ಓದಿ ಓಡಿದವರು!

Sunday, 4 March 2012

ಟಿಕೇಟ್! ಮುಂದೆ!



ಮುನ್ನುಡಿ: ಹೆಂಗಂದರೆ ಹಂಗೆ ಬೆಳೆದುಕೊಂಡಿರುವ ನಮ್ಮ ದೇಹ ಒಂದು ಸರಿಯಾದ ರೂಪಕ್ಕೆ ಬರಲು, ಸಣ್ಣಗಾಗಲು, ಹಿಂಜಿಕೊಂಡಿರುವ ನಮ್ಮ ಮುಖಗಳು ಕೊಂಚವಾದರೂ ನಗೆಯಾಡಲು, ಹಲವು ದೇಶ, ವರ್ಣ, ಭಾಷೆ, ತತ್ವ, ವಿಚಾರ, ನಂಬಿಕೆಗಳ ಜನರನ್ನ ಬಿಟ್ಟಿಯಾಗಿ ಬೆರೆಯಲು, ಇನ್ನೊಬ್ಬರ ಮೊಬೈಲ್ ಮೆಸೇಜನ್ನು ಕದ್ದು ಮುಚ್ಚಿ ಓದಲು, ಹಾಸಿಗೆಇದ್ದಷ್ಟು ಮಾತ್ರ ಕಾಲು ಚಾಚು ಎಂಬ ಉದಾಹರಣೆಯನ್ನು ಕಣ್ಣಾರೆ ನೋಡಲು, ತಾಳ್ಮೆಯೆಂದರೇನೆಂದು ಕಲಿಯಲು, ಕಷ್ಟವೇನೆಂಬುದನ್ನು ಅರಿಯಲು, ಒಂದು ದೇಶದ ನಿಜಸ್ಥಿತಿಯನ್ನು ಅರಿಯಲು, ನಿಜವಾದ ವೈಚಾರಿಕ ಬುದ್ದಿ ಜೀವಿಗಳನ್ನು, ಸಂಧಿಸಲು, ಉಚಿತ ಮನೋರಂಜನೆಗಳನ್ನು ಪಡೆಯಲು, ನೆಲದ ಮೇಲೆ ಕಾಲಿರಿಸದೇ ತೇಲುವುದರ ಅನುಭವ ಪಡಿಯಲು, ಮೈಮರೆತರೆ ಆಗಬಹುದಾದ ಅಚಾತುರ್ಯದ ಸವಿಯನ್ನು ಸವಿಯಲು, ಕರಪ್ಷನ್ ನ ಮೂಲ ತಿಳಿಯಲು, ಸೆಕೆಂಡ್ ಹಾಂಡ್ ಟಿಕೇಟ್, ಪಾಸ್ ಗಳ ವ್ಯಾಪಾರವನ್ನು ಅರಿಯಲು, ಕಲಾತ್ಮಕತೆಯ ನಿಜಸ್ವರೂಪವನ್ನು ಚಿತ್ರಿಸಿಕೊಳ್ಳಲು ಬನ್ನಿ ಬಸ್ಸು ಹತ್ತಿ. ಮುಂದೆ!

ಟಿಕೇಟ್…. ಟಿಕೇಟ್ ತೊಗೊಳ್ರೀ… ರೀ ಚೆನ್ನಾಗಿ ಆರೋಗ್ಯವಾಗಿರೋರಿಗೆಲ್ಲಾ “ಟಿಕೇಟ್” ತೊಗೊಳಿ ಅಂತೀರಲ್ರೀ ಬಸ್ ಕಂಡಕ್ಟರ್ ರಿಗೆ ನಮ್ಮ ಕೋಣನಕುಂಟೆ ಕಡೆಯ ಬಸ್ ಪಾಸಿದ್ದ ಕಾಲೇಜು ಹುಡುಗರು ಕೊಟ್ಟ ಉತ್ತರವಾಗಿತ್ತು ಅದು. ಬಸ್ಸು ಕೂಡ ಒಮ್ಮೆ ಕಿಸಕ್ಕೆಂದು ನಗೆಯಾಡಿತ್ತು. ನಾನು ಎಲಚೇನಹಳ್ಳಿಯೆಂಬ ಬೆಂಗಳೂರು ನಗರದ ಭಾಗವೊಂದರಲ್ಲಿ ಬಸ್ ಹತ್ತಿ, ಅಷ್ಟು ಕಾಲಿಡಲೂ ಜಾಗವಿಲ್ಲದ ಬಸ್ಸಿನಲ್ಲಿಯೂ ಸೀಟೆಂಬ ಸೀಟನ್ನು ಗಿಟ್ಟಿಸುವಲ್ಲಿ ವಿಜಯಿಯಾಗಿದ್ದೆ. ಸೀಟ್ ಗೆದ್ದಿದ್ದಕ್ಕೆ ಪ್ರಶಸ್ತಿಯೆಂಬಂತೆ ನಿದ್ರೆ ಬಂದಿತ್ತು. ಒಂದು ರಾತ್ರಿ ಪೂರಾ ನಿದ್ರಿಸಿದವನಂತೆ ಎಚ್ಚೆತ್ತು ಎಲ್ಲಿದ್ದೀನಿ ಎಂದು ಕಣ್ಣುಜ್ಜಿಕೊಂಡು ಸುತ್ತಾ ನೋಡಿದರೆ ಸಾರಕ್ಕಿ ಸಿಗ್ನಲ್ ನಲ್ಲಿ ಇನ್ನೂ ಬಸ್ಸು ನಿದ್ರಿಸುತ್ತಲಿತ್ತು. ಇನ್ನೂ ಒಂದೇ ಸ್ಟಾಪ್ ಮುಂದುವರೆದಿರುವುದು!, ಏನ್ ಭಾರೀ ನಿದ್ರೆ ಮಾಡಿಲ್ಲ ಹಾಗಾದರೆ ಎಂದು ಕೈಗಡಿಯಾರ ನೋಡಿಕೊಂಡರೆ ನಾನು ಬಸ್ ಹತ್ತಿದ್ದು ೮.೩೦ ಈಗ ೯ ಘಂಟೆಯಾಗಿತ್ತು. ಅರ್ಧ ಘಂಟೆಯಾದರೂ ಇನ್ನೂ ಒಂದೇ ಸ್ಟಾಪ್ ಹೋಗಿದ್ದು. ಕನಕಪುರ ರೋಡನಲ್ಲಿ ಸಾಗುವವರಿಗೆ ಇದೇನು ಹೊಸ ತಲೆನೋವಲ್ಲ. ಹಾಗಾಗಿ ಯಾರೂ ತಲೆಕೆಡಿಸಿಕೊಳ್ಳದೇ ಬೆವರು ಸುರಿಸುತ್ತಾ, ಬಾಂಬು ಸಿಡಿಸುತ್ತಾ, ಮೂಗು ಮುಚ್ಚಿಕೊಳ್ಳುತ್ತಾ, ಮೈ ತುರುಸಿಕೊಳ್ಳುತ್ತಾ, ಕಂಬಿಗಳಿಗೆ, ಅಕ್ಕಪಕ್ಕದಲ್ಲಿದ್ದವರಿಗೆ ಒರಗಿಕೊಂಡು ಬಸ್ಸಿನಲ್ಲಿ ನೇತುಹಾಕಿಕೊಂಡಿದ್ದರು. ಕಂಡಕ್ಟರ್ ಒಬ್ಬ ಮಾತ್ರ ಅಂಡು ಸುಟ್ಟ ಬೆಕ್ಕಿನಂತೆ ಎಲ್ಲ ತರಹದ ವಾಸನೆಗಳನ್ನು ಅಲಕ್ಷಿಸಿ, ಹಿಂದಕ್ಕೂ ಮುಂದಕ್ಕೂ ಗಂಡಸರ ಕಾಲ್ತುಳಿದುಕೊಂಡು, ಹೆಂಗಸರ ಮೈಸವರಿಕೊಂಡು ಓಡಾಡುತ್ತಲೇ ಇದ್ದ. ಸಿಗ್ನಲ್ ಬಿಡಲೊಲ್ಲದು, ಗಾಡಿಗಳು ಮುಂದೋಗಲೊಲ್ಲದು, ಡ್ರೈವರಣ್ಣನಿಗೆ ಕೆಲಸವಿಲ್ಲದೆ ಹಾಗೇ ಹಿಂದೆ ನಿಂತಿದ್ದವರನ್ನು ನೋಡಿಕೊಂಡು ಬೆವರೊರೆಸಿಕೊಳ್ಳುತ್ತಿದ್ದ ಸಮಯದಲ್ಲಿ ಸಾರಕ್ಕಿ ಸಿಗ್ನಲ್ ಇನ್ನೇನು ಹಸಿರು ನಿಶಾನೆ ತೋರುವಷ್ಟರಲ್ಲಿ ಒಬ್ಬ ವಯಸ್ಕ ತಂಬಾಕಿನ ಗೂಡು ಬಸ್ ಹತ್ತಿಕೊಂಡಿತು. ನೀರನ್ನೇ ತೋರಿಸಿರದ ಮೂಳೆ ಮಾಂಸದ ತಡಿಕೆ, ಕುಪ್ಪಸ, ಸೀರೆಯೆಂದು ಹೆಸರಿಸಬಹುದಾದ ರಂಗು ರಂಗಿನ ಒಂದು ಮೊಳ ಕಡಿಮೆಯಿದ್ದ ಸೀರೆ, ರೆಡ್ ಲೈಟ್ ಇಲ್ಲದ ಖಾಲಿ ಹಣೆ. ತಂಬಾಕಿಗಾಗಿಯೇ ಇರುವ, ತಂಬಾಕಿನಿಂದ ಅಲಂಕರಿಸಿರುವ ಬಾಯೆಂಬೋ ಬಾಯಿ. ರಾಜ ಅಥವಾ ರಾಣಿ ಗಾಂಭೀರ್ಯದಲ್ಲಿ ಬಸ್ಸಿನ ಮುಂಭಾಗಿಲಲ್ಲಿ ಒಳಪ್ರವೇಶಿಸಿದರೆ ಸುತ್ತ ನಿಂತಿದ್ದ ಸೆಂಟ್ ಮುದ್ದೆಗಳು ಮುಖ ಸಿಂಡರಿಸಿಕೊಂಡು ತಂಬಾಕು ಗೂಡಿಗೆ ಗೌರವಸೂಚಕವಾಗಿ ಸರಿದು ರಾಜಮಾರ್ಗ ಮಾಡಿಕೊಟ್ಟರು. ಸಿಗ್ನಲ್ ನಿಂದ ಬಸ್ ತೆವಳಿ ಮುಂದಕ್ಕೆ ಹೋಗುವಷ್ಟರಲ್ಲಿ ಮೂರನೇ ಸಾಲಿನ ಆಸನದ ಬಳಿ ಕಂಬಿ ಹಿಡಿದು, ಸೆರಗೆಳೆದುಕೊಂಡು ಪ್ರತಿಷ್ಟಾಪಿತಳಾದಳು. ಮುಂದೊದಗಲಿತ್ತು ಮಜಬೂತಾದ ಮನರಂಜನೆಯೆಂದು ಮನುಷ್ಯಮಾತ್ರರಿಗೆ ಹೇಗೆ ಗೊತ್ತಾಗಬೇಕಿತ್ತು! ಮುಂದೆ!

ಸಾರಕ್ಕಿ ಬಸ್ ನಿಲ್ದಾಣದಲ್ಲಿ ಒಂದಷ್ಟು ಗಂಡಸರು ಹತ್ತಿದ ಕಾರಣ ಹಿಂದಿದ್ದ ಕಂಡಕ್ಟರ್ ಎಲ್ಲರಿಗೂ ಟಿಕೆಟ್ ಕೊಟ್ಟು, ಚಿಲ್ಲರೆ ಕೊಟ್ಟು, ಮುಂದೆ ಹೋಗುವಷ್ಟರಲ್ಲಿ ಬನಶಂಕರಿ ಸ್ಟೇಜ್ ತಂಗುದಾಣ, ಹಾಗಾಗಿ ಎಲ್ಲಾ ಲೆಕ್ಕ ಬರೆದಿಟ್ಟು ಬನಶಂಕರಿಯಲ್ಲಿ ತಮ್ಮ ಬಸ್ ಅನ್ನು ಮಾರ್ಕೆಟಿಂಗ್ ಮಾಡಿಕೊಳ್ಳುತ್ತಾ, ಶಿವಾಜಿನಗರ್ ಶಿವಾಜಿನಗರ್ ಎಂದು ಬಾಗಿಲ ಬಳಿ ನಿಂತು ಕೂಗಿಕೊಳ್ಳುತ್ತಿದ್ದರೂ, ಡಬ್ಬಲ್ ರೋಡ್ ಹೋಗುತ್ತಾ, ರಿಚ್ಮಂಡ್ ಸರ್ಕಲ್ ಹೋಗುತ್ತಾ, ಶಿವಾಜಿನಗರ್ ಹೋಗುತ್ತಾ ಎಂದು ಕೇಳುತ್ತಿದ್ದ ಬುದ್ದಿಜೀವಿಗಳಿಗೆ ತಾಳ್ಮೆಯಿಂದ ಉತ್ತರಿಸಿ, ಬಸ್ ಭರ್ತಿಯಾದ ನಂತರ ರೈಟ್ ಹೇಳಿ ಮುಂದಿನ ಸಾಲುಗಳ ಕಡೆಗೆ ಮೂಗಿಟ್ಟಾಗಲೇ ಎಮ್ ಜಿ ರೋಡು, ರಿಚ್ಮಂಡ್ ಸರ್ಕಲ್ ಗಳ ವಾಸನೆಯ ನಡುವೆ ಇದಾವುದೋ ಅಪರಿಚಿತ ಕೆಂಗೇರಿ ವಾಸನೆ ಬಡಿಯುತ್ತಿರುವುದಲ್ಲಾ ಎಂದು ಅಲ್ಲೇ ಅನುಮಾನಿಸಿ, ಅದರ ಮೂಲ ಎಲ್ಲಿದೆ ಎಂದು ಥಟ್ಟನೆ ಪತ್ತೆ ಹಚ್ಚಿ, ಎಲ್ಲರನ್ನೂ ಟಿಕೇಟ್ “ತೊಗೊಳ್ಳಿ” ಎಂಬುದರ ಬದಲು ಈಗ ಟಿಕೇಟ್ ಬೇಕಾ ಎಂದು ಕೇಳುತ್ತಾ ತಂಬಾಕಿನ ಮೂಟೆಯನ್ನು ಟಿಕೇಟ್ ಬೇಕೇನಮ್ಮಾ ಎಂದು ಕೇಳಲು, ಬೇಡ ಎಂದು ಹೇಳಿ ಸಿಕ್ಕಿದ್ದ ಸೀಟಿನಲ್ಲಿ ಕಿಟಕಿಯ ಕಡೆ ನೋಡುತ್ತಾ ಕುಳಿತಿತು ಆ ಆಕೃತಿ. ಹೋ ಪಾಸ್ ಇರಬಹುದು ಎಂದು ಹಿಂದಿದ್ದ ಒಂದು ರಾಶಿ ಓರಿಗಳಲ್ಲಿ ಕೆಲವರಿಗೆ ಟಿಕೇಟ್ ಕೊಟ್ಟು ಕೆಲವರಿಗೆ ಅರ್ಧ ರೇಟಿಗೆ ಚಿಲ್ಲರೆಯನ್ನು ಮಾತ್ರ ಕೊಟ್ಟು ಮತ್ತೆ ಮುಂದೆ ಹೋಗುತ್ತಿದ್ದ ಕಂಡಕ್ಟರಿಗೆ ಎಮ್ ಜಿ ರೋಡಿನ ಸೆಂಟೊಂದು ಸಾರ್ ಆ ಯಮ್ಮ ಟಿಕೇಟ್ ತೊಗೊಂಡಿಲ್ಲ ನೋಡಿ ಎಂದು ಪಿನ್ ಚುಚ್ಚಿದಳು. ಕಂಡಕ್ಟರ್ ಆಗ ಹುಶಾರಾಗಿ, ಮೋ.. ಟಿಕೇಟ್ ಬೇಕೇನಮ್ಮ ಎಂದು ಮತ್ತೆ ಕೇಳಲು, ಬೇಡಪ್ಪೊ ಎಂದು ಮತ್ತೆ ಕಿಟಕಿಗೆ ಮುಖ ಅಂಟಿಸಿದಳು. ಪಾಸ್ ಇದ್ಯಾ?.. ಇಲ್ಲಾ!… ಮತ್ತೆ ಟಿಕೇಟ್ ಬೇಡಾ ಅಂತೀಯಾ, ಟಿಕೇಟ್ ತೊಗೋ!… ನಂಗ್ಬ್ಯಾಡಾ!... ಅರೆರೆ ಇದಾವುದಪ್ಪಾ ಕಿರೀಕು ಇವತ್ತು ಎಂದು ಏನು ಉತ್ತರಿಸುವುದೆಂದು ಕಂಡಕ್ಟರ್ ಒಂದು ಕ್ಷಣ ಯೋಚಿಸುವಷ್ಟರಲ್ಲಿ ಎಲ್ಲಾ ನಾರಿ ಮಣಿಗಳು, ಮಲ್ಲಿಕಾ ಶೆರಾವತ್ ಕೂತಿದ್ದರೆ ಯಾವ ಮುಖಭಾವದಲ್ಲಿ ನೋಡಬಹುದೋ ಥೇಟ್ ಅದೇ ಮುಖಮುದ್ರೆಯಲ್ಲಿ ಅವಳನ್ನು ದಿಟ್ಟಿಸುತ್ತಿದ್ದರು. ಇತ್ತ ಇನ್ನೂ ತಮ್ಮದೇ ಲೋಕದಲ್ಲಿ ತಲ್ಲೀನರಾಗಿದ್ದ ಗಂಡಸರು ತಮ್ಮ ಪ್ರಪಂಚದಲ್ಲಿ ಮುಳುಗಿದ್ದರು. ಮೋ ಯಾಕೆ, ಎನ್ ನಿಮ್ಮಪ್ಪಂದ ಬಸ್ಸು, ಪ್ರಯಾಣ ಮಾಡ್ಬೇಕಂದ್ರೆ ಟಿಕೇಟ್ ತೊಗೊಬೇಕು, ಸುಮ್ಮನೆ ಎಲ್ಲಿಗೆ ಅಂತ ಹೇಳು ಎಂದು ಕೊಂಚ ಬಿರುಸಿನ ಧ್ವನಿಯಲ್ಲಿ ಕಂಡಕ್ಟರ್, ಸಿವ್ವಜ್ಜಿನಗರ ಎಂದಳು ಆಕೆ. ತೊಗೊ ಎಂದು ಹನ್ನೆರಡರ ಟಿಕೇಟು ಹರಿದು ಕೊಟ್ಟರೆ ಇಸಿದುಕೊಂಡು ಸುಮ್ಮನಾದಳು. ಮೋ… ಯಾಕೆಂಗಿದೆ ಮೈಗೆ ದುಡ್ಡು ಕೊಡು ಎಂದರೆ, ದುಡ್ಯಾಕೆ ಎಂದಳು… ಹೋ ನೀನ್ಯಾಕೋ ಇವತ್ತು ಮನೆಗೆ ಹೋಗಲ್ಲ ಅಂತ ಹೇಳಿ ಬಂದಿದ್ಯ ಅಂತ ಕಾಣುತ್ತೆ, ಮುಚ್ಕೊಂಡ್ ಟಿಕೇಟ್ ತೊಗೊಂಡಿರೋ ದುಡ್ಡು ಕೊಡು ೧೨ ರುಪಾಯಿ ಎಂದು ಗರಂ ಆಗಿ ಕೇಳಿದರೂ ಮತಿಲ್ಲ. ಇತ್ತ ಕಂಡಕ್ಟರಿಗೆ ಪಿತ್ತ ನೆತ್ತಿಗೇರುತ್ತಿದ್ದರೆ, ಅತ್ತ ಇಲ್ಲಿ ಏನೋ ವಿಷಯ ನಡೆಯುತ್ತಿದೆ ಎಂದು ಹಿಂದೆ ನಿಂತಿದ್ದವರಿಗೂ ವಿಷಯ ತಲುಪಿ ಎಲ್ಲಾ ತಮ್ಮ ತಮ್ಮ ಪ್ರಪಂಚದಿಂದ ಹೊರಬಿದ್ದು, ಏನು, ಏನು ಎಂದು ಕೇಳುತ್ತಾ, ಬಸ್ ಎಂಬ ಸಾಗುವ ಪ್ರಪಂಚದಲ್ಲಿ, ಕುಳಿತಿದ್ದವರು ಕೂಡ ನಿಂತು ಮಿಕಿ ಮಿಕಿ ನೋಡುತ್ತಿದ್ದರು. ಮುಂದೆ!

ಮೋ.. ಯಾಕೋ ನಿಂದು ಜಾಸ್ತಿ ಆಯ್ತು ಎದ್ದೇಳು ಮೇಲೆ, ಏನ್ ಆಟ ಆಡ್ತಿದ್ಯ ಇಲ್ಲಿ ನಮ್ ಜೊತೆ, ದುಡ್ಡು ಕೊಡು ಇಲ್ಲ ಟಿಕೇಟ್ ವಾಪಾಸ್ ಕೊಟ್ಟು ಇಳ್ಕೋ ಎಂದು ಅಬ್ಬರಿಸಿದ ಕಂಡಕ್ಟರ್ ಗೆ ಕೇರ್ ಮಾಡದೆ ಹೇಳಿದ್ದು ತನಗಲ್ಲವೆಂಬಂತೆ ಕಿಟಕಿಗೆ ಮುಖ ಅಂಟಿಸಿದ್ದಳು. ಅಷ್ಟೊತ್ತೂ ಸುಮ್ಮನಿದ್ದ ನಾರಿಮಣಿಗಳು ಅದೇನಮ್ಮಾ ನಿಂಗೆ ತಾನೆ ಹೇಳ್ತಿರೋದು, ಟಿಕೇಟ್ ತೊಗೊಳ್ಳೋಕೆ ಏನ್ ಪ್ರೋಬ್ಲಮ್ ನಿನಗೆ, ಸುಮ್ಮನೆ ತೊಗೊಳ್ರೀ, ಏನ್ ಇಲ್ಲಿ ಎಲ್ಲಾ ಅರಚ್ಕೊಳ್ತಿದ್ರೂ ಕೂತಿರೋದ್ ನೋಡು, ಯಾಕಮ್ಮಾ ಬಾಯಿ ಮಾತಿಗೆ ಬಗ್ಗಲ್ವ ಸುಮ್ಮನೆ ಟಿಕೇಟ್ ತೊಗೊ ಎಂದು ಮಹಿಳೆಯ ವಿರುದ್ಧವೇ ಮಹಿಳಾಂದೋಲನ ಶುರುಮಾಡಿದರು. ಕಂಡಕ್ಟರೂ ಸೇರಿಕೊಂಡು ಮೋ ಎದ್ದೇಳಮ್ಮ ಮೇಲೆ ಮಾನ ಮರ್ಯಾದೆಯಿಂದ ಹೇಳಿದ್ರೆ ಎಲ್ಲಿ ಅರ್ಥ ಆಗುತ್ತೆ ನಿಮಗೆ ಎಂದು ಕುಸ್ತಿಗೆ ಇಳಿಯುವವನಂತೆ ಹೇಳಲು. ಹಯ್ಯಾ ತಗಳಯ್ಯಾ ಎಂದು ಹೊಗೆಸೊಪ್ಪಿನ ಚೀಲದಿಂದ ಹೆಕ್ಕಿ, ಹೆಕ್ಕಿ ಎರಡು ೨ ರೂಪಾಯಿಯ, ಒಂದು ೧ ರುಪಾಯಿಯ ಚಿಲ್ಲರೆ ತೆಗೆದು ತೊಗೊ ಎಂದು ಕೈ ಒಡ್ಡಿದಳು. ತೆಗೆದು ಬಾರಿಸಿಬಿಡ್ತೀನಿ, ಏನ್ ಬೆಳಗ್ಗೆ ಬೆಳಗ್ಗೆ ಪ್ಯಾಕೆಟ್ ಹಾಕೊಂಬಂದಿದ್ಯ ಎಂದು ಕಂಡಕ್ಟರ್ ಘರ್ಜಿಸುತ್ತಿರಲು, ಏನು ತೆಗೆದು ಬಾರಿಸ್ತಾನೋ ಎಂದು ನನ್ನ ಹಿಂದಿದ್ದ ಕೋಣನಕುಂಟೆ ಹುಡುಗರು, ಪ್ಯಾಕೆಟ್ಟೇ ಹಾಕಿದಾಳೆ ಅಂತ ಅಷ್ಟು ಖಚಿತವಾಗಿ ಹೇಗೆ ನಿರ್ಧರಿಸಿದ ಎಂದು ನನ್ನ ತಲೆ ಹೇಳುತ್ತಿರುವಾಗಲೇ. ಮುಂದೇನು ಎಂದು ಎಲ್ಲಾ ಬಾಯಿ ಕಳೆದಿದ್ದರು. ಇರಾದೇ ಇಷ್ಟು, ಬೇಕಾ ತಕಾ, ಇಲ್ಲ ಓಗು ಎಂದಳು ಖದರ್ರಾಗಿ. ಆಗ ಇಡೀ ಬಸ್ಸಿನಲ್ಲಿದ್ದ ಬುದ್ದಿಜೀವಿಗಳು ತಮ್ಮ ಆಸನಗಳನ್ನೂ ಮರೆತು ಹೋಗಿ ಮೋ ಏನ್ ಆಗ್ಲಿಂದ ನೋಡ್ತಾ ಇದ್ದೀವಿ ಸುಮ್ಮನೆ ಟಿಕೇಟ್ ತೊಗೊಳ್ಳೋಕ್ ಆಗಲ್ವ ನಿಂಗೆ, ತೊಗೊ ಇಲ್ಲಾ ಇಳಿದುಹೋಗು ಸುಮ್ಮನೆ ಎಲ್ರಿಗೂ ತೊಂದರೆ ಕೊಡ್ಬೇಡಾ ಇಲ್ಲಿ, ಕಂಡಕ್ಟರಿಗೆ ಬೇರೆ ಕೆಲಸ ಇಲ್ಲ ಅನ್ಕೊಂಡ್ಯಾ, ಇಂಥಿವೇ ಮೊದಲಾದ ಪಂಚ್ ಡೈಲಾಗ್ ಗಳನ್ನು ಸ್ವಯಂಪ್ರೇರಿತರಾಗಿ ಹೇಳಿ ಮುಂದೇನು ಮಾಡುವಳೆಂದು ಕಾದುನೋಡುತ್ತಿರಲು. ಯಾರ ಮಾತಿಗೂ ಸೊಪ್ಪು ಹಾಕದೆ, ತನ್ನ ಪಾಡಿಗೆ ತಾನು ಹೊಗೆ ಸೊಪ್ಪು ತುಪ್ಪುಕ್ಕನೆ ಕಿಟಕಿಯಿಂದ ಹೊರಗುಗುಳಿತು ಅದು. ಅದು ನೇರವಾಗಿ ಕಂಡಕ್ಟರ್ ಮುಖದ ಮೇಲೇ ಉಗಿದಂತಾಗಿ, ಲಂಕೆಯನ್ನು ಸುಟ್ಟಾಗ ಆಗಿದ್ದ ರಾವಣಾಸುರನಂತೆ ಕುದಿಯುತ್ತಾ, ಜನರೊಂದಿಗೆ ಸೇರಿ, ಎಲ್ಲರೂ ಬೊಗಳುವ ಸದ್ದಿನಲ್ಲಿ ಏನೋ ಒಂದು ಪಂಚ್ ಡೈಲಾಗ್ ತಾನೂ ಹೇಳಿದ್ದು ನನಗೂ ಕೇಳಿಸಲಿಲ್ಲ ದಯವಿಟ್ಟು ಕ್ಷಮಿಸಿ. ಏನು ಒಗ್ಗಟ್ಟು ಏನು ಕಥೆ ನಮ್ಮ ಜನರಲ್ಲಿ, ಆ ದೃಶ್ಯವನ್ನು ನೋಡುತ್ತಲಿದ್ದ ನನ್ನ ಕಣ್ಣುಗಳೇ ಧನ್ಯ. ಆಗ ನನಗೆ ಅನಿಸಿದ ಒಂದೇ ಸಂಗತಿಯೆಂದರೆ ನಮ್ಮ ದೇಶದ ಎಷ್ಟೋ ಕ್ಷುದ್ರ ಸಮಸ್ಯೆಗಳಿಗೆ ಪರಿಹಾರವೆಂದರೆ ಒಂದು ದೊಡ್ಡ ಸಮಸ್ಯೆ ಬಂದೆರಗಬೇಕು ಆಗ, ಎಲ್ಲಾ ತೊಂದರೆಗಳು, ವೈಶಮ್ಯಗಳನ್ನು ಮರೆತು ನಾವು ಸಾಮ್ಯ ಮೆರೆಯುತ್ತೇವೇನೋ ಎಂದು ಬಿ ಎಮ್ ಟಿ ಸಿ ಬಸ್ಸಿನಡಿಯಲ್ಲಿ, ಆ ತಂಬಾಕು ಗೂಡಿನ ಪ್ರಸಂಗದಿಂದ ನನಗೆ ಜ್ಞಾನೋದಯವಾಯ್ತು. ಮನಸಿನಲ್ಲೇ ವಂದಿಸಿದೆ ಆ ಮಹಾ ತಾಯಿಗೆ. ಮುಂದೇನು!

ಎಲ್ಲಾ ಬೊಗಳುವ ನಾಯಿಗಳೇ ಇದೆ ಎಂದು ತಿಳಿದಿದ್ದ ನಾನು, ಬಸ್ ಡ್ರೈವರ್, ಮತ್ತು ಎಲ್ಲಾ ಪ್ರಯಾಣಿಕರ ಒಮ್ಮತದ ಬೆಂಬಲದಿಂದಾಗಿ ಹುರುಪಿನಲ್ಲಿದ್ದ ಕಂಡಕ್ಟರ್ ಸೀದಾ ಆಕೆಯ ರಟ್ಟೆಯನ್ನು ಹಿಡಿದೆಳೆಯುತ್ತಾ, ನೆಡಿ ಆಚೆಗೆ ಎಂದು ಗುಡುಗಿದ. ಆ ದೇಹವೆಂಬ ಗೂಡು ಅಲುಗಾಡಲಿಲ್ಲ, ಕೊಸರಿಕೊಂಡು ಕೂತೇ ಇತ್ತು. ಅಷ್ಟರಲ್ಲಿ ತಾವುಗಳು ನಾರಿ ಮಣಿಗಳು, ತಪ್ಪು ಏನೇ ಇರಲಿ ಇನ್ನೊಂದು ನಾರಿ ಮಣಿಗೆ ಬೆಂಬಲಿಸಬೇಕೆಂದು ಅದಾವುದೋ ಒಂದು ಮುಂದಿದ್ದ ಜೀವಕ್ಕೆ ಅನ್ನಿಸಿರಬಹುದು. ಹೋಗಲಿ ಬಿಡಿ ಸಾರ್ ಟಿಕೇಟ್ ಗೆ ನಾನೇ ದುಡ್ಡು ಕೊಡುತ್ತೀನಿ. ಬಿಡಿ ಕಿವುಡರ ಹತ್ತಿರ ಬಡ್ಕೊಂಡ್ರೆ ಏನ್ ಲಾಭ ಎಂದು ಹೀರೋಯಿನ್ ಆಗಲೆಂದು ನೋಡಿದರೆ ಕಂಡಕ್ಟರ್ ಗೆ ಆ ಗೂಡು ಮಾಡಿರುವ ಅವಮಾನ ತಡೆಯಲಾಗದೆ, ನೀವ್ ಯಾಕ್ ಮೇಡಮ್ ಕೊಡ್ತೀರಾ, ಕೊಡಲಿ ಅವಳೇ, ಇಂಥವರಿಗೆ ಅಯ್ಯೋ ಪಾಪ ಅಂದ್ರೆ ದಿನಕ್ಕೊಬ್ರು ಇಂಥವರು ಹುಟ್ಕೋತಾರೆ ಎಂದು ಹೇಳಿ ಅಣ್ಣಾ ಗಾಡಿ ಸೈಡ್ ಹಾಕು, ಒಂದೋ ಇವಳು ದುಡ್ಡು ಕೊಡಲಿ, ಇಲ್ಲಾ ಎದ್ದೋಗಲಿ ಎಂದು ಗಾಡಿ ಸೈಡ್ ಹಾಕಿಸಿ ಕೂಗಾಡಿ, ಎಲ್ಲರೂ ಸೇರಿ ಬಯ್ದು, ಈಗ ಕಂಡಕ್ಟರ್, ಡ್ರೈವರ್ ಮೇಲೆಯೇ ರೀ, ನಿಮ್ ಸಮಸ್ಯೆಗೆ ನಮ್ಮನ್ನ ಯಾಕ್ರೀ ಬಲಿಪಶು ಮಾಡ್ತಿದೀರಾ. ಮೊದಲೇ ಆಫೀಸಿಗೆ ಲೇಟ್ ಆಗಿದೆ ಹೊರಡ್ತೀರೋ ಇಲ್ವೋ ಈಗ ಎಂದು ತಿರುಗಿ ಬಿದ್ದಿದ್ದನ್ನು ಕಂಡು, ವಿಧಿಯಿಲ್ಲದೇ, ಪಾಸ್ ಇದ್ದ ಮಂದಿ ಇನ್ನೊಂದು ಬಸ್ ಹಿಡಿದು ಹೋದ ನಂತರ, ಬಸ್ ಮತ್ತೆ ಹೊರಡಿತು. ಗುಡುಗು, ಸಿಡಿಲು, ಮಳೆ ಏನೇ ಬರಲಿ ತಾನು ಶಿವಾಜಿನಗರದಲ್ಲೇ ಇಳಿಯುವುದೆಂದು ಸೀಟಿಗೆ ಬೇರುಬಿಟ್ಟಿತ್ತು ಗೂಡು. ಕಮರ್ಷಿಯಲ್ ಬ್ರೇಕ್ ನಂತರ ಪ್ರಯಾಣವೆಂಬ ಎಪಿಸೋಡ್ ಮತ್ತೆ ಶುರುವಾಯ್ತು. ಮುಂದೆ!

ಇವಳ ಮೇಲೆ ಸೇಡು ತೀರಿಸಿಕೊಳ್ಳಲೇ ಬೇಕು ಎಂದು ತೀರ್ಮಾನಿಸಿ ಕಂಡಕ್ಟರ್ ಡ್ರೈವರ್ ದಾರಿಯುದ್ದಕ್ಕೂ ಬಯ್ಯುತ್ತಲೇ, ಬರಲಿ ಚೆಕಿಂಗ್ ಗೆ ಯಾರಾದರೂ ಹಿಡಿದು ಕೊಡಲಿಲ್ಲ ಅಂದ್ರೆ ಕೇಳು ಎಂದು ಬೆದರಿಕೆ ಹಾಕಿದರೂ ಕ್ಯಾರೇ ಕುತ್ತೇ ಅನ್ನದೇ ಕೂತಿತ್ತು. ಅದೆಂಗ್ ಹೋಗ್ತೀಯಾ ನೋಡ್ಕೋತೀನಿ ನೀನು ದುಡ್ಡು ಕೊಡದೇ ಎಂದು ಗುಟುರು ಹಾಕಿದರೂ, ಊಹು.. ಹೀಗೇ ಶಿವಾಜಿನಗರ ತಲುಪುವಷ್ಟರಲ್ಲಿ ಕಂಡಕ್ಟರ್, ಡ್ರೈವರ್ ಸೋದರ ಮಾವಂದಿರನ್ನು ಫೋನ್ ಮಾಡಿ ಶಿವಾಜಿನಗರದ ಬಸ್ ಸ್ಟಾಂಡಿನಲ್ಲಿ ಕಲೆ ಹಾಕಿ ಅಂತೂ ನಾವು ಬೆಂಬಲ ನೀಡ್ತೀವಿ ಎಂದು ಹೇಳಿದ್ದ ಹಲವರಲ್ಲಿ ಕೆಲವರನ್ನು ಮಾತ್ರ ಸಾಕ್ಷಿಗೆ ಉಳಿಸಿಕೊಂಡು, ಆಗ ತನ್ನ ಉಡದಂತಹ ಸೀಟ್ ಹಿಡಿತವನ್ನು ಬಿಟ್ಟು ತನ್ನ ಇಚ್ಚೆಯಿಂದಲೇ ಇಳಿದುಬಂದು ಪ್ರಶ್ನೋತ್ತರ ಸುತ್ತಿಗೆ ಸಜ್ಜಾದಳು. ಅಂದ ಹಾಗೆ ನಾನು ರಿಚ್ಮಂಡ್ ಸರ್ಕಲ್ ನಲ್ಲಿ ಇಳಿಯಬೇಕಿತ್ತು. ಕಥೆಯನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದರೆ ನಾನು ಬದುಕುಳಿಯುತ್ತಿರಲಿಲ್ಲ ಹಾಗಾಗಿ ಇನ್ನೂ ಶಿವಾಜಿನಗರದಲ್ಲಿನ ನಾಟಕವನ್ನ ಕಣ್ತುಂಬಿಸಿಕೊಳ್ಳುತ್ತಿದ್ದೆ. ಹಾಗೆ ಮಾಡ್ತೀನಿ ಹೀಗೆ ಮಾಡ್ತೀನಿ ಎಂದು ಅರಚುತ್ತಿದ್ದವರೆಲ್ಲರೂ ಕ್ರಮೇಣ ಮಾಯವಾದರು. ಕಂಡಕ್ಟರ್, ಡ್ರೈವರ್, ಚೆಕಿಂಗ್ ಇನ್ಸ್ಪೆಕ್ಟರ್ಗಳೀರ್ವರು, ಮತ್ತು ದೂರದಲ್ಲಿ ದಾರಿಹೋಕನಂತೆ ನಾನು, ಬ್ಯಾಕ್ ಗ್ರೌಂಡನಲ್ಲಿ ಖಾಲಿ ಬಸ್ಸು. ಏನಮ್ಮಾ, ದುಡ್ಡು ಕೊಡು ಏನ್ ನಿನ್ ಸಮಸ್ಯೆ ಎಂದರೆ, ನೇರವಾಗಿ ದುಡ್ಡಿಲ್ಲಾ ಎಂದಳು, ನಿನ್ನ ಗಂಡ, ಮಕ್ಕಳು, ಯಾರಾದರೂ ಗುರುತು ಪರಿಚಯದವರಿಲ್ವೇನಮ್ಮಾ ಎಂದರೆ, ಯಾರೂ ಇಲ್ಲ ಎಂದಳು, ಅಲ್ಲಾ ದುಡ್ಡಿಲ್ಲಾ ಅಂದ್ರೆ ಬಸ್ ಯಾಕ್ ಹತ್ತಿದೆ ಎಂದರೆ, ಶಿವಾಜಿನಗರದಲ್ಲಿ ಕೆಲಸ ಐತೆ ಎಂದಳು. ಸರಿ ದಂಡ ಕಟ್ಲಿಲ್ಲ ಅಂದ್ರೆ ಮೂರು ತಿಂಗಳು ಸಜಾ ಕಣಮ್ಮಾ ಎಂದು ಶಾಂತವಾಗಿಯೇ ಅಧಿಕಾರಿಗಳು ಹೇಳಿದರೆ ಆಯ್ತು ಬುದ್ದಿ ಆರು ತಿಂಗಳು ಬೇಕಾದ್ರು ಹಾಕಿ, ಏನೋ ನಿಮ್ಮ ರುಣದಲ್ಲಿ ತಿನ್ಕೊಂಡು ಇರ್ತೀನಿ ಎಂದು ಬೆದರಿಕೆ ಹಾಕಿದಳು. ಅಧಿಕಾರಿಗಳು ಕಂಡಕ್ಟರನ್ನೊಮ್ಮೆ, ಡ್ರೈವರನ್ನೊಮ್ಮೆ ನೋಡಿದರು, ಆ ನೋಟದಲ್ಲಿ ಏನಿತ್ತೋ ನಾನರಿಯೆ. ಎಲ್ಲಾ ಬಾಲ ಮುದುರಿದ ನಾಯಿಗಳಂತೆ ಹೋದರು. ಸಿಂಹಿಣಿಯಂತೆ ಆಕೆ ನಡೆದು ಸೀದಾ ಹೋದಳು. ರೂಲೀಸು ಮುರಿದರೆ ಆಗೋದು ಇಷ್ಟೇನಾ? ಎಂದು ಒಮ್ಮೆ ಆಕೆಯ ಕೈ ಕುಲುಕಬೇಕೆನಿಸಿದರೂ, ಟೀಮ್ ಲೀಡರ್ ಫೋನ್ ಬರುತ್ತಿದ್ದುದರಿಂದ ಹಾಗೇ ಬಂದೆ. ಮುಂದೆ! ಹಹಹಹ…
                                                         
-ಹೇಮಂತ

Saturday, 3 March 2012

ಕ್ರೌರ್ಯ – ಕನಸು


ಮುನ್ನುಡಿ: ಏನಾದರೂ ಆಗು ಮೊದಲು ಮಾನವನಾಗು!

ರುಂಡವೊಂದು ರಕ್ತಸಿಡಿಸುತ್ತಾ ಗಾಳಿಯನ್ನು ಸೀಳುತ್ತಾ ನನ್ನ ಕಡೆಗೇ ಧಾವಿಸುತ್ತಿತ್ತು. ನನ್ನ ಮೇಲೇ ಎರಗಬಹುದೆಂದುಕೊಂಡು ಸರಪಳಿಗಳನ್ನು ಹಿಡಿದಿದ್ದ ನನ್ನ ಕೈಯನ್ನು ಭಯದಿಂದ ಮುಖಕ್ಕೆ ಅಡ್ಡಲಾಗಿ ಹಿಡಿದುಕೊಂಡೆ. ನನ್ನತ್ತ ಬರುತ್ತಿದ್ದ ರುಂಡ ಅಡ್ಡಬಂದ ಇನ್ನಾರ ಮುಂಡಕ್ಕೋ ಬಡಿದು ರಕ್ತಮಯಗೊಳಿಸಿ ಕೆಳಗೆ ಬಿತ್ತು. ಸುಧಾರಿಸಿಕೊಳ್ಳುವಷ್ಟರಲ್ಲಿ ಕೈಲಿದ್ದ ಮೂರು ಸರಪಳಿಗಳನ್ನ ಮೂವರೂ ಜಗ್ಗುತ್ತಾ ಪ್ರತಿಕ್ರಿಯಿಸಲು ಶುರುಮಾಡಿದರು. ಅತ್ತ ಕ್ರೌರ್ಯದ ಅಟ್ಟಹಾಸ ಇತ್ತ ಈ ಮೂವರ ನಗು, ಅಳು, ಕ್ರೋಧದ ಅಟ್ಟಹಾಸ. ಮೂರೂ ಸೇರಿ ನನ್ನೊಳಗೂ, ಸುತ್ತಲೂ ಕೋಲಾಹಲವನ್ನೆಬ್ಬಿಸುತ್ತಿದ್ದರು. ಬೀಸುತ್ತಿದ್ದ ಬಿರುಗಾಳಿಯಲ್ಲಿ ಇಡೀ ಊರೆಂಬೋ ಊರೇ ಶಂತವಾಗಿ ಒಳಗೆ ಸೇರಿಕೊಂಡಿದ್ದರೂ, ಊರಿನ ನಟ್ಟ ನಡುವೆ ಇದ್ದ ಈ ಚಿಕ್ಕ ವೃತ್ತಾಕಾರದ ಬಯಲಿನಲ್ಲಿ ಸೇರಿದ್ದ ಕೆಲವು ಕ್ರೂರ ಮೃಗಗಳಂತೆ ಕಂಗೊಳಿಸುತ್ತಿದ್ದ ಮಾನವಾಕೃತಿಗಳು ಬಗೆ ಬಗೆಯ ಆಯುಧಸನ್ನದ್ಧರಾಗಿ ತಮ್ಮ ತಮ್ಮಲ್ಲೇ ಕ್ರೂರವಾಗಿ ಹೊಡೆದಾಡಿಕೊಳ್ಳುತ್ತಿದ್ದರು. ಒಂದು ಆಕೃತಿ ಕಂಗಳಲ್ಲಿ ಬೆಂಕಿ ಉಗುಳುತ್ತಾ, ತನ್ನ ಕೈಲಿದ್ದ ದುಂಡನೆಯ ಅಸ್ತ್ರದಿಂದ ಇನ್ನೊಂದು ಆಕೃತಿಯ ತಲೆಯ ಮೇಲೆ ಜಜ್ಜಲು ತಲೆ ಮೂರು ಹೋಳಾಗಿ ಚಿಲ್ಲನೆ ರಕ್ತದ ಬುಗ್ಗೆ ಹೊರಹೊಮ್ಮಿತು. ಹೊರ ಹೊಮ್ಮಿದ ಬುಗ್ಗೆ, ಅಸ್ತ್ರಕ್ಕೆ, ಅಸ್ತ್ರ ಹಿಡಿದಿದ್ದ ಆಕೃತಿಯ ಮೈಕೈಗೆ ಸುತ್ತಲಿದ್ದ ಇನ್ನೊಂದಷ್ಟು ಆಕೃತಿಗಳಿಗೆ ಲೇಪಿತವಾಗಿ ಇನ್ನಷ್ಟು ಶೋಭಾಯಮಾನಗೊಳಿಸಿತು. ಅಲ್ಲಿದ್ದೆಲ್ಲ ಮಾನವಾಕೃತಿಗಳ ವಿರೂಪ ಕೋರೆ ಹಲ್ಲುಗಳು, ರಕ್ತಕ್ಕಾಗಿ ಹಪಹಪಿಸುತ್ತಾ ಹೊರಬಿಟ್ಟಿದ್ದ ನಾಲಗೆಗಳು, ಅಷ್ಟಷ್ಟಗಲ ಬಿಟ್ಟಿದ್ದ ಕೆಂಗಣ್ಣುಗಳು, ಮುಖಗಳಿಗೆ ಲೇಪಿತವಾಗಿದ್ದ ಕೆಂಪನೆಯ ನೀರು, ಮತ್ತು ಶಸ್ತ್ರಗಳಿಂದ ಅಲಂಕೃತರಾಗಿ ನಮ್ಮ ಮುಕ್ಕೋಟಿ ದೇವರುಗಳನ್ನು ಹೋಲುತ್ತಿದ್ದರು. ಆದರೆ ವಿಪರ್ಯಾಸವೆಂದರೆ ದೇವರುಗಳು ಮೈದಳೆದು ತಮ್ಮತಮ್ಮಲ್ಲೇ ಕಾದಾಡುತ್ತಿದ್ದುದು. ಯಾರು ಯಾರಿಗೆ ಯಾಕೆ ಕೈಕಾಲು ಕತ್ತರಿಸುತ್ತಿದ್ದರೂ ನನಗಂತೂ ಗೊತ್ತಿಲ್ಲ, ಆದರೆ ಆ ಭೀಬತ್ಸ ಪರಿಸರದಿಂದ ಅದೆಷ್ಟು ಬೇಗ ಪಾರಾಗುವೆನೋ ಎಂದು ಹಾತೊರೆಯುತ್ತಿದ್ದೆನು. ಆದರೆ ಸರಪಳಿಯಿಂದ ಬಂಧಿತರಾಗಿ, ಸರಪಳಿಯ ಸೂತ್ರ ನನ್ನ ಕೈಗಿಟ್ಟು ಆ ಕ್ರೌರ್ಯಕ್ಕೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದ ಆ ಮೂವರಿಂದಲೂ ಕೂಡ ನಾನು ಪಾರಾಗಬೇಕಿತ್ತು. ಏನು ಮಾಡಿದರೂ ಆ ಸರಪಳಿಯನ್ನ ಬಿಡಲಾಗಲಿಲ್ಲ. ಆ ಮೂವರನ್ನು ಬಂಧಿತರನ್ನಾಗಿಸಿ ನಾನು ಸೂತ್ರ ಹಿಡಿದಿದ್ದೆನೋ ಅಥವಾ ನನ್ನನ್ನು ಬಂಧಿತನನ್ನಾಗಿಸಿ ಆ ಮೂವರೇ ಸೂತ್ರವನ್ನು ಹಿಡಿದಿದ್ದರೋ ಯೋಚಿಸಲು ಪ್ರಯತ್ನಿಸಿದರೂ ಸಹಿತ ಗೊಂದಲ ಹೆಚ್ಚಾಗುತ್ತಿತ್ತು. ಅತ್ತ ದರಿ ಇತ್ತ ಪುಲಿ ಮಧ್ಯೆ ನಾನು ಈ ಮೂವರ ಕಡೆ ನೋಡಲಾಗದೆ ಅತ್ತ ರಣಾಂಗಣದ ಕಡೆ ನಿರ್ಲಿಪ್ತನಾಗಿ ದೃಷ್ಟಿ ಹಾಯಿಸಿದರೆ ರಣಾಂಗಣದ ಹಿಂದೆ ಬಹುದೂರದಲ್ಲಿ ದೊಡ್ಡ ಬಿಳಿ ಕೈ ಮುರಿದ ಪುತ್ಥಳಿಯೊಂದು ದೃಷ್ಟಿ ಸೆಳೆಯಿತು. ಆ ಪುತ್ಥಳಿ ಕಣ್ಣಿಗೆ ಕಟ್ಟಿದ್ದ ಕಪ್ಪು ಬಟ್ಟೆ ಹಾಗೇ ಇತ್ತು, ಅದರ ಕಾಲಬಳಿ ಕತ್ತರಿಸಿದ್ದ ಕೈಯೊಂದಿಗೆ ತಕ್ಕಡಿಯೊಂದು ಬಿದ್ದಿತ್ತು. ಅದರ ಮುಂದೆ ರಕ್ತದೋಕುಳಿ ಮುಂದುವರೆದಿತ್ತು. ಆ ಮನಕಲುಕುವ ದೃಶ್ಯಕ್ಕೆ ಬೆನ್ನು ಮಾಡಿದರೆ ಮುಂದೆ ಅಳುತ್ತಿದ್ದವನು ಅಳುತ್ತಲೇ ಇದ್ದ, ನಗುತ್ತಿದ್ದವನು ನಗುತ್ತಲೇ ಇದ್ದ, ಬೊಗಳುತ್ತಿದ್ದವನು ಬೊಗಳುತ್ತಲೇ ಇದ್ದ. ಕಣ್ಣು ಕಿವಿ ಮುಚ್ಚಿದರೂ ಇವರೆಲ್ಲರೂ ಒಟ್ಟು ಸೇರಿ ಸೃಷ್ಟಿಸುತ್ತಿದ್ದ ದಾಂಧಲೆ ಒಳಹೊಕ್ಕು ಕೋಲಾಹಲ ಎಬ್ಬಿಸುವುದನ್ನು ತಡೆಯಲು ನನ್ನಿಂದ ಸಾಧ್ಯವಾಗಲೇ ಇಲ್ಲ.

ಹಯ್ಯೋ… ಒಬ್ಬರನ್ನೊಬ್ಬರು ನರಭಕ್ಷಕರಂತೆ ಹೀಗೆ ಭಕ್ಷಿಸುತ್ತಿದ್ದಾರಲ್ಲಾ, ಯಾರು ಇವರನ್ನು ಕಾಪಾಡುವುದು, ಆ ಪುತ್ಥಳಿ ಕೈ ಮುರಿದಿದೆ ಯಾರು ಅದನ್ನು ಮತ್ತೆ ಜೋಡಿಸುವುದು, ಈ ಗೋಳು ನೋಡಲಾಗದೆ ಮೈಲಿದ್ದ ನೀರೆಲ್ಲಾ ಖಾಲಿಯಾದರೂ, ಮನಸಲ್ಲಿ ಮಡುಗಟ್ಟಿರುವ ನೋವು ಮಾತ್ರ ಕಡಿಮೆಯಾಗುತ್ತಿಲ್ಲವಲ್ಲ. ಸಾಯುತ್ತಾ ವಿಲವಿಲನೆ ಒದ್ದಾಡುತ್ತಿರುವುದು ಬೇರಾರೂ ಅಲ್ಲ ನಮ್ಮವರೇ. ಆನೆ ಆನೆಯನ್ನು, ಹುಲಿ ಹುಲಿಯನ್ನು ಕೊಲ್ಲುವುದನ್ನ ಎಲ್ಲಾದರೂ ನೋಡಿದ್ದೀರಾ, ಇವರು ಮಾತ್ರ ಯಾಕೆ ಇವರಿವರಲ್ಲೇ ಹೀಗೆ ಕಚ್ಚಾಡುತಿದ್ದಾರೆ. ಇಂದು ಇಲ್ಲಿ ಹುಟ್ಟಿರುವ ಬಿರುಗಾಳಿ, ಬೆಂಕಿ ಮಳೆ ನಮ್ಮನ್ನೂ ಅತಿ ಶೀಘ್ರದಲ್ಲಿ ನುಂಗಿಹಾಕದೆ ಇರುವುದಿಲ್ಲ. ಇವರು ಬಿತ್ತುತ್ತಿರುವ ಕ್ರೌರ್ಯ ಹಬ್ಬುತ್ತಾ ಇಡೀ ಊರನ್ನು ನಾಶ ಮಾಡಿದರೆ ಇವರಿಗೆ ಏನು ಲಾಭವಾಗುತ್ತದೆ ಎಂದು ತನ್ನ ಕರುಳಿನ ಆಕ್ರಂದನವನ್ನ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಮುಂದುವರೆಸುತ್ತಲೇ ಇದ್ದ ಎಡಗಡೆ ಇದ್ದಾತ. ಒಂದೇ ಕ್ಷಣದಲ್ಲಿ ಆತ ಹೆಣ್ಣಿನ ರೂಪತಳೆದಂತಾಯ್ತು. ಅರೆ ಇದು ಹೆಣ್ಮನಸ್ಸು ಅದಕ್ಕೇ ಈ ಕೋಲಾಹಲವನ್ನ ಕಂಡು ಹೀಗೆ ಮಮ್ಮಲಮರುಗುತ್ತಿದೆ. ಆದರೆ ಈ ಹೆಣ್ಣಿಗೂ ಆ ರಣಾಂಗಣದಲ್ಲಿನ ದೇವಾನುದೇವತೆಗಳಿಗೂ ಏನು ಸಂಬಂಧವಿರಬಹುದು. ಅವರಿಗಾಗಿ ಈಕೆಯಾಕೆ ಕಣ್ಣೀರಿಡುತ್ತಿದ್ದಾಳೆ. ಹೋ ಅಲ್ಲಿ ಏಳುತ್ತಿರುವ ಕಾಳ್ಗಿಚ್ಚು ತನ್ನಂತಹ ತನ್ನನ್ನೂ ಸುಡುವುದೆಂದು ಹೆದರಿ ಹೀಗೆ ಮಾತನಾಡುತ್ತಿರುವಳು ಎಂದು ಒಳಗೇ ಅನಿಸಿದರೂ ಅವಳನ್ನು ಪ್ರಶ್ನಿಸುವ ಮನಸು ಬರಲಿಲ್ಲ. ಆ ಎಲ್ಲಾ ದೇವರುಗಳ ಕೃತ್ಯವನ್ನು ತಡೆಯಬೇಕು ಬಿಡು ನನ್ನ ಬಿಡು… ಎಂದು ಮೈತುಂಬಾ ಒದ್ದೆ ಮಾಡಿದ್ದ ಕಣ್ಣಿರನ್ನು ಕಣ್ಣಿನ ಬಳಿ ಮಾತ್ರ ಒರೆಸಿಕೊಂಡು ನನ್ನ ಕೈಯಲ್ಲಿನ ಸರಪಳಿಯನ್ನು ಜಗ್ಗತೊಡಗಿದಳು. ಆಕೆ ಕೂಡ ನಾನು ಸರಪಳಿ ಹಿಡಿದಿದ್ದೆ ಎಂದು ತಿಳಿದಿದ್ದಳೋ ಏನೋ ಅದರೆ ಅವಳ ಕೋಳವನ್ನು ಬಿಡಿಸುವ ಶಕ್ತಿ ನನ್ನಲ್ಲೂ ಇರಲಿಲ್ಲ. ಆ ಬಿರುಗಾಳಿಯೆಡೆಗೆ ನುಗ್ಗಲು ಪ್ರಯತ್ನಿಸುತ್ತಾ ಸರಪಳಿಗಳನ್ನು ಎಳೆಯುತ್ತಲೇ ಇದ್ದಳು ಹಯ್ಯೋ.. ತಡೆಯಿರಿ…  ಹಯ್ಯೋ ಎದೆ ಎದೆ ಬಡಿದುಕೊಳ್ಳುತ್ತಾ ಕಿವಿ ಸೀಳಿಹೋಗುವಹಾಗೆ ಅರಚುತ್ತಲೇ ಇದ್ದಳು. ಪಕ್ಕದಲ್ಲೇ ಇದ್ದಾತ ನಗಲಾರಂಭಿಸಿದ.

ಆತ ನಗುವಿನ ಶಬ್ಧಕ್ಕೇ ಸುತ್ತಲಿದ್ದ ಎಷ್ಟೋ ಪಕ್ಷಿಗಳು ಸತ್ತುಹೋದವೆಂದು ಕಾಣುತ್ತದೆ. ಹೊಡೆಯಿರಿ, ಕತ್ತರಿಸಿ, ಚುಚ್ಚಿ, ಕರುಳು, ಮೆದುಳೆಲ್ಲವನ್ನೂ ಕಿತ್ತು ಹೊರಗೆಸೆಯಿರಿ ಆಹಾ… ಹಾಗೆ ಹಹಹಹಹಹಹಹಹಹಹಹಾ…. ಎಂದು ಆ ದೇವರುಗಳ ರಾಸಲೀಲೆಯನ್ನು ನೋಡಿ ಕಣ್ತುಂಬಿಸಿಕೊಂಡು ಮನಃಪೂರ್ವಕವಾಗಿ ಆನಂದಿಸುತ್ತಿದ್ದ. ಹಹಹ್ಹ… ಅಲ್ಲಿ ನೋಡಿ ನಾಲ್ಕು ಮಂದಿ ಸೇರಿ ಒಬ್ಬನನ್ನೇ ಥಳಿಸುತ್ತಿದ್ದಾರೆ. ಆಹಾ ಹಬ್ಬ ಈ ದಿನವೇ ಹಬ್ಬ ಇಂತಹ ಹಬ್ಬ ದಿನಕ್ಕೆ ಒಮ್ಮೆಯಾದರೂ ನಡೆಯಬೇಕು ಪರಮಾನಂದ, ಪರಮಾನಂದ ಎಂದು ಕೂಗುತ್ತಲಿದ್ದುದನ್ನು ಕೇಳಿಯೇ ಯಾರೋ ಮೇಲಿನಿಂದ ಮರದ ಪೀಠೋಪಕರಣಗಳನ್ನ ಎಸೆದು ಎಷ್ಟೋ ಮಡಕೆಯಂತಹ ತಲೆಗಳು ಹೋಳುಹೋಳಾಗುವುದನ್ನ ಚೀತ್ಕಾರಗಳೊಂದಿಗೆ ಹರ್ಷಿಸಿದರು. ಬನ್ನಿ ನಾವೂ ಅವರನ್ನು ಪ್ರೋತ್ಸಾಹಿಸುತ್ತಾ ಹುರುಪು ತುಂಬೋಣ ಎಂದು ಅರಚುತ್ತಾ ಚಪ್ಪಾಳೆ ತಟ್ಟುವಾಗ ಈತ ನಪುಂಸಕನಂತೆ ಕಂಡ. ಕ್ಯಾಕರಿಸಿ ಆತನ ಮುಖಕ್ಕೆ ಉಗಿಯಬೇಕೆನಿಸಿತು. ಸಾಯುತ್ತಿರುವವರನ್ನು ಕಂಡು ಸಂತೋಷ ಪಡುತ್ತಿರುವನಲ್ಲ ಎಂದು ಬೇಸರವೂ ಆಯ್ತು ಆದರೆ ಆತ ಇನ್ನೊಂದಷ್ಟು ಜನರನ್ನು ಹುರಿದುಂಬಿಸಲು, ಬಿರುಗಾಳಿ ಹೆಚ್ಚಿಸಲು ಸರಪಳಿಯನ್ನು ಜಗ್ಗುತ್ತಾ ಅವರೆಡೆಗೆ ನುಗ್ಗುತ್ತಲಿದ್ದ.

ಇವರಿಬ್ಬರನ್ನೂ ಕೆಂಗಣ್ಣುಗಳಿಂದ ದುರುದುರನೆ ನೋಡುತ್ತಿದ್ದ ಗಂಡೆಸೆಂಬೋ ಗಂಡಸು ಸರಪಳಿಗಳನ್ನೇ ತನ್ನ ಆಯುಧವನ್ನಾಗಿ ಮಾಡಿಕೊಂಡು ನಾನು ಮಾಡಬೇಕೆಂದಿದ್ದ ಕಾರ್ಯವನ್ನು ತಾನೇ ಮಾಡಿದನು ಕ್ಯಾಕರಿಸಿ ಇಬ್ಬರಿಗೂ ಉಗಿದು, ಸರಪಳಿಗಳಿಂದಲೇ ಇಬ್ಬರನ್ನೂ ಮುಖ ಮೂತಿ ನೋಡದೇ ಚಚ್ಚಿದನು. ಚಚ್ಚಿದರೂ ಆಕೆಯ ಅಳು, “ಅದರ” ನಗು ಮಾತ್ರ ಕಡಿಮೆಯಾಗಲಿಲ್ಲ. ಇನ್ನೂ ಹೆಚ್ಚು ಮಾಡಿ ಸಂದರ್ಭಕ್ಕೆ ಇನ್ನಷ್ಟು ಕಳೆ ತಂದರು. ಆತನ ಆವೇಶ ಅವರುಗಳ ವರ್ತನೆಯಿಂದ ಇನ್ನಷ್ಟು ಹೆಚ್ಚಾಯಿತು. ಆ ಮಾನವಾಕೃತಿ ದೇವರುಗಳು, ಹಿಂದೆಯಿರುವ ಅರ್ಧಂಬರ್ಧ ಪುಡಿಯಾದ ಪುತ್ಥಳಿ, ಇಲ್ಲಿ ಅಳುತ್ತಾ, ನಗುತ್ತಾ ಪ್ರತಿಕ್ರಿಯೆ ನೀಡುತ್ತಿರುವ ಪ್ರತಿಯೊಬ್ಬರನ್ನು ತುಳಿದು ಹಿಸುಕಿ ಅವಶೇಶವೂ ಸಿಗದಂತೆ ಮಾಡಬೇಕು. ಇವರೆಲ್ಲಾ ಯಾಕಿಲ್ಲಿ ಬದುಕಿದ್ದಾರೆ, ಇವರ ಹೆಗಲ ಮೇಲೆ ಇರುವ ಹೊಣೆಯಾದರೂ ಏನು, ಬೇಲಿಯಾಗಲು ಬಿಟ್ಟರೆ ಹೊಲ ಮೇಯಲು ಹತ್ತಿರುವ ಇವರನ್ನು ಉಳಿಸಿ ಏನು ಫಲ. ಇಂತವರು ಇರುವುದಕ್ಕಿಂತ ನಾಮಾವಶೇಷವಾಗುವುದೇ ಲೇಸು. ಇವನ ರೋಷದ ಮಾತಿಗೆ ಆಕೆ ಮತ್ತಷ್ಟು ಅತ್ತಳು, ನಾನು ಹೇಳಲಿಲ್ವ ಈ ಕಾಡ್ಗಿಚ್ಚು ನಮ್ಮನ್ನೂ ಬಿಡುವುದಿಲ್ಲ ಇದು ಹರಡುತ್ತಾ ಹೋಗುತ್ತದೆ. ವಿನಾಶ! ವಿನಾಶ! ವಿನಾಶ! ಇದನ್ನು ಈಗಲೇ ತಡೆಯಬೇಕು ಎಂದು ಇನ್ನಷ್ಟು ರೋಧಿಸಹತ್ತಿದಳು. ಹಾ… ಹಾ…. ಹಾ… ಹೋಗಲೀ… ಎಲ್ಲಾ ನಾಶವಾಗಿ ಹೋಗಲಿ ಎಂದು ನಪುಂಸಕ ನಕ್ಕ. ಎಲ್ಲರನ್ನೂ ಸುಡುವೆನು ಎಂದು ವೀರನು ಎಲ್ಲರನ್ನೂ ಎಳೆದಾಡುತ್ತಲಿದ್ದ. ಹಿಂದೆ ಬಿರುಗಾಳಿಗೆ ಎದ್ದ ಧೂಳು ಸುತ್ತಾನಾಲ್ಕು ಕಡೆ ಹರಡುತ್ತಿತ್ತು. ಎಲ್ಲರೂ ಕಣ್ಬಿಡಲಾಗದೆ ಅದರಲ್ಲೂ ಹೊಡೆದಾಡುತ್ತಾ ನಮ್ಮ ಸುತ್ತ ಹರಡಿಕೊಂಡರು. ಸರಪಳಿಗಳು ಕಿತ್ತುಕೊಂಡು ಹೋದವು. ಯಾರು ಯಾರು ಎಲ್ಲೆಲ್ಲಿ ಸೇರಿಹೋದರೋ, ಯಾರು ಯಾರನ್ನ ತಡೆದರೋ ಯಾರು ಯಾರನ್ನ ಹುರಿದುಂಬಿಸಿದರೋ, ಯಾರು ಯರನ್ನ ಮುಗಿಸಿದರೋ, ಯಾರು ಗೆದ್ದರೋ ಯಾರು ಸೋತರೋ ಒಂದೂ ತಿಳಿಯಲಿಲ್ಲ. ಯಾರು ಸೋತರೂ, ಗೆದ್ದರೂ, ಸೋಲು ಮಾತ್ರ ಮನುಷ್ಯನದ್ದೇ ಎಂದು ತಿಳಿದಿತ್ತು ನನಗೆ. ಕಣ್ಮುಚ್ಚಿಕೊಂಡೇ ಅವರಿವರಿಗೆ ಗುದ್ದಿಕೊಂಡೇ ಓಡಿದೆ.

ಬಿರುಗಾಳಿ ಕ್ರಮೇಣ ಕಡಿಮೆಯಾಗುತ್ತಾ ಹೋಯ್ತು. ಆ ಪುಟ್ಟ ವೃತ್ತಾಕಾರದ ಬಯಲಿಂದ ದೊಡ್ಡಾ ವಿಶಾಲ ಪ್ರಪಂಚದ ಕಡೆಗೆ ಓಡಿದೆ. ಇಡೀ ಪ್ರಪಂಚ ನೆಮ್ಮದಿಯಾಗಿ ನಿದ್ರೆ ಮಾಡುತ್ತಿದೆ ಎಂದೊಮ್ಮೆ ಎನಿಸಿತು. ಹಿಂದೆ ತಿರುಗುವ ಧೈರ್ಯವೂ ಇಲ್ಲದೆ ಜೀವದಲ್ಲಿ ಜೀವವಿರುವವರೆಗೂ ಓಡುವುದೆಂದು ತೀರ್ಮಾನಿಸಿ ಓಡಿದೆ. ಒಂದಷ್ಟು ಪ್ರಾಣಿಗಳೋಪಾದಿಯಲ್ಲಿ ಹೊತ್ತುಹೋಗುತ್ತಿದ್ದ ವಾಹನವೊಂದನ್ನು ಏರಿದೆ. ಸುತ್ತ ಕುಳಿತಿದ್ದವರಲ್ಲಿ ಕೆಲವರು ತಲೆ ಒಡೆಯುತ್ತಿದ್ದ ದೇವರುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಜೀವಕಳೆದುಕೊಂಡ ದೇವರುಗಳನ್ನ ಬೆಂಬಲಿಸುತ್ತಾ ತಮ್ಮಲ್ಲಿನ ಕ್ರೌರ್ಯವನ್ನ ಹೊರಗೆಡವುತ್ತಿದ್ದರು. ಹಯ್ಯೋ ಬೆಂಕಿಯಿಂದ ಬಾಣಲೆಗೆ ಬಿದ್ದ ಹಾಗೆ ಈ ವಾಹನದಲ್ಲಿ ಬಿದ್ದಂತೆ ಭಾಸವಾಯ್ತು. ಆ ವಾಹನದಿಂದ ಏಳುತ್ತಿದ್ದ ಕಪ್ಪನೆಯ ಹೊಗೆ, ಒಳಗೆ ತೂರಿ ಬಿರುಗಾಳಿಯಷ್ಟೇ ಭಯಾನಕವೆನಿಸಿತು. ಆ ಹೊಗೆಯಲ್ಲಿ ನನ್ನ ಕೈಯಲ್ಲಿ ಸರಪಳಿಗಳು ಮತ್ತೊಮ್ಮೆ ಕಾಣಿಸಿಕೊಂಡವು ಎದುರಿಗಿದ್ದವರೆಲ್ಲಾ ಆ ಮೂರು ಹೆಣ್ಣು, ಗಂಡು, ನಪುಂಸಕರಂತೆಯೇ ಕಂಡರು. ಆಕೆ ಹೇಳಿದ ಮಾತು ಮತ್ತೆ ಕಿವಿಯಲ್ಲಿ ಗುಯ್ಗುಡುತಿತ್ತು. ಅಲ್ಲಿ ಹುಟ್ಟಿದ್ದ ಬಿರುಗಾಳಿ ಆಕೆ ಹೇಳಿದಂತೆ ಎಲ್ಲ ಕಡೆಯೂ ಸದ್ದಿಲ್ಲದೆಯೇ ಪಸರಿಸುತ್ತಿತ್ತು. ಆ ಡೊಳ್ಳು ಹೊಟ್ಟೆಯ ವಾಹನದಲ್ಲಿ ಕೂರಲಾಗದೆ ಹೊರಕ್ಕೆ ನೆಗೆದೆ. ಯಾರ ಗೊಡವೆಗೂ ಹೋಗದೆ ಎಲ್ಲದರೂ ಅವಿತುಬಿಡುವುದೆನಿಸುತು. ಯವುದೋ ಕಟ್ಟಡದ ಒಳಹೊಕ್ಕೆ. ಕಟ್ಟಡದ ಹಲವು ಕೊಠಡಿಗಳ ಒಳಗೆ ಸೇರಿಕೊಂಡಿದ್ದ ವಿಚಿತ್ರ ಕ್ಷುದ್ರ ಜೀವಿಗಳೂ ಕೂಡ ಒಂದೊಂದು ಕೊಳವೆಗಳ ಮೂಲಕ ಆ ರಣಾಂಗಣದಲ್ಲಿ ನಡೆಯುತ್ತಿದ್ದ ಮಾರಣಹೋಮವನ್ನು ಚಪ್ಪರಸಿಕೊಂಡು ನೋಡುತ್ತಿದ್ದವು. ಇಲ್ಲೆಲ್ಲೂ ಇರಲು ನನ್ನಿಂದ ಸಾಧ್ಯವಿರಲಿಲ್ಲ. ಕ್ರೌರ್ಯವೆಂಬ ಬಿರುಗಾಳಿ ಎಲ್ಲೆಡೆಯೂ ಹಬ್ಬಿತ್ತು. ಯಾರೂ ಇನ್ನು ಉಳಿಯಲು ಸಾಧ್ಯವಿರಲಿಲ್ಲ. ಎಲ್ಲಾ ಒಂದಲ್ಲಾ ಒಂದು ರೀತಿ ಸತ್ತಾಗಿತ್ತು. ಎಲ್ಲರಲ್ಲೂ ಆ ಕ್ರೌರ್ಯವೆಸಗುತ್ತಿದ್ದ ದೇವರುಗಳೇ ಕಾಣಿಸಿಕೊಳ್ಳುತ್ತಿದ್ದರು. ಎಲ್ಲೂ ಇರದೆ, ಹೊರಟು ಹೋದೆ ನಿರ್ಜೀವ ಪ್ರದೇಶವೊಂದರಲ್ಲಿ ಕಾಲಿಟ್ಟೆ, ಎಲ್ಲೆಡೆಯೂ ಕತ್ತಲೆಯೇ ತುಂಬಿತ್ತು. ನನಗೂ ಸಾಕಾಗಿತ್ತು. ಅಲ್ಲೇ ಬಿದ್ದೆ. ಕಣ್ಮುಚ್ಚಿದೆ. ಕಣ್ತೆರೆದಿದ್ದರೂ ಏನೂ ಕಾಣುವಹಾಗಿರಲಿಲ್ಲ ಆ ಕತ್ತಲಲ್ಲಿ.

ಬಹುದೂರದಲ್ಲಿ ಒಂದು ಪುಟ್ಟ ಖಾಲಿ ಬಯಲು ಹೊಂಬೆಳಕಿನೊಂದಿಗೆ ಕಂಗೊಳಿಸುತ್ತಿತ್ತು. ಅಲ್ಲಿ ಏನೂ ಇರಲಿಲ್ಲ. ಅದೊಂದು ಕನಸಿನ ಪ್ರಪಂಚ, ಆ ಪ್ರಪಂಚಕ್ಕೆ ನಾನೇ ಮೊದಲಿಗ. ಆ ಪ್ರಪಂಚಕ್ಕೆ ನನಂಥವರು ಇನ್ನೆಷ್ಟೋ ಮನುಷ್ಯರು ಬರುವುದರಲ್ಲಿದ್ದರು, ಅದು ನನಗೆ ಖಚಿತವಾಗಿ ಗೊತ್ತಿತ್ತು. ಅದಕ್ಕಾಗಿ ಮೊದಲು ಅಲ್ಲೊಂದು ದ್ವಾರ ನಿರ್ಮಿಸಿದೆ, ತಕ್ಷಣವೇ ಚುಚ್ಚು ಮದ್ದೊಂದನ್ನು ನಾನೇ ತಯಾರು ಮಾಡಿದೆ, ಬಾಗಿಲಿನಲ್ಲಿ ನಾನೇ ನಿಂತೆ.  ಕ್ರಮೇಣ, ಆ ಕ್ರೂರವಾದ ಪ್ರಪಂಚದಿಂದ ಬೇಸತ್ತವರು, ನೆಮ್ಮದಿ, ಮನುಷ್ಯತ್ವವನ್ನು ಮಾತ್ರ ಅಪೇಕ್ಷಿಸುತ್ತಿದ್ದವರು ಪ್ರವಾಹದೋಪಾದಿಯಲ್ಲಿ ಬರತೊಡಗಿದರು. ಬರುವವರಿಗೆಲ್ಲಾ ಸೂಜಿ ಚುಚ್ಚಿ, ಕ್ರೌರ್ಯವೆಂಬ ರೋಗಕ್ಕೆ ಲಸಿಕೆ ನೀಡಿ ಒಳಗೆ ಬಿಟ್ಟೆ. ಎಲ್ಲರೂ ಸೇರಿ ಮೊಟ್ಟ ಮೊದಲ ಬಾರಿಗೆ ಒಂದು ಪುಟ್ಟ ಸಸಿ ನೆಟ್ಟರು. 
                                                               - ಹೇಮಂತ್

Thursday, 1 March 2012

Beware of DOG! / ನಾಯಿ ಇದೆ ಎಚ್ಚರಿಕೆ!


Beware of DOG! / ನಾಯಿ ಇದೆ ಎಚ್ಚರಿಕೆ!

“ಥು ಮುಂಡೇದೇ ಮಾಡ್ತೀಯಾ ಇನ್ನೊಂದ್ಸಲ, ಎಲ್ಲಾ ನಿನ್ನಿಂದಾನೇ ಆಗಿದ್ದು” ಎಂದು ಮತ್ತೊಂದು ಹೊಡೆತ ಬಿತ್ತು. ಬೀಳುತ್ತಿದ್ದ ಹೊಡೆತವನ್ನು ತಪ್ಪಿಸಿಕೊಳ್ಳಲು ಕತ್ತಿಗೆ ಕಟ್ಟಿದ್ದ ಹಗ್ಗವನ್ನು ಸಾಧ್ಯವಾದಷ್ಟೂ ಜಗ್ಗಿ ಎತ್ತ ಹೋದರೂ ತಪ್ಪಿಸಿಕೊಳ್ಳಲಾಗದೆ ಏಟುಗಳು ಬೀಳುತ್ತಲೇ ಇತ್ತು. ಕುಯ್ಯೋ ಮರ್ರೋ ಎಂದು ತನ್ನ ಭಾಷೆಯಲ್ಲಿ ಎಷ್ಟು ಬೇಡಿಕೊಂಡರೂ ಆತನ ಕೋಪಶಮನವಾಗುವರೆಗೂ ಹೊಡೆದು ನಂತರ ಎದ್ದು ಹೋದ. ಅಲ್ಲೇ ಕೂತು ಗಾಯಗಳಾಗಿರುವ ಜಾಗಗಳಿಗೆ ನಾಲಿಗೆಯಿಂದ ಸವರಿಕೊಳ್ಳುತ್ತಾ ಆ ದೊಡ್ಡ ಮನೆಯಲ್ಲಿ ತನ್ನನ್ನು ಕೇಳುವವರಾರೂ ಇಲ್ಲದೆ ತನಗೆ ತಾನೆ ಸಾಂತ್ವಾನ ಹೇಳಿಕೊಳ್ಳುತ್ತಾ ಕುಯ್ಗುಡುತ್ತಾ ಮಲಗಿತು. “ಶಾಂತಿ ನಿಲಯ” ಎಂಬ ಈ ಮನೆಯಲ್ಲಿ ಶಾಂತಿಯೊಂದಿಲ್ಲ ಅದಕ್ಕಾಗಿಯೇ ಆ ಹೆಸರನ್ನು ಇಟ್ಟಿದ್ದಾರೇನೋ. ಮನೆಯ ನಾಮಫಲಕದ ಪಕ್ಕದಲ್ಲೇ ಚಿಕ್ಕ ಫಲಕದಲ್ಲಿ “ನಾಯಿ ಇದೆ ಎಚ್ಚರಿಕೆ / Beware of DOG”  ಎಂದು ಹಾಕಲಾಗಿತ್ತು. ನಿಜ ಸಂಗತಿಯಲ್ಲಿ “ಮನುಷ್ಯರಿದ್ದಾರೆ ಎಚ್ಚರಿಕೆ/ Beware of HUMAN” ಎಂದು ಹಾಕಿದ್ದರೆ ಹೆಚ್ಚು ಸೂಕ್ತವಾಗಿರುತ್ತಿತ್ತು, ಏಕೆಂದರೆ ಆ ಮನೆಯಲ್ಲಿ ಯಾರಿಗೂ ಕೆಡುಕುಂಟು ಮಾಡದೆ ತನ್ನ ಪಾಡಿಗೆ ತಾನು ಇರುತ್ತಿದ್ದುದೆಂದರೆ ಆ ರಿಚಿ ಎಂಬ ಮೂಕಪ್ರಾಣಿಯೊಂದೇ. ರಿಚಿಯನ್ನು ಬಿಟ್ಟರೆ ಅಲ್ಲಿ ವಾಸಿಸುತ್ತಿದ್ದುದು ಮೂರು ಮನುಷ್ಯ ಪ್ರಾಣಿಗಳು. ಯಾವಾಗಲೂ ಏನಾದರೂ ಕಿರಿಕಿರಿಯಲ್ಲಿ ತಲೆಕೂದಲು ಹರಿದುಕೊಳ್ಳುತ್ತಿದ್ದ ‘ತೊಂದರೆಗಳಿಂದ’ ಸಂಪದ್ಭರಿತ ಗಂಡ, ಪ್ರಪಂಚದಲ್ಲಿರುವ ಎಲ್ಲಾ ಸಮಸ್ಯೆಯ ನಿವಾರಣೆ ತನ್ನ ಹೊಣೆ, ಮನೆಯ ಸಮಸ್ಯೆ ಮಾತ್ರ ಗಂಡನ ಹೊಣೆ ಎಂಬ ಸಮಾಜದಲ್ಲಿನ ಸೇವಕಿ ಮನೆಯ ಒಡತಿ ಹೆಂಡತಿ, ರಿಚಿ ಮಾತು ಬೇಕದರೆ ಕೇಳಿಯಾನು ಅಪ್ಪ ಅಮ್ಮನ ಮಾತು ಮಾತ್ರ ಕೇಳಲೊಲ್ಲದ ನಿಖಿಲ್ ಎಂಬ ಮಗ. ಎಲ್ಲರ ಮನೆಯಲ್ಲೂ ಪ್ರೀತಿಯಿಂದ ನಾಯಿ, ಬೆಕ್ಕು ಸಾಕಿದರೆ ಈ ಮನೆಯಲ್ಲಿ ಸಮಾಜ ಸೇವಕಿಯ ಮೇಲೆ ಕೋಪ ತೋರಿಸಿದರೆ ಮಹಿಳಾ ಸಮಾಜದ ಹಾವಳಿ, ಮಗನ ಮೇಲೆ ಕೋಪ ತೋರಿಸಿದರೆ ಮಕ್ಕಳ ಮೇಲಿನ ದೌರ್ಜನ್ಯದ ಅಪರಾಧ ಎಂದು ಗಂಡ ತನ್ನ ಕಿರಿಕಿರಿಯನ್ನೆಲ್ಲಾ ತೀರಿಸಿಕೊಳ್ಳಲು, ಗಂಡನ ಮೇಲೆ ತನ್ನ ಅಸಮಾಧಾನ ತೋರಿಸಿದರೆ ಎಲ್ಲಿ ಸೌತಿ ತರುವನೋ, ಮಗನ ಮೇಲೆ ತೋರಿಸಲು ಎಲ್ಲಿ ಎದುರುಬೀಳುವನೋ ಎಂದು ತನ್ನ ಅಸಹಾಯಕತೆಯನ್ನು ತೀರಿಸಿಕೊಳ್ಳಲು, ಅಪ್ಪ ಅಮ್ಮನ ಮೇಲೆ ಎಗರಾಡಿದರೆ ಎಲ್ಲಿ ತನ್ನನ್ನು ಬೋರ್ಡಿಂಗ್ ಸ್ಕೂಲಿಗೆ ಹಾಕುವರೋ, ತನ್ನ ಪಾಕೆಟ್ ಮನಿ ಎಲ್ಲಿ ನಿಂತುಹೋಗುವುದೋ ಎಂದು ತನ್ನ ಕ್ರೋಧವನ್ನೆಲ್ಲಾ ತೀರಿಸಿಕೊಳ್ಳಲೋಸಗ ಮೂವರ ಒಮ್ಮತದ ಆಯ್ಕೆಯಾಗಿ ಆ ಮನೆಯೆಂಬ ಮನೆಯ ಗೇಟಿಗೆ ಎಚ್ಚರಿಕೆಯ ಫಲಕವನ್ನು ನೇತುಹಾಕಲು ಅನ್ಯಾಯವಾಗಿ ಕಾರಣವಾಗಿತ್ತು ರಿಚಿ. ಹೇಗೂ ಪ್ರಾಣಿದಯಾ ಸಂಘಕ್ಕೆ ದೂರು ನೀಡಲು ಅದಕ್ಕೆ ಮಾತು ಬರುವುದಿಲ್ಲವಲ್ಲ ಎಂಬ ಧೈರ್ಯದಿಂದ ತಮ್ಮ ಒಳಗಿನ ಎಲ್ಲಾ ಕ್ರೌರ್ಯಗಳನ್ನು ಅದರ ಮೇಲೆ ತೀರಿಸಿಕೊಂಡರೂ ಅದು ತಿರುಗಿಬೀಳದಂತೆ ಕಟ್ಟಿಹಾಕಿ, ಸಾಯದಿರಲೆಂದು ಅದಕ್ಕೆ ಹೊಟ್ಟೆಗೆ ಅಷ್ಟೋ ಇಷ್ಟೋ ಹಾಕಿ ಸಾಕುತ್ತಿರುವರು.

ಬೆಳ್ಳಂಬೆಳಗ್ಗೆ ಮನೆಯ ಒಳಗೆ ಏನೋ ಜಗಳ ಶುರುವಾಗಿ ಅಡುಗೆ ಮನೆಯಲ್ಲಿ ಪಾತ್ರೆಗಳ ಸದ್ದು ಜೋರಾಗಿ ಕೇಳುತ್ತಿದ್ದಂತೆಯೇ ಇವತ್ತೇನಪ್ಪ ಇವರುಗಳದ್ದು ಗೋಳು ಎಂದು ರಿಚಿ ತನ್ನ ಗೂಡಿನಿಂದ ತಲೆ ಹೊರಹಾಕಿ ಮಿಕಿಮಿಕಿ ನೋಡುತ್ತಿರಲು, ಅಡುಗೆಮನೆಯ ಕಿಟಕಿ ತೆರೆದುಕೊಳ್ಳುತ್ತದೆ. ಮನೆಯ ‘ಒಡತಿ’ ಯನ್ನೇ ದೈನ್ಯದಿಂದ  ನೋಡುತ್ತಿರಲು ಅದಾರ ಮೇಲೆ ಕೋಪವಿತ್ತೋ ಆಕೆಯ ಕೈಲಿದ್ದ ಟೀ ಪುಡಿಯ ಗಸಿಯನ್ನು ಫಳಾರನೆ ರಿಚಿಯ ಮೂತಿಗೆ ಎಸಿಯುವಳು. ಥೂ ಇದೇನ್ ಗುರು ಬೆಳಗ್ಗೇನೇ ಅಭಿಷೇಕ ಎಂಬಂತೆ ತನ್ನ ಮೂತಿಯನ್ನು ತನ್ನ ಮುಂಗೈಗಳಿಂದ ತಾನೇ ಸರಸರನೆ ಉಜ್ಜಿಕೊಳ್ಳುತ್ತಾ ಕೂರುವುದು ರಿಚಿ. ಇದೇನು ಪ್ರಥಮಬಾರಿಗೆ ಆಗಿರದೆ, ನೆನ್ನೆ ಕಾಫಿ ಪುಡಿಯ ಗಸಿ, ಮೊನ್ನೆ ಬಿಸಿ ನೀರು, ಅದಕ್ಕೂ ಹಿಂದಿನ ದಿನ ಅಕ್ಕಿ ತೊಳದ ನೀರು, ಅದಕ್ಕೂ ಹಿಂದಿನ ದಿನ ಅವರೇ ಕಾಳು ಸಿಪ್ಪೆ ಹೀಗೇ ದಿನಕ್ಕೊಂದೊಂದು ಅಭಿಷೇಕ ಕಂಡಿದ್ದ ರಿಚಿ ತಾಳ್ಮೆ ಎಂದರೇನೆಂದು ಅರಿತುಕೊಂಡಿತ್ತು. ಮಧ್ಯಾಹ್ನದ ವೇಳೆಗೇ ಶಾಲೆಯಿಂದ ಮನೆಗೆ ಮರುಳುತ್ತಿದ್ದ ನಿಖಿಲ್ ಸ್ನೇಹಿತನಿಂದ ಅನುಭವಿಸಿದ ಸೋಲಿಗೋ, ಗುರುಗಳಿಂದ ಅನುಭವಿಸಿದ ಶಿಕ್ಷೇಗೋ ಪ್ರತೀಕಾರವೆಂಬಂತೆ, ಮನೆಯಲ್ಲಿನ ಒಂಟಿತನದ ಅಡ್ಡಪರಿಣಾಮವೋ ಎಂಬಂತೆ ಇದ್ದ ಒಬ್ಬನೇ ಸಂಗಾತಿ ರಿಚಿಗೆ ಕಾಟ ಕೊಡುವುದನ್ನು ರೂಢಿಸಿಕೊಂಡಿದ್ದ. ಮೊದಮೊದಲು ಆಟವಾಡುತ್ತಾ, ನಂತರ ಆಟದ ಅತಿರೇಖವೆಂಬಂತೆ ಪೆನ್ಸಿಲ್ ನಿಂದ ಚುಚ್ಚಿ, ನೋವು ತಾಳಲಾರದೆ ಕಚ್ಚಲು ಬಂದ ರಿಚಿಯಿಂದ ತಪ್ಪಿಸಿಕೊಂಡು ಪಕ್ಕದಲ್ಲಿದ್ದ ಚೂಪನೆಯ ಕಂಬಿಯಿಂದ ತಿವಿದು ವಿಕೃತಾನಂದ ಅನುಭವಿಸಿ ಸುಧಾರಿಸಿಕೊಳ್ಳುವಷ್ಟರಲ್ಲಿ ಮನೆಯ ಮುಖ್ಯವಾದ ಪಾತ್ರ ಒಳಗೆ ಕಾರು ನುಗ್ಗಿಸಿಕೊಂಡು ಬಂದು ನೇರವಾಗಿ ರಿಚಿಯ ಗೂಡಿಗೆ ತಗುಲಿಕೊಂಡೇ ನಿಲ್ಲಿಸಿ ಹೆದರಿ ಬರುವ ಒಂದೇ ಭಾಷೆಯಲ್ಲಿ ಭೌ ಭೌ ಎಂದು ಕೂಗುತ್ತಿದ್ದ ರಿಚಿಯನ್ನು ಏನ ಬಂತೋ ರೋಗ ನಿಂಗೆ ನನ್ನ ನೋಡಿ ಬೊಗಳ್ತೀಯ ಧರಿದ್ರದ್ದೇ ತೊಗೊ.. ತೊಗೋ.. ಎಂದು ಉಳಿದಿದ್ದ ಚೂರು ಪಾರು ಶಕ್ತಿಯನ್ನು ಅದರ ಮೇಲೆ ವ್ಯಯಿಸಿ ಮನೆಯ ಒಳಗೆ ಹೋಗುವನು. ಬೆಳಗ್ಗಿನಿಂದ ಉಳಿದಿದ್ದನ್ನು, ಯಾರೂ ತಿನ್ನಲು ಸಾಧ್ಯವಾಗದ್ದನ್ನು ತಂದು ರಿಚಿಯ ಮುಂದಿರಿಸಿ ಹೋಗುವನು. ದೊಡ್ಡ ಮನೆ, ದಿನಕ್ಕೊಂದಾದ್ರು ಲೆಗ್ ಪೀಸ್ ಖಚಿತ ಎಂದು ಚಿಕ್ಕದರಲ್ಲಿ ತಾನು ಆಸೆ ಪಟ್ಟು ಈ ಮನೆಗೆ ತನ್ನ ತಾಯಿಯನ್ನು ಮರೆತು ಬಂದದ್ದನ್ನು ಈಗ ನೆನೆಸಿಕೊಂಡು ಕಣ್ಣೀರಿಡುತ್ತಾ ಪಾಲಿಗೆ ಬಂದದ್ದನ್ನ ಪರಮಭಕ್ಷ್ಯವೆಂದು ಭಾವಿಸಿ ಒಳಗೆ ಇಳಿಸುವುದು ರಿಚಿ. ರಾತ್ರಿ ತಿಂದದ್ದನ್ನ ಅರಗಿಸಲೆಂದೋ, ಮನೆಯ ಒಳಗಡೆ ಹೆಂಡತಿಯೆಂಬ ಬುಲ್ಡಾಗ್ ಬೊಗಳುವಿಕೆಯನ್ನು ತಪ್ಪಿಸಿಕೊಳ್ಳಲೆಂದೋ, ರಿಚಿಯನ್ನು ಕರೆದುಕೊಂಡು ವಾಕಿಂಗ್ ಶಾಸ್ತ್ರಕ್ಕೆ ಹೋಗಿ, ಅದಕ್ಕೆ ಬರದಿದ್ದರೂ ಅದು ತಿಂದದ್ದನ್ನ ಹೊರಗೆ ಹಾಕುವವರೆಗೂ ಬಿಡದೆ ಬಲವಂತವಾಗಿ ಯಾವುದಾದರೂ ಒಂದು ರೂಪದಲ್ಲಿ ಹೊರಗೆ ಹಾಕಿಸಿ ಮತ್ತೆ ತಂದು ಗೂಡಿನಲ್ಲಿ ಕಟ್ಟಿಹಾಕುವನು. ಹೊರಗೆ ದೂರದಿಂದ ಕಂಡ ತನ್ನ ಕನಸಿನ ಪ್ರೇಯಸಿಯರನ್ನ ನೆನೆಸಿಕೊಂಡು ರಿಚಿ ಹಾಗೆಯೇ ಕನಸಿನಲೋಕದ ಕದ ತಟ್ಟುವಷ್ಟರಲ್ಲಿ ಒಳಗೆ ಇದ್ದ ಬುಲ್ಡಾಗ್, ಡೋಬರ್ ಮನ್ ಮತ್ತು ಪಗ್ ಗಳು ಅರಚುವ ಶಬ್ದಗಳು ಕೇಳಿ ಮತ್ತೆ ತನ್ನ ನರಕಕ್ಕೆ ಹಿಂದಿರುಗಿ ಮೂತಿ ಇಷ್ಟೇ ಮಾಡಿಕೊಳ್ಳುವುದು ರಿಚಿ. ಅಂದು ಕೂಡ ಅದೇ ರೀತಿ ಮಾರಣಾಂತಿಕ ಹಲ್ಲೆ ನಡೆಸಿ ಅರೆಜೀವವಾಗಿದ್ದ ರಿಚಿ ಮೈಯಿಂದ ವಿಚಿತ್ರವಾಗಿ ನರಳುವ ಶಬ್ಧ ಹೊರಬರುತ್ತಿತ್ತು. ಅದು ಕಿವಿಗೆ ತಾಕದ ಹಾಗೆಯೇ, ಬೆಡ್ ರೂಮ್ ನಲ್ಲಿ ಬುಲ್ ಡಾಗ್, ಇನ್ನೊಂದು ರೂಮಿನಲ್ಲಿ ಪುಸ್ತಕದ ಹಾಸಿಗೆ ಮೇಲೆ ಪಗ್ ಮತ್ತು ಹಾಲ್ ನಲ್ಲಿರುವ ಸೋಫಾದ ಮೇಲೆ, ಲಾಪ್ ಟಾಪ್ ಮತ್ತು ಬಾಯಿ ತೆರೆದು ಗೊರಕೆ ಹೊಡೆಯುತ್ತಾ ಡೋಬರ್ ಮನ್ ಮಲಗಿತ್ತು.

ಬೆಳಗ್ಗೆ……… ಡೋಬರ್ ಮನ್ ನಿಧಾನವಾಗಿ ಕಣ್ಣು ಬಿಟ್ಟು ಇದೆಲ್ಲೋ ವಿಚಿತ್ರವಾಗಿ ಬಂದಂತಿದೆಯಲ್ಲಾ ಎಂದು ನಿದ್ರೆಯ ಮಂಪರಿನಲ್ಲೇ ನೋಡಿ ಹಾಗೇ ಮಲಗಿಕೊಂಡಿತು ತತ್ಕ್ಷಣ ಏನೋ ಪ್ರಮಾದವಾಗಿದೆಯೆಂಬಂತೆ ಧಿಡೀರನೆ ಕಣ್ಣು ತೆರೆದು ಸುತ್ತ ನೋಡಲು ಹಯ್ಯೋ ಇದಾವುದೋ ಗೂಡು, ತನ್ನ ಕುತ್ತಿಗೆಗೆ ಯಾರೋ ಹಗ್ಗ ಕಟ್ಟಿದ್ದಾರೆ! ಹೆದರಿ ಎದ್ದೇಳಲು ಪ್ರಯತ್ನ ಪಟ್ಟು ಗೂಡಿನ ಮಾಡು ತಗುಲಿ ಕೆಳಗೆ ಬೀಳುವನು, ತನ್ನಿಂದ ಪೂರ್ಣವಾಗಿ ಎದ್ದೇಳಲೂ ಸಹ ಆಗುತ್ತಿರಲಿಲ್ಲ, ತಾನು ನಿಲ್ಲಲು ನಾಲ್ಕೂ ಕಾಲನ್ನು ಬಳಸಬೇಕಾಗಿತ್ತು. ಹಾಗೇ ನಿಂತು ಸುತ್ತ ನೋಡಲು ಪಕ್ಕದ ಗೂಡಿನಲ್ಲಿ ತನ್ನ ಬುಲ್ಡಾಗ್ ನೆಮ್ಮದಿಯಾಗಿ ಮಲಗಿದೆ. ಥು ಎಲ್ಲಿ ತೊಗೊಂಡೋಗಿ ಹಾಕಿದರೂ ಇವಳ ಗೊರಕೆ ಮಾತ್ರ ಕಡಿಮೆಯಾಗಲ್ಲ ಎಂದು ಹಾಗೇ ನಾಲ್ಕು ಕಲಿನಲ್ಲೇ ತೆವಳಿಕೊಂಡು ಅವಳನ್ನು ತಟ್ಟಲು, ಬೌ ಬೌ ಎನ್ನುವಳು ಅವಳ ಅವಸ್ಥೆಯನ್ನು ಕಂಡು ಡೋಬರ್ ಗೆ ನಗು ತಡೆಯಲಾಗಲಿಲ್ಲ, ನಕ್ಕರೆ ಅವನೂ ಸಹ ಬೊ…ಬೌ ಎಂದು ಶಬ್ಧ ಹೊರಬರುತ್ತಿದೆ. ಹಯ್ಯೋ ಇದೇನಿದು ಅವಾಂತರ, ಏನಾಯ್ತು ನಮಗೆ ಎಂದು ಅವಳನ್ನು ಕರೆಯಲು ಪ್ರಯತ್ನ ಪಟ್ಟರೆ ಬೌ….ಬೌ ಬೌ ಬೌ ಎಂದು ಮಾತ್ರ ಮಾತು ಹೊರಹೊಮ್ಮುತ್ತಿದೆ. ಹಯ್ಯೋ ಮನಸಿನಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ ಆದರೆ ಮಾತು ಹೊರಬಂದಾಗ ಮಾತ್ರ ಯಾಕೆ ಹೀಗಾಗುತ್ತಿದೆ ಎಂದು ವಿಸ್ಮಯಗೊಂಡು, ಆದರೂ ಇದೇನೋ ವಿಚಿತ್ರವಾಗಿದೆ ಎಂದು ಮತ್ತೆ ಮತ್ತೆ ಬೌ ಬೌ ಬೌ ಬೌ…  ಎಂದು ಒಳಗೊಳಗೇ ತಾನೇ ತನ್ನ ಪರಿಸ್ಥಿತಿಗೆ ನಗುವನು. ಅಷ್ಟರಲ್ಲಿ “ರಿಚೀ……, ಥೂ ಮುಂಡೇದೆ, ಯಾರೋ ಒಳಗೆ ಬಿಟ್ಟಿದ್ದು ಹೋಗಾಚೆ” ಎಂದು ಹೇಳಿಕೊಂಡು ಬುಲ್ಡಾಗ್ ಕೂಡ ತನ್ನ ವಿಚಿತ್ರ ಮಾತಿನ ವರೆಸೆಗೆ ಹೌಹಾರಿ ಎದ್ದು ಕುಳಿತು ತನ್ನ ಪರಿಸ್ಥಿತಿಯನ್ನೂ ಅರಿತು, ಹೊಂದುಕೊಂಡು ಕೂತು ಇಬ್ಬರೂ ಯೋಚಿಸುವರು. ಅಷ್ಟರಲ್ಲಿ ತಮ್ಮ ಪುತ್ರ ರತ್ನ ಎಲ್ಲಿದ್ದಾನೆಂದು ಅಚ್ಚರಿಯಾಗಿ ಪಕ್ಕದ ಗೂಡಿನಲ್ಲಿ ನೋಡಲು, ಪುತ್ರ ರತ್ನವೆಂಬ ಪಗ್ ಮರಿಯು ಮಲಗಿಕೊಂಡೇ ಮಾಮೂಲಿನಂತೆ ಸುಯ್ಯನೆ ಮೂತ್ರ ಜಲಪಾತ ನಿರ್ಮಿಸುತ್ತಿತ್ತು. ನಂತರ ಮೂವರೂ ಸಮಾಲೋಚನೆಗೆಂಬಂತೆ ಕೂತು ದೀರ್ಘಾಲೋಚನೆ ನಡೆಸಿ ಡೋಬರ್ಮನ್ ಏನೋ ಹೇಳಲು ಬಾಯಿ ತೆರೆದು ಬೌ ಬೌ ಎಂದಿತು ಮೂವರಿಗೂ ನಗು ತಡೆಯಲಾಗಿಲ್ಲ. ಬಿದ್ದು ಬಿದ್ದು ಕುಯ್ ಬೌ ಬೌ ಎಂದುಕೊಂಡೇ ನಕ್ಕವು, ತಮ್ಮ ನಗುವಿನ ಪರಿ ಕಂಡು ಇನ್ನಷ್ಟು ನಕ್ಕವು. ಆದರೆ ತಮ್ಮ ನಿಜ ಪರಿಸ್ಥಿತಿಯ ಅರಿವಾಗಿ, ಡೋಬರ್ಮನ್ ಇಂದು ತಾನು ಮುಖ್ಯವಾದ ಬೋರ್ಡ್ ಮೀಟಿಂಗ್ ನಲ್ಲಿ ಉಪಸ್ಥಿತನಿರಬೇಕಿತ್ತೆಂದು, ಬುಲ್ಡಾಗ್ ಇಂದು ಪ್ರೆಸ್ ಮೀಟ್ ನಲ್ಲಿ ತಾನು ಒಪ್ಪಿಸಬೇಕಿದ್ದ ಪೂರ್ವನಿಯೋಜಿತ ಮಾತುಗಳ ಬಗ್ಗೆ ನೆನೆಸಿಕೊಂಡು ಹಗ್ಗ ಕೀಳುವಂತೆ ಎಳೆಯುತ್ತಿರಲು, ಸಧ್ಯ ಇಂದು ತನ್ನ ಸ್ಕೂಲ್ ನಿಂದ ಮುಕ್ತಿ ಸಿಕ್ಕಿತೆಂದು ಪಗ್ ಮಾತ್ರ ಇನ್ನೂ ತನ್ನ ತಂದೆ ತಾಯಿಯನ್ನು ನೋಡಿ ಆಗಬೇಕಿತ್ತು ಇವರುಗಳಿಗೆ ಎಂದು ನೋಡಿ ನೋಡಿ ನಗುತ್ತಲಿತ್ತು.

ಮೂವರೂ ಏನು ಮಾಡುವುದೆಂದು ತೋಚದೆ ಕೈಚೆಲ್ಲಿ ಕೂತಿರುವಾಗ ಮನೆಯ ಕದ ತೆರೆಯುತ್ತದೆ. ಹಾ!!! ತಮ್ಮ ಮನೆಯಲ್ಲಿ ಯಾರು ಸೇರಿರುವರೆಂದು ಕುತೂಹಲದಿಂದ ಗೂಡಿನಿಂದ ಹೊರಗೆ ಮೂತಿ ಹಾಕಿ ಕಣ್ಣರಳಿಸಿ, ಉಸಿರು ಬಿಗಿಹಿಡಿದು ನೋಡುತ್ತಿರಲು ತಾವು ಯಾವುದನ್ನು ಅಗಿರದಿರಲೆಂದು ಮನದಲ್ಲಿ ಕೇಳಿಕೊಳ್ಳುತ್ತಿದ್ದರೋ ಅದೇ ರಿಚಿ ಬಾಗಿಲು ತೆರೆದು ನಿಧಾನಗತಿಯಲ್ಲಿ ಕೈಲಿ ಬ್ರೆಡ್ ಪೀಸೊಂದು ಹಿಡಿದು ಅವರ ಬಳಿಗೆ ಠೀವಿಯಿಂದ ನಡೆದುಬರುತ್ತಿರುವನು. ಅರೆರೆ ಇವನಿಗೆ ಹೇಗಪ್ಪಾ ಎರಡು ಕಾಲಿನಲ್ಲಿ ನಡೆಯಲು ಸಾಧ್ಯ! ತನ್ನ ದುಬಾರಿ ಡ್ರೆಸ್ ಬೇರೆ ಥೂ ಅದನ್ನ ಒಗೆಯದೇ ಹಾಕುವಹಾಗಿಲ್ಲ ಇನ್ನ ಎಂದು ತನ್ನ ಪರಿಸ್ಥಿತಿಯಲ್ಲೂ ಡೋಬರ್ಮನ್ ಯೋಚಿಸದೇ ಇರಲಿಲ್ಲ. ಇದೆಲ್ಲಾ ರಿಚಿಯದ್ದೇ ಪಿತೂರಿ ಎಂದು ಅರಿತು ಡೋಬರ್ಮನ್ ಜೊತೆ ಸೇರಿ, ಬುಲ್ಡಾಗ್ ಸಹ ಕೋಪದಿಂದ ಹಗ್ಗ ಕಿತ್ತು ಬರುವ ಹಾಗೆ ರಿಚಿಯೆಡೆಗೆ ಮುನ್ನುಗ್ಗಲು ಪ್ರಯತ್ನಿಸುತ್ತಾ, ಸಾಧ್ಯವಾಗದೇ ಅಲ್ಲೇ ಬೌ ಬೌ ಎಂದು ಹಲ್ಲು ತೋರಿಸುತ್ತಾ ರಿಚಿಯನ್ನು ತಿಂದು ಹಾಕುವಹಾಗೆ ಗುರ್ರ್‍ರ್‍ರ್‍ರ್‍ರ್‍.. ದುರುಗುಟ್ಟುವರು. ಪಗ್ ಏನು ನಡೆಯುತ್ತಿದೆಯೆಂದು ಗೊತ್ತಾಗದೆ ಬೆರಗುಗಣ್ಣಿನೊಂದಿಗೆ ಕೂತೇ ಇತ್ತು. ರಿಚಿ ಬಂದವನೇ ನೇರವಾಗಿ ಅಲ್ಲೆ ಬಳಿ ಇದ್ದ ಚಾಟಿಯಂತಹ ದಾರವನ್ನು ತೆಗೆದು ಬಾರಿಸ ತೊಡಗಿದ. ಏನು ನಿಮ್ಮ ಗಲಾಟೆ ಬೆಳಗ್ಗೆ ಬೆಳಗ್ಗೇನೇ. ಮುಚ್ಚಿಕೊಂಡು ಬಿದ್ದಿರೋಕೆ ಆಗಲ್ವಾ ಅಂತ ಬಯ್ಯುತ್ತಲೇ ತನ್ನ ಕೈಲಿದ್ದ ಬ್ರೆಡ್ ಪೀಸನ್ನು ಗಬಕ್ಕನೆ ಒಂದೇ ಸಲಕ್ಕೆ ಬಾಯಿಗೆ ಹಾಕಿ ಥೇಟ್ ನಾಯಿಯ ರೀತಿಯೇ ಕಚಕಚನೆ ತಿಂದನು. ಮೈಕೈ ಕಿತ್ತುಕೊಂಡಿದ್ದ ಬುಲ್ಡಾಗ್ ಮತ್ತು ಡೋಬರ್ಮನ್ ವಿಲವಿಲನೆ ಒದ್ದಾಡುತ್ತಾ ನೋವಿಗೆ ಕುಯ್ ಕುಯ್ ಸದ್ದು ಹೊರಡಿಸುತ್ತಿದ್ದರು. ಇನ್ನೊಮ್ಮೆ ಈ ರೀತಿ ಬಾಯಿಬಡಿದುಕೊಂಡು ಸದ್ದು ಮಾಡಿದರೆ ಸಾಯಿಸಿಬಿಡುವುದಾಗಿ ಹೇಳಿ ಒಳಗೆ ಹೋದ ರಿಚಿ. ಮುಚ್ಚಿದ ಬಾಗಿಲು, ತಾವೇ ಕಟ್ಟಿಸಿದ್ದ ದೊಡ್ಡ ಗೋಡೆಯನ್ನು ನೋಡುತ್ತಾ ಇದೇನಿದು ತಮ್ಮ ಜೀವನ ಇದ್ದಕ್ಕಿದ್ದ ಹಾಗೆ ಹೀಗೆ ರಾಂಗ್ ಟರ್ನ್ ತೊಗೊಂಡಿತಲ್ಲ ಎಂದು ಅಲ್ಲೇ ಬಿದ್ದು ಶೋಕವ್ಯಕ್ತಪಡಿಸಿದರು.

ಏನು ಮಾಡುವುದೆಂದು ತೋಚದೆ, ಕಾಲ ಕಳೆಯಲು ಹಾಗೇ ಮೂವರೂ ಮೂತಿ ನೆಲಕ್ಕೂರಿ ಬಿದ್ದುಕೊಂಡು ಪಿಳಿ ಪಿಳಿ ಎನ್ನುತ್ತಿರಲು ಬಾಗಿಲು ಮತ್ತೆ ತೆರೆಯುತ್ತದೆ. ಮತ್ತೇನು ಕಾದಿದೆಯೋ ಎಂದು ಎಲ್ಲಾ ಬಾಯಿ ಕಳೆದು ಬಾಗಿಲ ಕಡೆ ನೋಡಲು, ರಿಚಿ ಪೆಡಿಗ್ರೀ ದೊಡ್ಡ ಪ್ಯಾಕೆಟ್ ಹಿಡಿದು, ಬಾಯಿಗೆ ಎಗರಿಸುತ್ತಾ ನಡೆದು ಬರುತ್ತಾ ಏನು ಅಷ್ಟು ದೊಡ್ಡ ಮನೆನಲ್ಲಿ ಇದ್ದಾಗ ಎಲ್ಲಾ ಬಾಯಿ ಬಡ್ಕೋತಿದ್ರಿ, ಕಚ್ಚಾಡ್ತಿದ್ರಿ ಇಲ್ಲಿ ಹಿಂಗೆ ಒಳ್ಳೇ ಬೆಪ್ಪು ತಕ್ಕಡಿಗಳು ಬಿದ್ದಂಗೆ ಬಿದ್ದಿದ್ದೀರ ಎಂದು ರಿಚಿ ಹಾಕಿದ ಪ್ರಶ್ನೆಗೆ ಮಿಕಿ ಮಿಕಿ ಮುಖ ನೋಡಿಕೊಂಡವೂ ಮೂವರೂ. ಏನು? ನಿಮಗೇ ಹೇಳ್ತಿರೋದು ಎದ್ದು ಕಿತ್ತಾಡಿ, ದಿನಾ ನಿಮ್ಮ ಜಗಳ ನೋಡಿ ನೋಡಿ ಇವಾಗ ಸುಮ್ನಿದ್ರೆ ಬೋರ್ ಹೊಡೆಯುತ್ತೆ. ಎದ್ದೇಳಿ ಹ್ಮ್.. ಎಂದು ಚಟೀರನೆ ಚಾಟಿ ಏಟು ಕೊಡುವನು. ಏಟಿನ ನೋವು ತಾಳಲಾರದೆ ಕಚ್ಚಾಡುವುದಕ್ಕೆ ಶುರುಮಾಡುವರು. ಅವರುಗಳು ಒಬ್ಬರ ಮೇಲೆ ಒಬ್ಬರು ಬಿದ್ದು ಒದ್ದಾಡುವುದನ್ನ ನೋಡಿ ಆನಂದಿಸಿ ರಿಚಿ ಎದುರಿಗಿದ್ದ ಕಾರ್ ಮೇಲೆ ಕೂತಿದ್ದವನು, ಅದೇನ್ ಕಚ್ಚಾಡ್ತೀರೋ ಥು ನಿಮ್ಮ ಮನುಷ್ಯ ಜಾತಿಗಳಿಗಿಷ್ಟು, ಎಂದು ಮತ್ತೆ ಚಾಟಿ ಬೀಸುವನು. ಪಗ್ ಬಳಿ ಹೋಗಿ ಇದೇ ಪೆನ್ಸಿಲ್ ನಲ್ಲಿ ಚುಚ್ಚುತ್ತಿದ್ದೆ ಅಲ್ವಾ ಎಂದು ಜೇಬಿನಿಂದ ಹೊರತೆಗೆದು ನೋಡು ಹೇಗಾಗುತ್ತೆ ಎಂದು ಚುಚ್ಚಲು ಮುಂದೆ ಹೋಗಲು ಅಕ್ಕ ಪಕ್ಕದಲ್ಲಿದ್ದ ಡಾಬರ್ಮನ್ ಮತ್ತು ಬುಲ್ಡಾಗ್ ಗುರ್‍ರ್‍ ಎಂದವು ಚಾಟಿಯಲ್ಲಿ ಎರಡು ಕೊಟ್ಟು ಸುಮ್ಮನಿರಿಸಿ, ಹೆದರಿ ಹಿಂದೆ ಹಿಂದೆ ಹೋಗುತ್ತಾ ಕುಯ್… ಎನ್ನುತ್ತಿದ್ದ ಪಗ್ ಕಾಲ ಬಳಿ ಚುಚ್ಚಿ ಕುಯ್ಯೋ ಎನ್ನುವಂತೆ ಮಾಡಿ ರಿಚಿ ನಗುವನು. ನೋವಾಗುತ್ತೆ ಅಲ್ವಾ ಎಂದು ಕೇಳಿದ್ದಕ್ಕೆ, ಹಯ್ಯೋ ಅರ್ಥ ಆಯ್ತು ಕ್ಷಮಿಸಿಬಿಡಪ್ಪಾ ಎಂದು ಕೈಗಳನ್ನು ಮುಂದೆ ಮಾಡಿ ಪಗ್ ಬೇಡಿಕೊಳ್ಳುವನು. ಗೂಡಿನ ಎರಡು ಮೂಲೆಗಳಲ್ಲಿ ಅಸಹಾಯಕರಾಗಿ ನೋಡುತ್ತಿದ್ದ ತಂದೆ ತಾಯಿಗಳನ್ನು ನೋಡಿ ಚಾಟಿ ತೋರಿಸುತ್ತಲೇ ನಿಮ್ಮನ್ನ ಮಧ್ಯಾಹ್ನ ಬಂದು ನೋಡಿಕೊಳ್ಳುತ್ತೀನಿ, ಏನಾದರೂ ಬಾಲ ಬಿಚ್ಚಿದರೆ ಇದೆ ನಿಮಗೆ ಮಾರೀ ಹಬ್ಬ ಎಂದು ಹೇಳಿ ಗೇಟಿನಿಂದ ಹೊರಗೆ ಸದ್ದು ಮರೆಯಾಗುವವರೆಗೂ ಎಲ್ಲರೂ ಸುಮ್ಮನಿದ್ದು, ಮಗನ ಸೊಂಟದ ಬಳಿ ಆಗಿದ್ದ ಗಾಯವನ್ನು ಇಬ್ಬರೂ ಸೇರಿ ಸಂತೈಸಿ ನೆಕ್ಕುವರು. ಅವನು ಬರುವಷ್ಟರಲ್ಲಿ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ಏನೇನು ಪ್ರಯತ್ನಿಸಿದರೂ, ಕತ್ತಿಗೆ ಕಟ್ಟಿರುವ ಹಗ್ಗ ಮಾತ್ರ ಜಗ್ಗಲಾಗದೆ, ಊಳಿಟ್ಟು ಯಾರನ್ನಾದರೂ ಕರೆಯಲು ಪ್ರಯತ್ನಿಸಿದರು. ಮನುಷ್ಯರು ಸಾಯುತ್ತಿದ್ದಾರೆಂದರೇ ಸುಮ್ಮನೆ ಟಿವಿ ನೋಡುತ್ತಾ ಊಟ ಮಾಡುವ ಜನ ಇನ್ನ ತಮ್ಮ ಊಳಿನ ಸದ್ದಿಗೆ ಪ್ರತಿಕ್ರಿಯಿಸುವರೇ ಎಂದು ಅರ್ಧ ಘಂಟೆ ಕೂಗಿದ ನಂತರ ಗೊತ್ತಾಗಿ ಸುಧಾರಿಸಿಕೊಂಡು ಹಾಗೇ ಕಣ್ಮುಚ್ಚಿ ತಮ್ಮ ವಿಚಿತ್ರ ಪರಿಸ್ಥಿತಿಗೆ ತಾವು ನಂಬಿದ್ದ ದೇವರನ್ನು ಕೊನೆಗೆ ಶಪಿಸುತ್ತಾ ಕೂರುವರು.

ಮಧ್ಯಾಹ್ನದ ಸಮಯಕ್ಕೆ ಸರಿಯಾಗಿ ರಿಚಿಯೊಂದಿಗೆ, ಹೆಸರಿಲ್ಲದ ಹಲವು ಬೀದಿ ಬೀದಿಯ ಕೊಳಕು ಮಂದಿ, ಬೆಂಗಳೂರಿನ ರಸ್ತೆಗಳಲ್ಲಿ ಗಾಡಿಗಳಿಗೆ ಸಿಕ್ಕು ಅಂಗವಿಕಲರಾಗಿರುವ ಮಂದಿ, ಮತ್ತು ಯಾರ ಮನೆಯವರೋ ಆದ ಹೈಬ್ರೀಡ್ ಮಂದಿ ಎಲ್ಲಾ ಗಲಾಟೆ ಮಾಡುತ್ತಾ “Beware of HUMAN/ ಮನುಷ್ಯರಿದ್ದಾರೆ ಎಚ್ಚರಿಕೆ” ಎಂಬ ಬೋರ್ಡ್ ನೋಡುತ್ತಾ, ಗೇಟ್ ಪ್ರವೇಶಿಸಿ, ಮನೆಯ ಪಕ್ಕದಲ್ಲಿ ಕಟ್ಟಿ ಹಾಕಿದ್ದ ಮನುಷ್ಯರನ್ನು ನೋಡಿ ಹಂಗಿಸುತ್ತಾ, ಛೂ.. ಛೂ.. ಎಂದು ಛೇಡಿಸುತ್ತಾ, ನಗುತ್ತಾ, ಕುಣಿಯುತ್ತಾ ಎಲ್ಲಾ  ಮನೆಯ ಒಳಗೇ ಹೋಗುವರು. ಇದೇನಪ್ಪಾ, ಮನೆ ಏನು ಗಬ್ಬೆಬ್ಬಿಸುವರೋ, ಏನೇನು ಹಾಳು ಮಾಡುವರೋ, ತಮ್ಮ ಅಮೂಲ್ಯವಾದ ಆಸ್ತಿ ಇಂಥಾ ನಾಯಿಗಳ ಕೈಗೆ ಸಿಕ್ಕು ಹಾಳಾಗುತ್ತಿದೆಯಲ್ಲಾ, ತಮ್ಮ ಮನೆಯಲ್ಲೇ ತಾವು ಒಂದು ದಿನಕ್ಕೂ ಇಷ್ಟು ಖುಷಿಯಿಂದ, ಆರಾಮವಾಗಿ ಕಾಲ ಕಳೆದಿಲ್ಲವಲ್ಲಾ ಎಂದು ಮಮ್ಮಲಮರುಗುತ್ತಾ, ಮುಚ್ಚಿದ್ದ ಬಾಗಿಲ ಕಡೆಗೇ ನೋಡುತ್ತಾ, ಒಳಗಿಂದ ಬರುತ್ತಿದ್ದ ಸಂಗೀತ, ಕುಣಿತ, ಕೂಗುವಿಕೆಯ ಶಬ್ಧಗಳನ್ನು ಬಾಯ್ತೆರೆದು ನೋಡುತ್ತಾ ಮೂಢರಂತೆ ನೋಡುತ್ತಾ ಕುಳಿತಿರುವರು. ಒಳಗೆ ಹೋದ ನಾಯಿಗಳನ್ನು ಬಯ್ಯುವಂತೆ ಎಷ್ಟು ಬೌ ಬೌ ಎಂದು ಅರಚಿದರೂ ಯಾರೂ ಕಿವಿಗೆ ಹಾಕಿಕೊಳ್ಳದೇ ತಮ್ಮ ಕ್ರಿಯೆ ಮುಂದುವರೆಸುವರು. ಒಳಗೆ ಅವರುಗಳು ಏನು ಮಾಡುತ್ತಿರಬಹುದು ಎಂದು ಈ ಮೂವರೂ ಕಲ್ಪಿಸಿಕೊಳ್ಳುತ್ತಾ, ಟಿವಿಯಲ್ಲಿ ಬಿತ್ತರವಾಗುತ್ತಿದ್ದ ನಾಯಿಗಳ ಕಾರ್ಯಕ್ರಮವನ್ನು ನೋಡುತ್ತಾ, ಬಟ್ಟಿಲಲ್ಲಿ ಹಣ್ಣಿನ ಜ್ಯೂಸನ್ನು ಹಾಕಿ ಸರ್‍ರ್‍ರ್‍ರ್‍ರ್‍ ಎಂದು ಹೀರುತ್ತಾ ಕೆಲವರು, ಬೆಡ್ರೂಮು ಸೇರಿ ಅಲ್ಲಿ ವಿನೋದವಾಗಿ ಆಟವಾಡುತ್ತಾ ಕೆಲವರು, ಶವರ್ ಕೆಳಗೆ ಸೋಪಿನ ನೊರೆಯನ್ನು ಬಚ್ಚಲ ಮನೆಯ ತುಂಬಾ ಚೆಲ್ಲಿ ಹರಡಿ ಹುಟ್ಟಿದಾರಬ್ಯ ಮಾಡಿರದ ಮಜ್ಜನದ ರುಚಿ ನೋಡುತ್ತಾ ಕೆಲವರು, ಹೊಟ್ಟೆಗೆ ಒಳ್ಳೆ ಊಟವನ್ನೇ ಕಾಣದೆ ಹೊಟ್ಟೆ ಬೆನ್ನಿಗೆ ಅಂಟಿದಂತಿದ್ದ ಕೆಲವರು ಕೈತುಂಬಾ ಮಾಂಸದ ಹಸಿ ತುಂಡನ್ನೇ ಬಾಯಲ್ಲಿ ಜೊಲ್ಲು ಸುರಿಸಿಕೊಂಡು ಗಬಗಬನೆ ಮೆಲ್ಲುತ್ತಿದ್ದ ಕೆಲವರು ಹೀಗೆ ಮನೆ ತುಂಬಾ ತುಂಬಿಕೊಂಡು ತಮ್ಮ ಮನೆಯನ್ನು ಅಧಿಕಾರದಲ್ಲಿ ಉಪಯೋಗಿಸುತ್ತಿರಬಹುದೆಂದು ನೆನೆದು ಹೊಟ್ಟೆ ಉರಿದುಕೊಂಡು ಏನೂ ಮಾಡಲಾಗದೆ ಕೈಚೆಲ್ಲಿ ಕೂತಿರುವರು ಬುಲ್ಡಾಗ್, ಪಗ್ ಮತ್ತು ಡೋಬರ್ಮನ್.

ತುಂಬಾ ಹೊತ್ತಿನ ನಂತರ ರಿಚಿ ಮತ್ತು ಹಲವರು ಕೈಲಿ ಮಾಂಸ, ಪಾನೀಯಗಳನ್ನು ಹಿಡಿದುಕೊಂಡು ಬಂದು ಎದುರಿಗೆ ನಿಂತರೂ ಮೂವರೂ ಏನೂ ಪ್ರತಿಕ್ರಿಯೆ ಕೊಡದೆ ಹಾಗೇ ಬಿದ್ದಿರುವುದನ್ನು ಕಂಡು, ಅವರ ಕೊಬ್ಬಡಗಿಸಲೋಸಗ ಹಲವು ರೀತಿ ಚಿತ್ರ ಹಿಂಸೆ ಕೊಟ್ಟು, ಅಟ್ಟಾಡಿಸಿಕೊಂಡು ಹೊಡೆದು, ಬಾಯಿಗೆ ಬಂದ ಹಾಗೆ ಬಯ್ಯತೊಡಗುವರು. ಯಾರೋ ಒಬ್ಬ ಬೀದಿ ನಾಯಿ ಪಾಪ ತನ್ನ ಮುರಿದಿರುವ ಕಾಲನ್ನು ತೋರಿಸಿ, ನನ್ನಂತ ಒಂದು ಜೀವವು ರಸ್ತೆಯಲ್ಲಿ ಹೋಗುತ್ತಿದ್ದರು ಲಕ್ಷಿಸದೆ ನನ್ನ ಮೇಲೆ ಇವನ ಸ್ನೇಹಿತನೋರ್ವನೇ ಕಾಲು ಮುರಿದಿದ್ದೆಂದು ದೂರು ನೀಡುತ್ತಾ ಡಾಬರ್ಮನ್ ಕಾಲನ್ನು ಕಚ್ಚುವನು, ಇನ್ನಾರೋ ನಾಯಿ ಬುಲ್ಡಾಗ್ ಕಡೆ ಹೋಗಿ ಇಂಥವಳೇ ಒಬ್ಬಳು ತನ್ನನ್ನು ಚಿತ್ರ ಹಿಂಸೆ ಕೊಟ್ಟು ಈ ರೀತಿಯ ಸಣಕಲು ದೇಹಕ್ಕೆ ಕಾರಣ ಎಂದು ಎಳೆದಾಡುವನು. ಬುಲ್ಡಾಗ್ ಮೈಮೇಲೆಲ್ಲಾ ಪರಚಿದ ಗೆರೆಗಳು ಬೀಳುವವು. ಈ ಪಗ್ ನಂತಹವನೇ ಒಬ್ಬ ತನ್ನ ಕಿವಿ ಕಿತ್ತಿದ್ದೆಂದು ಹೇಳಿ ಇನ್ನೊಬ್ಬ ಪಗ್ ನ ಜುಟ್ಟು ಹಿಡಿದು ಎಳೆಯುವನು. ತಮ್ಮನ್ನು ಸಿಕ್ಕ ಸಿಕ್ಕಲ್ಲಿ ಬಲೆ ಬೀಸಿ, ಕರೆಂಟ್ ಶಾಕ್ ಕೊಟ್ಟು, ಎಳೆದೊಯ್ದು ನಪುಂಸಕರನ್ನಾಗಿ ಮಾಡಿದ್ದನ್ನು ಬಂದಿದ್ದವರಲ್ಲಿ ಹಲವು ದಡೂತಿಗಳು ಕಣ್ಣಿನಲ್ಲಿ ನೀರು ಹಾಕಿಕೊಂಡೇ ಹೇಳುತ್ತಾ ಮೂವರ ಮೇಲೂ ಎಗರಿ ಬೀಳುವರು.  ಎಲ್ಲರೂ ಒಟ್ಟು ಸೇರಿ ಮೂವರನ್ನೂ ತಮ್ಮಲ್ಲಿರುವ ಕ್ರೋಧ ತೀರಿಸಿಕೊಳ್ಳುತ್ತಿರಲು ರಿಚಿ ಗೊತ್ತಾಯ್ತಾ ನೀವುಗಳು ನಮ್ಮ ಮೇಲೆ ಮಾಡಿದ್ದ ದೌರ್ಜನ್ಯ ನಿಮಗೆ ಇದರಿಂದ ಬುದ್ದಿ ಬರಲ್ಲ ಅಂತ ಗೊತ್ತು ಅನುಭವಿಸಿ, ಇನ್ನೂ ಅನುಭವಿಸಿ ಎಂಬಂತೆ ಸುಮ್ಮನೆ ನೋಡುತ್ತಾ ಕಾರ್ ಮೇಲೆ ಕುಳಿತು ಮೂಳೆ ಕಡಿಯುತ್ತಿರುವನು. ನೋವು ತಾಳಲಾರದೆ ಮೂವರೂ ಅರಚುತ್ತಾ ಊಳಿಡುವರು.

ಲಾಪ್ ಟಾಪನ್ನು ಅಷ್ಟು ದೂರ ಎಸೆದು ಮನೆಯೊಡೆಯ ಸೋಫಾದಿಂದ ಕೆಳಗುದುರುವನು, ರೂಮಿನಲ್ಲಿ ಕೂದಲು ಹರಡಿಕೊಂಡು ಬಿದ್ದಿದ್ದ ಒಡತಿ ಬೆಚ್ಚಿ ಎದ್ದು ಅರಚುವಳು, ಪುಸ್ತಕದ ಮೇಲೆ ಬಿದ್ದಿದ್ದ, ಸುತ್ತ ಪುಸ್ತಕಗಳನ್ನು ಒದ್ದೆ ಮಾಡಿಕೊಂಡಿದ್ದ ನಿಖಿಲ್ ಒಮ್ಮೆ ಕುಮುಟಾರಿ ಏಳುವನು. ಎಲ್ಲಾ ಎದ್ದು ಹಾಲ್ ನಲ್ಲಿ ಬಂದು ನೋಡಿಕೊಳ್ಳಲು, ಗಂಡನ ಕಾಲಿನಲ್ಲಿ ನಾಯಿಯ ಹಲ್ಲಿನ ಗುರುತಿರುತ್ತದೆ. ಒಡತಿಯ ಸೊಂಟವೆಲ್ಲಾ ಗೆರೆಗಳಿರುತ್ತದೆ, ಪಗ್ ನ ಕಾಲಿನಲ್ಲೂ ಚುಚ್ಚಿದ ಗುರುತಿರುತ್ತದೆ. ಯಾರಿಂದಲೂ ಏನೂ ಮಾತು ಹೊರಡುವುದಿಲ್ಲ. ಸುಮ್ಮನೆ ನಾಯಿಗೂಡಿನ ಬಳಿ ಹೋಗುತ್ತಾರೆ. ನಾಯಿ ಸದ್ದಿಲ್ಲದೆ ಬಿದ್ದಿರುತ್ತದೆ. ಧೈರ್ಯ ಮಾಡಿ ಹತ್ತಿರ ಹೋಗಿ ನೋಡಲು ರಿಚಿ ಸತ್ತು ಹೋಗಿರುತ್ತದೆ.

Beware of HUMAN/ ಮನುಷ್ಯರಿದ್ದಾರೆ ಎಚ್ಚರಿಕೆ!

Monday, 27 February 2012

ನನ್ಗೊಂದಾಸೆ!


ಮುನ್ನುಡಿ: ಆಸೆಗಳೊಂದಿಗೆ ಜೀವನ. ಜೀವನದಲ್ಲಿನ ಆಸೆಗಳು.

ಆಸೆ. ನನಗೆ ಮನಸೋಯಿಚ್ಛೆ ಅಳುವಾಸೆ. ನೆಮ್ಮದಿಯಾಗಿ ನಿದ್ರಿಸುವಾಸೆ, ಹೊಟ್ಟೆತುಂಬಾ ಅಮ್ಮನ ಎದೆಹಾಲು ಸವಿಯುವಾಸೆ. ಅಪ್ಪನ ಮೇಲೆ ಸುಸು ಮಾಡಿ ತುಂಟನಗೆ ನಗುವಾಸೆ. ಸಿಕ್ಕ ಸಿಕ್ಕವರ ಬಟ್ಟೆಯ ಮೇಲೆ ಸಿಂಬಳ ಸುರಿಸುವಾಸೆ. ಆಟವಾಡುವಾಸೆ. ಸ್ವಂತವಾಗಿ ನಾನೇ ನಡೆಯುವಾಸೆ, ಸೈಕಲ್ ತುಳಿಯುವಾಸೆ, ಬಿದ್ದು ತರಚಿದ ಗಾಯವನ್ನು ಮಣ್ಣಿನಿಂದ ಲೇಪಿಸುವಾಸೆ. ಸ್ಕೂಲಿಗೆ ಹೋಗುವುದಿಲ್ಲವೆಂದು ಹಠ ಹಿಡಿಯುವಾಸೆ. ಶಾಲೆಯಲ್ಲಿ ಕೂತು ಪಾಠ ಕೇಳದೆಯೇ ನಿದ್ರಿಸುವಾಸೆ. ಓದು, ಸ್ಕೂಲು, ಹೋಮ್ ವರ್ಕ್ಸೂ, ಪಾಠ, ಪರೀಕ್ಷೆ, ಟ್ಯೂಷನ್, ಸಮವಸ್ತ್ರವಿಲ್ಲದೆ ಕಾಲ ಕಳೆಯುವಾಸೆ. ಸಾಕೆನಿಸುವಷ್ಟು ಚಾಕಲೇಟ್ ಚಪ್ಪರಿಸುವಾಸೆ. ಒಂದೇ ಒಂದು ರೂಪಾಯಿ ಹಿಡಿದು ಇಡೀ ಬಿಡಿಎ ಕಾಂಪ್ಲೆಕ್ಸ್ ಕೊಂಡುಕೊಳ್ಳುವಹಾಗೆ ಸುತ್ತುವಾಸೆ. ನೂರು ರೂಲ್ಸ್ ಹಾಕುವವರ, ಅದನ್ನು ಮುರಿದು ಮಜಾ ನೋಡುವವರನ್ನೆಲ್ಲಾ ನೋಡಿ ಸುಮ್ಮನೆ ನಗುವಾಸೆ.

ಬಣ್ಣಬಣ್ಣದ ಬ್ರಾಂಡೆಡ್ ಬಟ್ಟೆ ತೊಡುವಾಸೆ, ದಿನಕ್ಕೊಂದು ಗಾಡಿ ಏರುವಾಸೆ, ಸಿಗರೇಟ್ ರುಚಿ ನೋಡುವಾಸೆ, ಸಿಕ್ಕಸಿಕ್ಕಿದ್ದನ್ನೆಲ್ಲಾ ಕುಡಿಯುವಾಸೆ. ಸದಾ ಸ್ನೇಹಿತರೊಂದಿಗೆ ಸುತ್ತುವಾಸೆ. ನೋಡಬಾರದ ಜಾಗ, ಕೇರಿ, ಊರನ್ನೆಲ್ಲಾ ನೋಡುವಾಸೆ. ಎಲ್ಲ ರೀತಿಯ ತಿಂಡಿ ಊಟದ ರುಚಿ ನೋಡುವಾಸೆ. ಸಿಕ್ಕ ಸಿಕ್ಕ ಪುಸ್ತಕಗಳನ್ನೂ ಪರೀಕ್ಷೆಗಾಗಿ ಅಲ್ಲದಿದ್ದರೂ ಓದುವ ಆಸೆ. ಗುರಿಯೇ ಇಲ್ಲದೆ ಸುಮ್ಮನೆ ಗಾಡಿಯಲ್ಲಿ ಕೂತು ಹೋಗುತ್ತಲೇ, ಹೋಗುತ್ತಲೇ, ಹೋಗುತ್ತಲೇ ಇರುವಾಸೆ. ಖಾಲಿ ರೋಡೊಂದರಲ್ಲಿ, ನಿರ್ಜನ ಪ್ರದೇಶದಲ್ಲಿ ನಿರ್ಭಯವಾಗಿ ನಿದ್ರಿಸುವಾಸೆ. ಬೆಟ್ಟದ ತುತ್ತ ತುದಿಗೆ ಹೋಗಿ ತಂದೂರಿ ಚಿಕನ್ ಕೈಲಿ ಹಿಡಿದು ಎಳೆಯುವಾಸೆ. ಜನರೆಲ್ಲರಿಂದ ಕಳೆದುಹೋಗಿ ಪ್ರಾಣಿಗಳ ಜೊತೆ ವಾಸಿಸುವಾಸೆ. ಕೆಲವೇ ದಿನಗಳಾದರೂ ಕಾಡು ಮನುಷ್ಯರೊಂದಿಗೆ ಕಾಡು ಮನುಷ್ಯನಾಗುವಾಸೆ. ಹೊಟ್ಟೆಪಾಡಿಗೆ ದುಡಿದು ದುಡ್ಡು ಸಂಪಾದನೆ ಮಾಡಿ ಅದರಿಂದ ಆಹಾರ ಪಡೆಯುವ ಬದಲು, ನೇರವಾಗಿ ಮರದಿಂದಲೋ, ಬೇಟೆಯಾಡಿಯೋ ಹೊಟ್ಟೆತುಂಬಾ ತಿನ್ನುವಾಸೆ. ನಗರದಲ್ಲಿ ನಿಂತಲ್ಲಿಯೇ ನಿಂತು, ಎಲ್ಲಾ ಓಡುತ್ತಿರುವ ಜನರನ್ನು ನೋಡಿ ಹೊಟ್ಟೆ ಹುಣ್ಣು ಬರುವಷ್ಟು ನಗುವಾಸೆ. ಏನು ಮಾಡಬಾರದು ಎಂದರೂ ಅದನ್ನೇ ಮಾಡಿ ನಲಿವಾಸೆ. ಅಪ್ಪ ಅಮ್ಮನಿಗೆ ಬೇಕೆಂದೇ ಕೋಪ ಬರಿಸುವಾಸೆ. ಯಾರೊಂದಿಗೂ ಕಮಿಟ್, ಅಟ್ಯಾಚ್ ಆಗದೆ ಎಲ್ಲರನ್ನೂ ಪ್ರೀತಿಸುವಾಸೆ. ಇಷ್ಟ ಬಂದವರ ಜೊತೆ ಸುತ್ತಾಡುವಾಸೆ. ಎಲ್ಲರೂ ದುಡಿದಿರುವ ದುಡ್ಡು ತಂದು ಒಟ್ಟು ಹಾಕಿ ಗಾಂಧೀಜಿಯವರು ಪಾಶ್ಚಾತ್ಯ ಉಡುಪನ್ನು ಸುಟ್ಟ ಹಾಗಿ ಸುಟ್ಟುಬಿಡುವಾಸೆ. ಬೆಂಕಿಯೊಂದಿಗೆ ಸರಸವಾಡುವಾಸೆ. ಕಡಲ ಮೇಲೆ ಮರದ ದಿಮ್ಮಿಗಳನ್ನು ಕಟ್ಟಿ ದ್ರಾಕ್ಷಿ ತಿನ್ನುತ್ತಾ ಪ್ರಿಯತಮೆಯೋರ್ವಳ ಜೊತೆ ಆಕಾಶ ನೋಡುತ್ತಾ ತೇಲುವಾಸೆ. ಜಲಪಾತದೊಂದಿಗೆ ಸರ್ರನೆ ಹರಿದುಬರುವಾಸೆ. ರೆಕ್ಕೆ ಕಟ್ಟಿಕೊಂಡು ಆಕಾಶದ ತುತ್ತ ತುದಿಗೆ ಹೋಗಿ ಧುಪ್ಪನೆ ಕೆಳಗೆ ಧುಮುಕುವಾಸೆ.

ಸರಳವಾಗಿ ಸಹಜಸುಂದರಿಯೋರ್ವಳನ್ನು ಕಟ್ಟಿಕೊಳ್ಳುವಾಸೆ. ಅವಳೊಂದಿಗಿದ್ದು ಇಡೀ ಪ್ರಪಂಚವನ್ನು ಮರೆಯುವಾಸೆ, ಸುತ್ತುವಾಸೆ. ಯಾರ ತಂಟೆಗೂ ಹೋಗದೆ, ಕೆಲಸ, ಮನೆ, ಸಂಸಾರದಲ್ಲಿ ಮಗ್ನನಾಗುವಾಸೆ. ಮೌನವಾಗಿ ಸಂಸಾರ ಬೆಳೆಯುವುದನ್ನ ನೋಡುವಾಸೆ, ಕಣ್ಮುಚ್ಚಿ ಮಗಳ ಸ್ಪರ್ಶವನ್ನ ಅನುಭವಿಸುವಾಸೆ. ಕಿವಿಮುಚ್ಚಿ ಹೆಂಡತಿಯ ಎಲ್ಲಾ ಕಂಪ್ಲೈಂಟುಗಳನ್ನು ಕೇಳುವಾಸೆ. ಕಾಲಿಲ್ಲದವನಂತೆ ಮನೆಯಲ್ಲೇ ಕೂತಿರುವಾಸೆ. ಯಾವುದೇ ಕೆಲಸ ಮಾಡದೇ ವಿಶ್ರಾಂತಿಸುವ ಆಸೆ. ದೇಹ ಸ್ವಾಧೀನ ಕಳೆದುಕೊಂಡವನಂತೆ ಮಲಗಿಯೇ ಇರುವ ಆಸೆ. ತಕ್ಷಣ ಬೋಧಿವೃಕ್ಷದಡಿ ಜ್ಞಾನೋದಯವಾದಂತೆ ಮನೆಗೇ ಹಿಂತಿರುಗದಷ್ಟು ಕೆಲಸ ಮಾಡುವಾಸೆ. ದುಡ್ಡಿನ ಮೇಲೆ ದುಡ್ಡು ಬಾಚಿ, ಸಿಕ್ಕ ಸಿಕ್ಕ ಕೆಲಸಗಳಲ್ಲೆಲ್ಲಾ ಪಳಗಿ, ಕಂಡ ಕಂಡದ್ದನ್ನೆಲ್ಲಾ ರುಚಿಕರವಾದ ಕಥೆಗಳನ್ನು ಮಾಡಿ ಜನರನ್ನು ರಂಜಿಸುವಾಸೆ. ಹೆಸರು, ಅಡ್ಡ ಹೆಸರು, ಮಾಡಿ ಲೋಕಪ್ರಿಯನಾಗುವಾಸೆ. ಜನರ ವಿಶ್ವಾಸ ಗಳಿಸುವಾಸೆ. ದೋಚಲಾಗುವಷ್ಟೂ ದುಡ್ಡು ಎಲ್ಲಾ ಮಾರ್ಗಗಳಿಂದಲೂ ದೋಚುವಾಸೆ. ಬರುವ ದುಡ್ಡನ್ನು ಎಣಿಸಲಿಕ್ಕೇ ಒಂದಷ್ಟು ಜನರನ್ನ ನೇಮಿಸುವಾಸೆ. ಮಕ್ಕಳನ್ನೆಲ್ಲಾ ಅವರವರ ದಾರಿಗೆ ಬಿಟ್ಟು ದುಡಿದಿದ್ದನ್ನೆಲ್ಲಾ ಎಲ್ಲರಿಗೂ ಹಂಚಿ ಯಾರಿಗೆ ಸೇರಿದೆಯೆಂದೂ, ಯಾರಿಂದ ಬಂತೆಂದೂ ಗೊತ್ತಾಗದ ಹಾಗೆ ಎಲ್ಲ ನಷ್ಟ ಕಷ್ಟದಲ್ಲಿರುವವರಿಗೂ ಹಂಚಿ ಯಾರಿಗೂ ಗೊತ್ತಿಲ್ಲದ ಜಾಗಕ್ಕೆ ಹೋಗಿಬಿಡುವಾಸೆ. ಒಬ್ಬರಿಂದಲೂ ಎಂದೂ ಕೃತಜ್ಞತೆ ಪಡೆಯದರಿವ ಆಸೆ. ಎಲ್ಲಾ ಹಿಂದಿನ ಜೀವನವನ್ನು ಮೆಲುಕುಹಾಕುತ್ತಾ ಹೆಂಡತಿಯೊಂದಿಗೆ ಪರಿಸರದಲ್ಲಿ ಲೀನವಾಗುವಾಸೆ. ಬೆಂಕಿ ಹಚ್ಚಿಕೊಂಡೋ, ನೇಣು ಹಾಕಿಕೊಂಡೋ, ಗುಂಡು ಹೊಡೆದುಕೊಂಡೋ, ವಿಷ ಸೇವಿಸಿಯೋ, ವಿಚಿತ್ರವಾಗಿ ಸಾಯುವಾಸೆ.

ಸತ್ತ ಮೇಲೆ ಶವಕ್ಕೆ ಯಾವ ರೀತಿಯ ಹೂವಿನ ಅಲಂಕಾರ ಮಾಡದಿರಲೆಂದಾಸೆ. ಬಿದಿರು ಮೋಟಾರಿನ ಮೇಲೆ ಹೋಗದಿರಲೆಂದಾಸೆ. ಶಾಸ್ತ್ರ, ಮಂತ್ರ, ಪೂಜೆ, ಅಕ್ಕಿಕಾಳನ್ನು ಬಾಯಲ್ಲಿ ತಿನ್ನಲಾಗದಿರುವಾಗ ಹಾಕದಿರಲೆಂದಾಸೆ. ಕಣ್ಣು, ಕಿವಿ, ಹೃದಯ ಬೇಕು ಬೇಕಾದ್ದನ್ನು ಕಿತ್ತುಕೊಂಡು ಶವಸಂಸ್ಕಾರವನ್ನು ವಿಧಿವಿಧಾನಗಳೊಂದಿಗೆ ಮಾಡದಿರಲೆಂದಾಸೆ. ಮಣ್ಣೋ ಬೆಂಕಿಯೋ ಇಟ್ಟು ಯಾರೂ ಹಿಂದಿರುಗದೆಯೇ ಹೊರಟು ಹೋಗಲೆಂದಾಸೆ. ಸತ್ತ ಮೇಲೆ ಯಾರೂ ಯಾವುದೇ ಕಾರಣಕ್ಕೂ ನನ್ನನ್ನು ನೆನೆಯದಿರಲೆಂದಾಸೆ. ಯಾವುದೇ ರೀತಿಯ ಶೋಕಾಚರಣೆಯನ್ನು ಯಾರೂ ಯಾವುದೇ ರೀತಿಯಲ್ಲೂ ಮಾಡದೆ ಇರಲೆಂದಾಸೆ. ತಿಥಿಯ ಹೆಸರಿನಲ್ಲಿ ಪಕ್ಷಿ, ಪಶುವಿನೊಡಗೂಡಿ ಯಾವ ಬಂಧುಗಳೂ ವಡೆ ಪಾಯಸ ಮೆಲ್ಲದಿರಲೆಂದಾಸೆ. ಕುಂಕುಮ, ಹಾರ ಹಾಕಿಸಿಕೊಂಡ ಫೋಟೋ ಫ್ರೇಮ್ ಆಗದಿರಲೆಂದಾಸೆ. ಆಸೆ.

ಹಿನ್ನುಡಿ: ಆಸೆಗಳಿಗೆ ಕೊನೆಯಿಲ್ಲದಿರಲಿ… 

Tuesday, 21 February 2012

ಸಾಕ್ಷಾತ್ಕಾರ!




ಮುನ್ನುಡಿ: ಇದೊಂದು ಸ್ವಗತ ಲಹರಿ. ನಿಮ್ಮ ನಿಮ್ಮ ಚೌಕಟ್ಟಿನಿಂದ ಹೊರಗೆ ಚಿಂತಿಸಲಿಷ್ಟಪಡದವರು ದಯವಿಟ್ಟು ಮುಂದುವರೆಯಬೇಡಿ.

ಇವನ ಕೈಯಲ್ಲಿ ಒಂದು ಅಸ್ತ್ರವಿದೆ. ಇವನು ಮನಸಿಗೆ ಬಂದದ್ದು ಮಾಡುತ್ತಾನೆ. ಇವನಿಗೆ ಕೋಪ ಬರಿಸಿದರೆ ವಿನಾಶ ಖಂಡಿತ. ತಪ್ಪು ದಾರಿಯಲ್ಲಿದ್ದವರಿಗೆ ಇವನು ತನ್ನದೇ ಆದ ರೀತಿಯಲ್ಲಿ ಪಾಠ ಕಲಿಸುತ್ತಾನೆ. ಇವನಿಗೆ ಯಾರ ಪ್ರಾಣ ಬೇಕಾದರೂ ತೆಗೆದುಕೊಳ್ಳುವ ಸ್ವಯಂ ಘೋಷಿತ ಹಕ್ಕಿದೆ. ಇವನ ದಾರಿ ತುಳಿಯದವರನ್ನು, ಇವನಿಗೆ ನಿಷ್ಠನಾಗಿರದವರನ್ನು ಎಲ್ಲಿ ಹೇಗೆ ಬೇಕಾದರೂ ಮುಗಿಸುತ್ತಾನೆ. ಇವನಿಗೆ ಕೊಟ್ಟ ಮಾತಿನಂತೆಯೇ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ತಕ್ಕ ಶಾಸ್ತಿ ಖಂಡಿತ. ಇವನನ್ನು ಕಾಣಲು ಇವನಿರುವ ಸ್ಥಳಕ್ಕೇ ಹೋಗಬೇಕು. ಇವನಿಗೆ ತುಂಬಾ ಜನ ಪರಿಪಾಲಕರಿದ್ದಾರೆ. ಇವನಿಗೆ ದಕ್ಷಿಣೆ ಸದಾ ಸಲ್ಲಿಸಲೇ ಬೇಕು. ಇವನ ಬಗ್ಗೆ ಭಯವನ್ನಿಟ್ಟು ಎಲ್ಲರೂ ಬದುಕಬೇಕು. ಮರೆತರೆ ಮರಣದಲ್ಲೂ ಕೈ ಹಿಡಿಯುವುದಿಲ್ಲ. ಇವನು ಹೇಳುವುದು ಅಂತಿಮ. ಇವನು ಯಾರ ಮಾತಿಗೂ ಅಂಜುವುದಿಲ್ಲ. ಯಾರ ಮಾತನ್ನೂ ಪರಿಗಣಿಸುವುದಿಲ್ಲ. ಯಾರೂ ವಿರೋಧಿಸುವಹಾಗಿಲ್ಲ. ಯಾರಿಗೂ ಪ್ರಶ್ನಿಸುವ ಹಕ್ಕಿಲ್ಲ. ನನ್ನ ಎಡಗಡೆಗೆ ಇವನನ್ನು ಒಂದು ಕುರ್ಚಿ ಹಾಕಿ ಕುಳ್ಳಿರಿಸಿದ್ದೆ. ಬಲಗಡೆಗೆ ಇನ್ನೊಬ್ಬ ವಿಶಿಷ್ಟವಾದ ಇಂದು(ಶಿವರಾತ್ರಿಯ ದಿನ) ಭಯಾನಕ ಬಿಝಿಯಾಗಿರುವ ವ್ಯಕ್ತಿತ್ವವನ್ನು ಹಿಡಿದುತಂದು ಕೂರಿಸಿದ್ದೆ. ಈತ ತನ್ನದೇ ಆದ ವಿಚಿತ್ರ ಆಸನವನ್ನು ತಂದು ಅದರ ಮೇಲೆಯೇ ಕುಳಿತಿದ್ದ. ಈ ಮೇಲೆ ಹೇಳಿರುವ ಎಲ್ಲಾ ಗುಣಲಕ್ಷಣಗಳನ್ನು ಇವನಿಗೂ ಆರೋಪಿಸಬಹುದು.

ಇಬ್ಬರೂ ನೋಡಲು ಒಂದೇ ರೀತಿ ಕಂಡರೂ ಇಬ್ಬರ ವ್ಯಕ್ತಿತ್ವ ಅಜಗಜಾಂತರ ವ್ಯತ್ಯಾಸವನ್ನು ಹೊಂದಿತ್ತು. ಆದರೂ ಇಬ್ಬರನ್ನೂ ನಾವು ಒಂದೇ ತಕ್ಕಡಿಯಲ್ಲಿ ತೂಗಲು ಶುರುಮಾಡಿರುವುದರಿಂದ ಒಮ್ಮೆ ಇವರನ್ನು ಎದುರುಬದುರು ಕುಳ್ಳಿರಿಸಿ ನನಗೆ ಇವರಿಬ್ಬರ ನಡುವೆ ಇರುವ ಗೊಂದಲವನ್ನು ನಿವಾರಿಸಿಕೊಳ್ಳಲೋಸಗ ಇಂದಿನ ಶುಭಸಂದರ್ಭದಲ್ಲಿ ಕರೆಸಿದ್ದೆ. ಇಬ್ಬರೂ ಅನಾವಶ್ಯಕವಾಗಿ ಮಾತನಾಡದೇ ಒಂದೇ ರೀತಿಯ ಗಾಂಭೀರ್ಯತೆಯನ್ನು ಮೆರೆಯುತ್ತಿದ್ದರು. ಆದರೂ ಅದೇನೋ ಇಬ್ಬರ ಮುಖದಲ್ಲೂ ಒಂದೇ ರೀತಿಯ ಕಾಂತಿಯಿತ್ತು. ನನ್ನ ಮನಸಿನಲ್ಲಿ ಇಬ್ಬರನ್ನು ತಾಳೆನೋಡುತ್ತಿದ್ದಂತೆಯೂ ಇನ್ನೂ ಗೊಂದಲಗಳು ಹುಟ್ಟಿ, ವಿಚಾರಲಹರಿಯೇ ಹರಿಯುತ್ತಿತ್ತು.

ನನ್ನ ಬಲಗಡೆಯಿದ್ದವರಿಂದ ನಾನು ನನ್ನ ಪ್ರಶ್ನೆ ಶುರುಮಾಡಿದೆ. ಇಷ್ಟೆಲ್ಲಾ ಜನರಿಂದ ಇಷ್ಟು ಕೋರಿಕೆಗಳು, ಸಮಸ್ಯೆಗಳು, ಅಹವಾಲುಗಳು, ಬೇಡಿಕೆಗಳು, ಮುಂತಾದವು ನಿನ್ನ ಬಳಿ ಬಂದರೂ ಹೇಗೆ ನೀನು ಹೀಗೆ ಮಂದಹಾಸದೊಂದಿಗೆ ಕುಳಿತಿದ್ದೀಯ. ಏನಿದರ ರಹಸ್ಯ ಎಂದು ಕೇಳಿದ್ದಕ್ಕೆ, ಆತನಿಂದ ಬಂದ ಉತ್ತರ ಮಂದಹಾಸದ ನಿಶ್ಕಲ್ಮಶ ಮೋರೆಯಷ್ಟೇ. ಆದರೆ ಆತ ಉತ್ತರಿಸದಿದ್ದರೂ ಉತ್ತರಿಸಿದಹಾಗಿತ್ತು. ಉತ್ತರ ನನ್ನ ವಿವೇಚನೆಗೆ ತಲುಪಿತು. ಅವನ ‘ನಿರುತ್ತರ’ವೇ ನನ್ನ ಪ್ರಶ್ನೆಗೆ ಉತ್ತರವೆನಿಸುತ್ತದೆ.

ನನ್ನ ಎಡಗಡೆಯಿದ್ದ ಮನುಷ್ಯನನ್ನುದ್ದೇಶಿಸಿ ನೀನು ಮಾಡುತ್ತಿರುವ ಕೆಲಸ, ನಿನ್ನ ಮಾರ್ಗ ತಪ್ಪಲ್ಲವೇ? ಎಂದು ಕೇಳಿದರೆ, ನಾನು ಮಾಡುತ್ತಿರುವುದು ತಪ್ಪಾದರೆ, ಜನ ಸಾಮಾನ್ಯರು ಮಾಡುತ್ತಿರುವುದೂ ಕೂಡ ತಪ್ಪು. ನನಗೆ ನಾನು ಮಾಡುತ್ತಿರುವುದು ಸರಿ ಎಂದೆನಿಸಿದ್ದಕ್ಕೇ ಮಾಡುತ್ತಿರುವುದು. ಜನ ಅವರಿಗೆ ಸರಿ ಎನಿಸಿದ್ದು ಅವರು ಮಾಡುತ್ತಿದ್ದಾರೆ. ಇಲ್ಲಿ ತಪ್ಪೇನಿದೆ ಎಂದು ಮತ್ತೆ ನನ್ನನ್ನೇ ಮರುಪ್ರಶ್ನೆ ಮಾಡಿದ. ಉತ್ತರಿಸುವ ಶಕ್ತಿ ನನ್ನಲ್ಲಿರಲಿಲ್ಲ.

ಮತ್ತೆ ಬಲಗಡೆ ತಿರುಗಿ ನೀವು ಈ ಎಡಗಡೆ ಕುಳಿತಿರುವ ಮನುಷ್ಯನಿಗಿಂತ ಯಾವುದೇ ರೀತಿಯಲ್ಲಿ ಭಿನ್ನವಾಗಿ ಕಾಣುತ್ತಿಲ್ಲ ನನಗೆ ಅವನು ಮಾಡುತ್ತಿರುವ ಭಯೋತ್ಪಾದನೆ ನೀವೂ ಸಹ ಮಾಡುತ್ತಿದ್ದೀರಿ. ಮಕ್ಕಳನ್ನು ಪೋಷಕರು, ಹಿರಿಯರು, ಗುರುಗಳು ತಮಗೆ ಸರಿ ಎನಿಸಿದ ಮಾರ್ಗ ಅನುಸರಿಸುವಂತೆ ಮಾಡಲು ನಿಮ್ಮನ್ನು ಉಪಯೋಗಿಸಿ, ಭಯ ಹುಟ್ಟಿಸುತ್ತಾರೆ. ಕದಿಯಬಾರದು ‘ನೀನು’ ಕಣ್ಣು ಕಿತ್ಕೋತೀಯ, ಸುಳ್ಳು ಹೇಳಬಾರದು ‘ನೀನು’ ಬಾಯಿ ಕಸಿದುಕೊಳ್ತೀಯ, ನಿನಗೆ ಪ್ರತಿದಿನ ನಮಸ್ಕರಿಸಬೇಕು ಇಲ್ಲವಾದಲ್ಲಿ ಮುನಿಸಿಕೊಂಡು ಶಾಪ ಕೊಡುತ್ತೀಯೆ, ಇಂಥ ದಿನ ಇಂಥ ಆಹಾರ ತಿನ್ನಕೂಡದು ಇಲ್ಲವಾದಲ್ಲಿ ನಿನ್ನ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ನಿನ್ನನ್ನು ನಂಬದವರು, ಪೂಜಿಸದವರು ಹಾಳಾಗಿ ಹೋಗುತ್ತಾರೆ. ನಿನ್ನ ಪ್ರಸಾದವನ್ನು ಕಣ್ಣಿಗೊತ್ತಿಕೊಳ್ಳಬೇಕು, ನಿನ್ನನ್ನು ಸಂಪ್ರೀತಗೊಳಿಸಲು ಹಣವ್ಯಯ ಮಾಡಿ ಅರ್ಚನಾದಿಗಳನ್ನು ಮಾಡಿಸಬೇಕು, ನೀನು ಮನೆ ಮನೆಯಲ್ಲಿ ನೆಲೆಸಲು ನಿನ್ನನ್ನು ಮನೆಯಲ್ಲಿ ಪ್ರತಿಷ್ಠಾಪಿಸಬೇಕು. ನಿನ್ನನ್ನು ಬಯ್ಯಬಾರದು, ನಿನ್ನನ್ನು ಸದಾ ಹೊಗಳುತ್ತಲೇ ಇರಬೇಕು, ನಿನ್ನನ್ನು ಪ್ರಶ್ನಿಸಬಾರದು. ಇಲ್ಲಿಂದಾ ಹಿಡಿದು ನಿನ್ನ ಹೆಸರಿನಲ್ಲಿ ಮೊಬೈಲ್ ಗೆ ಅಥವಾ ಫ಼ೇಸ್ ಬುಕ್ ನಲ್ಲಿ ಮೆಸೇಜ್ ಬಂದರೆ ಅದನ್ನ ಮತ್ತೊಂದಷ್ಟು ಜನರಿಗೆ ಕಳುಹಿಸಿದರೆ ನಿನ್ನ ಪ್ರೀತಿಗೆ ಪಾತ್ರರಾಗಬಹುದು ಎಂಬುವ ತನಕ ಮತ್ತು ಇನ್ನೂ ಮುಂದುವರೆದು ಬೀದಿ ಬೀದಿಗಳಲ್ಲಿ ನಿನ್ನ ಹೆಸರನ್ನು ಉಪಯೋಗಿಸಿ ಜನ ಮೂತ್ರ ವಿಸರ್ಜನೆ ಮಾಡದ ಹಾಗೆ ತಡೆಗಟ್ಟುವಲ್ಲಿ ನಿನ್ನ ಭಯೋತ್ಪಾದಕ ಗುಣ ಸಹಾಯಕವಾಗುತ್ತಿದೆ. ಏನು ಹೇಳುವೆ ಇದರ ಬಗ್ಗೆ ಎಂದು ಕೇಳಿದ್ದಕ್ಕೆ. ಶಾಂತವಾಗೇ ಉತ್ತರಿಸಿದ. ನೀನು ಕೇಳಿದ ಅಷ್ಟೂ ಪ್ರಶ್ನೆಗಳಿಗೆ ನಾನು ಜವಾಬ್ದಾರನಲ್ಲ. ನಾನು ಅಲ್ಲೆಲ್ಲೂ ಇಲ್ಲವೇ ಇಲ್ಲ. ಭಕ್ತಿ ಇದ್ದಲ್ಲಿ ನಾನಿದ್ದೇನೆ ಎಂದು ಮಾತ್ರ ಹೇಳಿದ.

ನನ್ನ ಎಡಗಡೆ ಇದ್ದ ವ್ಯಕ್ತಿ ಮಧ್ಯೆ ಬಾಯಿ ಹಾಕಿ ಇವರು ದೇವಸ್ಥಾನದಲ್ಲಿ ಮತ್ರ ಇರೋದು ಎಂದು ಹೇಳಿದ. ಅದಕ್ಕೆ ಬಲಗಡೆ ಇದ್ದಾತ ಮನೆ ಮನೆಯಲ್ಲಿ, ಮನ ಮನದಲ್ಲೂ, ಕಣ ಕಣದಲ್ಲೂ ಇದ್ದೇನೆ ಎಂದ. ಎಡಗಡೆ ಇದ್ದಾತ, ಮತ್ತೆ ಜನ ದೇವಸ್ಥಾನಕ್ಕೆ ಯಾಕೆ ಬರುತ್ತಾರೆ ಎಂದು ಪ್ರಶ್ನೆ ಮುಂದುವರೆಸಿದ, ತಮ್ಮಲ್ಲಿರುವ ನನ್ನನ್ನು ಕಾಣಲಸಮರ್ಥರು ಹುಡುಕಿಹೊರಡುತ್ತಾರೆ ಎಂದು ತೀಕ್ಷ್ಣವಾಗಿ ಉತ್ತರ ಬಂತು. ಎಡ ವ್ಯಕ್ತಿ ಮಾತು ಮುಂದುವರೆಸುತ್ತಾ ನೀನು ಮೋಸಗಾರ ನಿನ್ನ ಕೈಯಲ್ಲಿ ಏನೂ ಆಗಲ್ಲ, ನಾನು ಇಷ್ಟೆಲ್ಲಾ ಜನರನ್ನ ಸಾಮೂಹಿಕವಾಗಿ ಮುಗಿಸಿದ್ದೇನೆ ನೀನು ನಿಜವಾಗಲೂ ಶಕ್ತಿಯುತನಾಗಿದ್ದಲ್ಲಿ ನನ್ನನ್ನು ಇಷ್ಟು ರಾಜಾರೋಷವಾಗಿ ಓಡಾಡಲು ಬಿಡುತ್ತಿದ್ದೆಯಾ ಎಂದು ಕೇಳಿದ. ಉತ್ತರ ಏನು ಬರಬಹುದೆಂಬ ಕುತೂಹಲ ನನಗೇ ಹೆಚ್ಚಿತ್ತು. ಉತ್ತರ ಶಾಂತವಾಗೇ ಬಂತು. ತಪ್ಪು ಮಾಡಿದವರನ್ನೆಲ್ಲಾ ಹಿಡಿದು ಶಿಕ್ಷಿಸುತ್ತಾ ಕೂರುವ ಕೆಲಸ ನನ್ನದಲ್ಲ. ನೀನು ಭಯೋತ್ಪಾದನೆಯಲ್ಲಿ ತೊಡಗಿದ್ದಲ್ಲಿ, ಭಯೋತ್ಪಾದನೆ ನಿನ್ನನ್ನು ಕರೆದೊಯ್ಯುತ್ತದೆ. ಎಲ್ಲಾ ಮನುಷ್ಯರು ಮಾಡಿಕೊಂಡಿರುವ ಆಯಾ ಕಾಲದ ವ್ಯವಸ್ಥ್ಯಾನುಸಾರವಾಗಿ ಜಗತ್ತು ನಡೆಯುತ್ತದಷ್ಟೇ. ಏನೇ ಆದರೂ ಕಾರಣಕರ್ತ ಮನುಷ್ಯನೇ ಅಂತಿಮವಾಗಿ.

ಮತ್ತೆ ನಿನ್ನ ಪಾತ್ರವೇನು ಎಂದು ಕುತೂಹಲ ತಡೆಯಲಾಗದೆ ನಾನೇ ಕೇಳಿದೆ. ಅದೇ ತಾಳ್ಮೆಯಿಂದಲೇ ಉತ್ತರಿಸಿದ ಆತ, ನಾನು ಏನೂ ಅಲ್ಲ. ನಾನು ಹೊರಗಿಲ್ಲ, ನಿಮ್ಮ ಒಳಗಿದ್ದೇನೆ, ನನ್ನನ್ನ ನೀವು ಕಂಡುಕೊಂಡಹಾಗಿ ಕಾಣಸಿಗುತ್ತೇನೆ. ಬಳಸಿದ ಹಾಗೆ ಬಳಕೆಯಾಗುತ್ತೇನೆ. ನಾನಿಲ್ಲ ಎಂದರೆ ನಾನಿಲ್ಲ, ನಾನಿದ್ದೇನೆಂದರೆ ನಿಮ್ಮ ಇಷ್ಟಾರ್ಥ ರೂಪದಲ್ಲಿ ಇದ್ದೇನೆ. ಇದ್ದೇನೆ ಎಂಬುದೇ ನಂಬಿಕೆ. ಆ ನಂಬಿಕೆಯಷ್ಟೇ ನಾನು. ಇನ್ನೇನೂ ಇಲ್ಲ.

ಇವರೊಂದಿಗೆ ಮಾತುಕತೆ ಮುಂದುವರೆಯುತ್ತಲೇ ಹೋಯಿತು. ದೇವರ ಹೆಸರಿನಲ್ಲಿ ನಾವು ಮಾಡುತ್ತಿದ್ದ ಭಯೋತ್ಪಾದನೆಯನ್ನು ನೆನೆಸಿಕೊಂಡಾಗ ಈಗ ನಗು ಬರುತ್ತಲಿತ್ತು. ಯಾವ ರೂಪದಲ್ಲಿ ಮಾಡಿದರೂ ಭಯೋತ್ಪಾದನೆಯು ಒಂದು ಕ್ರೌರ್ಯ ಪ್ರದರ್ಶನವಷ್ಟೇ. ಎಡಗಡೆ ಇದ್ದ ಭಯೋತ್ಪಾದಕ ನಮ್ಮೆಲ್ಲರ ಪ್ರತೀಕವಾಗೇ ಕುಳಿತು ವಾದಿಸುತ್ತಿದ್ದ. ಬಲಗಡೆ ಇದ್ದ ನಮ್ಮೊಳಗಿರುವ ದೇವರು ನಿಜ ಸ್ವರೂಪದ ಅರಿವು ಮೂಡಿಸಲು ಶ್ರಮ ಪಡದೆ ಹಲವು ಬಾರಿ ನಿರುತ್ತರನಾಗಿ ನೆಮ್ಮದಿಯಾಗಿ ಇದ್ದ. ಇವರಿಬ್ಬರ ನಡುವೆ ಇದ್ದ ನಾನು ಇನ್ನು ಮುಂದೆ ನನ್ನಲ್ಲಿರುವ ದೇವರನ್ನೇ ಪೂಜಿಸುವ, ಆರಾಧಿಸುವ, ದಾರಿಯಲ್ಲಿ ಮುನ್ನಡೆಯಬೇಕೆಂದು ತೀರ್ಮಾನಿಸಿದ್ದೆ. ಮತ್ತೇನೇ ಸಂಶಯ, ಪ್ರಶ್ನೆಗಳು ಹುಟ್ಟಿದಲ್ಲಿ ನನ್ನ ಒಳಗಿರುವ ದೇವರನ್ನೇ ಯಾವ ಭಯವಿಲ್ಲದೇ, ಯಾವಾಗ ಬೇಕೆಂದರೂ ಸಂಪರ್ಕಿಸಿ ಸಂದರ್ಶನ ಮಾಡುವ ಸ್ವಾತಂತ್ರ್ಯವಿತ್ತು. ನನ್ನ ಶಿವರಾತ್ರಿಯ ಜಾಗರಣೆ ಹೀಗೆ ಮುಕ್ತಾಯವಾಯ್ತು. ಇದು ನನ್ನ ಸಾಕ್ಷಾತ್ಕಾರವೆಂಬುದು ನನ್ನ “ನಂಬಿಕೆ”. ನನ್ನ ದೇವರನ್ನು ನಾನು ನನ್ನಲ್ಲೇ ಕಂಡುಕೊಂಡಿದ್ದೇನೆ. ನನ್ನ ದೇವರ ಹೆಸರು “ದೇವರು” ಅಷ್ಟೇ. ಈ ನನ್ನ ದೇವರು ಈ ಪ್ರಪಂಚದಲ್ಲಿರುವ ಕೋಟ್ಯಾನುಕೋಟಿ ದೇವರುಗಳ ದೇವರು. ಅವರೆಲ್ಲರ ಮೇಲೆ ಕೆಲಸವಿಲ್ಲದೆ ಕೇವಲ ನನಗಾಗಿ ಮಾತ್ರ ದುಡಿಯುತ್ತಾ, ನನಗೆ ಸಹಾಯ ಮಾಡುತ್ತಾ, ನನ್ನ ಕೆಲಸಗಳಿಗೆ ಹುರಿದುಂಬಿಸುತ್ತಾ, ನನ್ನ ಸ್ಫೂರ್ತಿಯಾಗುತ್ತಾ, ಸ್ನೇಹಿತನಾಗಿ ಸಲಹೆ ನೀಡುತ್ತಾ, ಗುರುವಾಗಿ ಹರಸುತ್ತಾ, ಎಲ್ಲ ದೇವರುಗಳ ವರಗಳನ್ನು, ಶಾಪಗಳನ್ನು ಮನ್ನ ಮಾಡುತ್ತಾ ನನ್ನನ್ನು ಕಾಪಾಡುತ್ತಾ, ನನ್ನ ವಿವೇಚನೆಯನ್ನು ಚುರುಕುಗೊಳಿಸುತ್ತಾ, ನನ್ನನ್ನು ಪ್ರತಿ ಹೆಜ್ಜೆಗೂ ಪ್ರಶ್ನಿಸುತ್ತಾ, ಲಾಲಿಸುತ್ತಾ, ಪಾಲಿಸುತ್ತಾ, ನಲಿಸುತ್ತಾ, ಉತ್ತೇಜಿಸುತ್ತಾ, ವಿನೋದ ಮಾಡುತ್ತಾ, ತಂಟೆ ಮಾಡುತ್ತಾ, ಪ್ರಯೋಗ ಮಾಡುತ್ತಾ, ಇತ್ಯಾದಿ ಇತ್ಯಾದಿ ಅನುಭವ ನೀಡುತ್ತಾ ಕೈ ಹಿಡಿದು ಸದಾ ಜೊತೆಯಲ್ಲಿ ಮುಂದುವರೆಯುತ್ತಿದ್ದಾನೆ.

ಹಿನ್ನುಡಿ: ಎಲ್ಲರೂ ಸರಿ! ಎಲ್ಲರೂ ತಪ್ಪು! ನಿಮ್ಮ ನಂಬಿಕೆಯೇ ನಿಮ್ಮ ಸಾಕ್ಷಾತ್ಕಾರಕ್ಕೆ ದಾರಿಮಾಡಿಕೊಡಲಿ. 

Sunday, 19 February 2012

!


ಇವನು ವಿಚಿತ್ರ ಆಸಾಮಿ. 

ಇವನು ಕೂದಲು ಬಾಚುತ್ತಿದ್ದ. ಮುಖಕ್ಕೆ ಬಣ್ಣ ಹಚ್ಚುತ್ತಿದ್ದ. ದಾಡಿ ಬೋಳಿಸುತ್ತಿದ್ದ. ಬಟ್ಟೆ ಹಾಕುತಿದ್ದ. ಕಾಲಿಗೆ ಶೂ ಕೂಡ ಹಾಕುತಿದ್ದ. ಆದರೆ ಈ ಎಲ್ಲಾ ಕೆಲಸಗಳನ್ನ ಯಾರು ಯಾರಿಗೋ ಮಾಡುವಾಗ ಮನಸಿಟ್ಟು ಮಾಡಲೇ ಇಲ್ಲ. ಹಾಗಾಗಿ ಮತ್ತೆ ನಿರುದ್ಯೋಗಿ ಆಗಿದ್ದ. 
ಇವನ ತಲೆ ತುಂಬಾ ಕೂದಲಿತ್ತು, ಸುಂದರವಾದ ಮುಖ, ತರಹೇವಾರಿ ಬಟ್ಟೆಗಳನ್ನು ಧರಿಸುತಿದ್ದ. ಬಿಸಿಲಲ್ಲಿ ನಿಂತಾಗ ವಿಗ್ ತೆಗೆದು ತಲೆ ಕೆರೆದುಕೊಳ್ಳುತ್ತಿದ್ದ. ಮಳೆಯಲ್ಲಿ ನಿಂತರೆ ಮುಖದ ಬಣ್ಣ ನೀರಿನಲ್ಲಿ ಕರಗಿಹೋಗುತಿತ್ತು. ಬಟ್ಟೆಗಳನ್ನು ಬಳಸಿದ ನಂತರ ಹಿಂತಿರುಗಿಸಿ ಬರುತ್ತಿದ್ದ. ಅದೇ ಹರಕಲು ಬಟ್ಟೆ ಮತ್ತೆ ಅಂತಿಮವಾಗಿ ಉಳಿದಿರುತ್ತಿತ್ತು. 
ಇವನು ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದ ಆದರೆ ಈತ ಅನಾತ. ಇವನನ್ನು ಹಲವಾರು ಜನ ಪ್ರೀತಿಸುತ್ತಿದ್ದರು್ ಆದರೆ ಈತ ಏಕಾಂಗಿ. ಇವನು ಆರೋಗ್ಯವಾಗಿದ್ದ ಆದರೆ ಇವನಿಗೆ ಹಲವಾರು ರೋಗಗಳಿದ್ದವು. ಇವನ ಹಲವಾರು ಮನೋರೋಗಗಳನ್ನು ಗುಣಪಡಿಸಿಕೊಳ್ಳುವಷ್ಟರಲ್ಲಿ, ದೇಹಾರೋಗ್ಯ ಹದಗೆಟ್ಟಿತ್ತು. 
ಇವನು ಅತ್ಯದ್ಭುತ ಮಾತುಗಾರ, ಮಾತಿನ ಮೋಡಿಗಾರ ಆದರೆ ಈತ ಮೂಕ. ಇವನು ಚಿರಪರಿಚಿತ, ಜಗಜನಿತ ಆದರೆ ಈತ ಅಪರಿಚಿತ.
ಈತ ನನ್ನ ಸ್ನೇಹಿತ ಆದರೆ ಇವನಿಗೆ ಯಾರೂ ಸ್ನೇಹಿತರೇ ಇರಲಿಲ್ಲ. ಇವನ ಬಳಿ ಸಕಲೈಶ್ವರ್ಯವಿತ್ತು ಆದರೆ ಈತ ಬಡವ. ಇವನು ಸದಾ ನಗುತ್ತಲೇ ಇದ್ದ ಆದರೆ ಕೊನೆಗೂ ಸಂತೋಷ ಪಡಲೇ ಇಲ್ಲ. ಇವನಿಗೆ ಹಲವಾರು ಹೆಸರುಗಳಿದ್ದವು ಆದರೂ ಹೇಳಹೆಸರಿಲ್ಲದವನಾಗಿದ್ದ. ಇಂದು ಕೂಡ ಈತನನ್ನು ಕಂಡೆ, ಆದರೆ ಈತ ಸತ್ತು ಹಲವಾರು ವರುಷಗಳಾಯ್ತು.

ಇವನ ಜೀವನ ನನ್ನಲ್ಲಿ ಇನ್ನೂ ಹಲವಾರು ಗೊಂದಲಗಳನ್ನು ಸೃಷ್ಟಿಸಿದ್ದವು. ಇವನು ದೇವರಿಗೆ ಪೂಜೆ ಮಾಡಿದ್ದೇ ಇಲ್ಲ. ದೈವೀಭಕ್ತನೆಂದು ಮನಸಾರೆ ಹೇಳಿಕೊಳ್ಳುತ್ತಿದ್ದ. ಇವನದೇ ಸಂಸಾರವಿತ್ತು. ಇವನು ಮದುವೆಯೇ ಅಗಿರಲಿಲ್ಲ. ಇವನನ್ನು ಬಲ್ಲವರು ಕರುಣಾಮಯಿಯೆಂದು ಪೂಜಿಸಿತ್ತಿದ್ದರು, ಇವನು ಇರುವವರೆಗೂ ಒಂದು ನಯಾ ಪೈಸಾ ದಾನ ಮಾಡಿದ್ದೇ ಇಲ್ಲ. ಇವನನ್ನು ಹಲವರು ಗುರುವೆಂದು ಸ್ವೀಕರಿಸಿದ್ದರು ಆದರೆ ಇವನು ಎಂದೂ ಯಾರಿಗೂ ಏನೂ ಕಲಿಸಲು ಪ್ರಯತ್ನಿಸಲೂ ಇಲ್ಲ.
ಇವನು ಹಲವಾರು ಹೆಣ್ಣುಗಳ ಸಹವಾಸ ಮಾಡಿದ್ದ, ಆದರೆ ಎಂದೂ ಯಾರೊಂದಿಗೂ ಅನೈತಿಕವಾಗಿ ನಡೆದುಕೊಂಡೇ ಇರಲಿಲ್ಲ. ಇವನು ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ಸಹ ಸೋಲಿನ ಬೇಗೆಯಲ್ಲಿ ಬೇಯುತ್ತಲೇ ಇದ್ದ. ಈತ ನಿರಂತರ ಪರಿಶ್ರಮ ಪಡುತ್ತಲೇ ಇದ್ದ ಆದರೂ ಸುಖಾಸೀನನಾಗೇ ಕಂಡ. ಇವನು ಇವನದ್ದೇ ಆದ ಪ್ರತ್ಯೇಕ ದಾರಿ ಸೃಷ್ಟಿಸಿ ಓಡುತ್ತಿದ್ದ ಆದರೂ ಇವನಿಗೆ ಸ್ಫರ್ಧಿಗಳಿದ್ದರು. 
ಇವನು ಹಲವಾರು ಬಾರಿ ಹುಟ್ಟಿ ಹಲವಾರು ಬಾರಿ ಸತ್ತಿದ್ದ ಆದರೆ ಇವನಿಗೆ ಇದ್ದದ್ದು ಒಂದೇ ಜೀವನ. ಈಗಲೂ ಸತ್ತು ಹಲವಾರು ವರುಷಗಳಾಯ್ತು ಆದರೂ ಬದುಕಿದ್ದ. ನಮ್ಮ ಜೊತೆಯಲ್ಲೇ ಓಡಾಡಿಕೊಂಡಿದ್ದ ಆದರೂ ನೂರು ಊರುಗಳಾಚೆ, ಜನರಿಂದ ತುಂಬಾ ದೂರವಿದ್ದ. 

ಇವನಿಗೂ ಕೂಡ ಹೃದಯವೆಂಬುದಿತ್ತು ಅದೂ ಕೂಡ ಮಿಡಿಯುತ್ತಲಿತ್ತು. ಇವನಿಗೂ ದೇಹವೆಂಬುದಿತ್ತು. ಇವನೂ ಮನುಷ್ಯನಾಗಿದ್ದ. ಕಲಾವಿದ!

Friday, 17 February 2012

ನಾನೇ ಮನುಷ್ಯ?!


ಮುನ್ನುಡಿ: ಇದೊಂದು ಪ್ರಯೋಗ. ಈ ಕಥೆ ನೇರವಾಗಿ ಓದಿಸಿಕೊಂಡು ಹೋಗುವುದಿಲ್ಲ. ಇಲ್ಲಿರುವ ಕಥೆಯ ಹಿಂದೆ ಕೋಟ್ಯಾಂತರ ಕಥೆಗಳಿವೆ. ಎಲ್ಲವನ್ನು ಓದುಗನ ಸಾಮರ್ಥ್ಯಕ್ಕೆ, ತರ್ಕಕ್ಕೆ, ಆಲೋಚನೆಗೆ, ಅಂತಿಮವಾಗಿ ಬಿಟ್ಟಿದ್ದೇನೆ. ನಿಮ್ಮ ಬುದ್ಧಿಮತ್ತೆಗೆ ತಕ್ಕಂತೆ ಕಥೆಯ ಅರ್ಥ ರೂಪುಗೊಳ್ಳುತ್ತದ್ದೆ. ಪ್ರಶ್ನೆಗಳಿದ್ದಲ್ಲಿ ಮುಕ್ತವಾಗಿ ಚರ್ಚಿಸಿ. ಧನ್ಯವಾದಗಳು!
----------------------------------------------------------------------------------------------------------------------------------

ಕೊರಳಿನಿಂದ ಚಿಲುಮೆಯೋಪಾದಿಯಲ್ಲಿ ರಕ್ತ ಚಿಮ್ಮುತ್ತಿತ್ತು. ಹಾಡಿಗೆ ಶೃತಿ ಸೇರಿದಂತೆ ಸಮಸ್ತ ದೇಹವು ಅಲೆಅಲೆಯಾಗಿ ನಲುಗುತ್ತಲಿತ್ತು. ರಕ್ತ ಹರಿದು ಆ ಕ್ಲೀನಾದ ನೆಲದ ಬಿಳಿಯ ಟೈಲ್ಸ್ ಮೇಲೆ ಕೆಂಪು ಕಾಲುವೆಯನ್ನು ರಚಿಸಿತ್ತು. ಗಂಡನ ದೇಹದ ರಕ್ತ, ಪಕ್ಕದಲ್ಲಿ ಅದೇ ಸ್ಥಿತಿಯಲ್ಲಿ ಬಿದ್ದಿದ್ದ ಹೆಂಡತಿಯ ದೇಹದ ರಕ್ತದೊಂದಿಗೆ ಬೆರೆತು ಇನ್ನೂ ದೊಡ್ಡ ಕಾಲುವೆಯಂತೆ ಹರಿಯುತ್ತಲಿತ್ತು. ಆಹಾ ಇದಕ್ಕೆ ದಂಪತಿಗಳೆಂದು ಕರೆಯುತ್ತಾರೇನೋ. ಕೊನೆಯ ಘಳಿಗೆಯಲ್ಲಿ ಅವರ ಮುಖಗಳನ್ನೇ ತದೇಕಚಿತ್ತನಾಗಿ ನೋಡುತ್ತಲಿದ್ದೆ. ಆ ಉಸಿರೆಳೆದುಕೊಳ್ಳಲು ಹವಣಿಸುತ್ತಿದ್ದ ಬಾಯಿಗಳಿಂದ ವಿಚಿತ್ರ ಶಬ್ದವು ಸ್ಫುಟವಾಗಿ ಕೇಳಿಸುತ್ತಲಿತ್ತು. ಮನಕೆ ವಿಕೃತವಾದ ಆನಂದ ಸಿಗುತ್ತಲಿತ್ತು. ನೋಡನೋಡುತ್ತಾ ಕೈಲಿದ್ದ ಸೇಬನ್ನು ಮುಗಿಸುವ ಹೊತ್ತಿಗೆ, ದೇಹಗಳು ಶಾಂತವಾಗಿದ್ದವು. ಕಣ್ಣುಗಳು ಹಾಗೇ ತೆರೆದುಕೊಂಡೇ ಇದ್ದವು. ರಕ್ತದ ಕಾಲುವೆಯನ್ನು ತುಳಿದುಕೊಂಡೇ ರಂಗೋಲಿ ಹಾಕುವವನಂತೆ ಎದ್ದು ನಡೆದೆ.
ನನ್ನನ್ನು ಹಿಡಿದು ಕೋರ್ಟಿನ ಮುಂದೆ ನಿಲ್ಲಿಸಿದರು. ಎದುರುವಾದಿಸುವರಾರಿಲ್ಲದೆ ನನ್ನ ವಿರುದ್ಧದ ಸಾಕ್ಷಿಗಳು, ಪುರಾವೆಗಳು ಎತ್ತಿ ಹಿಡಿದು ನಾನೇ ತಪ್ಪಿತಸ್ತ ಎಂದು ನಿರ್ಧರಿಸಹೊರಟಿದ್ದರು. ವಕೀಲ ನನ್ನಿಂದ ಮೂರು ಅಡಿ ದೂರದಲ್ಲೇ ನಿಂತು ವಾದ ಮಂಡಿಸುತ್ತಿದ್ದ. ನ್ಯಾಯಾಧೀಶ ತೆಪ್ಪಗೆ ಏನೋ ನೋಡುತ್ತಾ, ಓದುತ್ತಲಿದ್ದ. ಕೈಲಿದ್ದ ಕೋಳದೊಂದಿಗೇ ಪಕ್ಕದಲ್ಲಿದ್ದ ಇನ್ಸ್ಪೆಕ್ಟರ್ ಬಳಿ ಇದ್ದ ರಿವಾಲ್ವರ್ ಕಸಿದುಕೊಂಡು ನೇರವಾಗಿ ಸಾಕ್ಷಿಗಳು, ಮತ್ತು ವಕೀಲನನ್ನು ಸುಟ್ಟೆ, ಬೇಗ ಸತ್ತು ಹೋದರು. ಓಡುತ್ತಲಿದ್ದ ನ್ಯಾಯಾಧೀಶನೆಡೆಗೆ ನೋಡಿದೆ ಎಗರಿ ಅವನ ಮುಂದೆ ನಿಂತೆ ಪಕ್ಕದಲ್ಲಿದ್ದ ಸುತ್ತಿಗೆಯಿಂದ ತಲೆ ಒಡೆದು ಹಾಕಿದೆ. ಓಡಿದವರೆಲ್ಲಾ ಉಳಿದುಕೊಂಡರು, ಹಿಡಿಯಬಂದವರೆಲ್ಲಾ ಹೊಗೆಹಾಕಿಕೊಂಡರು. ಇಡೀ ಕೋರ್ಟನ್ನು ರಕ್ತದಿಂದ ತೊಳೆದು ಬಂದೆ.
ಒಂದು ವಾಹನವೇರಿದೆ. ಹೋಗಹೋಗುತ್ತಾ ದಾರಿಯಲ್ಲಿ ಅಡ್ಡ ಬಂದವರನ್ನೆಲ್ಲಾ ಹೊಡೆದುಕೊಂಡು ಹೋದೆ, ಕೆಲವರ ದೇಹ ಛಿದ್ರವಾಯಿತು, ಜೀವ ಮಾತ್ರ ಉಳಿದುಕೊಂಡಿತು. ಕೆಲವರು ನನ್ನ ವಾಹನದ ಹೊಡೆತದ ರಭಸಕ್ಕೆ ಸಿಲುಕುವ ಮುನ್ನವೇ ಜೀವ ಹಾರಿಸಿಕೊಂಡಿದ್ದರು. ಹೊಡೆತಕ್ಕೆ ಸಿಕ್ಕು ಉಳಿದವರು, ಸುತ್ತಮುತ್ತಲಿದ್ದವರು ಎಲ್ಲ ಬಂದು ನನ್ನ ವಾಹನವನ್ನು ಹೊಡೆದು, ಬೆಂಕಿ ಹಚ್ಚಿ ಒಳಗಿದ್ದ ಆಕ್ರೋಶವನ್ನು ಉರಿಸಿದರು. ಅವರ ಮೂರ್ಖತನಕ್ಕೆ ಆಗಲೇ ವಾಹನದಿಂದ ಹೊರಗೆ ಕುಳಿತಿದ್ದ ನಾನು ನಕ್ಕೆ. ಅವರಲ್ಲಿ ತುಂಬಿದ್ದ ಆಕ್ರೋಶ ನೋಡಲು ಸೊಗಸಾಗಿತ್ತು. ಎದ್ದು ಅಲ್ಲಿಂದ ಹೊರಟೆ, ಒಬ್ಬೊಬ್ಬರನ್ನೇ ಮುಗಿಸುವ ಆಟ ಬೇಸರವೆನಿಸತೊಡಗಿತ್ತು. ದಾರಿಯಲ್ಲಿ ಸಿಕ್ಕ ಗಾಡಿಗಳ ಬ್ರೇಕ್ ಫೈಲ್ ಮಾಡಿದೆ. ಒಟ್ಟಿಗೇ ಒಂದಷ್ಟು ಜನ ಜೀವ ಬಿಟ್ಟರು. ಗಾಡಿ ಗಾಡಿಗಳು ಗುದ್ದಿ ಮುದ್ದಾಡುವುದನ್ನು ನೋಡುವುದೇ ಒಂದು ಅದ್ಭುತವಾದ ವೈಭೋಗ. ತಲೆಯಲ್ಲಿ ಮತ್ತೊಂದು ಚಿಂತನೆ ಮೂಡಿತು. ಉತ್ತುಂಗಕ್ಕೆ ಎದ್ದು ನಿಂತಿರುವ ಬೆಂಕಿಪೊಟ್ಟಣದಂತಹ ಕಟ್ಟಡಗಳನ್ನು ನೋಡುತ್ತಾ, ಅಷ್ಟು ದೊಡ್ಡ ಕಟ್ಟಡದ ಒಂದೇ ಒಂದು ಪಿಲ್ಲರ್ ಕಿತ್ತು ಹಾಕಿದೆ. ಇಡೀ ದೈತ್ಯ ಬಿಲ್ಡಿಂಗ್ ಒಂದೇ ಕ್ಷಣದಲ್ಲಿ ನೋಡನೋಡುತ್ತಲೇ ಉರುಳಿ ಎಲ್ಲಾ ಮಣ್ಣಲ್ಲಿ ಮಣ್ಣಾಗಿ ಹೋಯಿತು. ಆದರೆ ಎದುರು ಕೂತು ಕೊಲ್ಲುವಾಗ ಸಿಗುತ್ತಿದ್ದ ಆ ಉನ್ಮಾದ, ಆ ಮಜಾ ತಪ್ಪಿಹೋಗುತ್ತಿತ್ತು. ಇನ್ನೂ ಏನೂ ಅರಿಯದವರಂತೆ ಉಳಿದಿದ್ದವರನ್ನೂ ಬೆನ್ನಟ್ಟಿ ಸುಟ್ಟೆ. ನನ್ನನ್ನು ಪತ್ತೆ ಹಚ್ಚಲು ನಿರ್ಧರಿಸಿದವರನ್ನು, ಕಾರ್ಯಪ್ರವೃತ್ತರಾಗುವ ಮುನ್ನವೇ ಮುಗಿಸಿದೆ. ಇಡೀ ಊರು ಸ್ಮಶಾನವಾಯಿತು. ಇಡೀ ಊರಿಗೆ ಊರು ನಿರ್ನಾಮವಾಗಿ ನೀರವತೆಯಲ್ಲಿ ಮುಳುಗಿತ್ತು. ಎತ್ತರದ ಕಟ್ಟಡವೊಂದು ಬಿದ್ದು ನಿರ್ಮಾಣವಾಗಿದ್ದ ಗೋಪುರದ ಮೇಲೆ ಕೂತು ಇಡೀ ಊರನ್ನು ನೋಡಿದೆ. ಸಾಯುವ ಮುನ್ನ ಆಸ್ತಿ, ಗಳಿಕೆ, ಹೆಣ್ಣಿನ ಆಮಿಷಗಳನ್ನು ಒಡ್ಡಿ ಜೀವದಾನ ಕೇಳುತ್ತಿದ್ದವರನ್ನು, ಏನೂ ಗೊತ್ತೇ ಆಗುವ ಮುನ್ನ ಪೆದ್ದು ಪೆದ್ದಾಗಿ ಮುಗಿದುಹೋದವರನ್ನು ನೆನೆದು ನಗು ಬಂತು. ಅದಕ್ಕಿಂತಲೂ ಸತ್ತವರು ಸತ್ತರು, ಉಳಿದಿದ್ದವರು ಅವರ ಸುತ್ತ ಸೇರಿ ಹಲವಾರು ಕಾರಣಗಳಿಟ್ಟುಕೊಂಡು ರೋಧಿಸುತ್ತಿದ್ದುದರ ಪರಿ ನೋಡವುದೇ ಚೆನ್ನ. ಆ ಆನಂದವೆಲ್ಲಾ ಈಗಿಲ್ಲ. ಊರಿಗೆ ಊರೇ ಮುಳುಗಿಹೋಯ್ತು. ಈ ಊರಿನ ಸ್ಮಶಾನದಲ್ಲಿ ಸುಮ್ಮನೆ ಕೂರಲಾಗದೆ ಮುಂದಿನ ಊರಿನ ಕಡೆಗೆ ನಡೆದೆ.
ಆ ಊರಿನಲ್ಲಿ ನಿರೀಕ್ಷಿಸಿದಂತೆ ಜನರ ಸಂತೆಯಿರಲಿಲ್ಲ. ಬದಲಾಗಿ, ಹೋದ ತಕ್ಷಣ ಕಣ್ಣಿಗೆ ಬಿದ್ದದ್ದು ವಿಚಿತ್ರವಾದ ಶಬ್ಧದೊಂದಿಗೆ, ಬೆಂಕಿಯ ಬುಗ್ಗೆ, ಬಾಂಬ್ ಸ್ಫೋಟ. ಇದೇನಾಗುತ್ತಿದೆ ಎಂದು ಅರಿವಾಗಲಿಲ್ಲ. ಬಾಂಬ್ ಸ್ಫೋಟ ನೋಡುವುದೇ ಕಣ್ಣಿಗೊಂದು ಹಬ್ಬ. ಸುತ್ತ ಮುತ್ತಲ ಎಷ್ಟೋ ಮೈಲಿಗಳ ವರೆಗೆ ಇದ್ದ ಮನುಷ್ಯರನ್ನೊಳಗೂಡಿ ಎಲ್ಲ ರೀತಿಯ ಜೀವಿಗಳೂ ಕ್ರಿಮಿಗಳಂತೆ ಕೆಲವೇ ಕ್ಷಣಗಳಲ್ಲಿ ಹೇಳಹೆಸರಿಲ್ಲದೇ ಕಾಣೆಯಾಗುವಂತಹ ಅಭೂತಪೂರ್ವ ತಂತ್ರ. ನನ್ನ ಎಷ್ಟೋ ದಿನಗಳ ಶ್ರಮದ ಎದುರು ಇದು ಅಮೋಘವಾದ ಶಕ್ತಿ. ವಿಸ್ಮಯನಾಗಿ ಬಾಂಬ್ ಧಾಳಿ ನಡೆಯುವೆಡೆಯೆಲ್ಲಾ ಹೋಗಿ ನಿಂತು ನೋಡಿ ಆನಂದಿಸುತ್ತಿದ್ದೆ. ಬಾಂಬ್ ಧಾಳಿಯಲ್ಲಿ ತುಂಬಾ ಇಷ್ಟವಾಗುತ್ತಿದ್ದ ವಿಷಯವೆಂದರೆ, ಯಾರೂ ನೂಕದೆ, ಯಾರೂ ಹೊಡೆಯದೆ ಚಕ್ರಾಕಾರದಲ್ಲಿ ಸುತ್ತಲಿದ್ದ ಜನರೆಲ್ಲಾ ರಕ್ತ ಕಾರುತ್ತಾ ತಾವಾಗಿಯೇ ಹಾರುವುದನ್ನು ನೋಡುವುದೇ ಒಂದು ರೀತಿಯ ಮಜಾ. ನನಗಿಂತ ವಿಭಿನ್ನವಾಗಿ ಯಾರು ಈ ರೀತಿಯಲ್ಲಿ ಸಂಭ್ರಮ ಆಚರಿಸುತ್ತಿರುವರು ಎಂದು ಹುಡುಕ ಹೊರಟೆ. ನನಗಿಂತಲೂ ವಿಚಿತ್ರ ಮನುಷ್ಯನೊಬ್ಬ ದೊರೆತ. ಸ್ನೇಹಿತರಾದೆವು. ಅಂದಿನಿಂದ ಅವನ ಆಚರಣೆಗಳಲ್ಲೆಲ್ಲಾ ಇಬ್ಬರೂ ಸೇರಿ ನೆರವೇರಿಸುತ್ತಿದ್ದೆವು. ಇನ್ನೂ ವಿಚಿತ್ರ ವಿಚಿತ್ರ ಶೈಲಿಯಲ್ಲಿ ಸಾಯಿಸುವ ಕಾರ್ಯಕ್ರಮ ಹಂಬಿಕೊಂಡೆವು.
ಎಷ್ಟು ಮುಗಿಸಿದರೂ ಮತ್ತಷ್ಟು ಹುಟ್ಟುತ್ತಲೇ ಇದ್ದರು. ಮತ್ತೆ ಮತ್ತೆ ನಮಗೂ ಕೆಲಸ. ಒಂದು ಊರು ಖಾಲಿ ಮಾಡುವುದು. ಮತ್ತೆ ಮುಂದಿನ ಊರಿಗೆ ಕಾಲಿಡುವುದು. ಅಲ್ಲಿ ಇನ್ನೊಬ್ಬ ನಮ್ಮಂತಹವನ ಸ್ನೇಹ. ಹಾಗೇ ಮುಂದುವರೆದು ಮುಂದೆ ನಮ್ಮದೇ ಒಂದು ದಂಡೇ ಆಯ್ತು. ಕಲವು ಕಡೆ ಜನರೇ ಅವರ ವಿರುಧ ಅವರೇ ಹೊಡೆದಾಡಿ ಸತ್ತರು. ನಾವು ಪ್ರೇಕ್ಷಕರಾಗಿ, ಹುರಿದುಂಬಿಸುತ್ತಾ ಹೊಡೆದುಕೊಂಡು, ಕಚ್ಚಾಡಿಕೊಂಡು ಸಾಯಲು ಪ್ರೇರೇಪಿಸಿದೆವು. ಅದೊಂದು ಹಬ್ಬ, ಹೆಚ್ಚು ಹೆಚ್ಚು ದಿನಗಳು ಹೇಗೇ ಇದ್ದಲ್ಲಿ ಒಂದಷ್ಟು ಮನರಂಜನೆಯಾದರೂ ಸಿಕ್ಕುತ್ತಿತ್ತು. ಅವರ ಯುದ್ಧದಲ್ಲಿ ಉಳಿದವರನ್ನ ನಾವು ಹೊಡೆದುಹಾಕಿದೆವು. ಅಂತೂ ಇಡೀ ಪ್ರಪಂಚ ಸ್ಮಶಾನವಾಯ್ತು. ಎಲ್ಲರೂ ವಿಜಯೋತ್ಸವ ಆಚರಿಸಿದೆವು. ಈ ಕುರುಕ್ಷೇತ್ರದಂತಹ ಸ್ಮಶಾನವನ್ನು ನೋಡುತ್ತಾ ಎಷ್ಟೋ ಪ್ರಶ್ನೆಗಳು ಮನದಲ್ಲಿ ಹುಟ್ಟುತ್ತಿದ್ದವು. ಹೀಗೆ ಒಂದೇ ಏಟಿಗೆ, ಒಂದೇ ಕ್ಷಣದಲ್ಲಿ ಜೀವಬಿಟ್ಟುಬಿಡುವ ನಿಶ್ಶಕ್ತರಾದ ಇವರುಗಳು, ಏಕೆ ಹೀಗೆ, ಇಷ್ಟೆಲ್ಲಾ ಹೋರಾಡಿ, ಇಷ್ಟೆಲ್ಲಾ ಅಸ್ತಿಗಳನ್ನು ಮಾಡಿ, ಇಷ್ಟೆಲ್ಲಾ ದೊಡ್ಡ ದೊಡ್ಡ ಮಹಲುಗಳನ್ನು ಕಟ್ಟುತ್ತಿದ್ದರು? ಏಕೆ ನಾಳೆ ಬದುಕುವುದಕ್ಕಾಗಿ ಇಂದು ತಮ್ಮ ಜೀವನವನ್ನು ಹಾಳುಗೆಡವಿಕೊಂಡು ನಾಳೆಯೂ ಬದುಕದೆ ಒಂದು ದಿನ ಹೀಗೆ ನಮ್ಮ ಕೈ ಸೇರಿ ಕೊನೆಗೂ ಬದುಕದೆಯೇ ಸತ್ತೇ ಹೋಗುತ್ತಿದ್ದರು? ಎಷ್ಟೋ ಜನರನ್ನು ಸಾಯಿಸುವಾಗ, ನಿಜವಾಗಲೂ ಬದುಕಿದ್ದವರನ್ನ ಕೊಂದೆವಾ ಅಥವಾ ಸತ್ತಿದ್ದವರನ್ನೇ ಮತ್ತೆ ಸಾಯಿಸಿದೆವಾ? ಯಾವ ಪುರುಶಾರ್ಥಕ್ಕಾಗಿ, ಯಾರು ಬದುಕಲಿಕ್ಕಾಗಿ ಹಲವಾರು ಕಾರಣಗಳಿಂದ ಅವರವರಲ್ಲೇ ಹೊಡೆದಾಡಿ ಸತ್ತರು? ಇವರೆಲ್ಲಾ ಇಷ್ಟು ಕ್ಷುಲ್ಲಕವಾಗಿ ಸಾಯಲು ಅಷ್ಟೆಲ್ಲಾ ಶ್ರಮದ ಜೀವನ ಬದುಕಬೇಕಿತ್ತಾ? ಯಾವುದಕ್ಕೂ ಉತ್ತರ ಕೇಳೋಣವೆಂದರೆ ಯಾರು ಇಂದು ಬದುಕುಳಿದಿಲ್ಲ. ಇನ್ನು ಮುಂದೆ ಹುಟ್ಟುವವರನ್ನು ಕೇಳಿ ಪ್ರಯೋಜನವಿಲ್ಲ.
ನಾವು ವಿಜಯೋತ್ಸವ ಮುಂದುವರೆಸಿದ್ದೆವು. ಮನುಷ್ಯರ ಸಾವಿಲ್ಲದೇ, ಮನೋರಂಜನೆಯಿಲ್ಲದೆ ಸತ್ತು, ಕೊಳೆತು ನಾರುತ್ತಿದ್ದ ದೇಹಗಳನ್ನೇ ತೆಗೆದುಕೊಂಡು ಅದನ್ನು ಛಿದ್ರ ಗೊಳಿಸಿ ಅಂತ್ಯಕ್ರಿಯೆಯ ಆಟವಾಡತೊಡಗಿದೆವು. ಅವರವರ ಬಂಧುಗಳೆನಿಸಿಕೊಂಡವರು ಸಾವಿನ ಮನೆಯಲ್ಲಿ ಅಳುವಿನ ಆಟವಾಡುತ್ತಿದ್ದುದನ್ನು ನಕಲು ಮಾಡಿ ಆನಂದಿಸಿದೆವು. ನಂತರ ಈ ಮನುಷ್ಯರು ಮಾಡುತಿದ್ದ ಅಂತ್ಯಕ್ರಿಯಾ ವಿಧಾನಗಳನ್ನು ಆಚರಿಸುವ ಆಟವಾಡಲು ತೀರ್ಮಾನಿಸಿದೆವು. ಒಬ್ಬ ಮಣ್ಣು ಮಾಡಬೇಕೆಂದ, ಮತ್ತೊಬ್ಬ ಸುಡಬೇಕೆಂದ, ಇನ್ನೊಬ್ಬ ನೀರಿಗೆ ಹಾಕಬೇಕೆಂದ, ಮಗದೊಬ್ಬ ಗಾಳಿಯಲ್ಲೇ ಬಿಡುವುದು ಶ್ರೇಷ್ಠವೆಂದ. ಇದರ ವಿಷಯವಾಗಿಯೇ ನಮ್ಮ ನಮ್ಮಲ್ಲೇ ಜಗಳಗಳು ಶುರುವಾದವು. ಆತನ ಜಾತಿಗನುಸಾರವಾಗಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು ಅವರ ಬಂಧುಗಳು ಎಂಬ ವಿಷಯ ಪ್ರಸ್ತಾಪವಾಯ್ತು. ಆ ದೇಹಗಳಲ್ಲಿ ಅವರ ಜಾತಿ ಸೂಚಿಸುವ ಯಾವುದೇ ಕುರುಹುಗಳು ಉಳಿದಿರಲಿಲ್ಲ. ಕೆಲವರನ್ನು ಮಣ್ಣು ಮಾಡುವುದಾಗಿಯೂ, ಕೆಲವರನ್ನು ನೀರು, ಗಾಳಿ, ಬೆಂಕಿಗೆ ಒಡ್ಡುವುದಾಗಿಯೂ ತೀರ್ಮಾನಿಸಿದೆವು. ಹೇಗೆ ಮಾಡಿದರೂ ಒಂದಲ್ಲಾ ಒಂದು ರೀತಿಯಲ್ಲಿ ಕೊನೆಗೆ ಅವನ್ನು ತಿನ್ನುತ್ತಿದ್ದುದು ಜೀವಿಗಳೇ. ಪರಿಸರದಲ್ಲೇ ಲೀನವಾಗುತಿದ್ದರು.
ಈ ಹೆಣಗಳೊಂದಿಗಿನ ಆಟ ಆನಂದವನ್ನು ತರುತ್ತಿರಲಿಲ್ಲ. ಹಸಿದ ಪ್ರಾಣಿಗಳಂತಾಗಿದ್ದೆವು. ಬದುಕಲು ಸಾಯಿಸಬೇಕಿತ್ತು ನಮಗೆ. ಅಲ್ಲಿ ಬದುಕಿದ್ದವರು ನಾವು ಮಾತ್ರ. ಸಾಯಿಸದೇ ಬದುಕುವುದು ಹೇಯವೆನಿಸುತ್ತಿತ್ತು. ಆಹಾರ ಸೇರುತ್ತಿರಲಿಲ್ಲ. ಜೀವದಲ್ಲಿ ಚೇತನವಿರಲಿಲ್ಲ. ನಮ್ಮ ನಮ್ಮನ್ನೇ ಗಿರಿಯಾಗಿಸಿಕೊಂಡು ಸಾವಿನ ಆಟವಾಡಿದೆವು. ಎಲ್ಲರೂ ಒಬ್ಬೊಬ್ಬರಾಗಿ ನಿರ್ಗಮಿಸಿದರು. ಯಾರನ್ನು ಯಾವ ರೀತಿ ಕೊಲ್ಲಬೇಕೆಂದು ಪ್ಲಾನ್ ಮಾಡಿ ಸಾವಿಗೆ ತಳ್ಳುತ್ತಿದ್ದೆವು. ಎಲ್ಲರೂ ಸತ್ತರು. ನಾನು ಇನ್ನೂ ಉಳಿದಿದ್ದೆ. ಯಾರೂ ಇಲ್ಲದೆ, ಏನೂ ಇಲ್ಲದೆ ಈ ಸ್ಮಶಾನದಲ್ಲಿ ಮೌನವಾಗಿ ಏನೂ ಮಾಡದೆ ಬಿದ್ದೇ ಇದ್ದೆ. ಇನ್ನು ಬದುಕಿದ್ದವನು ನಾನೇ. ಬದುಕಬೇಕೆಂದರೆ ಸಾಯಿಸಬೇಕಿತ್ತು. ಸಾಯಿಸಲು ಯಾವ ಜೀವಿಯೂ ಉಳಿದಿರಲಿಲ್ಲ. ಮನುಷ್ಯನೇ ಬದುಕುವುದಕ್ಕಾಗಿ ಮುಕ್ಕಾಲು ಜೀವಿಗಳನ್ನು ಮುಗಿಸಿದ್ದ. ನಾನು ಮನುಷ್ಯರನ್ನು ಮುಗಿಸುತ್ತಾ ಅವರೊಂದಿಗೆ ಉಳಿದ ಜೀವಿಗಳನ್ನು ಮುಗಿಸಿದ್ದೆ. ಇನ್ನೂ ಉಳಿದ ಕ್ರಿಮಿಗಳನ್ನು ಸಾಯಿಸುತ್ತಾ ಕಾಲ ಕಳೆಯಲು ಪ್ರಯತ್ನ ಪಟ್ಟೆ ಆಗಲಿಲ್ಲ. ಆನೆಯನ್ನು ಸಾಯಿಸಿದ ಮೇಲೆ ಇರುವೆಯ ಸಾವು ಮಜಾ ನೀಡುತ್ತಿರಲಿಲ್ಲ. ಸತ್ತವರಲ್ಲಿ ಯಾರಿಗಾದರೂ ಚೂರಾದರೂ ಪ್ರಾಣ ಉಳಿದಿದೆಯೇನೋ ಹುಡುಕಿದೆ ಯಾವ ಜೀವವೂ ಸಿಗಲಿಲ್ಲ. ಸತ್ತವರಲ್ಲಿ ಯಾರಿಗಾದರೂ ಮತ್ತೆ ಜೀವ ಕೊಟ್ಟು ಸಾಯಿಸಲಾಗುವುದೋ ಪ್ರಯತ್ನ ಪಟ್ಟೆ ನನ್ನ ಹುಚ್ಚಾಟಕ್ಕೆ ನಗು ಬಂತು, ನನಗೆ ಸಾಯಿಸುವ ಶಕ್ತಿ ಇತ್ತೇ ವಿನಃ ಬದುಕಿಸುವ ಸಾಮರ್ಥ್ಯವಿರಲಿಲ್ಲ. ನನಗೆ ಸಾಯಿಸಲು ಜೀವ ಬೇಕಿತ್ತು. ಜೀವ ಉಳಿದಿದ್ದು ನನ್ನಲ್ಲಿ ಮಾತ್ರ. ನನ್ನನ್ನೇ ಸಾಯಿಸಿಕೊಳ್ಳುವುದೊಂದೇ ಉಳಿದ ಮಾರ್ಗ. ನನ್ನನ್ನೇ ಸಾಯಿಸುತ್ತಾ, ಆ ನೋವಿನಲ್ಲಿ ಸಾವಿನ ಮಾದಕತೆ ಕಂಡುಕೊಂಡೆ. ನನ್ನ ಸಾವನ್ನು ನಾನೇ ಆನಂದಿಸುತ್ತಾ…

ಸತ್ತೆ!
----------------------------------------------------------------------------------------------------------------------------------
ಹಿನ್ನುಡಿ: ವಿನಾಶಕ್ಕಾಗಿ ಮನುಷ್ಯ. ಮನುಷ್ಯನಿಂದಲೇ ವಿನಾಶ!

Monday, 13 February 2012

ಲವ್-ಡೇ!

ಮುನ್ನುಡಿ: ಕಥೆ ಓದುವ ಸಾಮರ್ಥ್ಯವಿರುವರಿಗೆ, ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸುವ ಸಮಸ್ತರಿಗೂ ಮತ್ತು ವಿಶೇಷವಾಗಿ ಎಲ್ಲ ತರುಣ, ತರುಣಿ ಮತ್ತು ಮುಖ್ಯವಾಗಿ ತಾರುಣ್ಯರಿಗೆ.
ಪ್ರೇಮಿಗಳ ದಿನಾಚರಣೆ ಎಷ್ಟು ಸರಿ ಎಷ್ಟು ತಪ್ಪು ನಿಮಗೆ ಬಿಟ್ಟದ್ದು!


ಇನ್ನೂ ೮ ಘಂಟೆ, ಕೈಲಿರುವ ಗುಲಾಬಿ ಇನ್ನು ಮೂರು ಘಂಟೆಯಷ್ಟರಲ್ಲಿ ಮುದುಡುವುದಿಲ್ಲ ತಾನೇ ಎಂದು ಜಾಗರೂಕತೆಯಿಂದ ಇಟ್ಟುಕೊಂಡೆ. ಅವಳಿನ್ನೂ ಬರುವುದು ೧೧ ಘಂಟೆಗೆ. ಕೂತಲ್ಲಿ ಕೂರಲಾಗಲಿಲ್ಲ. ಇವತ್ತೇನೋ ಪಾರ್ಕ್ ನಲ್ಲಿ ಜನ ತುಂಬಾ ಇದ್ದಾರೆ. ಎಲ್ಲಾ ಹುಡುಗ ಹುಡುಗಿಯರು ಕೆಂಪು ಕೆಂಪಾಗಿ ಓಡಾಡುತ್ತಿದ್ದಾರೆ. ಅವಳು ಬರುವುದು ೧೧ ಘಂಟೆಗೆ ಎಂದು ತಿಳಿದಿದ್ದೂ ಇಷ್ಟು ಬೇಗ ಬರುವ ಕಾರಣವೇನೆಂದು ತಿಳಿಯದೆ ನನ್ನ ಹೆಡ್ಡತನಕ್ಕೆ ನಾನೇ ನಕ್ಕೆ. ಅವಳು ಬೇಗ ಬರಬಹುದಾ ಎಂದು ಬರುವ ದಾರಿಯನ್ನು ಆಗಾಗ ನೋಡತೊಡಗಿದೆ. ಅದೇನೋ ಒಂದು ರೀತಿಯ ಖುಷಿ. ಕಾಯುವುದರಲ್ಲಿ ನಿಜವಾಗಲೂ ಸುಖವಿದೆ, ಮಜವಿದೆ. ಕಣ್ಮುಚ್ಚಿದರೂ, ಕಣ್ತೆರೆದರೂ ಅವಳ ನಗು, ಮಗುವಿನಂತ ಮೋರೆಯೇ ಕಣ್ಣಮುಂದೆ ಬಂದಂತಾಗುತ್ತಿದೆ. ಏನೇನೋ ಹಳೆಯ ನೆನಪುಗಳು. ಹಾಗೇ ಆನಂದಿಸುತ್ತಿದ್ದ ನನ್ನನ್ನು ನನ್ನ ನೆನಪುಗಳಿಂದ ಹೊರಗೆಳೆದುಕೊಂಡು ಬಂದು ನನ್ನ ಬೆಂಚಿನ ಮೇಲೆ ಕೂಡ್ರಿಸಿದರು ಇಬ್ಬರು ವಿಚಿತ್ರ ಆಕೃತಿಯ ವ್ಯಕ್ತಿಗಳು. ಇವರು ಇದೇ ಊರಿನ ವ್ಯಕ್ತಿಗಳು ಹೌದಾ ಎಂದು ಒಮ್ಮೆ ಸಂದೇಹವಾಯ್ತು. ತಲೆಯ ಮೇಲೆ ಆ ವಿಚಿತ್ರ ಟೋಪಿ, ಮೈತುಂಬ ಬಣ್ಣ ಬಣ್ಣದ ವಿಚಿತ್ರ ಹೊಲಿಗೆಯ ಬಟ್ಟೆ, ಉದ್ದನೆಯ ಚಪ್ಪಲಿಗಳು. ಅಪಾದ ಮಸ್ತಕವಾಗ್ ಒಮ್ಮೆ ಇಬ್ಬರನ್ನೂ ನೋಡಿದೆ. ಬಂದವರೇ ನನ್ನ ಎಡಬಲದಲ್ಲಿ ಕುಳಿತರು. ಇಬ್ಬರನ್ನೂ ಆಶ್ಚರ್ಯದಿಂದ ನೋಡಿದೆ. ಇಬ್ಬರೂ ನನ್ನನ್ನೇ ನೋಡುತ್ತಿದ್ದರು. ಅರೆ! ಇವರ್ಯಾರು, ನನ್ನನ್ನೇಕೆ ಹೀಗೆ ನೋಡುತ್ತಿದ್ದಾರೆ. ಅಲ್ಲ ಮುಂಚಿತವಾಗಿಯೇ ಆಕ್ರಮಿಸಿರುವ ಬೆಂಚಿಗೆ ಬಂದು ಕೂರುವಾಗ ಅನುಮತಿ ಕೇಳುವ ಕನಿಷ್ಟ ಮ್ಯಾನರ್ಸ್ ಇಲ್ವ ಇವರಿಗೆ ಎಂದು ಸಿಟ್ಟುಬರದೇ ಇರಲಿಲ್ಲ. ಇಬ್ಬರೂ ಒಟ್ಟಿಗೆ ಯಾರದರೂ ಬರ್ತಾರ ಎಂದು ಕೇಳಿದರು. ಇಬ್ಬರ ಕಡೆಗೂ ಒಮ್ಮೆ ತಿರುಗಿ ಹೌದು ಎಂಬಂತೆ ತಲೆಯಾಡಿಸಿದೆ. ಎಡಗಡೆ ಕೂತಿದ್ದವನು ಬರಲಿ ಬಿಡಿ ಎಂದು ಹೇಳಿ ಸುಮ್ಮನೆ ಕೂತರು. ನಾನೇ ಎದ್ದು ಹೋಗುವುದೇ ಒಳ್ಳೆಯದ ಎಂದು ಯೋಚಿಸಿದೆ. ಛೇ ಎಲ್ಲ ಸುಂದರ ನೆನಪುಗಳನ್ನ ಹಾಳು ಮಾಡಿದರು. ಹೋಗುತ್ತಾರೇನೋ ಕಾದೆ. ಇಬ್ಬರೂ ಎದ್ದೇಳುವಹಾಗೆ ಕಾಣಲಿಲ್ಲ. ಸುತ್ತ ಎಲ್ಲ ಹುಡುಗ ಹುಡುಗಿಯರನ್ನ ನೋಡುತ್ತಾ ಏನೋ ಒಳಗೊಳಗೇ ಮಾತನಾಡುತ್ತಾ ಇದ್ದಂಗೆ ಕಂಡರು. ಸರಿ ನಾನೇ ಸ್ಥಳ ಬದಲಾವಣೆ ಮಾಡುವುದು ಒಳ್ಳೆಯದೆಂದು ಎದ್ದು ಹೊರಡಲು ಅನುವಾದೆ. ಥಟ್ಟನೆ ಇಬ್ಬರೂ ನನ್ನ ಕೈ ಹಿಡಿದು ಅರೆ ಎಲ್ಲಿ ಹೊರಟಿರಿ ಕೂತ್ಕೊಳ್ಳಿ ಎಂದರು. ನಾನು ಏನೇ ಪ್ರತಿಕ್ರಿಯಿಸುವ ಮುನ್ನ ಹಾ ಗೊತ್ತು ಬಿಡಿ ಇವತ್ತು ಯಾರ ತೊಂದರೆ ತಕರಾರು ಇಲ್ಲದೆ ನಿಮ್ಮ ಹುಡುಗಿಯ ಜೊತೆ ಆರಾಮವಾಗಿ ಕಾಲ ಕಳೆಯೋಣ ಅಂತ ಇಲ್ಲಿಗೆ ಬಂದ್ರೆ ಯಾರಪ್ಪಾ ಇವರಿಬ್ಬರು ರಾಹು ಕೇತು ತರ ತಗಲಾಕೊಂಡ್ರು ಅಂತ ತಾನೆ ನಿಮ್ಮ ಯೋಚನೆ ಎಂದು ನಕ್ಕರು. ನನ್ನ ಎರಡೂ ಕೈ ಇನ್ನೂ ಹಿಡಿದುಕೊಂಡೇ ಮಾತು ಮುಂದುವರೆಸಿದರು, ಹೆದರ್ಕೋಬೇಡಿ ನನ್ನ ಹೆಸರು ಹು, ನಾನು ಉಹು ಎಂದು ಎಡ ಬಲ ಕೂತಿದ್ದವರು ಹೇಳಿದರು. ಇವರು ಯಾರಾದರೆ ನನಿಗೇನಾಗಬೇಕಿತ್ತು. ಹು ಅಂತೆ ಉಹು ಅಂತೆ ಮನದಲ್ಲೇ ಈ ಶನಿಗಳು ಎದ್ದು ಹೋದರೆ ಸಾಕೆಂದು ಕೊಸರಾಡಿಕೊಂಡು ಕೈಗಳನ್ನು ಬಿಡಿಸಿಕೊಂಡೆ. ನನ್ನನ್ನು ನೋಡಿ ಮತ್ತೆ ನಕ್ಕರು. ಉಹು ನನ್ನ ಕಿವಿಯ ಬಳಿ ಬಂದು ಇದು ಸರಿನಾ ಎಂದ, ಏನು ಹೇಳುತ್ತಿದ್ದಾನಿವನು ಅರ್ಥವಾಗದೆ ಅವನ ಕಡೆ ತಿರುಗಿ ಪ್ರಶ್ನಾರ್ಥಕವಾಗಿ ನೋಡಿದೆ. ಇತ್ತ ಕಡೆಯಿಂದ ಹು ಜೋರಾಗಿ ಏನ್ ಪ್ಲಾನ್ ಇವತ್ತು. ಫುಲ್ ಮಜಾನಾ!! ಎಂದು ಮತ್ತೆ ಅಸಹ್ಯ ಹುಟ್ಟಿಸುವ ನಗು ನಕ್ಕ. ಉಹು ಮತ್ತೆ ಮಾತು ಮುಂದುವರೆಸಿದ “ವಾಲೆಂಟೈನ್ಸ್ ಡೇ ಅಂತೆ ಮಣ್ಣು, ಅಲ್ನೋಡು ಅಸಹ್ಯ ನನ್ನ ಮಕ್ಕಳು ಯಾವ ಜಾಗ ಅಂತ ಇಲ್ಲ, ಸಮಯ ಅಂತ ಇಲ್ಲ ನಾಚಿಕೆ ಮಾನ ಮರ್ಯಾದೆ ಬಿಟ್ಟು ಹೆಂಗೆ ಓಡಾಡ್ತಿದಾರೆ ನೋಡು, ಚಪ್ಪಲಿಯಲ್ಲಿ ಹೊಡಿಬೇಕು ಇವರಿಗೆ” ಎಂದ ಹೋ ಇವತ್ತು ಪ್ರೇಮಿಗಳ ದಿನಾನಾ ಅದಕ್ಕೆ ಮತ್ತೆ ಗುಲಾಬಿ ಬೆಲೆ ಇವತ್ತು ಇಷ್ಟಿರಿವುದು, ಮತ್ತು ಪಾರ್ಕ್ ನಲ್ಲಿ ಇಷ್ಟು ಜನ ತುಂಬಿರುವುದು ಎಂದು ಯೋಚಿಸಿದೆ. ಆದರೆ ಇವನ್ಯಾಕೆ ಹೀಗೆ ಇವರನ್ನ ಬಯ್ಯುತ್ತಿದ್ದಾನೆ. ಅವರು ಹೇಗಿದ್ದರೆ ಇವನಿಗೇನಂತೆ ಎಂದು ಹು ಕಡೆ ತಿರುಗಿದೆ ಅವನು ತಲೆ ಬಗ್ಗಿಸಿ ಏನೂ ಮಾತನಾಡದೆ ಕೂತಿದ್ದ. ನಿಧಾನವಾಗಿ ಮತ್ತು ಶಾಂತವಾಗೇ ನನ್ನ ಕಡೆ ತಿರುಗಿ ಅವರು ನಡೆದುಕೊಳ್ಳುತ್ತಿರುವ ರೀತಿ ಅಲ್ಲ ತೊಂದರೆ ಇರುವುದು ನಮ್ಮ ಕಣ್ಣುಗಳಲ್ಲಿ, ಹೆಣ್ಣು ಗಂಡು ಜೊತೆಗಿದ್ದಾರೆ ಎಂದಾಕ್ಷಣ ಅವರ ಬಗ್ಗೆ ಕೆಟ್ಟದಾಗಿ ಕಲ್ಪಿಸುವುದು ಸಮಾಜದ ಮಾಮೂಲಿನ ಸಂಗತಿ ತಾನೆ. ಅದರಲ್ಲೂ ಇವರು ಪಾಪ ಇನ್ನೂ ಹುಡುಗ ಹುಡುಗಿಯರು ಎಂದು ಪಾರ್ಕಿನಲ್ಲಿದ್ದ ಪ್ರೇಮಿಗಳನ್ನು ಸಮರ್ಥಿಸಿದ. ಉಹು ನನ್ನನ್ನು ಅವನ ಕಡೆ ತಿರುಗಿಸಿ, ಏನೂ ನಮ್ಮ ದೃಷ್ಟಿಕೋನ ತಪ್ಪಂತಲ್ಲವೇ ಬಾ ತೋರಿಸುತ್ತೀನಿ ನಿನಗೆ ಆಮೇಲೆ ನೀನೇ ನಿರ್ಧರಿಸುವಂತೆ ಎಂದು ನನ್ನ ಕೈ ಹಿಡಿದು ಎದ್ದು ನಿಂತ. ಅರೆರೆ! ಇದೇನಪ್ಪ ನಾನು ಯಾರು ಇವರ್ಯಾರು, ಇವರೇಕೆ ನನಗೆ ಈ ಕಥೆಗಳನ್ನ ಹೇಳುತ್ತಿದ್ದಾರೆ. ಸುಮ್ಮನೆ ನನ್ನನ್ನ ಇದರಲ್ಲಿ ಸಿಕ್ಕಿಸುತ್ತಿದ್ದಾರೋ, ಏನು ನಡೆಯುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ, ಪಾರ್ಕಿನಿಂದ ಮಾಯವಾಗಿದ್ದೆವು!
ಉಹು ನನ್ನ ಕೈ ಹಿಡಿದು ನಿಂತಿದ್ದ ಪಕ್ಕದಲ್ಲಿ ಹು ಕೂಡ ನಿಂತಿದ್ದ. ಎಲ್ಲಿದ್ದೇವೆಂದು ಸುತ್ತ ನೋಡಿದೆ, ಇದಾವುದೋ ನಿರ್ಜನ ಪ್ರದೇಶ, ನಗರ ಹೊರವಲಯವಿದ್ದರೂ ಇರಬಹುದು. ಅರೆ! ಕಾರಿನ ಮೇಲೆ ನಿಂತಿದ್ದೆವು. ಉಹು ಬಗ್ಗಿ ಕಾರಿನ ಕಿಟಕಿಯಿಂದ ನೋಡುವಂತೆ ಹೇಳಿದ, ಹಾಗೆಯೇ ಮಾಡಿದೆ ಏನಿರಬಹುದೆಂಬ ಕುತೂಹಲವಿತ್ತು. ಕಾರಿನೊಳಗಡೆ ಗಂಡು ಹೆಣ್ಣು ಸವಿ ಹಂಚಿಕೊಳ್ಳುತ್ತಾ, ಕ್ರಿಯಾಶೀಲರಾಗಿದ್ದರು. ನೋಡಲಾಗಲಿಲ್ಲ ಮುಖ ಕಿವುಚಿಕೊಂಡು ಮೇಲೆದ್ದೆ. ಮಾತು ಹೊರಡಲಿಲ್ಲ. ಏನಿದೆಂಬಂತೆ ಮುಖ ಮಾಡಿದೆ. ಇಲ್ಲಿಗೆ ಯಾಕೆ ಬಂದಿದ್ದೆವೆಂಬುದು ಅರ್ಥವಾಗಲಿಲ್ಲ. ಉಹು ನನ್ನ ರಟ್ಟೆ ಹಿಡಿದು ನೋಡಿದೆಯಾ ಇದಕ್ಕೆ ಏನು ಹೇಳ್ತೀಯಾ? ಇದು ನಮ್ಮ ಸಂಸ್ಕೃತಿನಾ? ಇದೇ ಪ್ರೇಮಿಗಳ ದಿನದ ವಿಶೇಷಾನಾ? ಇಷ್ಟೇ ಅಲ್ಲ ಬಾ ಎಂದು ಮತ್ತೆ ಅಲ್ಲಿಂದ ಮಾಯವಾದೆವು.
ಇದಾವುದೋ ಹೋಟೆಲೋ ರೆಸೋರ್ಟೋ ಇರಬೇಕು. ಉಹು ಒಂದು ಗುಂಪಿನ ಕಡೆ ತೋರಿಸುತ್ತಾ ನೋಡು ಆ ಅಬ್ಬರದ ಸಂಗಿತ, ಸಿಗರೇಟು, ಕುಡಿತ, ಕುಣಿತ ಈ ಅರೆ ನಗ್ನ ಉಡುಗೆ ತೊಡುಗೆ, ಹುಡುಗ ಹುಡುಗಿ ಎಂಬ ಬೇಧವಿಲ್ಲದೆ ಒಬ್ಬರ ಮೇಲೆ ಒಬ್ಬರು ಬಿದ್ದು ಅಸಹ್ಯ ನರ್ತನ ಹೇಗಿದೆ ಪ್ರೇಮಿಗಳ ದಿನದ ಕಾರುಬಾರು. ಪ್ರೇಮ ಈ ಸ್ವರೂಪಕ್ಕೆ ಬಂದಿದೆಯಾ? ಇದು ನಿಜವಾಗಲೂ ಪ್ರೇಮವೇನಾ? ಪ್ರೇಮದ ಹೆಸರಿನಲ್ಲಿ ಎಂಥ ವಿಕೃತವಾದ ಆಚರಣೆಗಳನ್ನು ಮಾಡುತ್ತಿದ್ದೇವೆ ನೋಡು. ಇಷ್ಟೇ ಅಲ್ಲ ಬಾ ಇನ್ನೂ ಇದೆ ಎಂದು ಕೈ ಹಿಡಿದ ಹು ಕಡೆ ನೋಡಿದೆ ಯಾಕೋ ಮನುಷ್ಯ ಏನೂ ಹೇಳುವ ಸ್ಥಿತಿಯಲ್ಲಿದ್ದಂತೆ ಕಾಣಿಸಲಿಲ್ಲ. ಮಾಯವಾದೆವು.
ಪಾರ್ಕಿನಲ್ಲಿ ಬಂದು ಉಹು ತಾನು ಗೆದ್ದಂತೆ ನೋಡಿದೆಯಾ ಗೊತ್ತಾಯ್ತಾ ಹೇಗಿದೆ ವ್ಯಾ-ಲೆಂಟೈನ್ ಡೇ ಎಂದು ಸುಮ್ಮನಿದ್ದ ಹು ಕಡೆ ತಿರುಗಿದ. ಆತ ಸೋಲನ್ನು ಒಪ್ಪಿಕೊಂಡಂತೆ ಕಾಣಲಿಲ್ಲ. ಹು ಸುಮ್ಮನೆ ಮುಗುಳ್ನಗುತ್ತಿದ್ದುದನ್ನು ಕಂಡು ಉಹು ರೊಚ್ಚಿಗೆದ್ದು ಈ ದಿನವನ್ನ ನಮ್ಮ ದೇಶದ ಕಾಲೆಂಡರ್ ನಿಂದಲೇ ತೆಗೆದುಹಾಕಬೇಕು. ಎಲ್ಲಾ ಪಾಶ್ಚಾತ್ಯ ಸಂಸ್ಕೃತಿಯನ್ನ ನಕಲು ಮಾಡಲು ಹೊರಟಿದ್ದಾರೆ ನಮ್ಮ ಯುವಜನತೆ. ಅರ್ಥವಿಲ್ಲದ ಆಚರಣೆಗಳನ್ನ ನಾವು ತಡೆಯಬೇಕು, ಚಿಕ್ಕ ಹುಡುಗರಿಗೂ ಇದು ತಪ್ಪೆಂದು ಅರಿವು ಮೂಡಿಸಬೇಕು ಎಂದು ತನ್ನ ಮಾತುಗಳನ್ನು ಮುಂದುವರೆಸುತ್ತಿದ್ದ, ಹು ಈಗ ಮೌನ ಮುರಿದು ಯಾವುದು ತಪ್ಪು ಅದರಲ್ಲಿ ಎಂದು ಕೇಳಿದ. ಇಷ್ಟೆಲ್ಲಾ ನೋಡಿಯಾದ ಮೇಲೆ ಇದೇನಾ ಕೇಳ್ತಿರೋದು ಎಂದು ಉಹು ಉತ್ತರಿಸಿದ. ಹು ನನ್ನ ಕೈ ಹಿಡಿದು ಬಾ ಎಂದು ಕರೆದುಕೊಂಡೊಯ್ದ, ಮೂವರೂ ಮತ್ತೆ ಮಾಯವಾದೆವು.
ಕಾರಿನ ಒಳಗಡೆ ಹಿಂದಿನ ಸೀಟ್ ಹಿಂಬದಿಯಲ್ಲಿ ಮೂವರೂ ಅವಿತು ಕೂತಹಾಗಿತ್ತು. ಚಿಕ್ಕ ಜಾಗ, ಹು ನನ್ನ ಕೈ ಹಿಡಿದಿದ್ದ, ಉಹು ನನ್ನನ್ನೇ ದುರುಗುಟ್ಟಿನೋಡುತ್ತಿದ್ದ. ಹಿಂದೆ ತಮ್ಮ ಪ್ರಪಂಚದಲ್ಲಿ ಮಗ್ನರಾಗಿದ್ದ ಪ್ರೇಮಿಗಳೆಂಬೋ ಪ್ರೇಮಿಗಳು. ಅಲ್ಲಿ ಒಂದು ಕ್ಷಣವೂ ಕೂಡ್ರಲಾಗಲಿಲ್ಲ, ಕಿವಿ ಗಟ್ಟಿಯಾಗಿ ಮುಚ್ಚಿ, ಮುಖ ಹಿಂಜಿ ಕೂತಿದ್ದೆ. ಹು ನನ್ನನ್ನು ನೋಡಿ ನೋಡಿ ಒಳಗೊಳಗೇ ನಗುತ್ತಿದ್ದ. ಉಹು ಏನೂ ಭಾವವೇ ಇಲ್ಲದೆ ಕೂತಿದ್ದ. ಸ್ವಲ್ಪ ಸಮಯದ ನಂತರ ಹು ಕಿವಿಯಿಂದ ಕೈ ತೆರೆಸಿದ. ಹಿಂದೆ ಕೇಳುತ್ತಿದ್ದ ನಗುವಿನ ಶಬ್ದದಷ್ಟೇ ಜೋರಾಗಿ ಉಸಿರು ಕೇಳಿಸುತಿತ್ತು. ಆಕೆ  ಲವ್ ಯು ಎಂದಳು ಲವ್ ಯು ಟೂ ತರ್ಲೆ ಎಂದ ಆತ. ಮುಂದಿನ ವರ್ಷ ನಮ್ ಕನಸಿನ ಮನೇಲಿ ನಾವ್ ಹೀಗೇ ಇರತೀವೇನೋ ಎಂದಳು ಆಕೆ, ಇಲ್ಲ ಜಾಗ ದೊಡ್ಡದಾಗಿರುತ್ತೆ ಹಿಂಗೆ ಯಾಕೆ ಎಂದು ಛೇಡಿಸಿದ ಆತ. ಇಬ್ಬರೂ ಮುದ್ದು ಮುದ್ದಾಗಿ ನಕ್ಕರು. ಥು ಆ ಮೀಸೆ ಬಿಡೋ ನೀನು ಅಸಹ್ಯವಾಗಿದ್ಯ, ಮದುವೆ ಆದ್ಮೇಲೆ ಹಿಂಗಿರು ಆಮೇಲ್ ಇದೆ ನಿಂಗೆ ಸೀರೆ ಉಡ್ಸ್ತೀನಿ. ಒಹೊ ನೀನ್ ಉಗುರು ಕಟ್ ಮಾಡ್ತೀಯಾ ಹೇಳು ಒಳ್ಳೇ ರಾಕ್ಷಸಿ ಇದ್ದಂಗೆ ಇದ್ಯ ಥು. ಎಷ್ಟು ಕಷ್ಟ ಪಟ್ಟು ಬೆಳೆಸಿದ್ದೀನಿ ಹೋಗೋ ಕೋತಿ ಎಂದು ಅವರದೇ ಪ್ರಪಂಚದಲ್ಲಿ ಮಾತುಗಳು, ಮುತ್ತುಗಳು ಉದುರುತ್ತಲೇ ಇದ್ದವು, ಮುಳ್ಳಿನ ಮೇಲೆ ಕೂತಹಾಗಿತ್ತು. ಮಾಯವಾದೆವು
ರೆಸೋರ್ಟ್, ಗುಂಪಿನ ನಡುವೆ ಇದ್ದೆವು ಒಂದು ಕೈ ಹು ಹಿಡಿದಿದ್ದ, ಪಕ್ಕದಲ್ಲಿ ಉಹು ನಿಂತಿದ್ದ, ಇನ್ನೊಂದು ಕೈಲಿ ವೈನ್ ಹಿಡಿದಿದ್ದೆ. ಅದೇ ಅಬ್ಬರದ ಹಾಡು ಎಲ್ಲಾ ಕುಣಿಯುತ್ತಿದ್ದರು, ನಾವು ನಿಂತಿದ್ದೆವು ನಮ್ಮನ್ನು ಜೊತೆ ಸೇರಿಸಿಕೊಂಡು ಎಳೆದೊಯ್ದರು ಹಾಡಿಗೆ ತಕ್ಕಂತೆ ಕುಣಿದೆವು, ಕೂಗಿದೆವು, ಕುಡಿದೆವು, ಹಾಡಿದೆವು, ಸುಸ್ತಾಯ್ತು ಅಲ್ಲಿಂದ ಹೊರನಡೆದೆವು. ಮಜಾ ಬಂತು ಇಲ್ಲಿ ಏನ್ ತಪ್ಪಿತ್ತು ಗೊತ್ತಾಗಲಿಲ್ಲ. ಆಗಲೆ ದೂರದಲ್ಲಿ ನಿಂತು ನೋಡಿದಾಗಿನ ತಪ್ಪು ಮಾಡುವಾಗ ಗೊತ್ತಾಗುವುದಿಲ್ಲವಾ ಪ್ರಶ್ನೆ ಹುಟ್ಟಿತು! ಎಲ್ಲಾ ಆನಂದಿಸುತ್ತಿದ್ದವರ ಮುಖ ನೋಡಿದೆ ಆ ಅಮಾಯಕ, ಮುಗ್ಧ ನಗು ಮುಖಗಳು, ತೇಲಾಡುತಿದ್ದರು ತಮ್ಮದೇ ಪ್ರಪಂಚದಲ್ಲಿ, ಅವರನ್ನು ನೋಡುತ್ತಲೇ ಕಾರಿನಲ್ಲಿ ನಡೆದ ದೃಶ್ಯ ಮನಸಿಗೆ ಬಂತು ತಮ್ಮ ತಮ್ಮ ಜೀವನ ಅವರು ಬೇಕಾದಂಗೆ ಬದುಕುತ್ತಿದ್ದಾರೆ ಏನು ತಪ್ಪಿತ್ತು ಅದರಲ್ಲಿ, ಪ್ರೀತಿ ಎರಡೂ ಕಡೆಯಿಂದ ನಿಷ್ಕಲ್ಮಷವಾದಲ್ಲಿ, ತಮ್ಮ ಖಾಸಗಿ ಜೀವನದಲ್ಲಿ ಹೇಗಿದ್ದರೆ ಯಾರಿಗೆ ಏನಾಗಬೇಕಿದೆ?
ಪಾರ್ಕುಗಳ ಪೊಟರೆಗಳು, ರಸ್ತೆ ತಿರುವುಗಳು, ಕಾಲೇಜು, ಮಾಲ್ ಗಳು, ಸಿನಿಮಾ ಥಿಯೇಟರ್ ಗಳು, ಕೈಕೈ ಹಿಡಿದು ಅಲೆದಾಟಗಳು, ಕಲರ್ ಕಲರ್ ಗಿಫ್ಟುಗಳು, ತಿಂಡಿಗಳು, ತುಂಡು ಉಡುಗೆಗಳು, ತರಹೇವಾರಿ ಊಟಗಳು, ಮತ್ತಿನ ಸಾಮಾಗ್ರಿಗಳು, ಪ್ರೊಪೋಸಲ್ ಗಳು, ಪ್ರೈವೆಸಿಗಳು, ಎಲ್ಲವೂ ಹು ತೋರಿಸಿದಂತೆ ಸರಿಯಾಗೇ ಕಂಡವು, ಆದರೆ ಮತ್ತೆ ಉಹು ತೋರುವಂತೆ ತಪ್ಪಾಗೆ ಕಂಡವು. ಯಾವುದು ಸರಿ ಯಾವುದು ತಪ್ಪು ಎಂದು ಗೊಂದಲ ಮನದಲ್ಲಿ ಮೂಡಿತು. ಪಕ್ಕದಲ್ಲಿ ಇವರುಗಳು ಬೇರೆ ಮಾತಿಗೆ ಮಾತು ಬೆಳೆಸುತ್ತಲೇ ಇದ್ದರು. ಮಧ್ಯ ನಾನು ಎಡ ಬಲ ಹು ಮತ್ತು ಉಹು. ನೀನೂ ಈ ಪ್ರೇಮಿಗಳ ದಿನವನ್ನ ಆಚರಿಸಬೇಕಾ ಅಂತ ಉಹು, ಪ್ರೇಮಿಗಳ ದಿನವನ್ನ ವರ್ಷಕ್ಕೆ ಒಂದು ದಿನ ಅಲ್ಲ ಇಡೀ ವರ್ಷ ಆಚರಿಸು ಅಂತ ಹು. ಉಹು: ಪ್ರೀತಿಗೆ ಮಹಲು, ಗೋಪುರಗಳನ್ನ ಕಟ್ಟಿರೋ ಸಂಸ್ಕೃತಿ ನಮ್ಮದು ಅದನ್ನ ಬೀದಿಗಳಿಗೆ ತರೋ ಸಂಸ್ಕೃತಿ ನಮಿಗೆ ಬೇಕಾ? ಹು: ಓಪನ್ ಆಗಿ ಪ್ರೀತಿ ಕೂಡ ಹಂಚಿಕೊಳ್ಳೋಕಾಗದೇ ಕದ್ದು ಮುಚ್ಚಿ ಪ್ರೀತಿ ಮಾಡು ಅಂತ ನಮ್ಮ ಸಂಸ್ಕೃತಿ ಹೇಳುತ್ತಾ? ಉಹು: ಪ್ರೀತಿ ಹೆಸರಿನಲ್ಲಿ ಅನೈತಿಕವಾಗಿ ನಡೆದುಕೊಳ್ಳೋದನ್ನ ಪ್ರೀತಿ ಅಂತಾರ? ಹು: ಒಬ್ಬರಿಗೊಬ್ಬರು ಬದ್ಧರಾಗಿರೋವಾಗ, ಇಬ್ಬರ ಸಮ್ಮತಿಯೂ ಇದ್ದಲ್ಲಿ ತಮ್ಮ ರೀತಿಯಲಿ ಬದುಕುವುದರಲ್ಲಿ ತಪ್ಪೇನು? ಉಹು: ಒಬ್ಬರ ಜೊತೆ ಮನಸು ದೇಹ ಹಂಚಿಕೊಂಡು ಮತ್ತೆ ಇನ್ನೊಬ್ಬರ ಜೊತೆ ಮದುವೆಯಾಗಿರೋ ಎಷ್ಟು ಪ್ರಕರಣಗಳಿಲ್ಲ ಎಲ್ಲಾ ಇದೇ ಪ್ರೀತಿಯ ಮತ್ತಿನಲ್ಲಿ ಮಾಡಿಕೊಂಡಿದ್ದಲ್ಲವೇನು? ಹು: ಇದು ಇಬ್ಬರು ಪ್ರೇಮಿಸಿದವರನ್ನ ಮದುವೆಯಾಗದ ಹಾಗೆ ತಡೆಯೋ ಸಮಾಜದ ತಪ್ಪಾ, ಇಲ್ಲ ಪ್ರೇಮಿಗಳ ತಪ್ಪಾ? ಉಹು: ಇದು ಅಷ್ಟು ಸುಲಭವಾದ ಪ್ರಶ್ನೆ ಅಲ್ಲ, ಸುಮ್ಮನೆ ಯಾರನ್ನೋ ಇಷ್ಟ ಪಟ್ಟು ಪ್ರೀತಿ ಮಾಡೋದು ದೊಡ್ಡ ವಿಷಯವಲ್ಲ, ಮದುವೆ ಅನ್ನೋದು ಇಡೀ ಮುಂದಿನ ಜೀವನದ ನಿರ್ಧಾರ. ಹುರುಪಿನಲ್ಲಿ ಪ್ರೀತಿ ಮಾಡಿ ನಂತರ ಆಗುವ ಬ್ರೇಕಪ್ ಗಳಿಗೆ ಯಾರು ಹೊಣೆ? ಹು: ಇಡೀ ಸಮಾಜ, ಇಡೀ ವ್ಯವಸ್ಥೆ ಹೊಣೆ. ಪ್ರೀತಿಯನ್ನು ಮುರಿಯಲು ಒಟ್ಟಾಗುವ ನಮ್ಮ ಸಮಾಜ, ಪ್ರೇಮವನ್ನು ಒಂದುಗೂಡಿಸುವ ಕಾರ್ಯದಲ್ಲಿ ಯಾಕೆ ಒಟ್ಟಾಗಿ ಸಹಕರಿಸುವುದಿಲ್ಲ. ಪ್ರೀತಿ ಮಾಡುವುದನ್ನೂ ಗುರು ಹಿರಿಯರಿಂದ ಮುಚ್ಚಿಟ್ಟು ತಪ್ಪು ನಿರ್ಧಾರ ತೆಗೆದ್ಕೊಳ್ಳುವುದರಲ್ಲಿ ಪರೋಕ್ಷವಾಗಿ ಕಾರಣರಾಗುವುದರ ಬದಲು, ಯಾಕೆ ತಮ್ಮ ತಮ್ಮ ಮಕ್ಕಳಿಗೆ ಆಯ್ಕೆಯ ಸ್ವಾತಂತ್ರ್ಯ ಕೊಟ್ಟು, ತಮ್ಮ ಜೀವನ ಬದುಕಲು ಬಿಟ್ಟು, ಅವರ ಅನನುಭವಿ ತಪ್ಪು ಹೆಜ್ಜೆಗಳನ್ನು ತೋರಿಸಿಕೊಟ್ಟು ಜೊತೆ ನಿಂತರೆ ನೀನು ಹೇಳಿದಂತಹ ತೊಂದರೆಗಳು ಎಲ್ಲಿ ಉಗಮಿಸುತ್ತವೆ?
ಇವರ ವಾಗ್ವಾದಗಳು ಮುಂದುವರೆಯುತ್ತಲೇ ಹೋಯ್ತು. ನನ್ನ ಕಿವಿಗಳು ಶಬ್ದಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದವು. ನನ್ನ ಕಣ್ಣುಗಳು ಈಗ ತೆರೆದುಕೊಂಡವು, ಮುದುಡಿದ ಮನಸು ಅರಳಿತು, ನಿಂತು ಹೋಗಿದ್ದ ನರನಾಡಿಗಳಲ್ಲಿನ ರಕ್ತ ಸಂಚಲನ ಈಗ ಮತ್ತೆ ಶುರುವಾದುವೇನೋ ಎನಿಸಿತು, ಅವಳು ಬರುತ್ತಿರುವತ್ತಲೇ ನೋಡಿದೆ. ಅವಳ ಮುಗ್ಧ ನಡಿಗೆ, ನನ್ನನ್ನು ಅಲ್ಲಿಂದಲೇ ನೋಡಿದ್ದಳೇನೋ ಎಂಬಂತೆ ನೇರವಾಗಿ ನನ್ನ ಬಳಿಗೆ ನಡೆದು ಬರುತ್ತಿದ್ದಳು. ನನಗೇ ಅರಿವಿಲ್ಲದಂತೆ ನನ್ನ ಕಾಲುಗಳು ಅವಳ ಕಡೆಗೆ ನಡೆಯತೊಡಗಿದವು. ವಾಗ್ಧಾಳಿಯಲ್ಲಿ ತೊಡಗಿದ್ದ ಪುಣ್ಯಾತ್ಮರು ಮೂಕಾಗಿ, ಗಮನ ನನ್ನ ಕಡೆ ಕೇಂದ್ರೀಕರಿಸಿ ನನ್ನ ಕಡೆಗೇ ನೋಡುತ್ತಿದ್ದರೆಂದು ಕಾಣುತ್ತದೆ. ನಾನು ಯಾರನ್ನೂ ಲೆಕ್ಕಿಸಲಿಲ್ಲ, ಸೀದಾ ಹೋದೆ ಕೈಲಿದ್ದ ಹೂವನ್ನು ಮುದುಡುವ ಮುನ್ನ ಅವಳ ಕೈ ಸೇರಿಸಿದೆ. ಅವಳ ಕೈ ಹಿಡಿದು ಬಂದಿದ್ದವಳು, ಅವಳನ್ನು ನನ್ನ ಕೈ ಸೇರಿಸಿ ಅವಳ ಕಿವಿಯಲ್ಲಿ ಏನೋ ಉಸುರಿ ಹೋದಳು. ಅವಳ ಕೈ ಹಿಡಿದು ಅಂಗೈ ಮೇಲೆ ಹೊರಡೋಣವಾ ಎಂದು ಬರೆದೆ ಅವಳ ನಗುಮುಖದಲ್ಲೇ ಹ್ಮ್.. ಎಂದಳು. ಅವಳ ಮುಖದಲ್ಲಿ ಯಾವತ್ತೂ ಕುಂದದ ಆ ನಗು ಎಲ್ಲಿಂದ ಪಡೆದುಕೊಂಡಿದ್ದಳೋ. ಈ ಪ್ರಪಂಚವನ್ನ ನೋಡದೇ ಇರೋದ್ರಿಂದ ಹಾಗೇನೋ ಗೊತ್ತಿಲ್ಲ. ಎಲ್ಲಿಗೆ ಹೊರಟಿದ್ವೋ ಅದೂ ಗೊತ್ತಿಲ್ಲ, ಎಲ್ಲಿಗೆ ಅಂತ ಅವಳೂ ಕೇಳಲಿಲ್ಲ. ನಡೆದುಹೊರಟೆವು. ಹು ಮತ್ತು ಉಹು ಮಾತು ನಿಲ್ಲಿಸಿದ್ದರು. ಅವರಲ್ಲಿ ಏನು ನಿರ್ಧಾರವಾಯಿತೋ ನನಗೆ ಬೇಕಿರಲಿಲ್ಲ. ಪ್ರೇಮಿಗಳ ದಿನ, ಸಮಾಜ, ತಪ್ಪು, ಸರಿ ಯಾವ ಪರಿವೆಯೂ ಕೂಡ ನಮಗೆ ಬೇಕಿರಲಿಲ್ಲ. ನಾನೇ ಅವಳ ಕಣ್ಣು, ಅವಳೇ ನನ್ನ ಮಾತು, ಇದುವೇ ನಮ್ಮ ಸಂಸಾರ. ಪ್ರೇಮವೇ ನಮ್ಮ ಮಾರ್ಗ.

ಹಿನ್ನುಡಿ: ಏನು ಬರೆಯುವುದೋ ನನಗೂ ಗೊತ್ತಿಲ್ಲ. ವಿಚಾರ ನಿಮ್ಮ ತಲೆಯಲ್ಲಿ ಬಿತ್ತನೆಯಾಗಲಿ. ನಿಮ್ಮ ನಿಮ್ಮ ತಪ್ಪು ಸರಿಗಳನ್ನ ನೀವೇ ಕಂಡುಕೊಳ್ಳಿ!

ನಮ್ಮೂರ ರಸ್ತೆಯಲಿ!!!!!!!!!!!!!!!!!!!!!!!


ಮುನ್ನುಡಿ: ಏನೂ ಹೇಳುವುದಿಲ್ಲ! ಓದಿ!

ಪ್ರಪಂಚ ಸುತ್ತುತ್ತಿದೆ. ಇದೇನಿದು ಇಷ್ಟು ವೇಗವಾಗಿ ಸುತ್ತುತ್ತಿದೆ ಇವತ್ತು. ಹೋ!!… ಹೋ!!!…….. ಹೋ!!!!…………..
ಯಾರೋ ಕಿರಾತಕರು ಭೂಮಿನಾ ತೊಗೊಂಡು ಗಿರಗಿಟ್ಟಲೆ ಮೇಲೆ ಇಟ್ಬಿಟ್ಟಿದಾರೆ ಅನ್ಸುತ್ತೆ. 
ಕಣ್ಣು ಬಿಡಕ್ಕಾಗ್ತಿಲ್ಲ, ಪಿನ್ ನಿಂದ ಕಣ್ಣಿಗೆ ಚುಚ್ಚಿದಂಗೆ ಇದೆ, ಯಾರೋ ಬಾಳೆ ಹಣ್ಣಿನ ಸಿಪ್ಪೆ ಬಿಸಾಕಿದ್ರೇನೋ ತುಳಿದೆ ಜಾರಿದೆ. 
ಗಾಡಿಗಳ ಡರ್‍ರ್‍ರ್‍ರ್‍ರ್‍ರ್‍ರ್‍ ಪೀಈಈಈಈ ಸದ್ದು ಮಾತ್ರ ಕೇಳಿ ಬರುತ್ತಿದೆ. ಹೋ….!! ಎಲ್ಲೀ ಹಾರುತ್ತಿದ್ದೀನಿ ಕಾಲುಗಳು ನಿಲ್ಲುತ್ತಿಲ್ಲ ಹಯ್ಯೋ ಯಾರಾದರೂ ಹಿಡಿಯಿರಿ ಹ..ಹ..ಹ.. ಆಕಾಶದಲ್ಲಿ ತೇಲ್ತಾ ಇದ್ದೀನಿ, ಚೆನ್ನಾಗಿದೆ. ಹೆಗಲಮೇಲೆ ಇದ್ದ ಭಾರದ ಜೊತೆಗೆ ಮೈ ಭಾರ ಕೂಡ ಕಡಿಮೆ ಆದಹಾಗೆ ಅನ್ನಿಸ್ತಿದೆ. ಇನ್ನೂ ಮೇಲೆ ಮೇಲೆ ಹೋಗ್ತಾನೇ ಇದ್ದೀನಿ ಎಲ್ಲಿಗೆ ಹೋಗ್ತಿದ್ದೀನೋ ತಿಳೀತಿಲ್ವೇ. 
ಹೊ! ಏರೋಪ್ಲೇನ್ ಬಂತು ಹಯ್ಯಯ್ಯೋ ನನ್ನ ಕಡೆಗೆ ಬರ್ತಾಇದೆ. ಗುದ್ದುತ್ತೆ. ಹಯ್ಯೋ ಬಂತು… ಬಂತು…. ಸರಕ್!!.. ನನ್ ಪ್ಯಾಂಟ್ ಹಿಂಭಾಗ ಕಿತ್ಕೊಂಡೋಯ್ತು. ಉಫ್ ಬಚಾವಾದೆ. 

ಆಹಾ ನಿದ್ರೆ ಬರ್ತಾಯಿದೆ. ಈ ತಂಪು ಗಾಳಿಗೆ.

ಅದೇನೋ ಸುಗಂಧದ ವಾಸನೆ ಬರುತ್ತಿತ್ತು, ಮೆತ್ತನೆಯ ಹಾಸಿಗೆಯಲ್ಲಿ ಮಲಗಿದ್ದೆ, ಕಣ್ಬಿಟ್ಟೆ!!!!! ಆಹಾ! ಇದಾವುದಪ್ಪಾ ಜಾಗ ಎಂದು ಕಣ್ಣುಬಿಡುವಷ್ಟರಲ್ಲಿ, ನನ್ನ ಹೆಂಡತಿ, ಮೈತುಂಬಾ ಆಭರಣಗಳನ್ನೇ ಉಟ್ಟು ನಡೆದು ಬಳಿಗೆ ಬಂದು ಕುಡಿಯಲು ಅಮೃತ ಕೊಟ್ಟಳು. ಇವಳನ್ನೇ ನಾನು ಮದುವೆ ಆಗಿದ್ದಾ! ಇದೇನ್ ಬಂತು ಇವಳಿಗೆ ಕೇಡುಗಾಲ ಇಷ್ಟು ಸೂಪರ್ ಆಗೋಗಿದ್ದಾಳಲ್ಲಾ. ಸ್ನಾನ ಮಾಡ್ದೇನೇ? ಇದೇನೇ ಹಿಂಗೆ ಹೊಳಿತಿದ್ಯಾ? ಏನ್ ಬಂತು ನಿಂಗೆ ರೋಗ ಅಂದೆ. ಕುಡೀರ್ರೀ ಸುಮ್ಮನೆ ರೇಗ್ಸಿದ್ದು ಸಾಕು ಅಂದ್ಳು. ಇದಾವುದೋ ನರಕ ಇರಬೇಕು. ಏನೋ ಮಸಲತ್ತಿದೆ ನನ್ನನ್ನ ಇಲ್ಲಿ ತಂದು ಸಿಕ್ಕಿಹಾಕಿಸಿದ್ದಾರಲ್ಲ, ಇವಳು ಯಾರೋ ಮಾಯಾವಿ ಇರಬೇಕು ನನ್ನ ಹೆಂಡತಿ ನನಗೆ ಪ್ರೀತಿಯಿಂದ ಅಮೃತ ಕೊಡೋದು!!!! ಅದು ನನ್ನನ್ನ ನೋಡಿ ಹಲ್ಲು (ಪ್ರಧಮ ಬಾರಿಗೆ ಬಿಳೀಗಿದೆ) ಕಾಣುವ ಹಾಗೆ ಮುಗುಳುನಗ್ತಿದ್ದಾಳೆ ಓಹೋ! ನಾನು ಬದುಕೇ ಇಲ್ಲ ಹಾಗಾದ್ರೆ ಭೂಮಿ ಪ್ರಳಯ ಆಗೋಗಿದೆ ಅಂತ ಎದ್ದು ಮೊದಲು ಅಲ್ಲಿಂದ ಬೇಲಿ ಕಿತ್ತೆ. ಓಡಿ ಬರುವ ಮುನ್ನ ಹೆಂಡತಿಯ ಕೈಲಿದ್ದ ಅಮೃತ ಕಸಿದುಕೊಂಡು ಬರುವುದನ್ನ ಮರೆಯಲಿಲ್ಲ. ಎಷ್ಟು ದೂರ ಓಡಿ ಬಂದರೂ ಅದೇನೋ ವಿಚಿತ್ರವಾಗಿ ಮೃಧುವಾದ ಧ್ವನಿಯಲ್ಲಿ ಡಾಲಿಂಗ್ ಡಾಲಿಂಗ್ ಅಂತಾ ಬಡ್ಕೋತಿದ್ದಿದ್ದು ಕೇಳಿಸುತ್ತಿತ್ತು.

ರಸ್ತೆಯಲ್ಲಿ ನಡೆದುಬರುತ್ತಾ ನೋಡಿದರೆ ಊರೆಲ್ಲಾ ಹಾಗೇ ಇದೆ ಇನ್ನೂ ಪ್ರಳಯ ಆಗಿಲ್ಲ! ಆದ್ರೆ ಇದಾವುದೋ ನಮ್ಮ ಊರಿನ ತರಹಾನೇ ಕಾಣ್ತಿಲ್ಲ. ಏನೋ ವಿಚಿತ್ರವಾಗಿದೆ. ಯಾಕ್ ಹೀಗಿದೆ ಅಂತ ಸುತ್ತ ನೋಡಿದೆ. ರೋಡ್ ಮೇಲೇನೋ ಟಾರ್ ಬಿದ್ದಿತ್ತು ಆದರೆ ಟಾರ್ ಮೇಲೆ ಹೊಂಡಗಳೇ ಇಲ್ಲ. ಇದೇನ್ ಊರಪ್ಪಾ! ಹೆಂಗೆ ಬದುಕ್ತಾರೆ ನಮ್ ಜನ ಇಲ್ಲಿ. ಇದು ನಮ್ಮೂರಲ್ಲ ಇದಾವುದೋ ಬೇರೆ ಊರು ಸಂಶಯ ಶುರುವಾಯ್ತು. ಅಲ್ಲೇ ಸೈಕಲ್ ಮೇಲೆ ಜಾರುತ್ತಿದ್ದ ಯಾರೋ ಒಬ್ಬ ಯುವಕನ್ನ ಕೇಳ್ದೆ. ಸಾರ್ ಇದು ನಮ್ಮೂರ ಅಂದೆ. ಗೊತ್ತಿಲ್ಲ ಸಾರ್ ಅಂದ. ಥು ಇದು ಹಿಂಡಿಯಾನಾ ಅಂದೆ. ಹೌದ್ರೀ ಯಾಕ್ ತಲೆ ಕೆಟ್ಟಿದ್ಯಾ ಅಂದ. ಇಲ್ಲ ಕಣ್ಣು ಕಾಣ್ತಿಲ್ಲ ಅಂದೆ. ಹಾಸ್ಪಿಟಲಾ ಎಲ್ಲಿದೆ ಅಂದೆ ಆತ ಏನೂ ಹೇಳಲಿಲ್ಲ. ಹೋ ಇದು ನಮ್ಮೂರೆ ಏನೋ ವಿಚಿತ್ರವಾಗಿ ಕಾಣ್ತಿದೆ ಆದ್ರೆ ಜನ ಮಾತ್ರ ಹಂಗೇ ಇದ್ದಾರಲ್ಲ! ಕೈಲಿದ್ದ ಅಮೃತದ ಶೀಶೆ ಗಟಗಟನೆ ಎತ್ತಿದೆ. ಹಂಗೇ ನಡೆದುಬರುತ್ತಾ ಆಸ್ಪತ್ರೆ ಕಾಣ್ತು ಇದೇನೋ ನಾನು ಇವತ್ತಿನ ವರೆಗೂ ಕಾಣದ ದೃಶ್ಯ ಕಂಡೆ. ಖಾಕಿ ಬಟ್ಟೆ ಹಾಕೊಂಡು ಎಲ್ಲರ ಶುಶ್ರೂಷೆ ಮಾಡ್ತಿದಾರೆ! ಇದೇನ್ ಇದು ಖಾಕಿ ಬಟ್ಟೆಯವರಗೆ ಇಲ್ಲೇನ್ ಕೆಲಸ. ಕುತೂಹಲಕರವಾಗಿದ್ಯಲ್ಲ!! ಎಲ್ಲ ರೋಗಿಗಳನ್ನೂ ಖಾಕಿಯವರೇ ರಿಪೇರಿ ಮಾಡ್ತಿದ್ರು. ತಲೆಕೆಟ್ಟಂಗಾಯ್ತು. ಇನ್ನೊಂದಷ್ಟು ಅಮೃತ ಸುರುವಿಕೊಂಡೆ. ಹಾಗೆ ಅಲ್ಲಿಂದ ಬಂದೆ ಇನ್ನು ಸ್ವಲ್ಪ ಹೊತ್ತು ಅಲ್ಲಿದ್ರೆ ತಲೆ ಕೆಡೋದ್ ಗ್ಯಾರಂಟಿ ಇತ್ತು. ನನಗೆ ನೆನಪಿರೋದು ಖಾಕಿ ಹಾಕಿರೋರು ಹಾಸ್ಪಿಟಲ್ ಗೆ ಕಳಿಸೋದು ಮಾತ್ರ ಇದೇನೋ ಮಾಯೆನೇ ಅಗೋಗಿದೆ. ಒಟ್ಟಿನಲ್ಲಿ. ನಮಗ್ಯಾಕಪ್ಪ ಬೇರೆಯವರ ಉಸಾಬರಿ, ಅವರತ್ರ ಚಿಕಿತ್ಸೆ ಮಾಡಿಸಿಕೊಳ್ತಿರೋ ರೋಗಿಗಳ ಪಾಡು ಮಾತ್ರ ಭಯಾನಕವೆನ್ನಿಸಿತು. ಹೊರಬಂದೆ.

ಆದ್ರೆ ಖಾಕಿಯವರೆಲ್ಲಾ ಆಸ್ಪತ್ರೆ ಸಾರಿದಮೇಲೆ ಠಾಣೆಯಲ್ಲಿ ಯಾರಿದ್ದಾರಪ್ಪ ನೋಡೇ ಬಿಡೋಣ ಅಂತ ಹುಡುಕಿ ಹುಡುಕಿ ಹೋದೆ. ಹುಡುಕಿ ಹುಡುಕಿ ಹೋಗಿದ್ದೇ ಬಂತು ಮಣ್ಣು ಅಲ್ಲೇನಿತ್ತು ಖಾಲಿ ಠಾಣೆ. ಇದು ಗೊತ್ತಿರಬೇಕಿತ್ತು ನನಗೆ ಮತ್ತೆ ಇಲ್ಲ ನಾನು ಇನ್ನಾ ನಮ್ಮೂರಲ್ಲೇ ಇದ್ದೀನಿ ಅಂತ ಖಾತ್ರಿಯಾಯ್ತು. ಆದರೆ ಕಟ್ಟಡದ ಹಿಂದೆ ಇರೋ ಮೈದಾನದಲ್ಲಿ ಏನೋ ಶಬ್ಧ ಬರುತ್ತಿತ್ತು. ಏನು ಅಂತ್ ಇಣುಕಿನೋಡಿದ್ರೆ ಎಲ್ಲಾ ಮಿಲಿಟರಿ ಮನುಷ್ಯರು. ಅದೇನ್ ಕಟ್ಟು ಮಸ್ತಾದ ದೇಹ ಏನ್ ಕಥೆ ಇವರೆಲ್ಲಾ ಸ್ಟೇಷನ್ ಅತ್ರ ಏನ್ ಮಾಡ್ತಿದಾರಪ್ಪ. ಒಳಗೆ ಸೆಲ್ ಗಳು ನೋಡಿದ್ರೆ ಖಾಲಿ ಖಾಲಿ, ಇವರು ವ್ಯಾಯಾಮ, ಡ್ರಿಲ್ ಮಾಡ್ಕೊಂಡಿದ್ದಾರೆ ಮತ್ತೆ ಇದು ನಮ್ಮೂರಲ್ಲ ಅಂತ ಸಂಶಯ ಬಲವಾಯ್ತು. ನನ್ನ ಕಣ್ಣು ನಂಬೋಕೆ ಸಾಧ್ಯ ಇಲ್ಲ. ಹೊಟ್ಟೆಗಳು ಒಂದಾದ್ರು ಬೇಡ್ವಾ. ತಿಂದ ಲಂಚದ ಭಿಕ್ಷೆಯೆಲ್ಲಾ ಹೊಟ್ಟೆಗೆ ಹೋಗ್ದೆ ಎಲ್ಲಿ ಹೋಯ್ತು ಗುರುವೇ ಅಂತ ತಲೆಗೆ ಎಷ್ಟೋ ಹೊತ್ತು ಕೆಲಸ ಕೊಟ್ಟೆ. ಅಮೃತ ಇನ್ನೊಂದಷ್ಟು ಏರಿಸಿದೆ.

ತಲೆ ಗಿರ್‍ರ್‍ರ್‍ರ್‍ರ್‍ರ್‍ ಅಂತ ತಿರುಗುತ್ತಿತ್ತು. ನಿಂತಲ್ಲೇ ಇದ್ದಕಿದ್ದಹಾಗೆ ನಾಯಿ ಉಚ್ಚೆ ಮುಖದ ಮೇಲೆಲ್ಲಾ ಬಿತ್ತು ಎಲ್ಲಿಂದ ಬಿತ್ತು ಗೊತ್ತಾಗಲಿಲ್ಲ. ಮೇಲೆಲ್ಲಾ ನೋಡಿದೆ. ನಾಯಿಯೇನ್ ಮೇಲೆ ಹತ್ತಿತ್ತಾ. ಇದೇನಪ್ಪಾ ಒಂದೂ ಅರ್ಥವಾಗಲಿಲ್ಲ. ಹಂಗೇ ಮುಖ ಒರೆಸಿಕೊಂಡು ಥು ಅಸಹ್ಯ ಕೈಲಿದ್ದ ಅಮೃತವನ್ನೇ ಮುಖಕ್ಕೆಲ್ಲಾ ಸುರುವಿಕೊಂಡೆ. ನಂತರ ಸರಿ ಹೋಯ್ತು. ಆದ್ರೆ ನಾಯಿ ಮೂತ್ರ ಮುಖದ ಮೇಲೆ ಎಲ್ಲಿಂದ ಬಿತ್ತು ಗೊತ್ತೇ ಆಗಲಿಲ್ಲ. ತಲೆಗೆ ಜಾಸ್ತಿ ಕೆಲಸ ಕೊಡೋದ್ ಒಳ್ಳೇದಲ್ಲ ಅಂತ ವಿಷಯವನ್ನ ಅಲ್ಲೇ ಮರೆಯೋದೇ ಸೂಕ್ತ ಅಂತ ಅಲ್ಲೇ ಬಿಟ್ಟೆ. ಅಮೃತ ಏರಿಸಿಬಿಟ್ಟೆ. ಮುಂದೆ ಒಂದಷ್ಟು ಸೈಕಲ್ ಗಳು ಹೋಗುತ್ತಿದ್ವು. ಎಲ್ಲಾ ಒಂದೇ ತರಹದ ಬಿಳಿ ಕೋಟುಗಳನ್ನ ಧರಿಸಿದ್ರು. ಅರೆರೆ ಡಾಕ್ಟರ್ ಗಳು ಬಡ್ಡಿ ಮಕ್ಳು ಇಲ್ಲೆಲ್ಲಿಗೋ ಹೋಗ್ತಿದಾರೆ. ನಾನು ಅವರುಗಳು ಹೋಗುತ್ತಿದ್ದ ಕಡೆಗೆ ತೂರಿದೆ. ಯಾವುದೋ ದೊಡ್ಡು ಗೋಡೆ ದಾಟಿ ಒಳಗೆ ಹೋದ್ರೆ. ಡಾಕ್ಟರ್ ಗಳದ್ದೇ ಸಂತೆ. ದೊಡ್ಡ ಓಪನ್ ಸಭಾಂಗಣ. ಬಿಸಿಲಲ್ಲೇ ಕೂತು ಎಲ್ಲಾ ಏನೋ ಬರೆದುಕೊಳ್ತಿದ್ರು. ಮುಂದೆ ಮಧ್ಯದಲ್ಲಿ ಯಾರೋ ಇವರನ್ನೆಲ್ಲಾ 
ನಿಯಂತ್ರಿಸುತ್ತಿದ್ದವನಿರಬೇಕು. ಆ ವ್ಯಕ್ತಿ ಏನೋ ಮಾತನಾಡುತಿದ್ದ. ಇವರುಗಳೆಲ್ಲಾ ತಮ್ಮ ತಮ್ಮ ಟೇಬಲ್ ಗಳ ಮೇಲಿರುವ ದಪ್ಪ ಪುಸ್ತಕದಲ್ಲಿ ಏನೋ ಹುಡುಕಿ ಹುಡುಕಿ ಹೆಕ್ಕಿ ಉತ್ತರ ನೀಡುತ್ತಿದ್ದರು. ಮೊದಲೇ ಡಾಕ್ಟರ್ ಗಳಲ್ವಾ ಅವರು ಮಾತನಾಡುತ್ತಿದ್ದುದು ಏನೋ ವಿಚಿತ್ರವಾದ ಸಮಸ್ಯೆಯ ಬಗ್ಗೆ ಅಂತ ಗೊತ್ತಾಗುತ್ತಿತ್ತು. ಆದರೆ ಏನೂ ಅಂತ ಅರ್ಥವಾಗಲಿಲ್ಲ. ತುಂಬಾ ಓದಿರ್ತಾರಪ್ಪ. ಅದಕ್ಕೆ ಎಂಥ ರೋಗಗಳನ್ನೂ ಗುಣಪಡಿಸ್ತಾರೆ ಅಂತ ಮನಸಲ್ಲೇ ಅಂದುಕೊಂಡು ಬಾಯಿ ಕಳೆದುಕೊಂಡು ಅವರುಗಳನ್ನೇ ನೋಡಿದೆ. ಆದರೆ ಪಾಪ ಈ ಬಿಸಿಲಿನಲ್ಲಿ ಇವರುಗಳನ್ನ ಕೂರಿಸಿ ಯಾಕೆ ಇಷ್ಟು ಕಷ್ಟ ಕೊಡ್ತಿದ್ದಾರೋ ಇವರುಗಳಿಗೆ ಅಂತ ಅಲ್ಲೇ ಒಬ್ಬನನ್ನ, ಯಾಕ್ರಣ್ಣ AC ರೂಮ್ ಬರವೇ ನಿಮಗೆ ತಣ್ಣಗೆ ಕೂರೋದ್ ಬಿಟ್ಟು ಇಲ್ಲಿ ಈ ಕಷ್ಟ ಪಡೋದ್ ಬೇಕಿತ್ತೇ ಅಂದೆ. ಶ್… ದಯವಿಟ್ಟು ನಿಮ್ಮ ಮನೆಗೆ ಇವತ್ತು ಸಂಜೆ ಅಲ್ನೋಡಿ ಆ ಮೂರನೆ ಸಾಲಿನಲ್ಲಿ ಇದ್ದಾರಲ್ಲ ಆ ವ್ಯಕ್ತಿ ವಿಶ್ವಾಸ್ ಅವರು ಬಂದಾಗ ಏನ್ ಹೇಳ್ಬೇಕಿದ್ಯೋ ಹೇಳ್ಕೊಳ್ಳಿ ಅವರು ನಿಮ್ಮ ಸಮಸ್ಯೆಯನ್ನ ಸರಿಪಡಿಸ್ತಾರೆ ಅಂದ. ನಮ್ಮನೇಗಾ ನನ್ಗೇನಾಗಿದೆ. ಸಾರ್ ದಯವಿಟ್ಟು ಕ್ಷಮಿಸಿ ನಿಮ್ ಮಾತುಗಳು ಕೇಳೋ ಸಮಯ ಇಲ್ಲ ಅಂತ ಅಲ್ಲ ಆದ್ರೆ ಇಲ್ಲಿ ಸರಿಯಾಗಿ ತಿಳಿದುಕೊಳ್ಳದಿದ್ರೆ, ಒಂದು ಮೂರು ಜನಕ್ಕೆ ತೊಂದರೆ ಆಗುತ್ತೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಅಂದ, ಯಾಕೆ ಏನ್ ಸಮಸ್ಯೆ ಅಂದೆ. ಆ ವ್ಯಕ್ತಿ ಬರೆಯುತ್ತಿದ್ದುದನ್ನು ಬಿಟ್ಟು ಸಾರ್ ನನಿಗೆ ಮತ ನೀಡಿರೋ ಮೂರು ಜನರ ಮನೆಯಲ್ಲಿ ಒಂದು ಚಿಕ್ಕ ಸಮಸ್ಯೆ ಇದೆ. ಕ್ಷಮಿಸಿ ಏನ್ ಸಮಸ್ಯ್ ಅಂತ ಹೇಳೋಕಾಗೊಲ್ಲ. ೨೪ ಘಂಟೆಯಲ್ಲಿ ನಿವಾರಿಸಲೇ ಬೇಕು ಇಲ್ಲವಾದಲ್ಲಿ ನಾನು ರಾಜಿನಾಮೆ ಕೊಡುತ್ತೇನೆ ಅಂತ ನಿರ್ಧಾರ ಮಾಡಿದ್ದೇನೆ. ದಯವಿಟ್ಟು ಕ್ಷಮಿಸಿ. ಆಮೇಲೆ ಮಾತನಾಡೋಣ ಅಂದ. ಎದೆ ಹೊಡೆದುಕೊಳ್ಳುವುದೇ ಎರಡೇನು ಐದು ನಿಮಿಷ ನಿಂತು ಹೋಯ್ತು. ಸತ್ತೆ ಅಂದುಕೊಂಡೆ. ಏನ್ ಆಗೋಯ್ತು. ಇದು ಸಾಧ್ಯನೇ ಇಲ್ಲಾ. ನಮ್ಮ ಪ್ರತಿನಿಧಿಗಳು, ನಮ್ಮ ನಾಯಕರು ಹೀಗೆ, ಹೆಬ್ಬೆಟ್ಟು ಒತ್ತೋದೆಲ್ಲ ಬಿಟ್ಟು, ಒಳ, ಒಣ, ರಣ ಜಗಳ ಆಡೋದ್ ಬಿಟ್ಟು, ಆಸ್ತಿ, ದುಡ್ಡು ದೋಚೋದ್ ಬಿಟ್ಟು ಈ ಲೆವೆಲ್ ಗೆ ಹಾಳಾಗೊಗಿದ್ದಾರಲ್ಲಾ. ಈ ಊರಾ ನಮ್ಮದಾಗೋಕೆ ಸಾಧ್ಯನೇ ಇಲ್ಲ. ಇಲ್ಲಿ ಇನ್ನೊಂದು ನಿಮಿಷ ಇದ್ರೆ ನಾನು ಹುಚ್ಚಾಸ್ಪತ್ರೆಯಲ್ಲಿ ಸೇರೋದು ಖಂಡಿತ. ಕೈಲಿದ್ದ ಅಮೃತವನ್ನ ಕುಡಿದೆ, ಕುಡಿದೆ, ಉಸಿರು ಬಂತು, ಹೊಟ್ಟೆ ತುಂಬ ಕುಡಿದೆ. ಹಯ್ಯೋ ನನ್ನ ಮಗಂದು, ಈ ಕೈಲಿರೋ ಅಮೃತದ ಶೀಶೆ ಇರೋದು ಎರಡಿಂಚು ಆಗ್ಲಿಂದ ಲೀಟರ್ ಗಟ್ಟಲೆ ಕುಡಿಯುತ್ತಲೇ ಇದ್ದೀನಿ, ಬರ್ತಾನೆ ಇದ್ಯಲ್ಲ. ಹೆಂಗೆ ಸಾಧ್ಯ ಅಂತ ಎಲ್ಲಾ ಚೆಲ್ಲಿದೆ ಬರ್ತಾನೇ ಇತ್ತು. ಭಯವಾಯ್ತು. ಬಿಸಾಡೋಣವೆಂದರೆ ಮನಸು ಬರಲೊಲ್ಲದು. ಶೀಶೆ ಹಿಡಿದುಕೊಂಡೇ ಓಡಿದೆ. 

ಹೋ ಇದು ಊರೇ ಅಲ್ಲಾ. ಇದು ನರಕ, ಇಲ್ಲಿಂದ ತಪ್ಪಿಸ್ಕೊಂಡು ಮೊದಲು ಜೀವ ಉಳಿಸಿಕೊಳ್ಬೇಕು ಅಂತ ಜೀವ ಇರುವ ತನಕ ಓಡಿದೆ. ಓಡುತ್ತಾ ದಾರಿಯಲ್ಲಿ ನೋಡಬಾರದ ಘೋರ ದೃಶ್ಯಗಳನ್ನ ಈ ಕಣ್ಣುಗಳಲ್ಲಿ ನೋಡಿದ್ದಾಯ್ತು. ಮಣ್ಣಿನಲ್ಲಿ ಕೆಲಸ ಮಾಡುತ್ತಿದ್ದ ಸಾಮಾನ್ಯ ಜನರನ್ಸುತ್ತೆ ಅವರನ್ನೆಲ್ಲಾ ಕ್ಯಾಮೆರಾ ಹಿಡಿದು ಯಾರು ಯಾರೋ ಚಿತ್ರಿಸುತ್ತುದ್ದರು. ಅದರಲ್ಲಿ ಏನಿತ್ತೋ ಮಣ್ಣು ಗೊತ್ತಿಲ್ಲ. ಹೇಗೆ ಉತ್ತುವುದು, ಹೇಗೆ ಬಿತ್ತುವುದು ಅಂತಾನೂ ಚಿತ್ಸಿಸಿಕೊಂಡು ಜನಕ್ಕೆ ತೋರಿಸಿದರೆ ಯಾರ್ ನೋಡ್ತಾರೆ. ಇದನ್ನೆಲ್ಲಾ ಯಾಕೆ ತೆಗಿತಿದಾರೆ ಇವರು! ಹಯ್ಯೋ ನನಿಗ್ಯಾಕ್ ಬೇಕು ಓಡುತ್ತಲೇ ಇದ್ದೆ. ಓಡಿ ಓಡಿ ಓಡಿ ಇದಾವುದೋ ಗಡಿಗೆ ತಲುಪಿದೆ ಅನ್ಸುತ್ತೆ. ಒಂದಷ್ಟು ಜನ ಪಹರೆಗೆ ನಿಂತಂತೆ ಕಂಡರು ದೂರದಿಂದ. ಅವರು ನನ್ನನ್ನು ಸುಟ್ಟರೂ ಚಿಂತೆಯಿಲ್ಲ. ಮೊದಲು ನಾನು ಇಲ್ಲಿಂದ ಪಾರಾಗಬೇಕು ಅಂತ ಹತ್ತಿರ ಹೋದೆ. ಎಲ್ಲಾ ಕೈಲಿ ಗುಲಾಬಿ ಹಿಡಿದು ಖಾದಿ ತೊಟ್ಟು ಮಾತನಾಡುತ್ತಾ ಕುಳಿತಿದ್ದರು. ಹೃದಯ ನಿಂತು ಹೋಯಿತು. ಮತ್ತೆ ಕಣ್ಣುಗಳು ಚಲಿಸಲಿಲ್ಲ. ಕೈಕಾಲುಗಳು ಜೀವಕಳೆದುಕೊಂಡವು. ಇದ್ದಕಿದ್ದಂತೆ ಯಾರೋ ನನ್ನನ್ನ ಎಸೆದಂತಾಯಿತು. ಕೈಲಿದ್ದ ಅಮೃತ ಕೆಳಗೆ ಬಿದ್ದುಹೋಯಿತು.
ಥಟ್ಟನೆ ಎದ್ದು ಕುಳಿತೆ. ಜೋರಾಗಿ ಉಸಿರಾಡಿದೆ. ನನ್ನ ಅಮೃತದ ಶೀಶೆಗಾಗಿ ಹುಡುಕಿದೆ. ಇದಾವುದೋ ಬಾಟಲಿ ಖಾಲಿಯಾಗಿತ್ತು. ಚೂರು ಇದ್ದದ್ದಕ್ಕೆ ಬಾಯಿ ಹಾಕಿ ನೆಕ್ಕಿದೆ. ಕತ್ತಲಾಗಿತ್ತು. ಅದೇ ಡರ್‍ರ್‍ರ್‍ರ್‍ರ್‍ರ್‍ ಪೀಈಈಈಈಈಈ ಗಾಡಿ ಸುಂದರ ಗಾಡಿ ಶಬ್ದ. ಮುಖದ ಮೇಲೆ ಶ್ವಾನ ಮೂತ್ರದ ವಾಸನೆ. ಥು ಟೈಟಾಗಿ ಎಲ್ಲಂದ್ರಲ್ಲಿ ಬಿದ್ರೆ, ನಮ್ಮ ಕಾರ್ಪರೇಷನ್ ನಾಯಿಗಳು ಕೂಡ ಸುಮ್ಮನೆ ಬಿಡಲ್ಲಪ್ಪ. ನನ್ನ ಮಗಂದು ಎಲ್ಲೂ ಜಾಗ ಸಿಗಲಿಲ್ವ ಅದಕ್ಕೆ. ಮುಂಡೇದು ನಾಳೆ ಸಿಗಲಿ ಅದ್ಯಾವ್ ನಾಯಿನೋ ಪತ್ತೆ ಹಚ್ಚಿ ಕೇಸ್ ಹಾಕಬೇಕು. ಥು ಎಂದು ತೂರಾಡುತ್ತಾ ಎದ್ದು, ಗಲೀಜಾಗಿದ್ದ ಬಟ್ಟೆ ಒದರಿಕೊಂಡೆ. ಗಡ್ಡಾ ಕರೆದುಕೊಳ್ಳುತ್ತಾ ನಡೆದು ತೇಲುತ್ತಾ ಬಂದೆ ಯಾವನೋ ತಿಪ್ಪೆ ಹತ್ರ ಎತ್ತಿ ಹಾಕಿದ್ನೇನೋ ಪಾಪಿ ನನ್ ಮಗ ಈ ತರಹ ಸೋಷಿಯಲ್ ಸರ್ವೀಸ್ ತುಂಬಾ ಚೆನ್ನಾಗ್ ಮಾಡ್ತಾರೆ ನಮ್ ಜನ. ಎಂದು ಜೇಬಿಗೆ ಕೈ ಇಳಿ ಬಿಟ್ರೆ, ಬೆಳಿಗ್ಗೆ ೧೦ ರೂಪಾಯಿ ಇತ್ತು. ಅದೂ ಯಾರೋ ಎಗರಿಸಿದ್ರು. ಎಂದು ಅವರನ್ನೊಂದಷ್ಟು ಶಪಿಸಿಕೊಳ್ಳುತ್ತಾ ರಸ್ತೆಯಲ್ಲಿ ಕಾಲಿಟ್ಟೆ. ಹಳ್ಳದಲ್ಲಿರುವ ಕೊಚ್ಚೆ. ಪಚಕ್ ಎಂದು ಮೈಮೇಲೆ ಎರಚಿತು!

ಹಿನ್ನುಡಿ: ರಸ್ತೆಯಲ್ಲಿ ಇಂದು ನಡೆದು ಬರುತ್ತಾ, ಹಲವಾರು ಬಾರಿ ಕಂಡಂತೆ ಯಾರೋ ನನ್ನ ಈ ಕಥೆಯ ಕೇಂದ್ರ ಬಿಂದು ನೆಮ್ಮದಿಯಾಗಿ ಮಲಗಿತ್ತು. ಹಿಂದೆ ಹುಟ್ಟಿಸದ ಈ ಕಥೆಯನ್ನ ಇಂದು ಮೊಳಕೆಯೊಡಿಸಿತು. 
Hope You Enjoyed..  Your comment is my payment for your enjoymentJ Thank you…


Wednesday, 8 February 2012

ಸವದಿ ಸ್ಥಾನದಿ ನನ್ನ ಸಮರ್ಥನೆಯ ದುರ್ಬುದ್ಧಿ!

ಮುನ್ನುಡಿ: ಉದ್ರೇಕಕೊಳಗಾಗದೆ ಶಾಂತವಾಗಿ ಓದುವವರಿಗೆ ಮಾತ್ರ!


ಏನ್ ಹೇಳೋದಕ್ಕೆ ಇಷ್ಟಪಡ್ತೀರಾ ಈ ಸಮಯದಲ್ಲಿ. ಮೀಡಿಯಾದವರ ಪ್ರಶ್ನೆ.
ಏನ್ ಹೇಳಲಿ ಇಂಥ ಸಂದರ್ಭದಲ್ಲಿ, ನನ್ನ ತಪ್ಪು ಇಷ್ಟು ದೊಡ್ಡದೆಂದು ನನಗೆ ಅನ್ನಿಸುತ್ತಿಲ್ಲ.
ನೀವು ಜನಪ್ರತಿನಿಧಿಯಾಗಿದ್ದುಕೊಂಡು ಈ ರೀತಿ ಮಾಡಿದ್ದೂ ಅಲ್ಲದೇ ನನ್ನ ತಪ್ಪು ಅಷ್ಟು ದೊಡ್ಡದಲ್ಲ ಎಂದು ಹೇಳುವುದು ವಿಷಾದದ ಸಂಗತಿಯಲ್ಲವೇ?
ಇಲ್ಲಾ ನನ್ನ ಬಳಿ ಸಮರ್ಥಿಸಿಕೊಳ್ಳಲು ಕಾರಣಗಳಿವೆ.
ನೀವು ಅಸೆಂಬ್ಲಿಯಲ್ಲಿ ಕೂತು ನೀಲಿ ಚಿತ್ರ ನೋಡುವ ಅಪರಾಧ ಎಸಗಿದ್ದೀರೆಂದು ಸಾಕ್ಷಿ ಸಮೇತ ವರದಿಯಾಗಿದೆ ಇದಕ್ಕೆ ಏನ್ ಹೇಳ್ತೀರಿ?
ಇದರಲ್ಲಿ ಅಪರಾಧ ಯಾವುದು. ಸದನದಲ್ಲಿ ಕೂತು ನೋಡಿದ್ದೋ? ಅಥವಾ ನೀಲಿ ಚಿತ್ರ ನೋಡಿದ್ದೋ?
ಎರಡೂ ಅಪರಾಧಗಳೇ ಅಲ್ಲವೇ?
ನನಗೆ ಹಾಗೆನಿಸುವುದಿಲ್ಲ. ಸದನದಲ್ಲಿ ಕಲಾಪ ನಡೆಯುವಾಗ ನೋಡಿದ್ದು ನನ್ನ ತಪ್ಪು ಒಪ್ಪಿಕೊಳ್ಳುತ್ತೇನೆ. ಆದರೆ ಅದಕ್ಕಾಗಿ ಇಷ್ಟು ದೊಡ್ಡ ಇಶ್ಶ್ಯು ಮಾಡುವುದು ಯಾವ ನ್ಯಾಯ. ಸದನದಲ್ಲಿ ಗಂಭೀರ ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ನಾನು ಬೇರೆ ಕಡೆ ಗಮನ ಹರಿಸಿದ್ದು ನನ್ನ ತಪ್ಪೇ ಅದಕ್ಕಾಗಿ ನಾನು ಜನರಲ್ಲಿ ಮತ್ತು ಎಲ್ಲ ಸಂಬಂಧಪಟ್ಟವರ ಬಳಿ ಕ್ಷಮಾ ಯಾಚಿಸುತ್ತೇನೆ ಮತ್ತು ಇನ್ನು ಮುಂದೆ ಈ ರೀತಿ ತಪ್ಪೆಸಗದಂತೆ ಎಚ್ಚರವಹಿಸುತ್ತೇನೆ. ಆದರೆ ಈ ರೀತಿ ಕೇವಲ ನಾನು ಮಾತ್ರವಲ್ಲ ಚರ್ಚೆ ನಡೆಯುವಂತ ಸಂದರ್ಭದಲ್ಲಿ ನಮ್ಮ ಮಾನ್ಯ ಮುಖ್ಯಮಂತ್ರಿಗಳೂ ಸಹ ನಿದ್ರೆ ಮಾಡುತ್ತಿದ್ದುದುಂಟು, ಕೆಲವು ಕಲಾಪಗಳು ನಡೆಯದಂತೆ ಮಂತ್ರಿಗಳು ಗಲಾಟೆ ಎಬ್ಬಿಸಿ ತಡೆ ಹಾಕಿದ್ದುಂಟು, ಕೆಲವರು ಮಾತನಾಡುವಾಗ ಅವಾಚ್ಯ ಶಬ್ಧಗಳನ್ನು ಉಪಯೋಗಿಸಿದ್ದುಂಟು, ಇನ್ನೊಮ್ಮೆ ಕುಸ್ತಿಯ ಅಖಾಡಕ್ಕೆ ಇಳಿದಿದ್ದುಂಟು, ಎಷ್ಟೋ ಜನ ಕಲಾಪಗಳಿಗೆ ಬರದೇ ಇರುವ ಉದಾಹರಣೆ ಎಷ್ಟು ಬೇಕು ನಿಮಗೆ, ಹೀಗೇ ಹೇಳುತ್ತಾ ಹೋದರೆ ಸಾವಿರ ಘಟನೆಗಳಿವೆ. ಅದಾವುದೂ ಇಷ್ಟು ದೊಡ್ಡ ಇಶ್ಶ್ಯೂ ಅಗದಿರುವುದು   ಈಗ್ಯಾಕೆ ನೀವು ಮೀಡಿಯಾದವರು ಎಳೆದಾಡುತ್ತಿದ್ದೀರ ಮತ್ತು ಜನತೆ ಯಾಕೆ ಇಷ್ಟು ಆಕ್ರೋಶ ವ್ಯಕ್ತ ಪಡಿಸುತ್ತಿದೆ ಎಂದು ಅರ್ಥವಾಗುತ್ತಿಲ್ಲ ನನಗೆ.

ಇನ್ನು ನೀಲಿ ಚಿತ್ರ ನೋಡಿದ್ದರ ಬಗ್ಗೆ, ನನಗೇನೂ ಅದು ತಪ್ಪೆಂದು ಅನಿಸುತ್ತಿಲ್ಲ. ಕಾಲೇಜ್ ಹುಡುಗರೇ ನೋಡುವಾಗ, ಪ್ರಬುದ್ಧವಾಗಿರುವ ನಾನು ನೋಡಿದರೆ ತಪ್ಪೇನು. ಅಷ್ಟಕ್ಕೂ ‘ನೀಲಿ’ ಚಿತ್ರ ಎಂದು ಕೀಳಾಗಿ ಹೇಳುವಹಾಗೆ ಯಾಕೆ ಬ್ರಾಂಡ್ ಮಾಡಲಾಗುತ್ತಿದೆ? ಸಾಂಸಾರಿಕ ಚಿತ್ರ, ಪ್ರೇಮಕಥೆಯುಳ್ಳ ಚಿತ್ರ, action oriented ಚಿತ್ರ, ಫಾಂಟಸಿ ಚಿತ್ರ, ಕಲಾತ್ಮಕ ಚಿತ್ರಗಳಾಂತೆಯೇ ಸೆಕ್ಸ್ ಓರಿಯೆಂಟೆಡ್ ಚಿತ್ರಗಳು, ಅಷ್ಟೇ! ಎಲ್ಲರೂ ಎಲ್ಲ ಚಿತ್ರಗಳನ್ನೂ ನೋಡಲಾಗುವುದಿಲ್ಲ. ಆದರೆ ಪ್ರತಿಯೊಂದು ರೀತಿಯ ಚಿತ್ರಕ್ಕೂ ಅದರದ್ದೇ ಆದ ಪ್ರೇಕ್ಷಕರು ಇದ್ದೇ ಇದ್ದಾರೆ ಅದಕ್ಕಾಗಿಯೇ ಎಲ್ಲ ರೀತಿಯ ಚಿತ್ರಗಳೂ ನಿರ್ಮಾಣವಾಗುತ್ತಿವೆ ನೆನಪಿರಲಿ.
ನಾನು ಚಿತ್ರ ನೋಡಿದ್ದು ತಪ್ಪಲ್ಲ ಆದರೆ ನೋಡಿದ ಸ್ಥಳ ಮತ್ತು ಸಮಯ ಸರಿ ಇರಲಿಲ್ಲ ಅದು ನಾನೂ ಸಹ ಒಪ್ಪುತ್ತೇನೆ. ನನ್ನ ಬೇಜವಾಬ್ದಾರಿ ತನದ ತಪ್ಪಿಗೆ, ಕರ್ತವ್ಯ ಲೋಪಕ್ಕೆ ನನಗೆ ತಕ್ಕ ಶಿಕ್ಷೆಗೆ ಸಿದ್ಧನಿದ್ದೇನೆ. ಆದರೆ ಅಪಪ್ರಚಾರ ಮಾಡುತ್ತಾ, ಬೇಕೆಂದೇ ಹೈಪ್ ದಯವಿಟ್ಟೂ ಸೃಷ್ಟಿಸಬೇಡಿ ಅದಕ್ಕೆ ಅರ್ಥವಿಲ್ಲ. ಧನ್ಯವಾದಗಳು

ಹೀಗೆ ಮನ ಬಿಚ್ಚಿ ಇರುವ ಸತ್ಯವನ್ನು ವೈಚಾರಿಕವಾಗಿ ಹೇಳಿ ಕತೆಯನ್ನು ಮುಗಿಸಬಹುದಿತ್ತೇನೋ. ಆದರೆ ಕೇಳುವ ವ್ಯವಧಾನ ಮೀಡಿಯಾದವರಿಗಾಗಲಿ, ಪ್ರತಿಭಟನೆ ಮಾಡುತಿದ್ದ ಪ್ರಜೆಗಳಿಗಾಗಲಿ ಇದ್ದಂತೆ ಕಾಣಲಿಲ್ಲ. ವಿಷಯವನ್ನು ಸಾಧಾರಣವಾಗಿ ಮುಗಿಸುವ ಇಚ್ಛೆ ಯಾರಿಗೂ ಇದ್ದಂತೆಯೂ ಕಾಣಲಿಲ್ಲ. ಎಲ್ಲಕ್ಕಿಂತ ಮೇಲಾಗಿ, ವೈಚಾರಿಕವಾಗಿ ಮಾತನಾಡುವ ಸಾಮರ್ಥ್ಯ ನಾಯಕರಿಗೆ ಇದ್ದಂತೆ ಮೊದಲೇ ಕಾಣಲಿಲ್ಲ. ಒಂದು ಚಿಕ್ಕ ತಪ್ಪನ್ನು ಮುಚ್ಚಿಹಾಕುವುದಕ್ಕೆ, ಮತ್ತೊಂದು ಸುಳ್ಳಿನ ಮೊರೆ ಹೊಕ್ಕು ಇನ್ನೂ ಗೊಂದಲದಲ್ಲೇ ಸಿಲುಕಿಕೊಂಡಿದ್ದರು.  ತಪ್ಪು ಮಾಡುವುದು ಮಾನವನ ಜನ್ಮಸಿದ್ದ ಹಕ್ಕು. ತಿದ್ದಿ ನಡೆಯುವುದೂ ಸಹ. ಒಪ್ಪಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು. ಮತ್ತು ಒಪ್ಪಿಕೊಳ್ಳಲು ಧೈರ್ಯ ಬೇಕು. ಧೈರ್ಯವಿರುವಂತವರು ಸ್ಥಾನವನ್ನು ಅಲಂಕರಿಸಬೇಕು. ಒಬ್ಬ ಬಸ್ ಡ್ರೈವರ್ಗೂ ಸಹ ೮ ಬಾರಿ ಎಸಗಬಹುದಾದ ತಪ್ಪಿಗೆ ಕ್ಷಮೆಯಿದೆ. ತಪು ಎಲ್ಲರಿಂದಲೂ ಆಗುತ್ತದೆ. ಆದರೆ ಡ್ರೈವರ್ ತನ್ನ ಕೆಲಸಕ್ಕೆ ತರಬೇತಿ ಪಡೆದುಕೊಂಡಿರುತ್ತಾರೆ. ರಾಜಕಾರಿಣಿಯಾಗಲು, ಒಂದು ವಿದ್ಯಾಭ್ಯಾಸದ ಪರಿಮಿತಿಯಾದರೂ ಇಟ್ಟರೆ ಸರಿಹೋಗುತ್ತದೇನೋ. ಒಂದೋ ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಾರೆ, ಏನಾದರೂ ಕರ್ತವ್ಯಲೋಪವಾದಲ್ಲಿ, ತಪ್ಪೊಪ್ಪಿಕೊಂಡು ತಿದ್ದಿಕೊಂಡು ಮುನ್ನಡೆಯುವ ಧೈರ್ಯಮಾಡುತ್ತಾರೆ. ಅಂಥವರು ಇನ್ನಾದರೂ ಬರಲೆಂದು ಹಗಲುಗನಸು ಕಾಣುತ್ತಾ ನನ್ನ ವಿತಂಡವಾದವನ್ನು ಮುಗಿಸುತ್ತೇನೆ.                                 
-       ಹೇಮಂತ್