯಾ ಎಂದು ಇಟ್ಟ ಬತ್ತಿ. ಹೇಗೆ ಸಮಜಾಯಿಷಿ ಹೇಳುವುದು ಇವನಿಗೆ ಎಂದು ಗೊತ್ತಾಗದೇ ಒಳಗೇ ಉತ್ತರಕ್ಕಾಗಿ ತಡಕಾಡುತ್ತಿದ್ದಷ್ಟೂ ಶರ್ಟು ಜಗ್ಗುತ್ತಾ ಅಣ್ಣಾ ಪ್ಲೀಸ್ ಅಣ್ಣಾ, ಪ್ಲೀಸ್ ಅಣ್ಣಾ ಎಂದು ತಲೆ ತಿಂದು ಇವತ್ತು ಸ್ವಲ್ಪ ಕೆಲ್ಸ ಇದೆ ಕಣೋ, ಅದು ಅರ್ಧ ಘಂಟೆ ಆಗುತ್ತೆ ಅಷ್ಟೊತ್ತು ಸಮಯ ಇವಾಗ ಇಲ್ಲ, ನಾಳೆ ಮಾಡ್ಕೊಡ್ತೀನಿ ಎಂದೆ ಹು ಸರಿ ಎಂದು ಜಿಗಿಯುತ್ತಾ ಹೋದ. ಫೇಸ್ ಬುಕ್ಕೇನು ವಯಸ್ಕರಿಗೆ ಮಾತ್ರವಲ್ಲವಲ್ಲ ಅಪರೂಪಕ್ಕೆ ಎ ಸರ್ಟಿಫಿಕೇಟ್ ಎನ್ನಬಹುದಾದ ಫೋಟೋಗಳು ಓಡಾಡುವುದನ್ನ ನೋಡಿದ್ದೆ, ಅದು ಪೇಪರ್ ಗಳಲ್ಲಿ, ಟಿವಿ ಪ್ರೋಗ್ರಾಮ್ ಗಳಲ್ಲಿ, ರಸ್ತೆಗಳ ಭಿತ್ತಿಗಳಲ್ಲಿ ಇರುವಷ್ಟೇನು ಹೆಚ್ಚಿರಲಿಲ್ಲವಲ್ಲ. ಇವನ್ಯಾವನೋ ಸುಮ್ಮನೆ ಏನೋ ಮಾಡಿಕೊಂಡಿರುವವನಿಗೆ ಬಂದು ಹುಳ ಬಿಟ್ಟು ಹೋದ ಎಂದುಕೊಳ್ಳುತ್ತಾ, ಸಧ್ಯ ಹೋದನಲ್ಲ ನಾಳೆಗೆ ಮರೆತಿರುತ್ತಾನೆ ಎಂದು ಸುಮ್ಮನಾದೆ. ಮತ್ತೆ ಮಾರನೆಯ ದಿನವೂ ಬಂದು ಅದೇ ವರಾತ. ಹೇಗೆ ಹೇಳಿದರೂ ಅವನ ಪ್ರಶ್ನೆಗೆ ಉತ್ತರಿಸುವ ಶಕ್ತಿ ನನ್ನಲ್ಲಿಲ್ಲ. ಲೇ ಫೇಸ್ ಬುಕ್ಕು ಸ್ಕೂಲಲ್ಲಿರೋವಾಗ ನಮಗೆ ಗೊತ್ತೇ ಇರಲಿಲ್ಲ ಗೊತ್ತಾ ಈಗ ಕೆಲಸಕ್ಕೆ ಸೇರಿದ ಮೇಲೆ ನಾವ್ ಓಪನ್ ಮಾಡಿರೋದು ನೀನ್ ಸುಮ್ಮನೆ ಹೋಗಪ್ಪಾ ನನ್ನ ತಲೆ ತಿನ್ನಬೇಡ, ಕಾಲೇಜು ಸೇರಿದಮೇಲೆ ಮಾಡುವಿಯಂತೆ, ನಿನಗೇನು ನಿನ್ನ ಫ್ರೆಂಡ್ಸೆಲ್ಲಾ ಸ್ಕೂಲಲ್ಲೇ ಸಿಗಲ್ವಾ ಹೋಗು ಸುಮ್ಮನೆ ಎಂದು ಸ್ವಲ್ಪ ಜೋರಾಗೇ ಹೇಳಿದೆ ಮಾತೇ ಆಡಲಿಲ್ಲ ಆಸಾಮಿ ಹೋದ. ಅರ್ಧ ಘಂಟೆಯ ಒಳಗೆ ಮತ್ತೆ ಬಂದ ಅವರಮ್ಮನೊಡನೆ, ಅದೇನೋ ಫೇಸ್ ಬುಕ್ ಅಂತೆ ತೆಕ್ಕೊಡಪ್ಪ ಅವನಿಗೆ, ಒಂದೇ ಕಣ್ಣಲ್ಲಿ ಅಳ್ತಾನೆ ಎಂದು ಬಂದರು. ಯಾತಕ್ಕೆ ಚಿಕ್ಕ ಹುಡುಗರ ಕೈಯಲ್ಲೇ ಈಗಲೇ ಕೊಡಬಾರದೆಂದು ಹೇಳೋದಕ್ಕೆ ಕಾರಣಗಳು ನನ್ನಂತಹ ಮಂದ ಬುದ್ಧಿಯವನಿಗೆ ಆ ಕ್ಷಣಕ್ಕೆ ಹೊಳೆಯಲಿಲ್ಲ, ಹಾಗೂ ದಿನಾ ಬಂದು ಖ್ವಾಟಲೆ ಕೊಡ್ತಾನೆ ಫೇಸ್ ಬುಕ್ ಓಪನ್ ಮಾಡಣ್ಣ ಅಂತ ನನಗೆ ಕಿರಿಕಿರಿಯಾಗುತ್ತೆ ಅಂತ ನೇರವಾಗಿ ಹೇಳುವುದಕ್ಕೆ ಆಗಲಿಲ್ಲ. ಏನಕ್ಕೋ ನಿನಗೆ ಫೇಸ್ ಬುಕ್ಕು ಎಂದರೆ ಕಣ್ಣುಜ್ಜಿಕೊಳ್ಳುತ್ತಲೇ ಫ್ರೆಂಡ್ಸ್ ಎಲ್ಲಾ ರೇಗಿಸ್ತಾರೆ ಇನ್ನೂ ಚಿಕ್ಕ ಹುಡುಗ, ದಡ್ಡ, ಒಂದು ಫೇಸ್ ಬುಕ್ ಅಕೌಂಟ್ ಇಲ್ಲಾ ಇವನತ್ರ ಅಂತ ಎಂದ. ಹೀಗೂssssss ಉಂಟೇ ಎಂದು ಪಕ್ಕದಲ್ಲಿ ಯಾರೋ ಹೇಳಿದಹಾಗಾಯ್ತು. ಪ್ರಪಂಚ ಹಾಳಾಗ್ತಿದ್ಯಾ, ಉದ್ಧಾರ ಆಗ್ತಿದ್ಯಾ ಎಂದು ಗೊತ್ತಾಗಲಿಲ್ಲ. ಫೇಸ್ ಬುಕ್ಕಿಗೆ ವ್ಯಸನಿಗಳಾದವರು ಕಂಪ್ಯೂಟರ್ ಮುಂದೇನೇ ಹೆಚ್ಚು ಹೊತ್ತು ಇರ್ತಾರೆ, ಓದಿನ ಮೇಲೆ ಗಮನ ಕಡಿಮೆಯಾಗುತ್ತೆ, ಆಟ ಕಡಿಮೆ ಮಾಡ್ತಾರೆ ಅದು ಇದು ಲೊಟ್ಟು ಲೊಸ್ಕು ಎಂದು ಭಾಷಣ ಬಿಗಿದರೆ ಆಗಲ್ಲ ಅಂತ ಹೇಳಪ್ಪಾ ನೇರವಾಗಿ ಬುರುಡೆ ಬಿಡಬೇಡ ಎಂದು ಹೇಳಿ ಹೋದಾರು ಎಂದೆನಿಸಿ ಸರಿ ಆಂಟಿ ಎಂದು ರೂಮಿಗೆ ಬಂದೆ ಬಾಲದಂತೆ ಹಿಂದೆಯೇ ಬಂದ. ನನ್ನ ಕಂಪ್ಯೂಟರಿನ ಸ್ಕ್ರೀನಿಗೇ ಕಣ್ಣು ನೆಟ್ಟು ಕಾಲು ಟಿಂಗ್ ಟಿಂಗನೆ ಕುಣಿಸುತ್ತಾ ನಿಂತಿದ್ದ. ಏನ್ ಹೆಸರು ಕೊಡ್ಲೋ ಎಂದರೆ ನಿಖಿಲ್ ದಿ ಗ್ರೇಟ್ ಎಂದೇ ಬೇಕೆಂದ. ಪಾಸ್ವರ್ಡ್ ಕೊಡೋ ಎಂದರೆ ನನ್ನನ್ನು ಆಕಡೆ ತಿರುಗಿಸಿ ಕುಟ್ಟಿದ. ಅಬ್ಬಬ್ಬಾ! ಇವರಿಂದ ಕಲಿಯುವುದು ಬೇಜ್ಜಾನಿದೆ ಎಂದುಕೊಂಡು ಅಂತೂ ಫೇಸ್ ಬುಕ್ಕೆಂಬ ರೈಲಿನ ಹಳಿಗೆ ಇನ್ನೊಂದು ತಲೆಯನ್ನು ಕೊಟ್ಟೆ!

ಮದುವೆ

ಸ್ನೇಹಿತೆಯೊಬ್ಬಳಿಗೆ ಗಂಡು ಹುಡುಕುತ್ತಿದ್ದರು. ಹಲವಾರು ಗಂಡುಗಳು ಹಲವಾರು ಕಾರಣಳಿಂದ ತಿರಸ್ಕೃತರಾದ ನಂತರ ಈಗ ಒಂದು ಹುಡುಗನ ಫೋಟೋ ಇಷ್ಟವಾಗಿತ್ತು, ಆ ಹುಡುಗನ ಕಡೆಯವರೂ ಸಹ ಆಸಕ್ತಿ ತೋರಿದ್ದರು. ಹಾಗಾಗಿ ಸಂಬಂಧ ಬಂದದ್ದೇ ಜಾತಕ ಕೇಳಿದರು, ಯಾವ ಜಾತಕ? ಫೇಸ್ ಬುಕ್ ಜಾತಕ. ಅವನ ಫೇಸ್ ಬುಕ್ ಹೆಸರು ತಿಳಿದುಕೊಂಡು ತಂದು ವಿವರವಾಗಿ ಪ್ರೊಫೈಲ್ ತಪಾಸಣೆ ಶುರುವಾಯ್ತು. ರಿಲೇಷನ್ಶಿಪ್ ಸ್ಟೇಟಸ್ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ ಇಲ್ಲಿಯವರೆಗೂ, ಹಾಕಿರುವ ಅಪ್ಡೇಟ್ಸ್ ಗಳಲ್ಲಿ ಹೆಚ್ಚಿನವು ಕ್ರಿಕೆಟ್ ಟಿ೨೦ ಪಂದ್ಯಗಳ ಬಗ್ಗೆ ಬಿಟ್ಟರೆ, ಪ್ರೀತಿಗೆ ಸಂಬಂಧ ಪಟ್ಟ ಉಲ್ಲೇಖಗಳು, ಅದನ್ನೂ ಇನ್ನೂ ಗಮನಿಸಿದರೆ ಎಲ್ಲಾ ಪ್ರೀತಿಯಲ್ಲಿ ಸೋತ ಉಲ್ಲೇಖಗಳಿವೆ, ಅದನ್ನು ಬಿಟ್ಟರೆ ಫೋಟೋಗಳು ಅಂಥ ಕೆಟ್ಟ ಫೋಟೋಗಳೇನಿಲ್ಲಾ, ಟ್ಯಾಗ್ ಮಾಡಿರುವುದರಿಂದ ಹಿಡಿದು ಎಲ್ಲಾ ಸಭ್ಯವಾಗಿವೆ, ಯಾವ  ಫೋಟೋಗಳಲ್ಲೂ ಯಾವುದೇ ಹುಡುಗಿಯರ ಜೊತೆ ತುಂಬಾ ಹತ್ತಿರವಿರುವಂತೆ ಹಿಡಿಸಿಕೊಂಡಂತಹುದಾವುದೂ ಇಲ್ಲ, ಅದನ್ನು ಬಿಟ್ಟರೆ ಸ್ನೇಹಿತರ ಲಿಸ್ಟಿನಲ್ಲಿ ಹುಡುಗಿಯರು ಕಡಿಮೆ, ಮದುವೆಯಾಗಿರುವ ಹೆಂಗಸರು ಮತ್ತು ಸಹಪಾಠಿಗಳೇ ಹೆಚ್ಚಿದ್ದಾರೆ. ಎಲ್ಲಾ ದೀರ್ಘವಾಗಿ ಪರಾಂಬರಿಸಿ ಫೋಟೋಗಳನ್ನು ಅದರ ಇತ್ಯೋಪರಿಗಳನ್ನು ವಿಶ್ಲೇಷಿಸಿ ಮೂರ್ನಾಲ್ಕು ಜನ ಸೇರಿ ಚರ್ಚೆ ಮಾಡಿ ಒಂದು ವಿವರವಾದ ರಿಪೋರ್ಟ್ ಸಿದ್ಧ ಪಡಿಸಿದರು. ಹುಡುಗ ಹೀಗೇ ಎಂಬ ಒಂದು ಚಿತ್ರಣ ಅದರಿಂದ ದೊರಕಿತ್ತು. ಹುಡುಗನಿಗೆ ಸಿಗರೇಟು, ಹೆಚ್ಚೆಂದರೆ ಕುಡಿಯುವ ಚಟವಿದೆ, ಕನಿಷ್ಟ ಪಕ್ಷ ಒಂದು ದೇವದಾಸನ ಕಥೆಯಿದೆ. ಕೊಂಚ ಹೈಫೈ ಆಗಿ ಯೋಚಿಸುತ್ತಾನೆ ಬಿಟ್ಟರೆ ಸ್ನೇಹಮಯಿ. ಇಷ್ಟನ್ನು ಒಪ್ಪಿಕೊಳ್ಳುವ ಹಾಗಿದ್ದರೆ ಈ ನನ್ನ ಸ್ನೇಹಿತೆ ಮುಂದುವರೆಯಬಹುದಿತ್ತು. ಮೊದಲ ಬಾರಿ ಫೋನಿನಲ್ಲಿ ಮಾತನಾಡುವಾಗಲೇ ಆ ರಿಪೋರ್ಟಿನ ಪ್ರಕಾರವೇ ೯೦% ಹುಡುಗನ ಗುಣ ನಡತೆ ಕಂಡು ಬಂದು ಏನೋ ಇಷ್ಟವಾಗದೇ ಸಂಬಂಧ ಮುರಿದು ಬಿತ್ತು. ಮೊತ್ತೊಂದು ಹುಡುಗನಿಗಾಗಿ ಹುಡುಕಾಟ ಶುರು.
ಮತ್ತೊಬ್ಬ ಸ್ನೇಹಿತನಿಗೆ ಮದುವೆ ಗೊತ್ತಾಗಿತ್ತು, ಮತ್ತು ನಿಶ್ಚಿತಾರ್ಥವೂ ಕೂಡ ಆಗಿತ್ತು. ಒಮ್ಮೆ ಇದ್ದಕ್ಕಿದ್ದಂತೆ ಮದುವೆ ನಿಂತುಹೋಗುವುದರಲ್ಲಿದೆ ಎಂಬ ಸುದ್ದಿ ಬಂತು. ಅರೆ ಎಲ್ಲಾ ಸರಿ ಹೋಗಿ ಜಾತಕ ಕೂಡ ಕೂಡಿ ಬಂದಮೇಲೆಯೇ ಅಲ್ವೇ ಮದುವೆಯ ದಿನಾಂಕ ಗೊತ್ತುಮಾಡಿದ್ದು ಮತ್ಯಾಕೆ ನಿಂತುಹೋಗುವುದೆಂದು ಫೋನು ಮಾಡಿದರೆ ಸ್ವೀಕರಿಸವಲ್ಲನು ಪುಣ್ಯಾತ್ಮ. ಏನು ಮಾಡಿಕೊಂಡನೋ ತಕರಾರು ಸಹಾಯ ಮಾಡೋಣ ಎನ್ನುವುದಕ್ಕಿಂತ ಕುತೂಹಲ ತಾಳಲಾರದೆ ಹೋಗಿ ನೋಡಿದರೆ ಗಂಭೀರ ಸಮಸ್ಯೆಯೇ ಹೌದು. ಮನೆಯಲ್ಲಿ ಎಲ್ಲರ ಮುಂದೆ ಹೇಳಲಾಗದೆ ಮಹಡಿಯ ಮೇಲೆ ಕೂರಿಸಿಕೊಂಡು ನಮಗೆ ಮಾತ್ರ ಕೇಳುವ ಹಾಗೆ ಒಸರಿದ. ಫೇಸ್ಬುಕ್ಕಿನಲ್ಲಿ ಅದ್ಯಾರೋ ವೈಯಕ್ತಿಕವಾಗಿ ಗೊತ್ತಿಲ್ಲದ ಫೇಸ್ಬುಕ್ ಗೆಳತಿ, ಎ ಸರ್ಟಿಫಿಕೇಟ್ ಫೋಟೋ ಹಾಕಿದ್ದಳಂತೆ ಅದಕ್ಕೆ ಕಮೆಂಟ್ ಹೊಡೆದನಂತೆ ಅದನ್ನು ತನ್ನ ಹುಡುಗಿ ನೋಡಿದಳಂತೆ. ಅಂಥವರೆಲ್ಲಾ ಫ್ರೆಂಡ್ಸ್ ಇವನಿಗೆ ಎಂದು ಜಗಳ ಶುರುವಾಯ್ತಂತೆ. ಕೊನೆಗೆ ಇಡೀ ಸಂಸಾರ ಹೋಗಿ ಏನೇನೋ ಮಾತುಕತೆಗಳು ನಡೆಸಿ ಇವನ ಮುಖ ತೋರಿಸಿ ಪಾಪದವನೆಂದು ಪ್ರೂವ್ ಮಾಡಲಾಯ್ತಂತೆ!



ಕ್ರೌರ್ಯ

ಒಬ್ಬ ಇವರಿಗೆ ಕಲ್ಲಿನಿಂದ ಹೊಡೆಯುತ್ತಾನೆ. ಅದಕ್ಕೆ ಇವರು ಪ್ರತೀಕಾರವೆಂಬಂತೆ ಕೋಲಿನಿಂದ ಹೊಡೆಯುತ್ತಾರೆ. ಇವರು ಸುಮ್ಮನಿರದೆ ಫೇಸ್ಬುಕ್ಕಿನಲ್ಲಿ ಹಾಗೆಯೇ ಘೋಷಣೆ ಹೊರಡಿಸುತ್ತಾರೆ ಕೂಡ. ಅವರು ನನಗೆ ಕಲ್ಲಿನಿಂದ ಹೊಡೆದರು, ಅದಕ್ಕೆ ನಾನು ಕೋಲಿನಿಂದ ಹೊಡೆದೆ. ಹಾಗು ಈ ನನ್ನ ಕೆಲಸಕ್ಕೆ ನನಗೆ ಹೆಮ್ಮೆಯಿದೆ. ಇನ್ನೂ ಯಾರಾದರೂ ನನಗೆ ಕಲ್ಲಿನಿಂದ ಹೊಡೆಯುವಂತವರು ನನ್ನ ಫ್ರೆಂಡ್ಸ್ ಲಿಸ್ಟಿನಲ್ಲಿ ಇದ್ದರೆ ತೊಲಗಿ ನಿಮ್ಮನ್ನೂ ಇದೇ ಕೋಲಿನಿಂದ ಹೊಡೆಯುವ ಮುನ್ನ ತೊಲಗಿ ಎಂದು “ನೇರವಾಗಿ” ಹೇಳಿಕೊಳ್ಳುತ್ತಾರೆ. ಯಾರು ಅವರು ಕಲ್ಲು ಹೊಡೆದವರು, ಯಾತಕ್ಕೆ ಹೊಡೆದರು, ಏನು ಕತೆ ಎಂದು ಏನೂ ಗೊತ್ತಿಲ್ಲದೆಯೇ ಇನ್ನೊಂದಷ್ಟು ಜನ ಸರಿಯಾಗಿ ಮಾಡಿದ್ದೀರಿ, ಅಂಥವರಿಗೆ ಕೋಲಿನಲ್ಲಿ ಹೊಡೆಯುವುದಲ್ಲ ಚಾಕುವಿನಲ್ಲಿ ತಿವಿಯಬೇಕಿತ್ತು, ಅದು ಇದು ಎಂದು ಮೆಚ್ಚಿ ಶ್ಲಾಘಿಸಿ, ಕೊಂಡಾಡಿ, ವಿಚಾರ ಮಾಡಿ ಕೋಲಿನಲ್ಲಿ ಹೊಡೆದದ್ದೇ ಸರಿ ಎಂದು ತೀರ್ಮಾನಿಸಿ ಬೆನ್ನು ತಟ್ಟಿ ಖುಷಿ ಪಡಿಸುತ್ತಾರೆ. ಅತ್ತ ಕಲ್ಲು ಹೊಡೆದ ‘ಅವರು’ ತಮ್ಮ ತಪ್ಪು (ಆಗಿದ್ದಲ್ಲಿ) ತಿದ್ದಿಕೊಳ್ಳುವ ಮನೋಭಾವ ಪಡೆಯದೇ ಕೋಲಿನಲ್ಲಿ ಹೊಡೆದ ‘ಇವರ’ ಮೇಲೆ ದ್ವೇಷ ಹುಟ್ಟಿಸಿಕೊಂಡು, ಕೆಂಡ ಕಾರುತ್ತಾರೆ. ಅವರದ್ದೊಂದು ಘೋಷಣೆ ಹೊರಡುತ್ತದೆ. ಅವರದ್ದೊಂದು ಬಳಗ ಅವರನ್ನು ಮೆಚ್ಚಿಸಲಿಕ್ಕೆ. ಎಲ್ಲ ವಯಕ್ತಿಕ ಸಮಸ್ಯೆಗಳು, ನಿಲುವುಗಳು, ಸಾರ್ವಜನಿಕವಾಗಿ ಏಕೆ ಇಷ್ಟು ಸಲೀಸಾಗಿ ಘೋಷಣೆಗಳಾಗುತ್ತಿವೆಯೋ, ಆ ಘೋಷಣೆಯಲ್ಲಿ ಅದರ ಅರಿವೇ ಇಲ್ಲದೇ ಹಿಂಬಾಲಕರು ಸುಲಭವಾಗಿ ಹೇಗೆ ಸೃಷ್ಠಿಯಾಗುತ್ತಿದೆಯೋ ಅರ್ಥವಾಗುತ್ತಿಲ್ಲ. ತಲೆಕೆಟ್ಟು ಲಾಗ್ ಔಟ್ ಮಾಡಿದೆನಷ್ಟೇ!

ಪರಿಚಯ

ಸಾರ್ ನಮಸ್ಥೆ!
ಯಾರು ಗುರ್ತಾಗಲಿಲ್ವಲ್ಲ?
ಸಾರ್ ನಾನು, ನಿಮ್ಮ ಫೇಸ್ಬುಕ್ ಲಿಸ್ಟಲ್ಲಿ ಇದ್ದೇನೆ, ನನ್ನ ಫೋಟೋಗೆ ನೀವು ಲೈಕ್ ಕೂಡಾ ಕೊಟ್ಟಿದ್ರಿ!
ಹೋ, ಹೌದಾ? ಗೊತ್ತಿಲ್ಲ ಇವರೇ. ಏನಾಗುತ್ತೆ ನೋಡಿ ನಾಲ್ಕು ಸಾವಿರ ಸ್ನೇಹಿತರು ಇದ್ದಾರೆ, ಹೇಗೆ ನೆನಪಿಟ್ಟುಕೊಳ್ತೀರಾ, ದಿನಕ್ಕೆ ಇಪ್ಪತ್ತು ಫ್ರೆಂಡ್ಸ್ ರಿಕ್ವೆಸ್ಟ್ ಬರುತ್ತೆ ಒಪ್ಪಿಕೊಳ್ಳುವ ಹಾಗಿಲ್ಲ ನಿರಾಕರಿಸುವ ಹಾಗಿಲ್ಲ, ಉಭಸಂಕಟ. ನಿಮ್ಮ ಹೆಸರು ಏನಂದ್ರೀ?
ಹೀಗೇ ಈಗಿನ ಪರಿಚಯಗಳು ಶುರುವಾಗುತ್ತೆ. ಜನ್ಮದಿನವೆಂದು ಗೊತ್ತಾಗುವುದು ಫೇಸ್ಬುಕ್ಕಿನಿಂದ. ಮದುವೆ ಆಮಂತ್ರಣ ಪತ್ರಿಕೆ ಬರುವುದು ಕೂಡ ಫೇಸ್ಬುಕ್ಕಿನಲ್ಲೇ. ಸ್ನೇಹಿತನೋರ್ವ ಫೋನು ಮಾಡಿದಾಗ ಮಗಾ ಮೈಸೂರಿನಲ್ಲಿದ್ದೇನೆ ಕೊಂಚ ಕೆಲಸದ ಮೇಲೆ ಎಂದರೆ ಮತ್ತೆ ಫೇಸ್ಬುಕ್ಕಿನಲ್ಲಿ ಉಪ್ಡೇಟ್ ಹಾಕಿಲ್ಲಾ? ಎಂದು ಪ್ರಶ್ನಿಸುತ್ತಾನೆ. ಏನೆಂದು ಉತ್ತರಿಸುವುದು ಗೊತ್ತಾಗುವುದಿಲ್ಲ ಈ ನಡುವೆ. ಇನ್ನೊಮ್ಮೆ, ಲೇ ಮದುವೆಗ್ಯಾಕೋ ಬರಲಿಲ್ಲ ಅಂದ್ರೆ, “ಇಂದು ಪ್ರಪ್ರಥಮ ಬಾರಿಗೆ ನನ್ನ ಮನದನ್ನೆಗೆ ಸಿಹಿ ಮುತ್ತೊಂದ ಕೊಟ್ಟೆ” ಎಂದು ಯಾರೋ ನಾಚಿಕೆಗೆಟ್ಟವನು ಹಾಕಿರುವುದನ್ನ ಅದಕ್ಕೆ ಬಂದಿರುವ ಕಮೆಂಟುಗಳನ್ನ ಅಸಂಬದ್ಧವಾಗಿ ವಿವರಿಸಿ ಹಿ ಹಿ ಹಿ ಎಂದು ನಕ್ಕು, ನಿನ್ನ ಹೆಂಡತಿಯ ಫೋಟೋ ಹಾಕೋ ಫೇಸ್ಬುಕ್ಕಿಗೆ ನೋಡ್ಕೋತೇನೆ ಅಂತಾನೆ!

ಅರ್ಥ

ಆತ ಒಂದು ಪೆಟ್ಟಿ ಅಂಗಡಿಯನ್ನಿಟ್ಟಿದ್ದಾನೆ. ಫೇಸ್ಬುಕ್ಕಿನಲ್ಲಿ ಹೀರೋ ಮಾದರಿಯಲ್ಲಿ ಫೋಟೋಶೂಟ್ ಮಾಡಿಸಿ ಹಾಕಿಕೊಂಡಿದ್ದಾನೆ. ಆತನಿಗೆ ಪರಮನೆಂಟ್ ಪ್ರೇಮಿಯೊಬ್ಬಳಿದ್ದಾಳೆ. ಪ್ರತಿನಿತ್ಯ ಈತನ ಹೋಟೆಲಿನಲ್ಲಿ ಇಡ್ಲಿ ಖರ್ಚಾಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಫೇಸ್ಬುಕ್ ಲಾಗಿನ್ ಆಗದ ದಿನ ಇರುವುದಿಲ್ಲ. ಈ ಫೇಸ್ಬುಕ್ ಈತನಿಗೆ “ಎಡ-ಬಲ ಮೇಯಲು” ಅವಕಾಶಗಳನ್ನು ಒದಗಿಸಲಿಕ್ಕಾಗಿ ಮಾಡಿಕೊಂಡಿರುವ ಒಂದು ಮಾಧ್ಯಮ. ಹೋದವಾರ ರೋಸಿ ಎಂಬುವವಳೊಂದಿಗೆ ಸ್ನೇಹಿತನಾದ ಮೂರೇ ದಿನಗಳಲ್ಲಿ ರೋಸ್ ಹಿಡಿದುಕೊಂಡು ರಿಚ್ಮಂಡ್ ವೃತ್ತದಲ್ಲಿ ನಿಂತಿದ್ದ ಮುಂಬಂದ ರವಿವಾರದಂದೇ ಸುಸಮಯ ನೋಡಿ ಅವಳ ಮನೆಗೆ ಹೋಗಿ ಪೂಜೆ ಮಾಡಿ ಬಂದ. ಅದಕ್ಕೂ ಮುಂಚೆ ಮಂಜುಳಾ, ವೀಣಾ, ಖುಷಿಯರೊಂದಿಗೆ ಸ್ನೇಹಿತನಾಗಿದ್ದನಂತೆ. ಈ ವಾರ ಸವಿತಾ ಎಂಬುವವಳೊಂದಿಗೆ ಸ್ನೇಹಿತನಾಗಿದ್ದಾನೆ, ಇವನ ಆರ್ ಎಕ್ಸ್ ಚಕ್ರದ ಬಳಿ ಕುಳಿತು ಸಿಗರೇಟು ಸೇದುತ್ತಾ ಹಿಡಿಸಿಕೊಂಡಿರುವ ಫೋಟೋಗೆ ಸೋ ಕ್ಯೂಟ್ ಎಂದು ಕಮೆಂಟ್ ಕೊಡುತ್ತಿದ್ದಾಳೆ!

ಅಂತ್ಯ

ಹೀಗೇ ಒಬ್ಬರು ಭಯಾನಕ ಹೆಸರು ಮಾಡಿದ ಮಹಾಶಯ ಹೃದಾಯಾಘಾತವಾಗಿ ತೀರಿಹೋದರು. ಕೊನೆಯ ದರ್ಶನಕ್ಕೆಂದು ಸೇರಿದ್ದವರು ಬೆರಳೆಣಿಕೆಯಷ್ಟು ಜನ. ಸಾಯುವ ಕೊನೆಯ ದಿನಗಳಲ್ಲಿ ತುಂಬಾ ಖಾಯಿಲೆಗಳಿಂದ ನರಳುತ್ತಿದ್ದರಂತೆ. ಓಡುವ ಕುದುರೆಯಾಗಿದ್ದಾಗ ಸುತ್ತ ಮುತ್ತ ಹೋದಲ್ಲೆಲ್ಲಾ ಜನರನ್ನೇ ಇಟ್ಟುಕೊಂಡಿದ್ದವರು ಕಾಲು ಸೋತ ನಂತರ ಯಾರೂ ಇಲ್ಲದೇ ಹೀಗೆ ಅಂತ್ಯಕ್ರಿಯೆ ಮಾಡಿಸಿಕೊಂಡು ಹೋದರಲ್ಲಾ ಎಂದು ನೊಂದುಕೊಂಡಿದ್ದೆ. ಈತ ಸಹ ಫೇಸ್ಬುಕ್ಕಿನಲ್ಲಿದ್ದ ಎಂದು ನೆನಪಾಗಿ, ಜೀವನ ಮುಕ್ತಾಯವಾಗಿ ಎಲ್ಲ ಖಾತೆ ಮುಚ್ಚಿಹೋದರೂ ಫೇಸ್ಬುಕ್ ಖಾತೆ ಮಾತ್ರ ತೆರೆದೇ ಇರುವುದಲ್ಲ ಎಂದು ಯೋಚಿಸಿ ಸುಮ್ಮನೆ ಹುಡುಕಿ ನೋಡಿದೆ ರಿಪ್ ರಿಪ್ ರಿಪ್, ತುಂಬಲಾರದ ನಷ್ಟ, we miss you ಎಂದು ಒಂದು ಸಾವಿರಕ್ಕೂ ಹೆಚ್ಚು ಸಂದೇಶಗಳು! ಅರೆರೆ!! ಇದೇನು ನಮ್ಮ ಜನಕ್ಕೆ ತೆವಲೋ, ಖಯಾಲಿಯೋ ಅರ್ಥವಾಗದೇ ತಲೆಕೆಡಿಸಿಕೊಂಡು ಆ ಮಹಾನುಭಾವನ ಹಳೆಯ ಫೋಟೋಗಳನ್ನು ನೋಡುತ್ತಿದ್ದೆ. ಅಷ್ಟರಲ್ಲಿ “ವಂದನೆಗಳು ಎಲ್ಲ ಗೆಳೆಯರು ಮತ್ತು ಆಪ್ತರಿಗೆ” ಎಂದು ಅವರ ಪ್ರೊಫೈಲಿನಿಂದಲೇ ಅಪ್ಡೇಟ್ ಬಂತು!






+ನೀ.ಮ. ಹೇಮಂತ್

3 comments:

  1. At last : "When you will update this article in Facebook ?? :P

    ReplyDelete
  2. ಹೇಮಂತಣ್ಣ ನೀವೇನೇ ಹೇಳಿ ನಿಮ್ಮ ತಲೆನ ಲೇಖನಿ ಅನ್ನೋ ಡ್ರಿಲ್ ಬಿಟ್ಟು ಸರಿಯಾಗಿ ಕೊರಿಯುತ್ತೆ .... ಅದೇನ್ ರೀ ಬರೀತಿರ ನಿಜಕ್ಕೂ ಮೆಚ್ಚಬೇಕು ನಿಮ್ಮ ಪರಿಣಿತಿಗೆ :)))))))))

    ReplyDelete